ಭಕ್ತಪರಾಧೀನ ಭಗವಂತ: ಮನೋಲ್ಲಾಸ

Manollasa
Published on
| ಆಶಾ ಸೋಮಯಾಜಿ

ತ್ರಿಕೂಟವೆಂಬ ಪರ್ವತ. ಅದರಲ್ಲಿ ಅತಿಸುಂದರವಾದ ಪದ್ಮಸರೋವರ. ಅದರ ನೀರು ಅಮೃತಪ್ರಾಯ. ಅದರ ಮೇಲೆ ಬೀಸುವ ತಂಪಾದ ಗಾಳಿ ಸುಗಂಧಯುತವಾಗಿದ್ದು, ಬಹುದೂರದಲ್ಲಿರುವ ಪ್ರಾಣಿಗಳನ್ನೂ ಆಕರ್ಷಿಸುತ್ತಿತ್ತು. ಹೀಗೇ ಆಕರ್ಷಿಸಲ್ಪಟ್ಟ ಒಂದು ಮದಗಜ ತನ್ನ ಪರಿವಾರ ಸಮೇತ ಆ ಸರೋವರದಲ್ಲಿ ಜಲಕ್ರೀಡೆಯಾಡಲು ಬಂತು. ಅತ್ಯಂತ ಸಂಭ್ರಮ, ಸಂತೋಷಗಳಿಂದ ಮೈಮರೆತು ತನ್ನ ಪರಿವಾರದವರೊಂದಿಗೆ ಜಲಕ್ರೀಡೆಯಾಡುತ್ತಿತ್ತು. ಸರೋವರದ ನೀರು ಅಲ್ಲೋಲಕಲ್ಲೋಲವಾಗಿತ್ತು. ಆದರೆ ಆನೆಯ ಸಂತೋಷ ಬಹಳ ಕಾಲ ಉಳಿಯಲಿಲ್ಲ. ಎಲ್ಲಿಂದಲೋ ಬಂದ ಮೊಸಳೆಯೊಂದು ಆನೆಯ ಕಾಲನ್ನು ಬಲವಾಗಿ ಹಿಡಿದು ಸರೋವರದ ಆಳಕ್ಕೆ ಎಳೆಯತೊಡಗಿತು. ಆನೆ ತನ್ನ ಬಂಧುಗಳನ್ನೆಲ್ಲ ಆರ್ತವಾಗಿ ಕರೆದು ಕಾಪಾಡುವಂತೆ ಬೇಡಿಕೊಂಡಿತು. ಎಲ್ಲ ಬಂಧುಗಳೂ ಎಷ್ಟು ಪ್ರಯತ್ನಿಸಿದರೂ ಮೊಸಳೆಯ ಹಿಡಿತದಿಂದ ಆನೆಯನ್ನು ಪಾರುಮಾಡಲಾಗಲಿಲ್ಲ. ಈ ಎಳೆದಾಟ ಬಹಳ ಕಾಲದವರೆಗೆ ನಡೆಯಿತು. ದೇಹಬಂಧುಗಳು ಎಷ್ಟೇ ಪ್ರಿಯರಾಗಿದ್ದರೂ ಈ ಬಂಧನದಿಂದ ತಮ್ಮ ಪ್ರಿಯತಮನನ್ನು ಬಿಡಿಸಲು ಅಶಕ್ತರಾದರು. ಕಡೆಯಲ್ಲಿ ಆನೆಯು- ‘ಅನ್ಯಥಾ ಶರಣಂ ನಾಸ್ತಿ’, ಎಂಬ ನಿಶ್ಚಯಕ್ಕೆ ಬಂದು ಸರ್ವನಿಯಾಮಕನಾದ ಶ್ರೀಹರಿಯನ್ನೇ ಆದಿಮೂಲಾ ಎಂದು ಸಂಬೋಧಿಸಿ ‘ತ್ವಮೇವ ಶರಣಂ ಮಮ’ ಎಂದು ಪ್ರಾರ್ಥಿಸಿತು. ಆ ಸರೋವರದಲ್ಲೇ ಅರಳಿದ ಕಮಲವೊಂದನ್ನು ಅತ್ಯಂತ ಭಕ್ತಿಯಿಂದ ಸರ್ವ ಶರಣಾಗತ ಭಾವದಿಂದ ದೇವದೇವನಿಗೆ ಸಮರ್ಪಿಸಿತು. ಒಡನೆಯೇ ಶ್ರೀಹರಿಯು ವೇಗವಾಗಿ ಬಂದು ತನ್ನ ಚಕ್ರದಿಂದ ಮೊಸಳೆಯನ್ನು ಸೀಳಿ ಆನೆಯನ್ನು ಕಾಪಾಡಿದನು. ಮೊಸಳೆಯೂ ಶಾಪಗ್ರಸ್ತ ಗಂಧರ್ವನಾಗಿದ್ದು, ಶ್ರೀಹರಿಯಿಂದ ಶಾಪವಿಮೋಚನೆಗೊಂಡನು. ಈ ಆನೆ ಪೂರ್ವಜನ್ಮದಲ್ಲಿ ಇಂದ್ರದ್ಯುಮ್ನನೆಂಬ ರಾಜ. ಶ್ರೀಹರಿಯ ಪರಮ ಭಕ್ತ. ಒಮ್ಮೆ ಶ್ರೀಹರಿಯ ಭಜನೆಯಲ್ಲಿರುವಾಗ ಮಹರ್ಷಿ ಅಗಸ್ತ್ಯರನ್ನು ಆದರಿಸದೆ ಶಾಪಕ್ಕೊಳಗಾಗಿ ಆನೆಯಾಗಿದ್ದವನು. ಆ ಪೂರ್ವಜನ್ಮದ ಅನನ್ಯ ಭಕ್ತಿಯೇ ಆನೆಯರೂಪದಲ್ಲಿದ್ದರೂ ಭಗವಂತನ ಸ್ಮರಣೆಯನ್ನು ಮರೆಯದೇ ಇಷ್ಟು ತೀವ್ರವಾಗಿ ಪ್ರಾರ್ಥಿಸುವಂತೆ ಮಾಡಿತು.

