ಮನೋಲ್ಲಾಸ | ಹಿರಿಯರ ಹಿರಿಯ ಗುಣ

Manollasa
Published on
| ವಿದ್ಯಾ ಉಪೇಂದ್ರ ಜೋಶಿ

ಕರಾಚಿಯ ವಿಖ್ಯಾತ ಸಿರಿವಂತ ಉದಾರಿ ಅಸಹಾಯಕರಿಗೆ, ಅಶಕ್ತರಿಗೆ, ಅಬಲೆಯರಿಗೆ ಕೈಲಾದಷ್ಟು ನೆರವು ನೀಡುತ್ತಿದ್ದರು. ಉದ್ದೇಶ ಹೆಸರು ಗಳಿಸುವುದಾಗಿರದೆ, ಸಮಾಜದ ಋಣವನ್ನು ತೀರಿಸುವ ಪರೋಪಕಾರಿ ಭಾವನೆ ಹೊಂದಿದ್ದರು. ಆಗ ಕರಾಚಿಯಲ್ಲಿ ಆಸ್ಪತ್ರೆಗಳಿರದೆ ರೋಗಿಗಳು ಪರದಾಡುವ ಪರಿಸ್ಥಿತಿ ಇತ್ತು. ಊರಿನಲ್ಲಿ ಗಣ್ಯರೆನಿಸಿದವರು ಇದನ್ನರಿತು ತಾವೇ ಒಂದು ಟ್ರಸ್ಟ್ ಮಾಡಿಕೊಂಡು ಆಸ್ಪತ್ರೆಯ ನಿರ್ವಣಕ್ಕೆ ನಿಧಿ ಸಂಗ್ರಹಿಸತೊಡಗಿದರು. ಉದಾರ ಗುಣದ ಈ ಸಿರಿವಂತರ ಮನೆಗೂ ಬಂದರು. ನಿಧಿಸಂಗ್ರಹ ನಿಯಮದ ಬಗ್ಗೆ ವಿನಂತಿಪತ್ರವನ್ನು ನೀಡಿದರು. ಆ ಪತ್ರವನ್ನು ಓದಿಕೊಂಡು, ‘ಸರಿ ನಿಮ್ಮ ಅಭಿಮಾನದ ಅಪೇಕ್ಷೆಗಿಂತ ನಾನು ಕೊಡುವ ದಾನ ಮಿಗಿಲಲ್ಲ’ ಎನ್ನುತ್ತ ಚೆಕ್ ಬರೆದು ಕೊಟ್ಟರು. ಗಣ್ಯರು ಆನಂದದಿಂದ ಅದನ್ನು ಸ್ವೀಕರಿಸುತ್ತ ಬರೆದಿದ್ದ ಹಣವನ್ನು ಓದಿಕೊಂಡರು. ‘ಒಂಬತ್ತು ಸಾವಿರದ ಒಂಬೈನೂರ ತೊಂಬತ್ತೈದು ರೂಪಾಯಿ’ಗಳೆಂದು ಬರೆದಿತ್ತು. ಅದನ್ನು ನೋಡಿ, ‘ಸ್ವಾಮಿ ಇನ್ನೈದು ರೂಪಾಯಿಗಳನ್ನು ಕೊಟ್ಟುಬಿಡಿ. ಹತ್ತು ಸಾವಿರ ಸರಿ ಆಗುತ್ತೆ. ನಿಮ್ಮ ಹೆಸರನ್ನು ಕಟ್ಟಡದ ಮೇಲೆ ಅಮೃತಶಿಲೆಯ ಕಲ್ಲಿನಲ್ಲಿ ಕೆತ್ತಿಸಲಾಗುತ್ತದೆ’ ಎಂದೂ ಕಳಕಳಿಯಿಂದ ಕೇಳಿಕೊಂಡರು.

