ಮನೋಲ್ಲಾಸ | ಆಂತರ್ಯದ ಅರಿವೆಂಬ ಅಮೃತಾನುಭೂತಿ

Manollasa
Published on
| ಪೂರ್ಣಿಮಾ ಹೆಗಡೆ

ಒಬ್ಬ ಬಡ ವಿದ್ಯಾವಂತ ಯುವಕ ಸರಿಯಾದ ಕೆಲಸ ಸಿಗದೇ ಪರದಾಡುತ್ತಿದ್ದ. ಜೀವನ ನಿರ್ವಹಣೆ ಕಷ್ಟವಾಗಿದ್ದರಿಂದ ವಿವಿಧ ರೀತಿಯ ವ್ಯಾಪಾರಗಳಲ್ಲಿ ತೊಡಗಿಸಿಕೊಂಡ. ಅದರಲ್ಲೂ ನಷ್ಟ ಅನುಭವಿಸಿದ. ಹಣದ ಅಭಾವದಿಂದ ವಯಸ್ಸಾದ ತಂದೆ-ತಾಯಿಗೆ ಸರಿಯಾದ ಚಿಕಿತ್ಸೆ ಕೊಡಿಸಲಾಗದೆ ಪರಿತಪಿಸಿದ. ಈ ಎಲ್ಲ ಜಂಜಾಟದಿಂದ ಬೇಸತ್ತು ಬದುಕೇ ಬೇಡ, ತನ್ನಿಂದ ಇನ್ನೇನೂ ಸಾಧಿಸಲಾಗದು ಎಂಬ ಖೇದ, ವಿಷಾದದಿಂದ ನರಳಿದ. ಈ ಎಲ್ಲ ನೋವಿಗೂ ಮುಕ್ತಿಗಾಣಿಸಲು ಆತ್ಮಹತ್ಯೆಯೇ ಸರಿಯಾದ ದಾರಿ ಎಂಬ ಆಲೋಚನೆ ಅವನಲ್ಲಿ ಸುಳಿಯಿತು.

ಒಂದು ದಿನ ದಾರಿಯಲ್ಲಿ ಸಾಧುವೊಬ್ಬರು ಎದುರಾದರು. ಅವರನ್ನು ಕಾಣುತ್ತಲೇ ಭಾವೋದ್ವೇಗಕ್ಕೆ ಒಳಗಾಗಿ ಎಲ್ಲ ನೋವನ್ನು ತೋಡಿಕೊಂಡ. ಅದನ್ನೆಲ್ಲ ಕೇಳಿಸಿಕೊಂಡ ಆ ಸಾಧು ಮುಗುಳ್ನಗುತ್ತ- ‘ನೀನು ಯಾವುದಾದರೂ ಊರಿಗೆ ಪ್ರವಾಸ ಕೈಗೊಳ್ಳುವಾಗ ಅಲ್ಲಿಗೆ ಅವಶ್ಯವಾದ ವಸ್ತುಗಳನ್ನು ಕಟ್ಟಿಕೊಂಡು, ಅಲ್ಲಿಗೆ ಹೋಗುವ ಬಗೆ, ಮಾರ್ಗಸೂಚಿ, ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ, ಇತ್ಯಾದಿಗಳ ಬಗ್ಗೆ ಯೋಚಿಸಿ, ಅವಲೋಕಿಸಿ ಒಂದು ಸಿದ್ಧತೆಯೊಂದಿಗೆ ಹೊರಡುತ್ತೀಯಾ ಅಲ್ಲವೇ? ಅದೇ ರೀತಿ ಆ ಕರುಣಾಮಯಿಯಾದ ಭಗವಂತ ಈ ಜಗತ್ತಿಗೆ ನಿನ್ನನ್ನು ಕಳಿಸುವಾಗ ಬರೀಗೈಯಲ್ಲಿ ಖಂಡಿತ ಕಳುಹಿಸಿರಲಾರ. ಬೇಕಾಗಿರುವ ಎಲ್ಲ ಕುಶಲತೆಯನ್ನು ಕಟ್ಟಿಯೇ ಕಳುಹಿಸಿರುತ್ತಾನೆ. ಹೇಗೆ ಕಟ್ಟಿರುವ ಗಂಟಿನಿಂದ ಬೇಕಾದ ಕಾಲಕ್ಕೆ ಬೇಕಾದ ಸಾಮಗ್ರಿಗಳನ್ನು ತೆಗೆದು ಉಪಯೋಗಿಸುತ್ತೇವೆಯೋ ಅದೇ ರೀತಿ ನಮ್ಮಲ್ಲಿ ಹುದುಗಿರುವ ಕೌಶಲ ಅಥವಾ ಪ್ರತಿಭೆಯನ್ನು ಆಂತರ್ಯದಲ್ಲಿ ಹುಡುಕಿ ಸದ್ವಿನಿಯೋಗಿಸುವ ಹೊಣೆ ನಮ್ಮದು.

