

ಒಂದೂರಿನಲ್ಲಿ ಒಬ್ಬ ದರ್ಜಿ ಪ್ರಸಿದ್ಧವಾಗಿದ್ದ. ಆ ಊರಿನ ರಾಜನು ರ್ದಜಿಯ ಭೇಟಿಗಾಗಿ ಹಂಬಲಿಸಿದನಲ್ಲದೆ ಆತನಿಗೆ ಏನಾದರೂ ಕೊಡುಗೆ ನೀಡಬೇಕು ಎಂದು ಬಯಸಿದ. ದರ್ಜಿ ವೃತ್ತಿಗೆ ಉಪಯೋಗವಾಗಲೆಂದು ಒಂದು ಚಿನ್ನದ ಕತ್ತರಿಯನ್ನು ಮಾಡಿಸಿದ. ಅದನ್ನು ವಜ್ರದ ಹರಳು, ಮುತ್ತುರತ್ನಗಳಿಂದ ಅಲಂಕರಿಸಿದ. ಅದೊಂದು ದಿನ ದರ್ಜಿಯನ್ನು ಭೇಟಿಯಾದ ರಾಜ ಕುಶಲೋಪರಿ ವಿಚಾರಿಸಿ, ‘ನಿನಗೆ ಕಾಣಿಕೆಯಾಗಿ ನೀಡಲು ಈ ಚಿನ್ನದ ಕತ್ತರಿ ತಂದಿದ್ದೇನೆ, ಸ್ವೀಕರಿಸು’ ಎಂದು ಕೋರಿದ. ದರ್ಜಿ ವಿನಯದಿಂದಲೇ, ‘ಸ್ವಾಮಿ ನಿಮ್ಮ ಕಾಣಿಕೆಯನ್ನು ಸ್ವೀಕರಿಸಲಾರೆ’ ಎಂದ.
‘ನಿನಗೆ ಕತ್ತರಿ ಬೇಡವಾದರೆ ಮತ್ತೇನು ಬೇಕು ಹೇಳು. ನಿನಗೆ ಏನನ್ನಾದರೂ ಕೊಟ್ಟರೇನೆ ನನಗೆ ಸಮಾಧಾನ. ನಿನ್ನ ವೃತ್ತಿಗೆ ಉಪಯೋಗವಾಗಲೆಂದೇ ಈ ಕತ್ತರಿಯನ್ನು ಇಷ್ಟಪಟ್ಟು ತಂದಿದ್ದೆ. ದಯವಿಟ್ಟು ಬೇರೆ ಏನಾದರು ಕೇಳು...’ ಎಂದು ರಾಜ ವಿನಂತಿಸಿದ. ರಾಜನ ವಿನಯಕ್ಕೆ ಸೋತ ರ್ದಜಿ, ‘ಮಹಾರಾಜ ಕೊಡುವುದಾದರೆ ನನಗೆ ಕತ್ತರಿ ಬದಲು ಸೂಜಿಯನ್ನು ಕೊಡಿ. ಅದನ್ನು ಪ್ರೀತಿಯಿಂದ ಸ್ವೀಕರಿಸುವೆ’ ಎಂದ. ರಾಜನಿಗೆ ಪರಮಾಶ್ಚರ್ಯ. ಆದರೂ ಸೂಜಿಯನ್ನು ತಂದುಕೊಟ್ಟ. ‘ನೀನು ಕತ್ತರಿ ಬಿಟ್ಟು ಸೂಜಿಯನ್ನು ಯಾಕೆ ಕೇಳಿದೆ? ನಿನ್ನ ವೃತ್ತಿಯಲ್ಲಿ ಎರಡೂ ಪ್ರಮುಖ ವಸ್ತುಗಳೇ ಅಲ್ಲವೇ?’ ಎಂದು ಕೇಳಿದ. ‘ಕತ್ತರಿಗಿಂತಲೂ ನನಗೆ ಸೂಜಿಯೇ ಉಪಕಾರಿ. ಏಕೆಂದರೆ, ಕತ್ತರಿ ವಿಭಾಗಿಸುವ ಕೆಲಸ ಮಾಡಿದರೆ, ಸೂಜಿ ಜೋಡಿಸುವ ಕಾರ್ಯ ಮಾಡುತ್ತದೆ. ಮನುಷ್ಯ-ಮನುಷ್ಯರನ್ನು ಎಂದಿಗೂ ಒಡೆಯಬಾರದು. ಎಲ್ಲರನ್ನೂ ಬೆಸೆಯುವುದೇ ನನ್ನ ಉದ್ದೇಶ’ ಎಂದ ರ್ದಜಿ, ಮನಸು-ಮನಸುಗಳ ನಡುವಿನ ಗೋಡೆಯನ್ನು ಒಡೆದು ಸೇತುವೆ ಕಟ್ಟುವ ಅಗತ್ಯದ ಬಗ್ಗೆ ತಿಳಿಸಿದ.
