

ಒಂದೂರಲ್ಲಿ ಒಬ್ಬ ಜಿಪುಣನಿದ್ದ. ನಾಳೆಯ ದಿನಕ್ಕಾಗಿ ಇಂದಿನ ಸುಖ- ಸಂತೋಷಗಳನ್ನು ತ್ಯಾಗ ಮಾಡಲು ಸಿದ್ಧನಾಗಿರುತ್ತಿದ್ದ. ಆ ವರುಷ ಈತನ ತೋಟದ ಮಾವಿನ ಮರ ಹಲವಾರು ಕಾಯಿಗಳನ್ನು ಬಿಟ್ಟಿತ್ತು. ಬಲಿತ ಕಾಯಿಗಳನ್ನೆಲ್ಲಾ ಈತ ಕೊಯ್ದು, ಕೋಣೆಯ ಒಣ ಹುಲ್ಲುಹಾಸಿನ ಮೇಲೆ ಹರಡಿ ಹಣ್ಣಾಗಲು ಇಟ್ಟ. ವಾರದೊಳಗೆ ಕೋಣೆಯ ಒಳಗಿನಿಂದ ಮಾವಿನ ಹಣ್ಣಿನ ಪರಿಮಳ ಹೊರ ಸೂಸಲಾರಂಭಿಸಿತು. ತೆರೆದು ನೋಡಲಾಗಿ ಅವುಗಳ ಪೈಕಿ 8-10 ಕಾಯಿಗಳು ಹಣ್ಣಾಗಿ, ಈ ದಿನವೇ ತಿನ್ನುವಷ್ಟು ಪಕ್ವವಾಗಿದ್ದವು. ಆದರೆ, ಕೆಲ ಕಾಯಿಗಳು ಮಾತ್ರ ತುಂಬಾ ಹಣ್ಣಾಗಿ, ಮೇಲ್ ಭಾಗದಿಂದ ಕೊಳೆಯಲಾರಂಭಿಸಿದ್ದುವು. ಈ ಜಿಪುಣ ಮನುಷ್ಯ ಅರೆಕೊಳೆತ ಹಣ್ಣುಗಳನ್ನು ಮಾತ್ರ ಹೊರತೆಗೆದು, ಕೊಳೆತ ಭಾಗವನ್ನು ಚಾಕುವಿನಿಂದ ಕತ್ತರಿಸಿ ತೆಗೆದು, ಉಳಿದರ್ಧ ಒಳಭಾಗವನ್ನಷ್ಟೆ ತಿಂದು ತೃಪ್ತಿಪಟ್ಟುಕೊಂಡ.
ಮತ್ತೆ ಮರುದಿನ ನೋಡಲಾಗಿ, ಇನ್ನಷ್ಟು ಹೊಸ ಕಾಯಿಗಳು ಹಣ್ಣಾಗಿ ತಿನ್ನಲು ತಯಾರಾಗಿದ್ದವು. ಆದರೆ, ನಿನ್ನೆಯೇ ತಿನ್ನಲು ಯೋಗ್ಯವಾಗಿದ್ದ ಆ 8-10 ಹಣ್ಣುಗಳು ಇಂದು ಅರ್ಧ ಭಾಗದಷ್ಟು ಕೊಳೆತು ಹೋಗಿದ್ದವು. ಮತ್ತೆ ಆ ಕೊಳೆತ ಭಾಗವನ್ನು ಕತ್ತರಿಸಿ ಅಳಿದುಳಿದ ಒಳ್ಳೆಯ ಭಾಗವನ್ನಷ್ಟೆ ತಿಂದ. ಇದೇ ರೀತಿ ಹಣ್ಣುಗಳೆಲ್ಲಾ ಖಾಲಿಯಾಗುವ ತನಕ, ಅವನ್ನು ಕೊಳೆಯಿಸಿಯೇ ತಿನ್ನುವಂತಾಯಿತು. ಒಂದು ವೇಳೆ, ಮೊದಲನೆಯ ದಿನವೇ ಕೊಳೆತ ಹಣ್ಣುಗಳನ್ನು ಬಿಸಾಕಿದ್ದರೆ ಉತ್ತಮ ಹಣ್ಣುಗಳನ್ನು ತಿನ್ನಲು ಸಾಧ್ಯವಾಗುತ್ತಿತ್ತು. ಪ್ರತಿ ದಿನವೂ ಅರ್ಧರ್ಧ ಕೊಳೆತು ಹಾಳಾಗುವುದನ್ನು ತಪ್ಪಿಸಿ ಹೆಚ್ಚು ಹಣ್ಣು ತಿಂದಂತಾಗುತ್ತಿತ್ತು.
