ಸಂತೃಪ್ತ ಭಾವ: ಮನೋಲ್ಲಾಸ

Manollasa
Published on
| ಡ್ಯಾನಿ ಪಿರೇರಾ ಹಳ್ಳಿಮೈಸೂರು

ದೇವರು ನನಗೆ ಮಾತ್ರ ಕಷ್ಟಕೊಡುತ್ತಾನೆ ಎಂದು ಪರಿಭಾವಿಸುವ ಸ್ವಭಾವ ಹಲವರದ್ದು. ನಾನೆಷ್ಟು ಕಷ್ಟಪಡು ತ್ತೇನೆ, ಬೇರೆಯವರಿಗೆ ನನ್ನಷ್ಟು ಕಷ್ಟ ಬಂದಿದ್ದರೆ ಅವರು ಬದುಕಿರುತ್ತಿರಲಿಲ್ಲವೇನೋ ಎಂಬ ವ್ಯಾಖ್ಯಾನ ಮತ್ತೆ ಕೆಲವರದ್ದು. ತನ್ನನ್ನು ಉಳ್ಳವರೊಂದಿಗೆ ಹೋಲಿಸದೇ ಏನೂ ಇಲ್ಲದವರಿಗಿಂತ ತಾನು ಸುಖವಾಗಿದ್ದೇನೆ ಎಂಬ ತೃಪ್ತಭಾವದ ಜನರೂ ಇದ್ದಾರೆ! ಇಂಥ ತೃಪ್ತಾತೃಪ್ತಾಭಾವ ಪ್ರಾಣಿ ಪಕ್ಷಿಗಳಲ್ಲಿ ಬಂದರೆ?! ಅವು ಕೂಡ ಮನುಷ್ಯರಂತೆ ಗೊಂದಲಕ್ಕೀಡಾಗಬೇಕಾಗುತ್ತದೆ ಅಲ್ಲವೇ?!