ಈ ಕಥೆ ನಮಗೆಲ್ಲ ಪಾಠವಾಗಿದೆ. ದೇಹಬಂಧುಗಳು ಎಷ್ಟೇ ಹತ್ತಿರದವರಾದರೂ ಆತ್ಮಬಂಧುವಾದ ಭಗವಂತನೇ ಈ ಸಂಸಾರದ ಅತಿಭಯಂಕರವಾದ ಕಟ್ಟಿನಿಂದ ಬಿಡಿಸಬಲ್ಲನು. ಆನೆಯ ವಿಷಯದಲ್ಲೂ ಹಾಗೇ ಆಯಿತು. ಆ ಆನೆಗೇನು ಸಂಸ್ಕೃತ ಅಥವಾ ಇನ್ಯಾವುದಾದರೂ ಭಾಷೆ ಬರುತ್ತಿತ್ತೇ? ಹೇಗೆ ಪ್ರಾರ್ಥಿಸಿತು? ಅದರೊಳಗಿನ ಭಕ್ತಿಯೇ, ಭಾವರೂಪವಾಗಿ ಪ್ರಾರ್ಥಿಸಿತು. ಶರಣಾಗತನಾಗಿ ಪ್ರಾಮಾಣಿಕತೆಯಿಂದ ಕರೆದಾಗ ಅವನು ನಮ್ಮನ್ನು ಕಾಪಾಡುತ್ತಾನೆ. ರಾಜಾ ಇಂದ್ರದ್ಯುಮ್ನ ಭಗವಂತನ ವಿಭೂತಿಗಳಾದ ಮಹರ್ಷಿಗಳನ್ನು ಎಂತಹ ಸಂದರ್ಭದಲ್ಲಾದರೂ ಆದರಿಸ ಬೇಕಿತ್ತು. ರಾಜನು ಉಳಿದವರಿಗೆ ಮಾದರಿಯಾಗಿ ಇರಬೇಕಾಗುತ್ತದೆ. ಭಗವಂತನ ಮೇಲಿಟ್ಟಿರುವ ಭಕ್ತಿ, ಜನ್ಮ ಜನ್ಮಾಂತರಗಳವರೆಗೂ ಫಲನೀಡದೇ ಬಿಡುವುದಿಲ್ಲ ಎಂಬುದು ಗಜೇಂದ್ರನ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ. ಶ್ರೀರಂಗ ಮಹಾಗುರುಗಳು ಹೇಳಿದಂತೆ- ‘ಮಾನವ ತನ್ನ ಹೃದಯದಲ್ಲಿ ಭಗವಂತನಿಗೆ ಜಾಗ ಕೊಟ್ಟಷ್ಟೂ ಆ ತೇಜೋನಿಧಿಯು ತನ್ನ ಮಡಿಲಲ್ಲಿ ಅವನಿಗೆ ಜಾಗ ಕೊಡುತ್ತಾನೆ’. ಆಗ ‘ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀಹರಿ ಎಂದು ಪಲ್ಲವಿ ಹಾಡಬಹುದು’. ಗಜೇಂದ್ರನ ಭಕ್ತಿ, ಶರಣಾಗತಿ ನಮಗೆಲ್ಲರಿಗೂ ಪಾಠವಾಗಲಿ.

(ಲೇಖಕರು ಸಂಸ್ಕೃತಿ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net