

ಶ್ರೀಕೃಷ್ಣನು ಮಹಾಭಾರತ ಯುದ್ಧಪ್ರಾರಂಭದ ಘೊಷಣೆ ಮಾಡಿದ ಸಂದರ್ಭ. ಪಾಂಡವರು ಹಾಗೂ ಕೌರವರ ಸೈನ್ಯದ ಮಧ್ಯದಲ್ಲಿ ಶ್ರೀಕೃಷ್ಣನ ಸಾರಥ್ಯದಲ್ಲಿ ಅರ್ಜುನನ ರಥವಿತ್ತು. ಇಂಥ ವಾತಾವರಣದಲ್ಲಿ ಅನಿರೀಕ್ಷಿತ ಎಂಬಂತೆ ಯುಧಿಷ್ಠಿರ ತನ್ನ ರಥದಿಂದ ಇಳಿದು ಕಾಲ್ನಡಿಗೆಯಿಂದಲೇ ಕೌರವ ಸೇನೆಯ ಕಡೆಗೆ ನಡೆದ. ಎಲ್ಲರ ಮುಖದಲ್ಲೂ ಆಶ್ಚರ್ಯದ ಜೊತೆಗೆ ಸಾತ್ವಿಕ ಭಯವಿತ್ತು. ಯುದ್ಧ ನಡೆಯುವುದೋ ಇಲ್ಲವೋ ಎಂಬ ಸಂಶಯ ಕಾಡತೊಡಗಿತು. ಯುಧಿಷ್ಠಿರನ ನಡೆಯಿಂದ ಆತ ಸೋಲೊಪ್ಪಿಕೊಂಡು ಸಂಧಿ ಮಾಡಿಕೊಳ್ಳಲು ಹೊರಟಿರಬಹುದೇ ಎಂಬ ಅನುಮಾನವೂ ಮೂಡಿತು. ಆದರೆ ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ.
ಯುಧಿಷ್ಠಿರನು ಭೀಷ್ಮಾಚಾರ್ಯರ ಪಾದಮುಟ್ಟಿ ನಮಸ್ಕರಿಸಿ ಯುದ್ಧ ಪ್ರಾರಂಭಿಸಲು ಅನುಮತಿ ಕೇಳಿ, ಆಶೀರ್ವಾದ ಬೇಡಿದ. ಮನದಲ್ಲೇ ಪುಳಕಗೊಂಡ ಭೀಷ್ಮ ಪಿತಾಮಹರು ‘ವಿಜಯೀಭವ’ ಎಂದು ಆಶೀರ್ವಾದ ನೀಡಿದರು. ಅಂತೆಯೇ ಯುಧಿಷ್ಠಿರನು ದ್ರೋಣಾಚಾರ್ಯ, ಕೃಪಾಚಾರ್ಯರ ಬಳಿಗೂ ತೆರಳಿ, ಅವರಿಂದಲೂ ‘ಮಂಗಲವಾಗಲಿ’ ಎಂದು ಆಶೀರ್ವಾದ ಪಡೆದ. ಎಲ್ಲರ ಆಶೀರ್ವಾದವೂ ಫಲಿಸಿತು ಎಂಬಂತೆ ಯುದ್ಧ ಸಂಪನ್ನವಾಗಿ ಸನ್ಮಂಗಳವಾಯಿತು. ಮಹಾಭಾರತ ಸಾರ್ವಕಾಲಿಕ ಶ್ರೇಷ್ಠ ಕಥನವಾಯಿತು. ಯುದ್ಧದ ಗಂಭೀರ ಸನ್ನಿವೇಶದಲ್ಲೂ ಯುಧಿಷ್ಠಿರನ ಸಮಚಿತ್ತ ಮತ್ತು ಶಿಷ್ಟಾಚಾರ ಸರ್ವಮಾನ್ಯವಾಯಿತು. ಯುಧಿಷ್ಠಿರನಿಗೆ ಎದುರಾದ ಗಂಭೀರ ಪರಿಸ್ಥಿತಿಯಂತೆ, ನಮಗೂ ದೈನಂದಿನ ಜೀವನದಲ್ಲಿ ಅನೇಕ ಅಹಿತಕರ ಸನ್ನಿವೇಶಗಳು ಎದುರಾಗುತ್ತವೆ. ಪರಿಸ್ಥಿತಿ ಕೈತಪ್ಪಿ ಹೋಗುತ್ತದೆ. ಆದರೆ, ಕೆಲವೊಮ್ಮೆ ಸಣ್ಣಪುಟ್ಟ ಅನಿರೀಕ್ಷಿತ ಕಠಿಣ ಸಂದರ್ಭದಲ್ಲಿ ಕೂಡ ನಾವು ಸಮಚಿತ್ತ ಕಳೆದುಕೊಳ್ಳುತ್ತೇವೆ. ಕೋಪದ ಕೈಗೆ ಬುದ್ಧಿಯನ್ನು ಕೊಟ್ಟು ಬಿಡುತ್ತೇವೆ. ಒಮ್ಮೊಮ್ಮೆ ಆವೇಶಕ್ಕೊಳಗಾಗಿ ಗುರು-ಹಿರಿಯರನ್ನೂ ನಿಂದಿಸಿ, ಕಡೆಗಣಿಸುತ್ತೇವೆ. ಇಂತಹ ನಡವಳಿಕೆಗಳು ನಮ್ಮ ವರ್ಚಸ್ಸಿಗೆ ಧಕ್ಕೆ ತರುತ್ತವೆ. ನಮ್ಮ ಅತಿಯಾದ, ಮಿತಿಮೀರಿದ ವರ್ತನೆಗಳಿಗೆ ಕಡಿವಾಣ ಹಾಕಿಕೊಳ್ಳುವಲ್ಲಿ ಯುಧಿಷ್ಠಿರನ ಸಮಚಿತ್ತ ಮತ್ತು ಶಿಷ್ಟಾಚಾರಗಳು ನಮಗೆ ದಾರಿದೀಪವಾಗುತ್ತವೆ.
