ದುಡುಕಬೇಡ ಮನುಜ: ಮನೋಲ್ಲಾಸ

Manollasa
Published on
| ಕಾಂತೇಶಾಚಾರ್ಯ ಕದರಮಂಡಲಗಿ

ತಪ್ಪು ಮಾಡಿದವರಿಗೆ ಶಿಕ್ಷೆ ಇದು ಜಗತ್ತಿನ ಸಾಮಾನ್ಯ ನಿಯಮ. ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂಬ ನುಡಿಯಂತೆ, ತಿಳಿದೋ ತಿಳಿಯದೆಯೋ ಅಪರಾಧ ಮಾಡಿದವರಿಗೆ ಶಿಕ್ಷೆಯಾಗುವುದು ನಿಶ್ಚಿತ. ನ್ಯಾಯಾಲಯವು ವಿಚಾರಣೆ ನಡೆಸಿ, ಅಪರಾಧಕ್ಕೆ ತಕ್ಕ ಶಿಕ್ಷೆ ವಿಧಿಸುತ್ತದೆ. ಆದರೆ, ಹಣದ ಪ್ರಭಾವದಿಂದಲೋ, ಅಧಿಕಾರದ ಬಲದಿಂದಲೋ ಅಪರಾಧದ ಕೃತ್ಯಗಳನ್ನು ಮುಚ್ಚಿಹಾಕಿ ಅಥವಾ ಸುಳ್ಳುಸಾಕ್ಷಿಗಳನ್ನು ಸೃಷ್ಟಿಸಿ, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುವವರಿದ್ದಾರೆ. ಅಂಥವರು ತಮ್ಮ ಪ್ರಭಾವ ಬಳಸಿ, ಶಿಕ್ಷೆ ತಪ್ಪಿಸಿಕೊಂಡಿದ್ದಕ್ಕೆ ಸಂತೋಷಪಡಬಹುದು. ಆದರೆ ಇಹಲೋಕದ ಈ ನ್ಯಾಯಾಲಯದಲ್ಲಿ ಅವರಿಗೆ ಶಿಕ್ಷೆ ಆಗದಿದ್ದರೂ, ದೇವಲೋಕದ ನ್ಯಾಯಾಲಯದಲ್ಲಿ ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ನಾವು ಮಾಡುವ ಕರ್ಮಗಳಿಗೆ ಫಲ ನೀಡುವವನು ಆ ಭಗವಂತ. ಅವನು ಎಲ್ಲೆಡೆ ಇರುವವ. ಎಲ್ಲೆಡೆ ಇದ್ದು, ನಾವು ಮಾಡುವ ಎಲ್ಲ ಕರ್ಮವನ್ನೂ ನೋಡುವವ. ರಾಮಾಯಣದ ಯುದ್ಧಸಂದರ್ಭ. ರಾವಣನು ಮೊದಲಬಾರಿ ಯುದ್ಧಕ್ಕೆ ಬಂದಾಗ, ಹನುಮಂತನನ್ನು ಬಿಟ್ಟು ಉಳಿದ ಎಲ್ಲ ವಾನರ ಶ್ರೇಷ್ಠರನ್ನೂ ಗೆದ್ದು, ಲಕ್ಷ್ಮಣನನ್ನೂ ಬೀಳಿಸುತ್ತಾನೆ. ಕ್ರುದ್ಧನಾದ ರಾಮನು ರಾವಣನೊಂದಿಗೆ ಯುದ್ಧ ಮಾಡಿದ. ರಾವಣನ ರಥ, ಧ್ವಜ, ಕುದುರೆ, ಸಾರಥಿ, ಕಿರೀಟ, ಧನುರ್ಬಾಣಗಳೆಲ್ಲವನ್ನೂ ಭಗ್ನಗೊಳಿಸಿ, ಕೊನೆಗೆ ಕೆಲವು ಬಾಣಗಳಿಂದ ರಾವಣನನ್ನು ಹೊಡೆದು ಭೂಮಿಯಲ್ಲಿ ಬೀಳಿಸಿದ. ಆಗ ಶ್ರೀರಾಮನು ರಾವಣನಿಗೆ ಒಂದು ಮಾತನ್ನು ಹೇಳಿದ-

