ಇರುವುದೆಲ್ಲವ ಬಿಟ್ಟು..: ಮನೋಲ್ಲಾಸ

Manollasa
Published on
| ಡಾ. ಪ್ರಕಾಶ್ ಕೆ. ನಾಡಿಗ್

ಅದೊಂದು ಶಾಲೆ, ಭಾನುವಾರ ಇಬ್ಬರು ಹುಡುಗರು ಶಾಲೆಯ ಮುಂದಿನಿಂದ ಹಾದು ಹೋಗುತ್ತಿದ್ದರು. ಅಲ್ಲಿ ಮೂರು ಕುರಿಗಳು ಮೇಯುತ್ತಿದ್ದವು. ಇದನ್ನು ನೋಡಿ ಅವರಲ್ಲೊಬ್ಬನಿಗೆ ಒಂದು ಉಪಾಯ ಹೊಳೆಯಿತು. ಮೂರು ಕುರಿಗಳನ್ನು ಹಿಡಿದು ಒಂದು ಕುರಿಯ ಮೇಲೆ 1 ಎಂದು, ಇನ್ನೊಂದು ಕುರಿಯ ಮೇಲೆ 2 ಎಂದು ಮತ್ತು ಮೂರನೆಯ ಕುರಿಯ ಮೇಲೆ 4 ಎಂದು ಬರೆದು ಶಾಲೆಯ ಆವರಣದೊಳಗೆ ಬಿಟ್ಟು ಗೇಟನ್ನು ಹಾಕಿದರು. ಮರುದಿನ ಶಾಲೆಯ ಸಿಬ್ಬಂದಿ ಬಂದು ನೋಡುತ್ತಾರೆ, ಮೂರು ಕುರಿಗಳು ಶಾಲೆಯ ತುಂಬೆಲ್ಲಾ ಓಡಾಡಿವೆ, ಅಲ್ಲಲ್ಲಿ ಹಿಕ್ಕೆ ಹಾಕಿ ಗಲಿಜು ಮಾಡಿವೆ. ತಕ್ಷಣ ಶಾಲೆಯ ಆಡಳಿತ ಮಂಡಳಿ ಕುರಿಗಳನ್ನು ಹಿಡಿಯುವಂತೆ ತಿಳಿಸಿತು. ಅದರಂತೆ ಹುಡುಕಿ ಮೂರು ಕುರಿಗಳನ್ನು ತಂದು ಕಟ್ಟಿದರು. ಆದರೆ ಆಡಳಿತ ಮಂಡಳಿಗೆ ಈಗ ತಲೆ ನೋವು ಪ್ರಾರಂಭವಾಯಿತು. ಒಂದು, ಎರಡು ಹಾಗೂ ನಾಲ್ಕನೆ ಸಂಖ್ಯೆ ಬರೆದ ಕುರಿಗಳು ಮಾತ್ರ ಸಿಕ್ಕಿವೆ. ಮೂರನೇ ಸಂಖ್ಯೆ ಬರೆದ ಕುರಿ ಕಾಣುತ್ತಿಲ್ಲ. ಮತ್ತೆ ಹುಡುಕಲು ತಿಳಿಸಿದರು. ಮೂರನೇ ಸಂಖ್ಯೆಯ ಕುರಿಯನ್ನು ಹುಡುಕುವುದರಲ್ಲಿಯೇ ದಿನವೆಲ್ಲ ಕಳೆದು ಹೋಯಿತು. ಕಾಲೇಜಿನ ಶಿಕ್ಷಕರು, ಹೆಡ್ ಮಾಸ್ತರ್, ಜವಾನ, ಕ್ಯಾಂಟಿನ್ ಸಿಬ್ಭಂದಿ, ಶಾಲೆಯ ಹುಡುಗರು ಎಲ್ಲರೂ ಹುಡುಕಿದ್ದೇ ಹುಡುಕಿದ್ದು, ಆದರೆ ಆ ಕುರಿ ಮಾತ್ರ ಸಿಗಲೇ ಇಲ್ಲ.

