ಮನೋಲ್ಲಾಸ | ಪ್ರಾಮಾಣಿಕತೆ ಎಂಬ ಧರ್ಮ

Manollasa
Published on

| ಡ್ಯಾನಿ ಪಿರೇರಾ ಹಳ್ಳಿಮೈಸೂರು

ವಿಶಾಖಪಟ್ಟಣದ ವಿಶ್ವವಿದ್ಯಾಲಯದಲ್ಲಿ ಸುಬ್ರಹ್ಮಣ್ಯ ಶಾಸ್ತ್ರಿ ಎಂಬ ಪ್ರಾಧ್ಯಾಪಕರಿದ್ದರು. ಅವರಿದ್ದ ಆ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನ ಬಳಿ ಒಬ್ಬ ಮೋಚಿಯಿದ್ದ. ಈ ಪ್ರಾಧ್ಯಾಪಕರು ಆ ಮೋಚಿಯಿಂದಲೇ ಚಪ್ಪಲಿ ಹೊಲಿಸುತ್ತಿದ್ದರು. ಆ ಕಾರಣ ಅವರು ಆತನಿಗೆ ಮುಂಗಡ ಹಣ ಕೊಡುತ್ತಿದ್ದರು. ಹೀಗೊಮ್ಮೆ ಕೊಟ್ಟ ಮುಂಗಡ ಹಣ ಪಡೆದ ಮೇಲೆ ಮೋಚಿ ಕಾಣಿಸಲೇ ಇಲ್ಲ. ಅನಾರೋಗ್ಯ ಕಾಡಿರಬಹುದು ಅಥವಾ ಎಲ್ಲಿಗೋ ಹೋಗಿರಬಹುದೆಂದುಕೊಂಡರು. ತಿಂಗಳಾದರೂ ಆತ ಬರಲಿಲ್ಲ. ಇಷ್ಟಕ್ಕೂ ಕೊಟ್ಟದ್ದು 50 ರೂಪಾಯಿ, ಈವರೆಗೆ ಚಪ್ಪಲಿ ಹೊಲಿದು ಕೊಟ್ಟಿದ್ದಾನಲ್ಲ ಎಂದು ಆ ವಿಚಾರವನ್ನು ಅಲ್ಲಿಗೆ ಬಿಟ್ಟರು ಶಾಸ್ತ್ರಿಗಳು.

ತಿಂಗಳ ನಂತರ ಅವರ ಬಳಿ ಬಂದ ಒಬ್ಬ ತರುಣ, ತಾನು ಮೋಚಿಯ ಮಗನೆಂದು ಪರಿಚಯ ಮಾಡಿಕೊಂಡ. ಪ್ರಾಧ್ಯಾಪಕರು ‘ನಿನ್ನ ತಂದೆ ಆರೋಗ್ಯವಾಗಿದ್ದಾರೆಯೇ?’ ಎಂದು ವಿಚಾರಿಸಿದಾಗ ತನ್ನ ತಂದೆ ಕಾಯಿಲೆಯಿಂದ ಮರಣ ಹೊಂದಿರುವ ಬಗ್ಗೆ

ದುಃಖದಿಂದಲೇ ವಿವರಿಸಿದ. ಆತನಿಗೆ ಸಾಂತ್ವನ ಹೇಳಿದ ಪ್ರಾಧ್ಯಾಪಕರು, ‘ಈಗ ನನ್ನಿಂದೇನಾದರೂ ಸಹಾಯ ವಾಗಬೇಕಿತ್ತೇ?’ ಎಂದು ಕೇಳಿದಾಗ, ಆ ತರುಣ, ‘ಇಲ್ಲ, ನನಗೇನೂ ಬೇಡ. ತಂದೆ ಪ್ರಾಣ ಬಿಡುವಾಗ, ನಿಮ್ಮಿಂದ ಮುಂಗಡ ಪಡೆದಿದ್ದು ಆ ಹಣ ವಾಪಸ್ ಕೊಡಬೇಕು ಅಥವಾ ಚಪ್ಪಲಿಯಾದರೂ ಹೊಲಿದು ಕೊಡಬೇಕು ಎಂದು ನನ್ನ ಬಳಿ ಭಾಷೆ ತೆಗೆದುಕೊಂಡಿದ್ದಾರೆ. ಈಗ ತಮಗೆ ಚಪ್ಪಲಿ ಬೇಕೋ ಅಥವಾ ಹಣ ಬೇಕೋ ಎಂದು ಕೇಳಲು ಬಂದೆ’ ಎಂದ. ‘ಯಾವುದು ಕೊಡಬೇಕೆಂದರೂ ಎರಡು ವಾರದಷ್ಟು ಸಮಯಬೇಕು’ ಎಂದು ವಿನಮ್ರತೆಯಿಂದ ಕೇಳಿಕೊಂಡ. ‘ಆ ವಿಚಾರ ಬಿಡು, ನಿನ್ನ ಕೆಲಸ ನೀನು ಮುಂದುವರಿಸು’ ಎಂದು ಆತನನ್ನು ಸಮಾಧಾನ ಮಾಡಿ ಕಳಿಸಿದರು. ಆದರೆ, ಆ ಯುವಕ ಹೇಳಿದಂತೆ ಚಪ್ಪಲಿ ಯನ್ನು ತಂದು ಕೊಟ್ಟು, ತಂದೆಗೆ ಕೊಟ್ಟ ಭಾಷೆಯನ್ನು ಪೂರ್ತಿಗೊಳಿಸಿಯೇ ಬಿಟ್ಟ.

