ಮನೋಲ್ಲಾಸ | ನೈಜ ಜ್ಞಾನದತ್ತ ಸಾಗಬೇಕು

Mind
Published on
| ಚಿದಂಬರ ಮುನವಳ್ಳಿ

ಹಿಂಸಕ ಮೃಗಗಳ ಬೇಟೆಯಾಡುತ್ತ ದಟ್ಟವಾದ ಅರಣ್ಯ ಪ್ರವೇಶಿಸಿದ ರಾಜನೊಬ್ಬನಿಗೆ ಬಹುದೂರದ ಪ್ರಯಾಣದ ಬಳಲಿಕೆಯಿಂದ ಬಾಯಾರಿಕೆಯಾಗಿ ನೀರು ಹುಡುಕುತ್ತಿರುವಾಗ ದೂರದಲ್ಲಿ ಒಂದು ಗುಡಿಸಲು ಕಾಣಿಸಿತು. ಆ ಕಡೆ ಕುದುರೆ ಓಡಿಸಿದ. ಅಲ್ಲಿರುವ ಒಬ್ಬ ಕಟ್ಟಿಗೆ ಕಡಿಯುವವನು ಮಡಕೆಯಲ್ಲಿಯ ತಂಪಾದ ನೀರನ್ನು ರಾಜನಿಗೆ ನೀಡಿದ. ಅದಕ್ಕೆ ಪ್ರತಿಯಾಗಿ ರಾಜನು ಅವನಿಗೆ ಧನ್ಯವಾದ ಹೇಳಿ, ‘ನೀನು ನನ್ನ ಅರಮನೆಗೆ ಬಾ. ನಿನಗೆ ಒಳ್ಳೆಯ ಇನಾಮು ಕೊಡುವೆ’ ಎಂದ. ಹೀಗಿರಲು ಮುಂದೊಂದು ದಿನ ಅವನು ರಾಜಮಹಲಕ್ಕೆ ಹೋದ. ಸಂಕಟ ಸಮಯದಲ್ಲಿ ನೀರು ಕೊಟ್ಟು ಉಪಚರಿಸಿದ ಇವನಿಗೆ ಏನಾದರೂ ವಿಶೇಷವಾದುದನ್ನು ಕೊಡಬೇಕೆಂದು ವಿಚಾರ ಮಾಡಿದ ರಾಜನು ರಾಜಧಾನಿಯ ಹತ್ತಿರವಿರುವ ಗಂಧದ ಮರಗಳಿಂದ ಕಂಗೊಳಿಸುವ ಉದ್ಯಾನವೊಂದನ್ನು ಅವನ ಹೆಸರಿಗೆ ಬರೆದು ಕೊಡಲು ಮಂತ್ರಿಗೆ ಸೂಚಿಸಿದ. ಆ ಕಟ್ಟಿಗೆ ಕಡಿಯುವವನು ಅಲ್ಲಿ ಹೋಗಿ ಇಷ್ಟೊಂದು ಗಿಡ, ಮರಗಳು ಸೊಂಪಾಗಿ ಬೆಳೆದಿರುವುದನ್ನು ನೋಡಿ ಸಂತೋಷಹೊಂದಿ ಇವೆಲ್ಲವುಗಳನ್ನು ಕಡಿದು ಮಾರಿದರೆ ಸಾಕಷ್ಟು ಹಣ ಬರಬಹುದು. ಇನ್ನೂ ಮುಂದುವರಿದು ಈ ಮರಗಳನ್ನು ಕಡಿದು ಸುಟ್ಟು ಇದ್ದಿಲು ಮಾಡಿ ಮಾರಿದರೆ ಇನ್ನೂ ಹೆಚ್ಚು ಗಳಿಸಬಹುದೆಂದು ಒಂದೊಂದನ್ನೇ ಕಡಿಯತೊಡಗಿದ.