ಏಕೆ ಮೂರನೇ ಸಂಖ್ಯೆಯ ಕುರಿ ಸಿಗಲಿಲ್ಲ? ಉತ್ತರ ಸರಳ. ಆ ಸಂಖ್ಯೆಯ ಕುರಿ ಇರಲೇ ಇಲ್ಲ. ನಮ್ಮಲ್ಲಿ ಕೂಡಾ ಇಂಥವರು ಬಹಳ ಮಂದಿ ಇರುತ್ತಾರೆ. ಎಲ್ಲಾ ಇರುತ್ತದೆ, ಜೀವನ ಸಂತೋಷವಾಗಿರುತ್ತದೆ. ಆದರೂ ಇಲ್ಲದಿರುವ ವಸ್ತುವಿನ ಕೊರತೆ ಅವರನ್ನು ಕಾಡುತ್ತಿರುತ್ತದೆ. ಇಲ್ಲದಿರುವ ಈ ಮೂರನೇ ಕುರಿಯ ಹಾಗೆ. ಹೀಗೆ ಇಲ್ಲದಿರುವ ವಸ್ತುವಿನ ಹುಡುಕಾಟ ಪ್ರಸ್ತುತ ಇರುವ ಸಂತೋಷವನ್ನು, ಅನುಭವಿಸಬಹುದಾದ, ಅನುಭವಿಸುತ್ತಿರುವ ಕೆಲವು ಸಂಗತಿಗಳನ್ನು ಹೊಸಕಿಹಾಕುತ್ತದೆ. ಆಸೆಗೆ ಕಡಿವಾಣ ಹಾಕಿಕೊಳ್ಳದೇ ಹೋದರೆ ಯಾವ ವಸ್ತುವಾಗಲಿ ಅಥವಾ ವಿಷಯವಾಗಲಿ ನಮಗೆ ತೃಪ್ತಿಯನ್ನು ತಂದುಕೊಡಲಾರದು.

ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ/ಅಷ್ಟು ದೊರಕಿದರು ಮತ್ತಷ್ಟರಾಸೆ

ಕಷ್ಟ ಬೇಡೆಂಬಾಸೆ, ಕಡುಸುಖವ ಕಾಂಬಾಸೆ/ನಷ್ಟ ಜೀವನದಾಸೆ ಪುರಂದರ ವಿಠಲ

ಎಂದು ಪುರಂದರದಾಸರು ಮಾರ್ವಿುಕವಾಗಿ ಮನುಷ್ಯನ ಆಸೆಯನ್ನು ವರ್ಣಿಸಿದ್ದಾರೆ.

ಮನುಷ್ಯನ ಆಸೆಗೆ ಎಲ್ಲೆಯೇ ಇಲ್ಲ, ಬೇಕಾದ್ದೆಲ್ಲಾ ಇರುತ್ತದೆ, ಸುಖಸಂತೋಷಮಯ ಜೀವನವಿರುತ್ತದೆ. ಆದರೂ ಇನ್ನೂ ಏನೋ ಬೇಕೆಂಬಾಸೆ. ಇಷ್ಟಿದ್ದರೆ ಮತ್ತಷ್ಟು ಬೇಕೆಂದು ಮನಸ್ಸು ತುಡಿಯುತ್ತಿರುತ್ತದೆ, ಅಷ್ಟು ಸಿಕ್ಕಿದರೂ ಮನಸ್ಸಿಗೆ ಸಂತೋಷವಿಲ್ಲ, ಮತ್ತಷ್ಟು ಬೇಕೆಂಬ ಆಸೆ ಹುಟ್ಟುತ್ತಲೇ ಇರುತ್ತದೆ. ಇಲ್ಲದಿರುವ ಮೂರನೇ ಕುರಿ ನಮ್ಮ ಮನಸ್ಸನ್ನು ಆವರಿಸಿ ಸಂತೋಷ ನೆಮ್ಮದಿಯನ್ನು ಹಾಗೂ ಅಮೂಲ್ಯ ಸಮಯವನ್ನು ಕಿತ್ತುಕೊಳ್ಳದೇ ಇರಲಿ. ಇದ್ದುದ್ದರಲ್ಲಿಯೇ ತೃಪ್ತಿಪಡೋಣ, ಸಂತೋಷವಾಗಿರೋಣ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net