ಹೌದು, ಹಿರಿಯರು ಕಲಿಸುವ ಪ್ರಾಮಾಣಿಕತೆ, ಮಾತಿಗೆ ತಪ್ಪದ ನಡೆಯ ಗುಣ ಮುಂದಿನವರಿಗೆ ಮಾರ್ಗದರ್ಶನವಾಗುತ್ತದೆ. ಕಾಲಾಂತರದಲ್ಲಿ ಅದು ವಂಶವಾಹಿ ಗುಣವಾಗುತ್ತದೆ. ಇಂದು ನಮ್ಮ ಶಿಕ್ಷಣ ಕಲಿಸಲಾಗದ ಈ ಪ್ರಾಮಾಣಿಕತೆ ಮತ್ತು ಕೊಟ್ಟ ಮಾತನ್ನು ಉಳಿಸಿಕೊಳ್ಳುವ, ಸಾಕ್ಷಿಯಿಲ್ಲದಿದ್ದರೂ ಪಡೆದದ್ದನ್ನು ಒಪು್ಪವ, ಮಾತಿಗೆ ತಪ್ಪದ ಜೀವನಸಂಸ್ಕಾರ ನಮ್ಮ ಸಮಾಜದಲ್ಲಿ ಸಹಜವಾಗಿತ್ತು. ಅದನ್ನೇ ನಮ್ಮ ಹಿರಿಯರು ಧರ್ಮವೆಂದು ಕರೆಯುತ್ತಿದ್ದರು. ಅದನ್ನು ಹೇಳುವುದು ಮಾತ್ರವಲ್ಲ, ಅವರ ನಡೆಯೂ ಅದೇ ತೆರನಾಗಿತ್ತು. ಆ ಕಾರಣ ನಮ್ಮ ಪೂರ್ವಜರ ಧರ್ಮದರ್ಶಿ ನಡೆ ಅವರವರ ವಂಶದ ಕೀರ್ತಿ ಹೆಚ್ಚಿಸುತ್ತಿತ್ತು! ಈ ಮೂಲಕ ಸಮಾಜದಲ್ಲಿ ಸನ್ನಡತೆಯ ಸಂಖ್ಯೆ ಹೆಚ್ಚಲು ಸಾಧ್ಯವಾಗಿತ್ತು. ಹಾಗಾಗಿ ನಮ್ಮ ಪೂರ್ವಜರು ಬಾಳಿ ಬದುಕಿ ಹೇಳಿದ್ದು- ‘ಧರ್ಮ ಏವ ಹತೋ ಹಂತಿ ಧರ್ವೇ ರಕ್ಷತಿ ರಕ್ಷಿತಃ’ ಎಂದು. ಅಂದರೆ- ‘ಪಾಲಿಸಲ್ಪಡದ ಧರ್ಮವು ನಮ್ಮನ್ನು ನಾಶಪಡಿಸುತ್ತದೆ. ಧರ್ಮವು ಪಾಲಿಸಿದರೆ ನಮ್ಮನ್ನು ರಕ್ಷಿಸುತ್ತದೆ’ ಎಂದು. ಹಾಗಾಗಿ ಈ ಪ್ರಾಮಾಣಿಕತೆಯ ಧರ್ಮವನ್ನು ನಾವು ಪರಿಪಾಲಿಸೋಣ, ಮತ್ತದನ್ನು ಮುಂದಿನವರಿಗೆ ವರ್ಗಾಯಿಸೋಣ.

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net