ಸಮಸ್ಯೆಯೆಂಬ ಗರಗಸ: ಮನೋಲ್ಲಾಸ

Manollasa
Published on
| ರಶ್ಮಿ ಹೆಗಡೆ ಮುಂಬೈ

ಒಮ್ಮೆ ಒಬ್ಬ ಬಡಗಿ ಗರಗಸದ ಆ ದಿನದ ಕೆಲಸವೆಲ್ಲ ಮುಗಿದ ಮೇಲೆ ಅದನ್ನು ಅಲ್ಲಿಯೇ ಇಟ್ಟು ಮನೆಗೆ ತೆರಳಿದ. ಮಧ್ಯರಾತ್ರಿಯ ವೇಳೆ ಇಲಿಯನ್ನು ಅಟ್ಟಿಸಿಕೊಂಡು ಬಂದ ಹಾವೊಂದು ಗರಗಸ ಇದ್ದ ಕೋಣೆಗೆ ನುಗ್ಗಿತು. ಹಾಗೆ ಗಾಬರಿಯಲ್ಲಿದ್ದಾಗ ಮೊನಚಾದ ಗರಗಸಕ್ಕೆ ಅದರ ಬಾಲ ತಾಕಿ ರಕ್ತ ಬಂದು ಅತೀವ ನೋವಾಯಿತು. ಯಥಾಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಹಾವು ಸಿಟ್ಟಿನಿಂದ, ‘ನನ್ನ ಪಾಡಿಗೆ ನಾನು ಹೋಗುತ್ತಿದ್ದರೆ ಇದಕ್ಕೇನು ಕಷ್ಟ! ವಿನಾಕಾರಣ ನನ್ನನ್ನು ಚುಚ್ಚಿ ಗಾಯಗೊಳಿಸಿದ ಗರಗಸಕ್ಕೆ ತಕ್ಕ ಪಾಠ ಕಲಿಸಲೇಬೇಕು’ ಎಂದು ಹಿಂದೆಮುಂದೆ ಯೋಚಿಸದೆ ಗರಗಸವನ್ನು ಕಚ್ಚಿತು. ತಾಳ್ಮೆ ಕಳೆದುಕೊಂಡ ಹಾವು ಗರಗಸವನ್ನು ಸುತ್ತಿಕೊಳ್ಳುತ್ತಾ ತನಗೆ ಅರಿವಿಲ್ಲದಂತೆ ತನ್ನ ವಿನಾಶಕ್ಕೆ ತಾನೇ ನಾಂದಿ ಹಾಡುತ್ತಿತ್ತು. ಗರಗಸ ಮಾತ್ರ ನಿರ್ಲಿಪ್ತವಾಗಿ ಕುಳಿತಿತ್ತು. ಸುತ್ತಿಕೊಂಡಂತೆಲ್ಲ ಹಾವಿನ ದೇಹಕ್ಕೆ ಗರಗಸದ ಮೊನಚಾದ ತುದಿ ಚುಚ್ಚಿ ಗಾಯವಾಗಿ, ರಕ್ತ ಸುರಿಯಲಾರಂಬಿಸಿತು. ಗರಗಸದ ಹಿಡಿತದಿಂದ ಬಿಡಿಸಿಕೊಳ್ಳಬೇಕೆಂಬ ಅರಿವಾದಾಗ ತೀವ್ರವಾಗಿ ಗಾಯಗೊಂಡ ಹಾವಿನ ಕತೆ ಮುಗಿದಿತ್ತು.

