ಆಗ ಬಾ ಈಗ ಬಾ ಎನ್ನದಲೇ..: ಮನೋಲ್ಲಾಸ

Manollasa
Published on
| ಡ್ಯಾನಿ ಪಿರೇರಾ ಹಳ್ಳಿಮೈಸೂರು

ಆ ರಾತ್ರಿ ಇನ್ನಿಲ್ಲದ ಚಳಿ ಇತ್ತು. ಅದಾಗ್ಯೂ ವಯಸ್ಸಾದ ಶ್ರೀಮಂತನೊಬ್ಬ ಊಟದ ನಂತರ ಕಾಂಪೌಂಡ್ ದಾಟಿ ಒಂದೆರಡು ರೌಂಡ್ ಹೊಡೆಯುವುದು ವಾಡಿಕೆಯಾಗಿತ್ತು. ಅದೊಮ್ಮೆ ವಯಸ್ಸಾದ ಬಡವ್ಯಕ್ತಿಯೊಬ್ಬ ಬೀದಿಯ ಮೂಲೆಯಲ್ಲಿ ಚಳಿಯಲ್ಲಿ ನಡುಗುತ್ತ ಮುದುರಿ ಕುಳಿತಿರುವುದನ್ನು ಕಂಡು ಶ್ರೀಮಂತ ಆತನನ್ನು ಮಾತಾಡಿಸಿದ. ‘ಈ ಚಳಿಯಲ್ಲಿ ಯಾವುದೇ ಹೊದಿಕೆ ಇಲ್ಲದೆ ಕುಳಿತಿರುವೆಯಲ್ಲ, ಈ ಕಠೋರ ಚಳಿಯನ್ನು ಹೇಗೆ ಸಹಿಸಿಕೊಳ್ಳುತ್ತೀಯಾ?’ ಎಂದಾಗ ‘ನನಗಿದೇನು ಹೊಸತೆ? ಹಸಿದ ಹೊಟ್ಟೆ, ಹೊದಿಕೆ ಇಲ್ಲದ ನಿದ್ರೆ ನನಗೆ ಅಭ್ಯಾಸವಾಗಿದೆ. ಈ ಚಳಿಗೆ ನನ್ನ ಮೈ ಒಗ್ಗಿಬಿಟ್ಟಿದೆ’ ಎಂದು ಆ ಹಿರಿಜೀವ ಹೇಳಿತು. ಆತನ ಬಗ್ಗೆ ಮರುಕಗೊಂಡ ಶ್ರೀಮಂತ, ‘ಚಿಂತೆಬಿಡು, ಮನೆಗೆ ಹೋಗಿ ಬೆಚ್ಚಗಿನ ಹೊದಿಕೆ, ಜೊತೆಗೆ ಏನಾದರೂ ತಿನ್ನಲು ತಂದು ಕೊಡುವೆ’ ಎಂದು ಮನೆಯೆಡೆಗೆ ನಡೆದ. ಮನೆಗೆ ಬಂದೊಡನೆ ವಯೋಸಹಜ ಮರೆವಿನಿಂದ ಆ ವಿಷಯ ಅಲ್ಲಿಗೆ ಮರೆತು ಬೆಚ್ಚಗೆ ಹೊದ್ದು ನಿದ್ದೆಗೆ ಜಾರಿದ.

