ಮನೋಲ್ಲಾಸ | ಚಿವುಟಿದಷ್ಟೂ ಚಿಗುರೋಣ...

Manollasa
Published on

| ಭಾರತಿ ಎ. ಕೊಪ್ಪ

ಅದೊಂದು ಸುಂದರ ಉದ್ಯಾನ. ಅದರ ಮಧ್ಯದಲ್ಲೊಂದು ಪುಟ್ಟ ಕೊಳ. ಆ ಕೊಳದ ಸೌಂದರ್ಯಕ್ಕೆ ಒಂದಿಷ್ಟು ಇಂಬು ತುಂಬಲು ಒಂದು ಬಿಳಿ ನೈದಿಲೆ ಮತ್ತೊಂದು ನೀಲಿ ನೈದಿಲೆಯನ್ನು ಉದ್ಯಾನದ ಮಾಲೀಕ ಹಾಕಿದ್ದ. ಕೆಲ ತಿಂಗಳುಗಳಲ್ಲಿ ಸುಂದರವಾದ ಒಂದೆರಡು ಬಿಳಿ ನೈದಿಲೆ ಮತ್ತು ಒಂದು ನೀಲಿ ನೈದಿಲೆ ಅರಳಿ ಕಂಗೊಳಿಸತೊಡಗಿದವು. ನೋಡುಗರ ಗಮನ ಸೆಳೆಯುವಲ್ಲಿ ನೀಲಿ ನೈದಿಲೆಯೇ ಸ್ವಲ್ಪ ಮಿಗಿಲು ಎನ್ನುವಷ್ಟು ಸೌಂದರ್ಯದಿಂದ ಕೂಡಿತ್ತು.

ಇದನ್ನು ಗಮನಿಸುತ್ತಿದ್ದ ಅಲ್ಲಿನ ಸುತ್ತಮುತ್ತಲಿನ ಯಾವುದೋ ವ್ಯಕ್ತಿಯ ದುಷ್ಟಬುದ್ಧಿ ಆ ನೀಲಿ ನೈದಿಲೆಯ ಕಳ್ಳತನಕ್ಕೆ ಪ್ರೇರೇಪಿಸಿತು. ನೈದಿಲೆಯ ಬೇರು ಕೂಡ ಉಳಿಯದಂತೆ ಆತ ಕದ್ದೊಯ್ದ. ಕೊಳದಲ್ಲಿನ ನೀಲಿ ನೈದಿಲೆಯ ಅವಸಾನ ನೋಡಿ ಮಾಲೀಕನಿಗೆ ದುಃಖ ಉಮ್ಮಳಿಸಿತು. ಪ್ರೀತಿಯ ಬಂಧ ಕಳಚಿದಂತಾಯ್ತು. ಆದರೂ ಹೇಗೋ ಸಮಾಧಾನದಿಂದ ಉಳಿದ ಗಿಡಗಳಿಗೆ ಪೋಷಣೆ ಮಾಡಿದ. ಕೆಲ ದಿನ ಕಳೆಯಿತು. ಕೊಳದಲ್ಲಿ ನೈದಿಲೆ ಹರಡಿಕೊಂಡಿತ್ತು. ಬಿಳಿ ನೈದಿಲೆಯೇ ಇರಬೇಕೆಂದು ಮಾಲೀಕ ಅಷ್ಟಾಗಿ ತಲೆಕೆಡಿಸಿ ಕೊಳ್ಳಲಿಲ್ಲ. ಕೆಲ ದಿನಗಳ ಬಳಿಕ ನೀಲಿ ನೈದಿಲೆ ಅರಳಿ ಕಂಗೊಳಿಸಿತು. ಮತ್ತದೇ ಚೈತನ್ಯ ಮೂಡಿತು. ಆಗಲೂ ಮತ್ತಾರೋ ಕದ್ದೊಯ್ದರು. ಮತ್ತದೇ ಕಥೆಯ ವ್ಯಥೆ. ಅವಶೇಷವೂ ಇಲ್ಲವೆನ್ನುವಂತಿದ್ದ ನೈದಿಲೆ, ಕೆಲ ತಿಂಗಳುಗಳ ಬಳಿಕ ಮತ್ತೆ ಜೀವ ತಳೆಯಿತು. ಮಾಲೀಕನಲ್ಲಿ ಬೇಸರ ಕಳೆದು,ಅವನ ಆನಂದಕ್ಕೆ ಪಾರವೇ ಇರಲಿಲ್ಲ.