ನಮ್ಮ ಅಂತರಾಳ ನಮ್ಮ ಸಾಮರ್ಥ್ಯ, ದೌರ್ಬಲ್ಯಗಳ ಅರಿವನ್ನು ಮೂಡಿಸುತ್ತಲೇ ಇರುತ್ತದೆ, ಅದನ್ನು ಮೊದಲು ಅರಿಯುವ ಪ್ರಯತ್ನ ಮಾಡು, ಬದುಕಿನ ಬಗ್ಗೆ ಸ್ಪಷ್ಟತೆ ಸಿಗುತ್ತ ಹೋಗುತ್ತದೆ. ಭಗವಂತನ ಪ್ರತಿರೂಪವಾದ ಆಂತರ್ಯದ ಬೆಳಕು ಸರಿಯಾದ ದಾರಿಯನ್ನು ಮಾರ್ಗದರ್ಶಿಸುತ್ತದೆ. ಅಲ್ಲದೆ ಪ್ರತಿಯೊಂದು ಕೆಲಸಗಳಿಗೂ ಪೂರ್ವಸಿದ್ಧತೆ ಅವಶ್ಯಕ. ಮನುಷ್ಯನ ಆತ್ಮ ಬಲಿಷ್ಠವಾಗಬೇಕಾದರೆ ಅಲ್ಲೊಂದು ಕಷ್ಟ ಸಿದ್ಧತೆ ಇರಬೇಕು, ಹಾಗಾಗಿ ಇದನ್ನೆಲ್ಲ ವಿವೇಚಿಸಿ ಮುನ್ನೆಡೆ, ನಿನ್ನ ಪ್ರಯತ್ನ ಸಫಲವಾಗಲಿ’ ಎಂದು ತಿಳಿ ಹೇಳಿ ಕಳುಹಿಸಿದರು. ಅಂತೆಯೇ ಆ ಯುವಕ ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಳ್ಳದೆ ತನ್ನ ತಪ್ಪುಗಳನ್ನು ತಿದ್ದಿಕೊಂಡು, ಜೀವನಾನುಭವದ ಪಾಠದಿಂದ ಸರಿಯಾಗಿ ವಿವೇಚಿಸಿ, ಅವಲೋಕಿಸಿ ಪ್ರಯತ್ನಶೀಲನಾದ, ಸಫಲನಾದ. ಈ ಯುವಕನ ರೀತಿ ನಾವು ಸಹ ಸಾವು, ನೋವು, ಆರ್ಥಿಕ ಸಂಕಷ್ಟ, ಅನಾರೋಗ್ಯ ಇತ್ಯಾದಿ ಸವಾಲುಗಳನ್ನು ಎದುರಿಸುತ್ತಿರುತ್ತೇವೆ.

ವಿಶ್ವದ ಶ್ರೇಷ್ಠ ಧನುರ್ಧಾರಿಯೆಂದು ಹೆಸರು ಪಡೆದ ಅರ್ಜುನ ಮಹಾಭಾರತ ಯುದ್ಧದಲ್ಲಿ ಸ್ವಜನ ಎಂಬ ಮೋಹ, ಕರುಣಾರಸದಿಂದ ಆವರಿಸಿ ವಿಷಾದಕ್ಕೊಳಗಾಗಿ, ಯುದ್ಧವೇ ಬೇಡ ಎಂದು ಕೈಚೆಲ್ಲಿದ್ದ. ಶ್ರೀಕೃಷ್ಣ ಪರಮಾತ್ಮನ ಮಾರ್ಗದರ್ಶನದಿಂದ ಅರ್ಜುನ ವಿಷಾದದಿಂದ ಹೊರಬಂದು ತನ್ನ ಕರ್ತವ್ಯವನ್ನು ನಿಭಾಯಿಸಿದ. ಇದೆ ರೀತಿ ನಮಗೂ ವಿಷಾದ ಆವರಿಸಿದಾಗ ನಮ್ಮನ್ನು ನಾವು ಅರಿತು, ಅವಲೋಕಿಸಿ ಮುನ್ನಡೆದರೆ ಆಂತರ್ಯದ ಅರಿವೆಂಬ ಗುರುವಿನ ಬೆಳಕಲ್ಲಿ ಜೀವನದ ದಾರಿ ನಿಚ್ಚಳವಾಗಿ ಕಾಣಬಹುದು.

(ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net