ಆಗ ಆ ಸಿರಿವಂತ ಉದಾರಿ ನಗುತ್ತ, ‘ನೀವು ಕೊಟ್ಟ ಪತ್ರದಲ್ಲಿನ ವಿಷಯವನ್ನು ಓದಿದ್ದೇನೆ. ಹಾಗೆಲ್ಲ ನನ್ನ ಹೆಸರನ್ನು ಎಲ್ಲೂ ಯಾರ ಬಾಯಿಗೂ ತಾರದಿರಲೆಂದೇ 5 ರೂಪಾಯಿ ಕಡಿಮೆ ಕೊಟ್ಟಿದ್ದೇನೆ’ ಎಂದರು. ಗಣ್ಯರೆಲ್ಲ ಅವಕ್ಕಾದರು. ಇಂಥ ಅದ್ಭುತ ವ್ಯಕ್ತಿತ್ವದ ಸಿರಿವಂತ ಜಮ್​ಶೇಠ ಜೀ ಮೆಹತಾ. ಕರಾಚಿಗೆ ಅಭಿವೃದ್ಧಿಯ ಹೊಸ ಸ್ವರೂಪವನ್ನು ನೀಡಿದ ಸುಧಾರಕರೂ ಹೌದು.

ಒಂದು ನಿಮಿಷದಲ್ಲಿ ಬದುಕು ಬದಲಾಗುತ್ತದೆ ಅಂತ ಹೇಳೋಕಾಗಲ್ಲ, ಆದರೆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಚರಿತ್ರೆಯನ್ನೇ ಸೃಷ್ಟಿಸುತ್ತದೆ. ವಯೋಮಾನದಿಂದ ಹಿರಿಯರಾದರೆ ಸಾಲದು, ಅದಕ್ಕೆ ತಕ್ಕಂತೆ ವ್ಯಕ್ತಿತ್ವ, ಅನುಭವ, ಸಂಹಿತೆ, ಸಹಿಷ್ಣುತೆ, ಔದಾರ್ಯ, ದಯೆ, ಸಂಸ್ಕಾರವಂತ ಗುಣಗಳು ಇರಬೇಕು. ಆಗ ವ್ಯಕ್ತಿಯ ಘನತೆ, ಗೌರವ ಹೆಚ್ಚಿ, ಹೆಸರು, ಕೀರ್ತಿ ತಾನಾಗಿಯೇ ಬರುತ್ತದೆ. ಅರಿವು ದೊಡ್ಡದಲ್ಲ; ಆಚಾರ ದೊಡ್ಡದು, ಅಧಿಕಾರ ದೊಡ್ಡದಲ್ಲ; ಅಭಿಮಾನ ದೊಡ್ದದು, ಸನ್ಮಾನ ದೊಡ್ಡದಲ್ಲ; ಸಂಸ್ಕಾರ ದೊಡ್ಡದು. ಹಣ ದೊಡ್ಡದಲ್ಲ; ಗುಣ ದೊಡ್ಡದು. ಹಣ ಎಂದರೆ ಉಪ್ಪು ಇದ್ದಂತೆ. ಅದನ್ನು ತುಸು ನಾಲಿಗೆಯೇ ಮೇಲಿರಿಸಿಕೊಂಡರೆ ರುಚಿ, ಹೆಚ್ಚಾದರೆ ದಾಹ ಹೆಚ್ಚುತ್ತದೆ.

ಚೀಲದಲ್ಲಿ ಚಿನ್ನ ಇಟ್ಟಾಗ ಆ ಚೀಲಕ್ಕೆ ಬೆಲೆ ಇರುತ್ತದೆ, ಚಿನ್ನದಿಂದ ಚೀಲವನ್ನು ಬೇರ್ಪಡಿಸಿದರೆ ಚೀಲಕ್ಕೆ ಏನೂ ಬೆಲೆ ಇಲ್ಲ, ಹಾಗೆ ಮಾನವೀಯ ಮೌಲ್ಯಗಳಿದ್ದಾಗ ವ್ಯಕ್ತಿತ್ವಕ್ಕೆ ಒಂದು ಗೌರವ. ಕಪ್ಪನೆಯ ನೀರು ಸುರಿದರೂ ಮಲ್ಲಿಗೆ ಗಿಡ ಶುಭ್ರವಾದ, ಬೆಳ್ಳನೆಯ ಹೂ ಕೊಡುವ ಹಾಗೆ, ನಿರೀಕ್ಷೆಯಿಲ್ಲದ ಪ್ರೀತಿ, ಸ್ವಾರ್ಥವಿಲ್ಲದ ಪ್ರಾರ್ಥನೆ, ಅಹಂನಿಂದ ಹೊರತಾದ ಮಾತು, ಇವೆಲ್ಲವು ಕೂಡ ಸದಾಚಾರಿಯೊಬ್ಬನ ಗುಣಗಳು. ಇವುಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸೋಣ.

(ಲೇಖಕಿ ಹವ್ಯಾಸಿ ಬರಹಗಾರ್ತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net