ಇತ್ತೀಚಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿ ಅವನತಿಯತ್ತ ಸಾಗುತ್ತಿದೆ. ರಾಜಕೀಯ ನಾಯಕರು ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಭಗವಂತ ಸೃಷ್ಟಿಸಿರುವುದು ಮನುಷ್ಯ ಜಾತಿ ಮಾತ್ರ. ಧರ್ಮ ಮತ್ತು ಜಾತಿ ಎರಡೂ ಬೇರೆಯಾಗಿದ್ದು, ಧರ್ಮ ಮಾನವರನ್ನು ಒಗ್ಗೂಡಿಸುತ್ತದೆ, ಜಾತಿ ವಿಂಗಡಿಸುತ್ತದೆ. ಜಾತಿ ಮತ್ತು ಧರ್ಮವನ್ನು ಕತ್ತರಿ ಮತ್ತು ಸೂಜಿಗೆ ಹೋಲಿಸಲಾಗುತ್ತದೆ. ಜಾತಿ ಕತ್ತರಿ, ಧರ್ಮ ಸೂಜಿ. ಜಾತಿ ಎನ್ನುವ ಕತ್ತರಿ ತುಂಡರಿಸಿದರೆ, ಧರ್ಮ ಎನ್ನುವ ಸೂಜಿ ಜೋಡಿಸುತ್ತದೆ. ಆದಾಗ್ಯೂ ಪ್ರಸ್ತುತದಲ್ಲಿ ಸೂಜಿಯ ಬದಲು ಕತ್ತರಿಯನ್ನೇ ಹೆಚ್ಚು ಹಿಡಿಯುತ್ತಿದ್ದಾರೆ. ಧರ್ಮ ಬಿಟ್ಟು ಜಾತಿಗೆ ಅಂಟಿಕೊಳ್ಳುತ್ತಿದ್ದಾರೆ. ಯಾವ ಧರ್ಮವೂ ಕೆಟ್ಟದ್ದನ್ನು ಬಯಸಿಲ್ಲ. ಎಲ್ಲರಿಗೂ ಒಳಿತು ಮಾಡುವುದೇ ಧರ್ಮದ ತಿರುಳಾಗಿದೆ. ಧರ್ಮ ಬಿಟ್ಟು ಹೋಗದೇ ನಾವೆಲ್ಲ ಕತ್ತರಿಯಾಗದೇ ಸೂಜಿಯಾಗೋಣ. ಏಕತೆ, ಸಾಮರಸ್ಯ, ಸಹನೆ, ಸಹಬಾಳ್ವೆಯ ಮೌಲ್ಯಗಳನ್ನು ಜೀವನಮಂತ್ರವಾಗಿಸಿಕೊಂಡು ಬಾಳೋಣ.
(ಲೇಖಕರು ಹವ್ಯಾಸಿ ಬರಹಗಾರರು)