

| ಜಯಶ್ರೀ ಶಿವಾನಂದ
ಅದೊಂದು ಊರು. ಅಲ್ಲಿ ಎತ್ತರದ ಗುಡ್ಡ. ಗುಡ್ಡದ ಕೆಳಭಾಗದಲ್ಲೊಂದು ಶಾಲೆ. ಅಲ್ಲಿ ಓದುತ್ತಿರುವ ಹುಡುಗನೊಬ್ಬನಿಗೆ ಗುಡ್ಡದಾಚೆ ಏನಿದೆ ಎಂದು ನೋಡುವ ಕುತೂಹಲ. ಅರಳಿಕಟ್ಟೆಯ ಕೆಳಗೆ ನಿಂತು ಗುಡ್ಡದೆಡೆಗೆ ಆಸೆಯ ನೋಟ ಬೀರುತ್ತಿದ್ದ. ಆ ಗುಡ್ಡದ ತುದಿಯನ್ನು ಮುಟ್ಟಬೇಕು. ಅಲ್ಲಿಂದ ನಿಂತು ಅದರಾಚೆ ನೋಡಬೇಕು. ಅದನ್ನು ಗೆಳೆಯರೆಲ್ಲರಿಗೆ ಬಣ್ಣಿಸಬೇಕು ಎನ್ನುವುದು ಅವನ ಕನಸಾಗಿತ್ತು. ಪ್ರತಿ ದಿನವೂ ಶಾಲೆ ಬಿಟ್ಟ ನಂತರ ಗುಡ್ಡ ಹತ್ತಲು ಪ್ರಾರಂಭಿಸುತ್ತಿದ್ದ. ಇನ್ನೂ ಅರ್ಧ ಹತ್ತುವ ವೇಳೆಗೆ ಕತ್ತಲಾಗುತ್ತಿತ್ತು ಇಲ್ಲವೇ ಹಸಿವಾಗುತ್ತಿತ್ತು, ಸುಸ್ತಾಗುತ್ತಿತ್ತು. ನಿರಾಸೆಯಿಂದ ಹಿಂದಿರುಗುತ್ತಿದ್ದ.
ಇದನ್ನ ಗಮನಿಸುತ್ತಿದ್ದ ಶಿಕ್ಷಕರು ಒಂದು ದಿನ ಅವನನ್ನು ಕರೆದು, ‘ಮಗು, ಪ್ರತಿ ದಿನ ಗುಡ್ಡದ ಕೆಳಗೆ ಕುಳಿತು ಯೋಚಿಸುತ್ತೀಯಾ ಹಾಗೂ ಗುಡ್ಡ ಹತ್ತಿ ವಾಪಸ್ ಬರುತ್ತೀಯ, ಯಾಕೆ ಏನು ಸಮಸ್ಯೆ?’ ಎಂದರು. ಆತ ‘ಗುರುಗಳೇ, ಈ ಗುಡ್ಡ ಎಂದರೆ ಏನೋ ಮೋಹ ನನಗೆ. ಅದನ್ನ ಹತ್ತಿ ಅದರಾಚೆ ನೋಡುವ ಆಸೆ. ಅದನ್ನೇ ಕನವರಿಸುತ್ತೇನೆ. ಪ್ರತಿ ದಿನ ಪ್ರಯತ್ನಿಸುತ್ತಿದ್ದೇನೆ ಕೂಡ. ಆದರೂ ಏನೋ ಒಂದು ಅಡೆತಡೆ. ಗುಡ್ಡ ಹತ್ತಲಾರದೆ ನೊಂದಿದ್ದೇನೆ.’ ಆಗ ಗುರುಗಳು ಹೇಳಿದರು, ‘ಒಂದು ಕೆಲಸ ಮಾಡು, ನಾಳೆ ಭಾನುವಾರ ಮುಂಜಾನೆ 6 ಕ್ಕೆ ಒಂದಿಷ್ಟು ತಿಂಡಿ, ಸ್ವಲ್ಪ ನೀರು ತೆಗೆದುಕೊಂಡು ಇದೇ ಕಟ್ಟೆಯ ಸಮೀಪ ಬಾ’ ಎಂದರು.