ಹೀಗೊಮ್ಮೆ ಉಷ್ಟ್ರಪಕ್ಷಿಯೊಂದು ಹಾರಲಾಗದ ತನ್ನ ಕೆಟ್ಟ ದುರ್ದೆಸೆಯ ಬಗ್ಗೆ ರೋದಿಸುತ್ತಾ ಕುಳಿತಿತ್ತಂತೆ!.ಆಹಾರ ಹುಡುಕಿ ಅಲ್ಲಿಗೆ ಬಂದ ಕೋಳಿಯೊಂದು ತನ್ನ ಸ್ವಜಾತಿಯ ಉಷ್ಟ್ರಪಕ್ಷಿಗೆ ಅದರ ದುಃಖದ ಕಾರಣ ತಿಳಿಯಲು ಬಯಸಿದಾಗ ಉಷ್ಟ್ರಪಕ್ಷಿ - ನಾನು ನತದೃಷ್ಟೆ. ನನಗೆ ಬಲಾಢ್ಯ ಶರೀರವೇನೋ ಇದೆ. ಆದರೆ, ನಾನು ಪಕ್ಷಿಯಾಗಿದ್ದರೂ ಹಾರಲು ಯೋಗ್ಯವಾದ ರೆಕ್ಕೆಗಳಿಲ್ಲ. ಆ ಭಗವಂತ ಪಕ್ಷಪಾತಿ ಎಂದು ಭಗವಂತನನ್ನು ಜರಿಯಿತಂತೆ! ಆಗ ಕೋಳಿ- ಸಹೋದರಿ, ನಾನೂ ನಿನ್ನಂತೆ ಪಕ್ಷಿಯೇ. ಆದರೆ ಸುದೂರ ಹಾರಲಾರೆ, ಆ ಬಗ್ಗೆ ನನಗೇನು ಬೇಸರವಿಲ್ಲ. ನಮ್ಮ ಜಾತಿಯಲ್ಲಿ ಯಾರಿಗೂ ಇರದ ವೇಗವಾಗಿ ಓಡಬಹುದಾದ ಬಲಾಢ್ಯ ಶರೀರ ನಿನಗಿದೆ. ಈ ಬಗ್ಗೆ ನಿನಗೆ ಹೆಮ್ಮೆ ಇರಬೇಕಿತ್ತಲ್ಲವೇ?! ಮಾತ್ರವಲ್ಲ, ನೀನು ಇನ್ನೊಂದು ವಿಷಯಕ್ಕೆ ಹೆಮ್ಮೆ ಪಡಬೇಕು... ಎನ್ನುತ್ತಿರುವಾಗಲೇ ನವಿಲೊಂದು ಹಾರಿ ಬಂದು ಆ ಇನ್ನೊಂದು ವಿಷಯ ಯಾವುದೆಂದು ತಿಳಿಯಬಯಸಿತಂತೆ. ಆಗ ಕೋಳಿ - ಉಷ್ಟ್ರಪಕ್ಷಿಯು ದೊಡ್ಡ ಮೊಟ್ಟೆಗಳನ್ನು ಇಡುತ್ತದೆ. ಅದನ್ನು ಕಿಲೋ ಗಾಂಗಳಲ್ಲಿ ಅಳೆಯುತ್ತಾರೆ. ನಮ್ಮ ಮೊಟ್ಟೆಗಳಿಗೆ ಆ ಭಾಗ್ಯವಿದೆಯೇ?! ಎಂದಾಗ, ಉಷ್ಟ್ರಪಕ್ಷಿಗೆ ನವಿಲು - ನಮ್ಮ ಜಾತಿಯಲ್ಲಿ ಹಾರದವಳು ನೀನೊಬ್ಬಳೇ ಅಲ್ಲ, ಜಗತ್ತಿನಲ್ಲಿ ಹಾರಲು ಬಾರದ ಕಿವಿ ಪಕ್ಷಿ ಇದೆ. ಹಾಗೆಯೇ ದೂರ ಹಾರಲಾಗದ ಪೆಂಗ್ವಿನ್ ಇದೆ. ಇದು ಕೇವಲ ಕುಪ್ಪಳಿಸುತ್ತಾ ಹಿಮಬಂಡೆಯ ಮೇಲೆ ಜೀವನ ನಡೆಸುತ್ತದೆ ಎಂದಾಗ, ಉಷ್ಟ್ರಪಕ್ಷಿ ಅದೆಷ್ಟೋ ಪಕ್ಷಿ ಜಾತಿಗಳಿಗಿರದ ಸೌಲಭ್ಯ ಸಾಮರ್ಥ್ಯ ತನಗಿದೆಯಲ್ಲ ಎಂದು ಸಮಾಧಾನಗೊಂಡು ಭಗವಂತನಿಗೆ ಕೃತಜ್ಞತೆ ಸಲ್ಲಿಸಿತಂತೆ! ಮನುಷ್ಯನ ಬದುಕಿಗೂ ಇದು ಅನ್ವಯವಾಗುವುದಾದರೆ ಕೆಲವರಿಗಿರದ ಅನುಕೂಲತೆಗಳು ತನಗಿದೆಯಲ್ಲ ಎಂಬ ತೃಪ್ತಭಾವ ತಾಳಿದರೆ ದುಃಖಿಸಬೇಕಿಲ್ಲ! ಇರುವ ವ್ಯವಸ್ಥೆಗಳನ್ನು ಬಳಸಿ ಕಾರ್ಯೋನ್ಮುಖರಾದರೆ ಸೋಲಿಗೆ ಅಂಜಬೇಕಿಲ್ಲ! ಅವೆಲ್ಲವನ್ನು ಕರುಣಿಸಿದ ಭಗವಂತನಿಗೆ ನಾವು ಕೃತಜ್ಞತರಾಗಿರಬೇಕೆಂಬ ಭಾವ ನಮ್ಮೊಳಗೆ ಬಂದರೆ ನಮ್ಮಷ್ಟು ಸಾತ್ವಿಕರು ಮತ್ತೊಬ್ಬರಿಲ್ಲ!

ಹಾಗಾಗಿ ಡಿವಿಜಿ ಹೇಳುತ್ತಾರೆ- ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು| ಗುರುತಿಸೊಳಿತಿರುವುದನು ಕೇಡುಗಳ ನಡುವೆ || ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು | ಹರುಷಕದೆ ದಾರಿಯೆಲೊ - ಮಂಕುತಿಮ್ಮ

ಅಂದರೆ, ನಿನಗೆ ಬರದಿರುವ ಆಲೋಚನೆಯಲ್ಲಿ ಬಂದಿರುವ ಸಂತೋಷವನ್ನು ಮರೆಯಬೇಡ. ಬಂದಿರುವ ಕೆಡಕುಗಳಲ್ಲೂ ಒಳಿತಾದ ವಿಚಾರಗಳಿರುತ್ತವೆ, ಅವುಗಳನ್ನು ಗುರುತಿಸು.ಇರುವ ಭಾಗ್ಯವನ್ನು ನೆನಪಿಸಿಕೊಂಡು ಬರದಿರುವ ಭಾಗ್ಯಗಳಿಗೆ ಆಸೆಪಡಬೇಡ ಸಂತೋಷಕ್ಕೆ ಇದೇ ದಾರಿ ಎಂದು. ಸಂತೋಷಪಡಲು ಇನ್ನೇನು ಬೇಕು ಅಲ್ಲವೇ?!

(ಲೇಖಕರು ಅಧ್ಯಾಪಕರು, ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net