ಯಾವುದೇ ಪರಿಸ್ಥಿತಿ, ವಾಸ್ತವವನ್ನು ಅರ್ಥ ಮಾಡಿಕೊಳ್ಳದೆ, ತಪ್ಪು-ಸರಿಗಳ ವಿಚಾರವಿಲ್ಲದೆ ಕೋಪ, ಅಸಹನೆ ಹಾಗೂ ಮೊಂಡುಬುದ್ಧಿ ಪ್ರದರ್ಶಿಸಿದರೆ ಸ್ವವಿನಾಶ ಖಂಡಿತ. ಇಲ್ಲಿ ಗರಗಸದ ಮೊನಚಾದ ಬ್ಲೇಡು ಜೀವನದಲ್ಲಿ ನಮಗೆದುರಾಗುವ ನಾನಾ ರೀತಿಯ ಸಮಸ್ಯೆಗಳ ಸಂಕೇತ. ಏರಿಳಿತಗಳು, ಸಮಸ್ಯೆಗಳು ಹಠಾತ್ತಾಗಿ ಬಂದೆರಗಿದಾಗ ತಾಳ್ಮೆ ಹಾಗೂ ಬುದ್ಧಿವಂತಿಕೆಯಿಂದಿದ್ದರೆ ಪರಿಹಾರ ಖಂಡಿತ. ಗರಗಸದ ಮೂಲ ಗುಣವೇ ಕತ್ತರಿಸುವುದು, ತುಂಡಾಗಿಸುವುದು. ಅದನ್ನು ಅರಿಯದೆ ಸಾಹಸ ಪ್ರದರ್ಶನಕ್ಕೆ ಮುಂದಾದರೆ ನಮಗೇ ತೊಂದರೆ. ಜೀವನದಲ್ಲಿಯೂ ಅಂಥವರಿಂದ ಆದಷ್ಟು ದೂರವಿರುವುದು ಲೇಸು.

ಕೆಸರಿನ ಮೇಲೆ ಕಲ್ಲು ಒಗೆದರೆ ಆ ಕೆಸರು ನಮಗೇ ರಾಚುತ್ತದೆ ಹೊರತು ಬೇರೆ ಏನೂ ಆಗುವುದಿಲ್ಲ. ಬಟ್ಟೆಯು ಮುಳ್ಳಿನ ಮೇಲೆ ಅಥವಾ ಮುಳ್ಳು ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ. ಸೂಕ್ಷ್ಮವಾಗಿ, ತಾಳ್ಮೆಯಿಂದ ಮುಳ್ಳಿನಿಂದ ಬೇರ್ಪಡಿಸಬೇಕೇ ಹೊರತು ಕೋಪದಿಂದ ಎಳೆದರೆ ಹರಿಯುವುದು ಬಟ್ಟೆಯೇ. ಕೋಪವು ನಮ್ಮ ಆಲೋಚನಾ ಶಕ್ತಿಯನ್ನೂ ಕುಂಠಿತಗೊಳಿಸುತ್ತದೆ. ನಮ್ಮನ್ನು ನೋಯಿಸುವವರಿಗೆ ನೋವುಂಟು ಮಾಡಲುಹೋಗಿ ನಾವೇ ನೋವುಣ್ಣುತ್ತೇವೆ. ಕೆಲವೊಮ್ಮೆ ಜನರ ಕಟುನುಡಿ, ಚುಚ್ಚುಮಾತು ಗರಗಸದ ಮೊನಚಾದ ತುದಿಯಂತೆಯೇ ಇರುತ್ತದೆ. ಎಂಥ ಸನ್ನಿವೇಶದಲ್ಲಿಯೂ ನಾವು ಇಂಥದಕ್ಕೆ ತಾಳ್ಮೆ ಕಳೆದುಕೊಂಡು ಪ್ರತಿಕ್ರಿಯಿಸದ ಮನಸ್ಥಿತಿ ರೂಢಿಸಿಕೊಳ್ಳಬೇಕು. ‘ಸಿಟ್ಟು ತನ್ನ ವೈರಿ; ಶಾಂತಿ ಪರರ ವೈರಿ’ ಎನ್ನುವಂತೆ ಕೋಪವು ನಮ್ಮ ಹಿಡಿತದಲ್ಲಿರಬೇಕೆ ಹೊರತು ನಾವೇ ಅದರ ದಾಸರಾಗಬಾರದು. ಸಮಸ್ಯೆಗಳೆದುರಾದಾಗ ಕೋಪ ಬಿಟ್ಟು, ತಾಳ್ಮೆಯಿಂದ ಅದನ್ನು ಎದುರಿಸಿ, ನಮ್ಮ ತಪ್ಪುಗಳನ್ನೂ ಅರ್ಥ ಮಾಡಿಕೊಂಡು, ಅದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳೋಣ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net