ಬೆಳಗಿನ ಆರರ ಸುಮಾರಿಗೆ ಚಳಿ ಜಾಸ್ತಿಯಾದಂತಾಗಿ ಎಚ್ಚರಗೊಂಡಾಗ ಆ ಶ್ರೀಮಂತನಿಗೆ ಇದ್ದಕ್ಕಿದ್ದಂತೆ ನಿನ್ನೆ ರಾತ್ರಿಯ ಘಟನೆ ನೆನಪಾಯಿತು. ಪಶ್ಚಾತ್ತಾಪದ ಪ್ರಜ್ಞೆಯಿಂದ ತಕ್ಷಣ ಮೇಲೆದ್ದು ಹೊದಿಕೆಯೊಂದಿಗೆ ಅಲ್ಲಿಗೆ ಹೋದ. ಮರದ ಕೊರಡಂತೆ ಮುರುಟಿ ಮಲಗಿದ್ದ ವೃದ್ಧನನ್ನು ಹೊದಿಕೆ ಕೊಡಲು ಎಚ್ಚರಿಸಿದಾಗ ಆ ಚಳಿಯ ಘೋರತೆಗೆ ಅದಾಗಲೇ ವೃದ್ಧನ ಪ್ರಾಣ ಹೋಗಿತ್ತು. ಪಕ್ಕದಲ್ಲೇ ಬಿದ್ದಿದ್ದ ಪತ್ರ ಶ್ರೀಮಂತನಿಗೆ ಕಾಣಿಸಿತು. ಆ ಪತ್ರದಲ್ಲಿ, ‘ಹೊದಿಕೆ ಇಲ್ಲದೇ, ಊಟವಿಲ್ಲದೇ ಅದೆಷ್ಟು ಚಳಿ, ಮಳೆ, ಗಾಳಿಯನ್ನು ಎದುರಿಸಿದ್ದೆನೋ ಗೊತ್ತಿಲ್ಲ. ಆ ಎಲ್ಲ ಕಷ್ಟಕ್ಕೆ ಮಾನಸಿಕವಾಗಿ ಗಟ್ಟಿಯಾಗಿ ಬಿಟ್ಟಿದ್ದೆ. ಈ ಚಳಿ, ಹಸಿವು ಏನೂ ಮಾಡಲಾರದಷ್ಟು ದೃಢಗೊಂಡಿದ್ದೆ. ಆದರೆ ನಿನ್ನೆ ಹೊದಿಕೆಯನ್ನು ತರುತ್ತೇನೆಂದು ಹೊರಟಿರಿ, ನಾನು ಈಗ ಬರುತ್ತಾರೆ, ನನಗೊಂದಷ್ಟು ಆಹಾರದ ಜೊತೆಗೆ ಚಳಿ ತಡೆಯಲು ಹೊದಿಕೆ ಸಿಗುತ್ತದೆ ಎಂದು ಕಾಯುತ್ತ ಕುಳಿತೆ. ಯಾವತ್ತೂ ಕಾಡದ ಹಸಿವು ಬಾಧಿಸಿತು, ಚಳಿ ನಡುಗಿಸಿತು’ ಎಂದು ಬರೆದಿತ್ತು.

ಪತ್ರ ಓದಿದೊಡನೆ ಆ ಶ್ರೀಮಂತನ ಕಣ್ಣಾಲಿಯಿಂದ ಎರಡು ಹನಿ ನೀರು ಜಾರಿತು. ಹೌದು, ಯಾರಿಗಾದರೂ ಆಶ್ವಾಸನೆ ಕೊಟ್ಟರೆ ಆಗಲೇ ಅದನ್ನು ಪೂರೈಸಬೇಕು. ನಮಗದು ಆಶ್ವಾಸನೆಯಾದರೆ ಪಡೆಯುವವರಿಗೆ ಅದು ಜೀವದಾನ ಸಂಜೀವಿನಿ. ಹಾಗಾಗಿ ಕೊಡುವ ಯಾವುದೇ ಅವಕಾಶವನ್ನು ಮುಂದೂಡಬಾರದು. ಏಕೆಂದರೆ ಮತ್ತೊಮ್ಮೆ ಅದನ್ನು ಪಡೆಯುವ ಯೋಗ್ಯರು ನಮಗೆ ಸಿಗದೇ ಹೋಗಬಹುದು ಅಥವಾ ನಾವು ಕೊಟ್ಟಾಗ ಅದರಿಂದ ಬರಬಹುದಾದ ಪುಣ್ಯದಿಂದ ನಾವು ವಂಚಿತರಾಗಬಹುದು. ಸಕಾಲದಲ್ಲಿ ಉಪಯೋಗಕ್ಕೆ ಬಾರದ ವಸ್ತು ಮುಂದೆ ತನ್ನ ಮಹತ್ವವನ್ನು ಕಳೆದುಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಸರ್ವಜ್ಞ ಹೇಳಿದ್ದು- ಆಗ ಬಾ ಈಗ ಬಾ ಹೋಗಿ ಬಾ ಎನ್ನದಲೇ ಆಗಲೇ ಕರೆದು ಕೊಡುವವನ ಧರ್ಮ ಹೊನ್ನಾಗದೇ ಬಿಡದು- ಸರ್ವಜ್ಞ ಎಂದು.

(ಲೇಖಕರು ಅಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net