ಮರುದಿನ ಮುಂಜಾನೆ ಗುರುಗಳು ಮತ್ತು ಬಾಲಕ ಸರಿಯಾಗಿ 6 ಗಂಟೆಗೆ ಗುಡ್ಡ ಹತ್ತಲಾರಂಭಿಸಿದರು. ಅಲ್ಲಲ್ಲಿ ನಿಲ್ಲುತ್ತ, ಪ್ರಕೃತಿ ಸೌಂದರ್ಯ ಸವಿಯುತ್ತ, ಏರಿದರು. ಹತ್ತುವವರೆಗೂ ಹಿಂದಿರುಗಲಾರೆವು ಎನ್ನುವ ಶಪಥ ಇತ್ತು. 4 ಗಂಟೆಯ ಪ್ರಯಾಣದ ನಂತರ ಅವರು ಗುಡ್ಡದ ತುದಿಯಲ್ಲಿದ್ದರು. ಅಲ್ಲೊಂದು ಆಲದ ಮರ. ‘ಬಾ ಆ ನೆರಳಲ್ಲಿ ಕೂರೋಣ. ತಿಂಡಿ ತಿನ್ನೋಣ’ ಎಂದು ಗುರುಗಳು ಹೇಳಿದರು. ಎಲ್ಲವೂ ಮುಗಿದ ಮೇಲೆ ಬಾಲಕ ಕೇಳಿದ, ‘ಗುರೂಜಿ, ನಾನು ಒಂದು ವರ್ಷದಿಂದ ಪ್ರಯತ್ನಿಸುತ್ತಿದ್ದೆ. ಆದರೆ, ಗುರಿ ತಲುಪಲಾಗಲಿಲ್ಲ. ಇವತ್ತು ಒಂದೇ ದಿನಕ್ಕೆ ಇಲ್ಲಿ ತಲುಪಿದ್ದೇವೆ. ಇದು ಹೇಗೆ ಸಾಧ್ಯ?’. ‘ಮಗು, ಮೊದಲು ಗುರಿಯನ್ನು ನಿರ್ಧರಿಸಬೇಕು. ಎಂಥ ಕಷ್ಟ ಎದುರಾದರೂ ಆ ಗುರಿ ತಲುಪುತ್ತೇನೆಂಬ ದೃಢ ನಿರ್ಧಾರ ಬೇಕು. ಮಧ್ಯೆ ಸಣ್ಣಪುಟ್ಟ ಸಮಸ್ಯೆ ಬರಬಹುದು. ಇಟ್ಟ ಹೆಜ್ಜೆ ಹಿಂದಿಡಬಾರದು. ಇಂದು ಇಷ್ಟು ಪ್ರಯತ್ನಪಟ್ಟೆ, ನಾಳೆ ಬೇರೇನೋ ಮಾಡಿದೆ, ನಾಡಿದ್ದು ಮತ್ತದೇ ಪ್ರಯತ್ನ ಮೊದಲಿಂದ ಆರಂಭಿಸಿದೆ ಎಂದಾದರೆ ಗುರಿ ತಲುಪುವುದು ಕನಸಷ್ಟೇ. ಗುರಿ ತಲುಪುವ ತನಕ ಪ್ರಯತ್ನ ನಿಲ್ಲಬಾರದು. ಅಂತಹದೊಂದು ನಿರಂತರತೆ ಗೆಲುವು ತಂದುಕೊಡದೆ ಇರಲಾರದು, ಇಂದಿನಂತೆ’ ಎಂದು ಶಿಕ್ಷಕರು ವಿವರಿಸಿದರು. ನಿರಂತರ ಪ್ರಯತ್ನವೆಂಬುದು ಎಲ್ಲವನ್ನೂ ಮೀರಿ, ಒಂದು ದಿನ ಗುರಿಯೆಡೆಗೆ ತಲುಪಿಸುತ್ತದೆ. ಉಳಿದೆಲ್ಲವೂ ಸರಿ ಇದ್ದು, ಪ್ರಯತ್ನದಲ್ಲಿ ನಿಯಮಿತತೆ, ನಿರಂತರತೆ ಎಂಬ ಶಿಸ್ತಿಲ್ಲದಿದ್ದರೆ ಗುರಿಸಾಧನೆ ಕಷ್ಟ.
(ಲೇಖಕರು ಹವ್ಯಾಸಿ ಬರಹಗಾರರು)