ಯದೀಂದ್ರವೈವಸ್ವತಭಾಸ್ಕರಾನ್ ವಾ ಸ್ವಯಂಭುವೈಶ್ವಾನರಶಂಕರಾನ್ ವಾ |

ಗಮಿಷ್ಯಸಿ ತ್ವಂ ದಶ ವಾ ದಿಶೋಥವಾ ತಥಾಪಿ ಮೇ ನಾದ್ಯ ಗತೋ ವಿಮೋಕ್ಷ ್ಯೇ ||

‘ಹೇ ರಾವಣ! ನೀನು ಇಂದ್ರನ ಹತ್ತಿರ, ಯಮಧರ್ಮ, ಸೂರ್ಯ, ಬ್ರಹ್ಮದೇವರು, ಅಗ್ನಿ, ರುದ್ರದೇವರು ಹೀಗೆ ಯಾರ ಹತ್ತಿರ ಹೋದರೂ ಅಥವಾ ಈ ಲೋಕದ ಹತ್ತು ದಿಕ್ಕುಗಳಿಗೆ ಹೋದರೂ ಅಪರಾಧಿಯಾದ ನೀನು ನನ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ’. ಇದು ಯುದ್ಧಪ್ರಸಂಗದಲ್ಲಿ ಹೇಳಿದ ಸಾಂರ್ದಭಿಕವಾದ ಮಾತಾದರೂ ಇದು ನಮ್ಮೆಲ್ಲರಿಗೆ ನೀಡುವ ದೊಡ್ಡ ಸಂದೇಶವಾಗಿದೆ. ರಾಮನು ರಾವಣನನ್ನು ನಿಮಿತ್ತ ಮಾಡಿ ಜಗತ್ತಿಗೆ ನೀಡಿದ ಎಚ್ಚರಿಕೆಯಿದು.

ದೇವಲೋಕದ ನ್ಯಾಯಾಧೀಶನಾದ ಆ ಭಗವಂತನ ಕಣ್ಣುತಪ್ಪಿಸಿ ಪಾರಾಗಲು (ಶಿಕ್ಷೆಯಿಂದ ತಪ್ಪಿಸಿಕೊಳ್ಳಲು) ಯಾರಿಗೂ ಸಾಧ್ಯವಿಲ್ಲ. ಮಹಾಭಾರತದ ಅನುಶಾಸನಪರ್ವದಲ್ಲಿ ಉಮಾಮಹೇಶ್ವರಸಂವಾದ ತಿಳಿಸುವಂತೆ, ನಾವು ಮಾಡುವ ಯಾವ ಯಾವ ಅಪರಾಧಗಳಿಗೆ ಭಗವಂತ ಯಾವ ಯಾವ ಶಿಕ್ಷೆ ಕೊಡುತ್ತಾನೆ ಎಂಬ ವಿಚಾರ ಸ್ಪಷ್ಟವಾಗಿದೆ. ಕೆಲವು ಅಪರಾಧಗಳಿಗೆ ಈ ಜನ್ಮದಲ್ಲಿಯೇ ಶಿಕ್ಷೆಯಾದರೆ, ಇನ್ನು ಹಲವು ಕರ್ಮಗಳಿಗೆ ಜನ್ಮಾಂತರದಲ್ಲಿಯೂ ಶಿಕ್ಷೆ ಆಗುತ್ತದೆ ಎಂಬುದರಲ್ಲಿ ಎರಡುಮಾತಿಲ್ಲ. ಹೀಗಾಗಿ ಅಪರಾಧಗಳನ್ನು ಮಾಡುವಾಗ ‘ನನಗಾರು ಶಿಕ್ಷೆ ನೀಡುವರು?’ ಎಂಬ ಉದ್ಧಟತನ ಬೇಡ. ಎಲ್ಲೆಡೆ ಇದ್ದು ಎಲ್ಲವನ್ನೂ ನೋಡುವ ಭಗವಂತನ ಆ ನ್ಯಾಯಾಲಯದಲ್ಲಿ ನಮಗೆ ಶಿಕ್ಷೆ ನಿಶ್ಚಿತ ಎಂಬ ಎಚ್ಚರವಿರಲಿ!

(ಲೇಖಕರು ಸಂಸ್ಕೃತ ವಿದ್ವಾಂಸರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net