ಅಪಾಯಕ್ಕೆ ಉಪಾಯ: ಮನೋಲ್ಲಾಸ

Manollasa
Published on
| ದೀಪಶ್ರೀ ಎಸ್. ಕೂಡ್ಲಿಗಿ

ಅದೊಂದು ಸುಂದರವಾದ ಅರಣ್ಯ. ಅಲ್ಲಿ ಹಲವಾರು ಪ್ರಾಣಿ, ಪಕ್ಷಿಗಳು ವಾಸವಾಗಿದ್ದವು. ಅಂತಹ ಪ್ರಾಣಿಗಳಲ್ಲಿ ಜಿಂಕೆಯೂ ಒಂದು. ಅದು ಚಾಣಾಕ್ಷತನಕ್ಕೆ ಹೆಸರಾಗಿತ್ತು. ಅದೇ ಅರಣ್ಯದಲ್ಲಿ ವೈವಿಧ್ಯಮಯ ಹುಲ್ಲು ಇದ್ದುದರಿಂದ ಜಿಂಕೆಗೆ ಆಹಾರದ ಕೊರತೆ ಇರಲಿಲ್ಲ. ಅರಣ್ಯದ ಮಾರ್ಗದಲ್ಲಿ ನದಿಯೊಂದು ಹರಿಯುತ್ತಿತ್ತು. ಆ ನದಿಯಲ್ಲಿ ವಾಸವಿದ್ದ ಮೊಸಳೆಗೆ ಜಿಂಕೆಯನ್ನು ತಿನ್ನುವ ಬಯಕೆ ಕಾಡುತಿತ್ತು. ಆದರೆ ಚಾಲಾಕಿಯಾಗಿದ್ದ ಚಿರತೆ ನದಿ ಹತ್ತಿರ ಹೋಗುತ್ತಿರಲಿಲ್ಲ. ಮೊಸಳೆ ಇಲ್ಲದಿರುವುದನ್ನು ಗಮನಿಸಿ ನೀರು ಕುಡಿದು ದಣಿವಾರಿಸಿಕೊಳ್ಳುತ್ತಿತ್ತು. ಒಮ್ಮೆ ಜಿಂಕೆ ನದಿ ಬಳಿಗೆ ಬಂದಾಗ ಆಚೆಗಿನ ತೀರದಲ್ಲಿ ಹುಲುಸಾಗಿ ಬೆಳೆದಿದ್ದ ಹುಲ್ಲು ಕಂಡಿತು. ಆ ಹುಲ್ಲು ತಿನ್ನುವ ಆಸೆ ಚಿಗುರಿತು. ಆದರೆ, ನದಿಯಲ್ಲಿ ಮೊಸಳೆ ಇರುವುದರಿಂದ ನದಿ ದಾಟುವುದು ಹೇಗೆ ಎಂದು ಚಿಂತೆಗೆ ಒಳಗಾಯಿತು. ಕೆಲಹೊತ್ತಿನ ನಂತರ ಯೋಚನೆಯೊಂದು ಹೊಳೆಯಿತು.

