ಮನೋಲ್ಲಾಸ | ಸೃಷ್ಟಿಯ ಪ್ರತಿಯೊಂದೂ ವಿಶಿಷ್ಟ

Manollasa
Published on
| ವಿದ್ಯಾ ಉಪೇಂದ್ರ ಜೋಶಿ

ಮಾನವನನ್ನು ಸೃಷ್ಟಿಸುವ ಮೊದಲು ದೇವರು ಸಕಲ ಪ್ರಾಣಿವರ್ಗವನ್ನು ಸೃಷ್ಟಿಸಿದನು. ಹೀಗೆ ಮಾಡುವಾಗ ಕೆಲವಕ್ಕೆ ಸಂಚರಿಸುವ ವೇಗವನ್ನೂ, ಕೆಲವಕ್ಕೆ ರೆಕ್ಕೆಗಳನ್ನೂ, ಕೆಲ ಪ್ರಾಣಿಗಳಿಗೆ ಮಹಾಶಕ್ತಿಯನ್ನೂ, ಕೋಡುಗಳನ್ನೂ, ಕೆಲವಕ್ಕೆ ಬಲವಾದ ಉಗುರುಗಳನ್ನೂ, ಹಲ್ಲನ್ನೂ ದೇವರು ದಯಪಾಲಿಸಿದನು. ಮನುಷ್ಯನು ತನ್ನ ಅಶಕ್ತತೆಗಾಗಿ ಮರುಗಿ ‘ದೇವಾ ಇಂಥ ಪಕ್ಷಪಾತವೇಕೆ? ಇತರ ಪ್ರಾಣಿಗಳಿಗೆ ಕರುಣಿಸಿರುವ ರೀತಿಯಲ್ಲಿ ನನಗೂ ಒಂದು ವಿಶಿಷ್ಟ ಶಕ್ತಿಯನ್ನು ಏಕೆ ದಯಪಾಲಿಸಲಿಲ್ಲ?’ ಎಂದು ಕೇಳಲು ದೇವರು ನಕ್ಕು ‘ನಿನಗೆ ದೇವತ್ವಕ್ಕೆ ಸಮನಾದ ವಿಶಿಷ್ಟ ಶಕ್ತಿಯನ್ನು ಕೊಟ್ಟಿದ್ದೇನೆ. ಅದರ ಮಹತ್ವವನ್ನು ನೀನು ಅರಿಯಲಿಲ್ಲ ಅಷ್ಟೆ. ಅದರ ಬಲದಿಂದ ನೀನು ಸಿಂಹಕ್ಕಿಂತಲೂ ಶೂರನಾಗಬಹುದು. ಅದುವೇ ವಿಚಾರಶಕ್ತಿ’ ಎಂದನು. ಆಗ ಮಾನವನಿಗೆ ತಾನು ಸರ್ವಶಕ್ತನೆಂದು ಹೊಳೆಯಲು ಕೃತಜ್ಞತೆಯಿಂದ ನಮಸ್ಕರಿಸಿದನು.