ತಾತ್ಪರ್ಯವಿಷ್ಟೆ- ನಾಳೆಗೆ ಬೇಕೆಂಬ ಮಹದಾಸೆಯಿಂದ ನಾವು ಇಂದಿನ ಸುಖ- ಸಂತೋಷಗಳಿಂದ ವಂಚಿತರಾಗಬಾರದು. ನಿನ್ನೆ ತಯಾರಿಸಿದ ಅನ್ನವನ್ನು ವ್ಯರ್ಥ ಮಾಡಬಾರದೆಂಬ ಹಾಗೂ ಇಂದು ತಯಾರಿಸಿದ ಬಿಸಿ ಅನ್ನ ನಾಳೆಗೆ ಇರಲೆಂಬ ಕಾರಣದಿಂದ ಉಳಿದ ತಂಗಳನ್ನವನ್ನೇ ತಿಂದು ತೃಪ್ತಿಪಟ್ಟು ಕೊಳ್ಳುವವರಿದ್ದಾರೆ. ಅಂತೆಯೇ ಎಂದೋ ಖರೀದಿಸಿದ ಇಲ್ಲವೇ ಯಾರಾದರೂ ಉಡುಗೊರೆಯಾಗಿ ಕೊಟ್ಟ ಪಂಚೆ-ಸೀರೆಗಳನ್ನು ಉಪಯೋಗಿಸದೆ, ಭದ್ರವಾಗಿ ಬೀರುವಿನೊಳಗಿಟ್ಟು ಈ ಹೊಸ ಬಟ್ಟೆಗಳೆಲ್ಲಾ ಹಳೇ ಬಟ್ಟೆಯಾಗುವ ತನಕ, ಹರಿದು ಹೋಗಿದ್ದರೂ, ಮಾಸಿ ಹೋಗಿದ್ದರೂ ತಮ್ಮ ಹಳೇ ಬಟ್ಟೇ ಬರೆಗಳಲ್ಲೇ ಕಾಲ ಕಳೆಯುತ್ತಾರೆ. ಇದೇ ರೀತಿ ಸುಸಜ್ಜಿತವಾದ ಒಳ್ಳೆಯ ಮನೆಯನ್ನು ಕಟ್ಟುತ್ತಾರೆ; ಆದರೆ, ಹಣದಾಸೆಯಿಂದ ಅದನ್ನು ಬಾಡಿಗೆಗೆ ಕೊಟ್ಟು ತಾವುಗಳು ಚಿಕ್ಕ ಹಳೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ.
ಅಂತೆಯೇ ತಮ್ಮ ಹೊಟ್ಟೆ ಬಟ್ಟೆಗೆ ಕಡಿಮೆಯಾದರೂ ಸರಿಯೇ ಹೆತ್ತವರು ತಮ್ಮ ಸುಖ, ಸಂತೋಷ, ಸೌಲಭ್ಯಗಳನ್ನು ತ್ಯಾಗ ಮಾಡಿ, ಮಕ್ಕಳಿಗಾಗಿ ಎಲ್ಲಾ ಸೊತ್ತು ಸಂಪತ್ತುಗಳನ್ನೇ ಕೂಡಿಸುತ್ತಾರೆ. ಮಂದೆ ಅವೆಲ್ಲಾ ಮಕ್ಕಳ ವಶವಾದಾಗ, ಅವರನ್ನೇ ಕಾಡಿಬೇಡಿ ಬದುಕುವ ದಿನಗಳನ್ನು ತಾವೇ ತಂದುಕೊಳ್ಳುತ್ತಾರೆ. ಇದು ಮೂರ್ಖತನವಲ್ಲವೇ? ಆದುದರಿಂದ ನೆನ್ನೆ ಇಂದನ್ನು ನುಂಗಬಾರದು; ಇಂದು ನಾಳೆಗೆ ಮರುಗಬಾರದು. ಇಂದಿನದನ್ನು ಇಂದೇ ಮಾಡಿಬಿಡಬೇಕು. ಇದುವೇ ಬಾಳುವ ಕಲೆ. ಈ ಸತ್ಯವನ್ನೇ ಡಿ.ವಿ.ಜಿಯವರು ಹೀಗೆ ಹೇಳಿದರು. ಮುಂದೇನೋ ಮತ್ತೇನೋ ಇಂದಿಗಾ ಮಾತೇಕೆ? ಸಂದರ್ಭ ಬರಲಿ, ಬಂದಗಳಾ ಚಿಂತೆ; ಹೊಂದಿಸುವವನಾರೋ ನಿನ್ನಾಳಲ್ಲ; ಬೇರಿಹನು, ಇಂದಿಗಿಂದನು ಬದುಕು ಮಂಕುತಿಮ್ಮ.