ಜಿಂಕೆಯು ಮೊಸಳೆಯನ್ನು ಕರೆದು, ‘ನಾಳೆ ನನ್ನ ಹುಟ್ಟುಹಬ್ಬವಿರುವ ಕಾರಣ ನಿಮಗೆಲ್ಲ ಔತಣಕೂಟ ಏರ್ಪಡಿಸಿದ್ದೇನೆ. ಆದರೆ, ಆಹಾರ ತಯಾರಿ ಮಾಡಲು ನಿಮ್ಮ ಸಂಖ್ಯೆ ಎಷ್ಟಿದೆ ಎಂದು ಗೊತ್ತಿಲ್ಲ. ಹೀಗಾಗಿ ಇಲ್ಲೇ ನಿಂತಿರುವೆ. ನಿಮ್ಮ ಸಂಖ್ಯೆ ತಿಳಿಯಬೇಕಿದೆ’ ಎಂದು ಹೇಳಿತು. ದಡ್ಡ ಮೊಸಳೆ, ‘ಹಾಗಾದರೆ ನಾನು ಏನು ಮಾಡಲಿ?’ ಎಂದಿತು. ‘ನಿನ್ನ ಎಲ್ಲಾ ಗೆಳೆಯರನ್ನು ಮೇಲೆ ಕರೆ, ಸಾಲಾಗಿ ನಿಲ್ಲಲು ಹೇಳು. ನಾನು ಅವರ ಬೆನ್ನಮೇಲೆ ಕಾಲಿಟ್ಟು ಎಣಿಸುತ್ತೇನೆ’ ಎಂದಿತು ಜಾಣ ಜಿಂಕೆ. ಈ ಮೊಸಳೆ ಕರೆದ ತಕ್ಷಣ ಎಲ್ಲಾ ಮೊಸಳೆಗಳು ಮೇಲೆ ಬಂದು ಸಾಲಾಗಿ ನಿಂತವು. ಆಗ ಜಿಂಕೆ ಒಂದರ ಮೇಲೆ ಒಂದರಂತೆ ಮೊಸಳೆಗಳ ಮೇಲೆ ಹೆಜ್ಜೆ ಹಾಕುತ್ತಾ ಆಚೆ ತೀರಕ್ಕೆ ಹೋಯಿತು. ಆಚೆ ತೀರ ತಲುಪಿದ ನಂತರ ಮೊಸಳೆಗಳನ್ನು ಉದ್ದೇಶಿಸಿ ‘ನನ್ನನ್ನು ಈ ದಂಡೆಗೆ ತಲುಪಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಹೇಳುತ್ತಾ ಓಡಿಹೋಯಿತು. ಅತಿಯಾಸೆ ಗತಿಗೇಡು ಎಂಬ ಮಾತಿನಂತೆ ಜಿಂಕೆ ತನಗೆ ಆಹಾರವಾಗುತ್ತದೆ ಎಂಬ ಆಸೆ ಹೊಂದಿದ್ದ ಮೊಸಳೆ ಚಾಣಾಕ್ಷ ಜಿಂಕೆಯಿಂದಾಗಿ ನಿರಾಸೆ ಅನುಭವಿಸಬೇಕಾಯಿತು. ಮೂರ್ಖತನದ ಪರಮಾವಧಿ ಎಂದರೆ ಇದೇ. ಮೊಸಳೆಯ ಮೂರ್ಖತನದ ಅರಿತಿದ್ದ ಜಿಂಕೆ ಅದರ ಲಾಭ ಪಡೆಯಿತು.

ಹಾಗೆಯೇ ಜೀವನದಲ್ಲಿ ನಾವು ಮೂರ್ಖರಾಗಿದ್ದರೆ, ಅದರ ಲಾಭ ಪಡೆಯುವವರು ಬೇಕಷ್ಟು ಜನರಿರುತ್ತಾರೆ ಮತ್ತು ಅಂಥ ಅವಕಾಶಕ್ಕೆ ಕಾಯುತ್ತಿರುತ್ತಾರೆ. ತಾನೇ ಎಲ್ಲವನ್ನೂ ಪಡೆಯಬೇಕು; ಎಲ್ಲವೂ ತನಗೆ ದಕ್ಕುತ್ತದೆ ಎಂಬ ಆಸೆಯಿಂದ ಮೂರ್ಖತನಕ್ಕೆ ದಾಸರಾಗಬಾರದು. ಬುದ್ಧಿಶಕ್ತಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು ವಿವೇಚನೆಯಿಂದ ನಡೆದರೆ ಜೀವನ ಸುಗಮವಾಗಿ ಸಾಗುತ್ತದೆ.

(ಲೇಖಕರು ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net