ಕೆಲವು ದಿನಗಳ ನಂತರ ರಾಜನು ಆ ಮನುಷ್ಯನು ಸುಖಿಯಾಗಿ ಇರುವನೋ ಹೇಗೆ ನೋಡಿಕೊಂಡು ಬರೋಣವೆಂದು ಉದ್ಯಾನದ ಕಡೆಗೆ ಬಂದು ನೋಡಿದರೆ ಅಲ್ಲಿಂದ ಹೊಗೆ ಬರುತ್ತಿತ್ತು. ಗಂಧದ ಕಟ್ಟಿಗೆಗಳೆಲ್ಲ ಉರಿದು ಹೋಗುತ್ತಿದ್ದವು. ಕಷ್ಟಪಟ್ಟು ಬೆಳೆಸಿದ ಉದ್ಯಾನವೆಲ್ಲ ಬಯಲಾಗಿ ಬಿಟ್ಟಿತ್ತು. ಕೆಲವೇ ಮರಗಳು ಉಳಿದಿದ್ದವು. ರಾಜನಿಗೆ ಕೋಪ ಬಂದರೂ ಅವನ ಅಜ್ಞಾನಕ್ಕೆ ಮರುಗಿ ಹೇಳಿದ. ‘ಈ ಇದ್ದಲಿನ ರಾಶಿಯನ್ನು ಇಲ್ಲೇ ಬಿಡು. ಕೇವಲ ಒಂದು ಕಟ್ಟಿಗೆ ತುಂಡು ತೆಗೆದುಕೊಂಡು ಪೇಟೆಯಲ್ಲಿ ಮಾರಿಕೊಂಡು ಬಾ’. ಇದ್ದಲಿಗೆ ಒಳ್ಳೆಯ ಬೆಲೆ ಇರುವಾಗ ಈ ರಾಜ ಕಟ್ಟಿಗೆ ಮಾರಲು ಹೇಳುತ್ತಿದ್ದಾನಲ್ಲ ಎಂದೆನಿಸಿದರೂ ಅವನು ರಾಜನ ಆಜ್ಞೆಯಂತೆ ಪೇಟೆಗೆ ಹೋಗುವುದೇ ತಡ ಕಟ್ಟಿಗೆಯ ಸುವಾಸನೆಗೆ ಮನಸೋತ ಜನರು ನಾ ಮುಂದೆ ತಾ ಮುಂದೆ ಎಂದು ಒಳ್ಳೆಯ ಬೆಲೆಗೆ ಅದನ್ನು ಬೇಡತೊಡಗಿದರು. ಅವನಿಗೆ ಪಶ್ಚಾತ್ತಾಪವಾಯಿತು. ಆದರೆ ಏನೂ ಮಾಡಲಾಗಲಿಲ್ಲ. ಆಗಲೇ ಸಾಕಷ್ಟು ಗಂಧದ ಮರಗಳೆಲ್ಲ ಸುಟ್ಟು ಕರಕಲಾಗಿ ಹೋಗಿದ್ದವು. ಆ ಉದ್ಯಾನವೇ ನಮ್ಮ ಶರೀರ. ನಮ್ಮ ಶ್ವಾಸವೇ ಗಂಧದ ಮರಗಳು. ಕ್ರೋಧ, ದುರಾಶೆ, ಮತ್ಸರ, ಅಹಂಕಾರಗಳ ಅಗ್ನಿಯಲ್ಲಿ ಜೀವನದ ಪ್ರತಿ ಕ್ಷಣವನ್ನು ಆಹುತಿ ಮಾಡುತ್ತ, ಇನ್ನು ಸ್ವಲ್ಪವೇ ಶ್ವಾಸ ಉಳಿದಿರು ವಾಗ ‘ನಾವೇನು ಮಾಡುತ್ತಿದ್ದೇವೆ?’ ಎಂದು ನಮಗೆ ಅನಿಸಹತ್ತುತ್ತದೆ. ಪ್ರೀತಿ, ವಿಶ್ವಾಸ, ಪರೋಪಕಾರಗಳಿಂದ ಇದನ್ನು ಸಾರ್ಥಕವಾಗಿಸಬಹುದೆಂಬ ಮೌಲ್ಯವನ್ನು ಮರೆತು ದಿನ ಕಳೆದು ಬಿಟ್ಟಿರುತ್ತೇವೆ. ಪುರಂದರ ದಾಸರು ‘ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದು ಸಾರಿದ್ದಾರೆ. ತಡವಾದರೂ ಸರಿ, ಬದಲಾಗುವ ಅವಕಾಶ ಇದ್ದೇ ಇದೆಯಲ್ಲ, ಬದುಕು ಸುಂದರವಾಗಿಸೋಣ.

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net