ನೀಲಿ ನೈದಿಲೆಯಂತೆ ನಮ್ಮ ಬದುಕು ಕೂಡ. ನಮ್ಮಲ್ಲಿ ಯಶಸ್ಸು ಮೂಡುತ್ತಿದೆ ಎಂದಾಗಲೇ ಚಿವುಟಿ, ಯಶದ ಬೇರನ್ನೇ ನಾಶಪಡಿಸುವ ಪ್ರಯತ್ನ ಮಾಡುವವರಿರುತ್ತಾರೆ. ಒಂದೆರಡು ಹೊಡೆತಗಳಿಂದ ಸಾವರಿಸಿಕೊಂಡು, ಮತ್ತೆ ಮೇಲೇಳಬೇಕೆನ್ನುವಷ್ಟರಲ್ಲಿ ಮತ್ತೆ ಚಿವುಟುತ್ತಾರೆ, ತುಳಿಯುತ್ತಾರೆ. ಆಗ ನಮ್ಮ ಪರಿಸ್ಥಿತಿ ನೋಡಿ ಮರುಕ ಪಡುವವರೂ ಇರುತ್ತಾರೆ, ಆಡಿಕೊಂಡು ನಗುವವರೂ ಇರುತ್ತಾರೆ. ಒಂದು ಸಸ್ಯಕ್ಕೆ ಚಿವುಟಿದಷ್ಟೂ ಮತ್ತೆ ಮತ್ತೆ ಚಿಗುರುವ ಶಕ್ತಿ ಇದೆ ಎಂದ ಮೇಲೆ, ಬುದ್ಧಿಶಕ್ತಿ, ವಿವೇಕ ಇರುವ ಮಾನವ ಚಿವುಟಿದಷ್ಟೂ ಚಿಗುರಲಾರನೇ? ತುಳಿದಷ್ಟೂ ದೃಢಚಿತ್ತದಿಂದ ಮೇಲೇಳಲಾರನೇ? ಮತ್ತೆ ಅರಳಲೇಬೇಕೆಂಬ ಅದಮ್ಯ ಬಯಕೆ ಹೊಂದಿದ ನೈದಿಲೆ ಸಿಕ್ಕ ಅವಕಾಶದಲ್ಲೇ ಮರಳಿ ಚೈತನ್ಯ ಪಡೆದ ಹಾಗೆ, ಮಾನವನೂ ಸಿಕ್ಕ ಅವಕಾಶದ ಸದ್ಬಳಕೆ ಮಾಡಿಕೊಂಡರೆ ಯಶಸ್ಸಿನ ಹಾದಿ ಸಿಗದಿರದು. ಜೀವನೋತ್ಸಾಹವು ನಮ್ಮಲ್ಲಿ ಕಾರಂಜಿಯಂತೆ ಪುಟಿಯುತ್ತಿರಬೇಕು. ಜೀವನದಲ್ಲಿ ಅಳಿದು ಬೆಳೆದಾಗ ಸಂತಸ ದಕ್ಕುತ್ತದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ, ‘ಏನು ನಡೆದುಹೋಯಿತೋ, ಅದು ನಡೆದುಹೋಯಿತು. ಅದಕ್ಕಾಗಿಯೇ ಕೊರಗಬಾರದು. ಹಿಂದೆ ಆದುದರ ಬಗ್ಗೆ ಚಿಂತಿಸುತ್ತಾ ಕೂರಬಾರದು. ಅವುಗಳ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ. ಅದರ ಪರಿಣಾಮ ಎದುರಿಸಲೇಬೇಕು. ಅದನ್ನು ಮತ್ತೊಮ್ಮೆ ಮಾಡದಂತೆ ಎಚ್ಚರಿಕೆ ವಹಿಸಬೇಕು’ ಎಂಬಂತೆ, ನಮ್ಮ ಗುರಿಯತ್ತ ಮುಂದಡಿಯಿಡುವತ್ತ ಚಿತ್ತ ಬೆಳೆಸಿ ಸಾಗಬೇಕು.

(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net