

ಅದೊಂದು ಗುರುಕುಲ. ವಿದ್ಯಾರ್ಥಿಗಳು ಊಟಕ್ಕೆ ಕುಳಿತಾಗ ಗುರುಪತ್ನಿಯು ನಿಜವಾದ ವಿದ್ಯಾರ್ಥಿ ಯಾರು? ಎನ್ನುವುದನ್ನು ತಿಳಿಯಬಯಸಿದ್ದಳು. ಆಕೆ ವಿದ್ಯಾರ್ಥಿಗಳಿಗೆ ತುಪ್ಪದ ಬದಲು ಬೇವಿನ ಎಣ್ಣೆಯನ್ನು ಬಡಿಸುತ್ತಿದ್ದಳು. ಎಲ್ಲ ವಿದ್ಯಾರ್ಥಿಗಳು ಅಯ್ಯೋ ಕಹಿ! ಎಂದು ಬಾಯಲ್ಲಿದ್ದ ಅನ್ನವನ್ನು ಎಲೆಯಲ್ಲೇ ಉಗುಳಿ ಬಿಟ್ಟರು. ಬುಧನೆಂಬ ವಿದ್ಯಾರ್ಥಿ ಮಾತ್ರ ತನಗೆ ಏನೂ ಆಗಲೇ ಇಲ್ಲವೇನೋ ಎಂಬಂತೆ ಎಲೆಯಲ್ಲಿದ್ದುದನ್ನು ತಿಂದು ಮುಗಿಸಿದನು. ಗುರುಪತ್ನಿ ಆತನಿಗೆ ಪ್ರತಿದಿನವೂ ಬೇವಿನ ಎಣ್ಣೆಯನ್ನು ಬಡಿಸುತ್ತಿದ್ದಳು. ಬುಧ ಯಾವುದೇ ಆಕ್ಷೇಪಣೆ ಇಲ್ಲದೆ ಊಟ ಮಾಡುತ್ತಿದ್ದ.
12 ವರ್ಷಗಳ ನಂತರ ಆತನ ಶಿಕ್ಷಣ ಮುಗಿಯಿತು. ಒಂದು ದಿನ ಗುರುಗಳು ಬುಧನನ್ನು ಕರೆದು ‘ಇಂದಿಗೆ ನಿನ್ನ ಶಿಕ್ಷಣ ಮುಗಿಯಿತು’ ಎಂದು ಹೇಳಿದರು. ಆಗ ಬುಧನಿಗೆ ತುಂಬಾ ಸಂತೋಷವಾಯಿತು. ನೇರವಾಗಿ ಗುರುಮಾತೆ ಬಳಿ ಹೋಗಿ ತನ್ನ ವಿದ್ಯೆ ಮುಕ್ತಾಯದ ವಿಷಯವನ್ನು ತಿಳಿಸಿದನು. ಅನಂತರ ಕೈಕಾಲುಗಳನ್ನು ತೊಳೆದುಕೊಂಡು ಊಟಕ್ಕೆ ಕುಳಿತನು. ಆಗ ಗುರುಪತ್ನಿಯು ಎಂದಿನಂತೆ ಊಟಕ್ಕೆ ತುಪ್ಪದ ಬದಲು ಬೇವಿನ ಎಣ್ಣೆಯನ್ನೇ ಬಡಿಸಿದಳು. ಬುಧನು ಅನ್ನದ ತುತ್ತನ್ನು ಬಾಯಿಗೆ ಇಟ್ಟು ಕೊಳ್ಳುತ್ತಿರುವಂತೆಯೇ ‘ಅಮ್ಮಾ ಏನೋ ಸ್ವಲ್ಪ ಹೆಚ್ಚು ಕಡಿಮೆಯಾದಂತಿದೆ. ತುಪ್ಪದ ಬದಲು ಬೇವಿನ ಎಣ್ಣೆಯನ್ನು ಮರೆತು ಹಾಕಿದಂತಿದೆ’ ಎಂದನು. ಆಗ ಗುರುಮಾತೆ ‘ಇಂದು ನಿಜಕ್ಕೂ ನಿನ್ನ ವಿದ್ಯೆ ಪೂರ್ಣಗೊಂಡಿದೆ. ಇಂದು ನೀನು ಪಂಡಿತನಾದೆ. ಬದುಕಿನಲ್ಲಿ ಬಯಸಿದ್ದೆಲ್ಲ ನಿನಗೆ ದೊರೆಯಲಿ’ ಎಂದು ಮನಃಪೂರ್ವಕವಾಗಿ ಆಶೀರ್ವಾದ ಮಾಡಿದಳು. ಬುಧನು ವಿದ್ಯೆಯನ್ನು ಸಂಪಾದಿಸುವಲ್ಲಿ ಎಷ್ಟು ಆಸಕ್ತನಾಗಿದ್ದ, ತನ್ಮಯನಾಗಿದ್ದ, ಎಷ್ಟು ಏಕಾಗ್ರತೆಯನ್ನು ಬೆಳೆಸಿಕೊಂಡಿದ್ದ ಎಂದರೆ ಆತನಿಗೆ ಬೇವಿನ ಎಣ್ಣೆಯ ಕಹಿಯೂ ತಿಳಿಯಲಿಲ್ಲ! ಅವನಿಗೆ ವಿದ್ಯೆಯನ್ನು ಬಿಟ್ಟು ಮತ್ತೇನೂ ಬೇಕಿರಲಿಲ್ಲ. ಹಾಗಾಗಿ, ವಿದ್ಯಾರ್ಥಿಜೀವನದ ಪೂರ್ಣ ವಿದ್ಯೆಯನ್ನು ಕಲಿಯುವುದರಲ್ಲಿ ಮಾತ್ರ ಮಗ್ನನಾಗಿದ್ದನು. ಗುರುಗಳು ‘ಇಂದಿಗೆ ನಿನ್ನ ವಿದ್ಯೆ ಸಂಪೂರ್ಣವಾಯಿತು’ ಎಂದಾಗ ಬುಧನು ಬಾಹ್ಯ ಪ್ರಪಂಚಕ್ಕೆ ಬಂದನು.
ಸುಖಾರ್ಥಿ ವಾ ತ್ಯಜಿದ್ವಿವ್ಯಾಂ ವಿದ್ಯಾರ್ಥಿವಾ ತ್ಯಜೆತ್ಸುಖಂ
ಸುಖಾರ್ಥಿನಃ ಕುತೋ ವಿದ್ಯಾನಾಸ್ತಿ ವಿದ್ಯಾರ್ಥಿನಃ ಸುಖಂ
‘ಸುಖಭೋಗ ಅನುಭವಿಸಬೇಕಾದರೆ ವಿದ್ಯಾರ್ಜನೆ ಬಿಡಬೇಕಾಗುತ್ತದೆ. ಜ್ಞಾನಾರ್ಜನೆಯ ಆಸೆಯಿದ್ದರೆ ವಿದ್ಯಾರ್ಥಿಯಾಗಿರುವಾಗ ಸುಖೋಪಭೋಗದ ಸುಲಭ ಜೀವನದ ಕಡೆ ಹೋಗಬಾರದು. ಸುಖೋಪಭೋಗದ ಸುಲಭ ಜೀವನದ ಆಸೆ ಇರುವ ವ್ಯಕ್ತಿಗೆ ಜ್ಞಾನಾರ್ಜನೆ ಸಾಧ್ಯವಿಲ್ಲ. ಜ್ಞಾನವನ್ನು ಗಳಿಸುವ ಆಸೆಯಿದ್ದವನಿಗೆ ಸುಖ ಹಾಗೂ ಭೋಗದ ಜೀವನ ನಡೆಸಲು ಅವಕಾಶವಿಲ್ಲ.’ ಜ್ಞಾನವನ್ನು ಗಳಿಸಬೇಕಿರುವ ವಿದ್ಯಾರ್ಥಿ ಕಷ್ಟಪಟ್ಟು ಚಿತ್ತೇಕಾಗ್ರತೆಯಿಂದ ವಿದ್ಯೆ ಸಂಪಾದನೆ ಮಾಡಬೇಕು. ಒಬ್ಬ ವ್ಯಕ್ತಿ ಸುಲಭ ಮಾರ್ಗದಲ್ಲಿ ಅಥವಾ ಪಿತ್ರಾರ್ಜಿತ ಸ್ವತ್ತಿನಿಂದ ಶ್ರೀಮಂತನಾಗಬಹುದು ಅಥವಾ ಸಂಪತ್ತನ್ನು ಗಳಿಸಬಹುದು. ಆದರೆ, ಜ್ಞಾನಾರ್ಜನೆಯ ವಿಷಯದಲ್ಲಿ ಇದು ಸಾಧ್ಯವಿಲ್ಲ. ಸ್ವಯಾರ್ಜಿತವಾಗಿಯೇ ಇದನ್ನು ಗಳಿಸಬೇಕು.
(ಲೇಖಕರು ನಿವೃತ್ತ ಪ್ರಾಧ್ಯಾಪಕರು)