ಇತರರಲ್ಲಿ ಕಾಣಬರುವ ಯಾವುದೋ ಒಂದು ಗುಣ ಅಥವಾ ಅಧಿಕಾರ ತನ್ನಲ್ಲಿ ಇಲ್ಲ ಎಂದು ಅನೇಕರು ಪೇಚಾಡುತ್ತಾರೆ. ಇದು ಸಲ್ಲದು. ಏಕೆಂದರೆ, ದೇವರು ಒಬ್ಬನಲ್ಲಿ ಇಲ್ಲದ ಒಂದು ಹೆಚ್ಚಿನ ಗುಣ,ವಿದ್ಯೆ, ಕೌಶಲ, ಮೊದಲಾದವನ್ನು ಮತ್ತೊಬ್ಬನಲ್ಲಿ ಇರಿಸಿದ್ದಾನೆ. ಅದನ್ನು ಅರಿತುಕೊಂಡರೆ ಮಾತ್ರ ನಾವು ನೆಮ್ಮದಿಯಿಂದಿರಬಹುದು. ಇಲ್ಲದಿದ್ದರೆ ಅಸೂಯಾಪರರಾಗಬಹುದು. ಮುಖ್ಯವಾಗಿ ದೇವರು ಮಾನವನಿಗೆ ಮಾತ್ರ ವಿಚಾರಶಕ್ತಿಯನ್ನು ದಯಪಾಲಿಸಿದ್ದಾನೆ. ಇದು ಇನ್ನಾವ ಪ್ರಾಣಿಗೂ ಇಲ್ಲ. ಒಮ್ಮೆ ಬಿದಿರು ಕೂಡ ಬ್ರಹ್ಮನ ಬಳಿ ಹೋಗಿ ಬೇಸರದಿಂದ ಕೇಳಿತಂತೆ- ‘ಬೇಕಿತ್ತೇ ಈ ನಿನ್ನ ಸೃಷ್ಟಿಯೊಳಗೆ ನನ್ನದೊಂದು ಪಾತ್ರ? ಹೂವಿಲ್ಲ, ಕಾಯಿಲ್ಲ, ಹಣ್ಣಿಲ್ಲ, ದಣಿದು ಬಂದವರಿಗೆ ನೆರಳೂ ನೀಡಲಾಗದು.’ ಅದಕ್ಕೆ ಬ್ರಹ್ಮನು ನಕ್ಕು ನುಡಿದನಂತೆ ‘ಯಾಕೆ ಸಾಧ್ಯವಿಲ್ಲ ..ಮನಸ್ಸು ಮಾಡಿ ನೋಡೊಮ್ಮೆ’ ಎಂದ. ಬಿದಿರು ಹಠ ಹಿಡಿದು ಬೆಳೆಯಿತಂತೆ. ಒಣ ಹಾಕುವ ಕೋಲಾಯಿತಂತೆ, ಕೃಷ್ಣನ ಕೈಯಲ್ಲಿ ಕೊಳಲಾಯಿತಂತೆ, ಮಕ್ಕಳ ತೂಗುವ ತೊಟ್ಟಲಾಯಿತಂತೆ, ಸುಮಂಗಲೆಯರು ಕೊಡುವ ಬಾಗಿನಕೆ ಮೊರವಾಯಿತಂತೆ, ಬಡವರ ಗುಡಿಸಲಿಗೆ ನೆರಳಾಯಿತಂತೆ, ಬಿದಿರಿನ ಬುಟ್ಟಿ ಆಯ್ತಂತೆ. ಮನುಷ್ಯನಿಗೆ ಗುಟ್ಟು ಹೇಳಿತಂತೆ- ‘ನನ್ನಿಂದೇನಾಗದು, ನನ್ನಲ್ಲಿ ಏನೂ ಇಲ್ಲ ಎಂದು ಕೈ ಚೆಲ್ಲದಿರು ಮನುಜ ಮನಸ್ಸು ಮಾಡಿ ನೊಡೊಮ್ಮೆ’ ಅಂತ. ಸೂರ್ಯ-ಚಂದ್ರರನ್ನು ನಮಗೆ ಹೋಲಿಕೆ ಮಾಡಲಾಗದು. ಯಾಕೆಂದರೆ ಸಮಯ ಬಂದಾಗ ಅವರು ಪ್ರಕಾಶಿಸುತ್ತಾರೆ. ತೆಂಗಿನ ಮರ ಕಲ್ಪವೃಕ್ಷವಾದರೂ ಗಂಧದ ಪರಿಮಳ ಬೀರಲಾಗದು, ಉಪ್ಪಿನ ಕಣಗಳು ಬಿಳಿಯಾಗಿವೆಯಾದರೂ ಸಕ್ಕರೆಯ ಸಿಹಿ ನೀಡಲಾಗದು. ಹಾಗೆ ಭಗವಂತ 84 ಲಕ್ಷ ಜೀವರಾಶಿಗಳಿಗೆಲ್ಲ ಅದರದೇ ಆದ ರೂಪ ಗುಣ, ಮಹತ್ವವನ್ನು ಕರುಣಿಸಿದ್ದಾನೆ. ಎಲ್ಲಕ್ಕೂ ಮಿಗಿಲಾಗಿ ವಿಚಾರ-ವಿವೇಚನಾ ಶಕ್ತಿಯನ್ನು ಮನುಷ್ಯನಿಗೆ ನೀಡಿದ್ದಾನೆ. ಅದನ್ನು ಮನಗಂಡು ‘ಮಾನವ ಜನ್ಮ ದೊಡ್ಡದು ಅದನು ಹಾನಿಮಾಡಿಲಬೇಡಿ ಹುಚ್ಚಪ್ಪಗಳಿರಾ’ ಎಂಬ ಪುರಂದರ ದಾಸರ ವಾಣಿಯಂತೆ, ಬದುಕಿನಲ್ಲಿ ನೆಮ್ಮದಿಯಿಂದಿರಬೇಕೆಂದರೆ ಇತರರೊಂದಿಗೆ ಹೋಲಿಕೆ ಮಾಡುವುದನ್ನು ನಿಲ್ಲಿಸಬೇಕು ಎಂಬ ಮರ್ಮ ಅರಿತು ಬಾಳುವುದನ್ನು ಕಲಿಯೋಣ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net