ಜೀವನದ ಕಠಿಣ ಪರಿಸ್ಥಿತಿಯಲ್ಲೂ ಶಾಂತಸ್ವಭಾವ, ಸಮಚಿತ್ತ, ಗುರು-ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಆತ್ಮೀಯತೆ, ಇವೆಲ್ಲವೂ ಬಹಳ ಮುಖ್ಯ. ಕೋಪದಿಂದ ಆಡುವ ಮಾತುಗಳು, ಅಸಹಜ ವರ್ತನೆಗಳು ನಮಗೆ ಎದುರಾದ ಸಮಸ್ಯೆಗಳನ್ನು ತಿಳಿಗೊಳಿಸಲಾರವು. ಬದಲಾಗಿ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿ, ನಮ್ಮ ಮತ್ತು ನಮ್ಮ ಸಹವರ್ತಿಗಳ ನೆಮ್ಮದಿ ಕೆಡಿಸುತ್ತವೆ. ಪರಿಸ್ಥಿತಿಯ ಗಂಭೀರತೆ ಅರಿತು, ಮನದ ಆವೇಶ ಮತ್ತು ನಕಾರಾತ್ಮಕ ಚಿಂತನೆಗೆ ನಾವೇ ಲಗಾಮು ಹಾಕಿಕೊಂಡು ಮುಂದಡಿ ಇಡಬೇಕಾಗುತ್ತದೆ.
ಸೋಲು ಗೆಲುವಿನಲಿ ಸಮಚಿತ್ತದಿಂದಿರಲು
ಶತ್ರುಗಳಿಗೂ ಸನ್ಮಿತ್ರನಾಗಿರಲು ಕಲಿಸು
ಎಂದು ಅಬ್ರಹಾಂ ಲಿಂಕನ್ ತನ್ನ ಮಗನನ್ನು ಗುರುವಿನ ಸನ್ನಿಧಿಗೆ ಹಾಕುವಾಗ ರಚಿಸಿದ ಪತ್ರದಲ್ಲಿ ಉಲ್ಲೇಖಿಸಿದಂತೆ, ಸಮಚಿತ್ತದಿಂದ ಎಲ್ಲವನ್ನೂ ಸ್ವೀಕರಿಸುವ ಮನಸ್ಥಿತಿ ನಮ್ಮದಾದಾಗ ಮಾತ್ರ ಯುಧಿಷ್ಠಿರನಂತೆ ಪರಿಸ್ಥಿತಿಯನ್ನು ನಿಭಾಯಿಸುವ ಶಕ್ತಿ ಬರುತ್ತದೆ. ‘ಯಾವುದೇ ಮಾನವನು ಸರ್ವ ಲಕ್ಷಣ ಹೀನನಾಗಿದ್ದರೂ, ಸದಾಚಾರವುಳ್ಳವನಾಗಿ ಶ್ರದ್ಧೆಯುಳ್ಳವನಾಗಿ, ಅಸೂಯಾರಹಿತನಾಗಿದ್ದರೆ, ನೂರಾರು ವರ್ಷಗಳ ಕಾಲ ಜೀವಿಸುತ್ತಾನೆ’ ಎಂಬ ಶ್ರೀಧರ ಸ್ವಾಮಿಗಳ ಅಣಿಮುತ್ತಿನಂತೆ, ಈ ದೇಹ ಅಳಿದ ಮೇಲೂ ನೂರಾರು ವರ್ಷ ಜೀವಿಸಲು ಸದಾಚಾರ, ಶ್ರದ್ಧೆ, ಶಿಷ್ಟಾಚಾರದ ಅಸೂಯೆರಹಿತ ಬದುಕು ನಮ್ಮದಾಗಬೇಕಿದೆ.
(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)