ಒಲಿದಂತೆ ಹಾಡೋಣ...: ಮನೋಲ್ಲಾಸ

Manollasa
Published on
| ರೇಖಾ ಗಜಾನನ ಭಟ್ಟ

ಒಬ್ಬ ರಾಜ ಸಂಗೀತಪ್ರಿಯನಾಗಿದ್ದ. ಆತ ಒಮ್ಮೆ ರಾಜಧಾನಿಯಲ್ಲಿ ಸಂಗೀತ ಕಛೇರಿ ಆಯೋಜಿಸಿ ಮಹಾನ್ ಗಾಯಕರನ್ನು ಆಹ್ವಾನಿಸಿದ. ಆಗಮಿಸಿದ ಗಾಯಕರಿಗೆ ವಿಶೇಷ ವಸತಿ ವ್ಯವಸ್ಥೆ ಮಾಡಲಾಗಿತ್ತು. ಅವರನ್ನು ನೋಡಿಕೊಳ್ಳಲು ಆಳುಗಳನ್ನು ನೇಮಿಸಲಾಗಿತ್ತು. ಗಾಯಕರಿಗೆ ಊಟೋಪಚಾರ ವ್ಯವಸ್ಥೆಗೆ ನೇಮಕವಾದ ಒಬ್ಬ ಯುವಕನಿಗೆ ಹಾಡುವುದೆಂದರೆ ಬಹಳ ಪ್ರೀತಿ. ಇಡೀ ದಿನ ತನ್ನಷ್ಟಕ್ಕೆ ತಾನು ಗುನುಗಿಕೊಳ್ಳುತ್ತಲೇ ಕೆಲಸ ಮಾಡುತ್ತಿದ್ದ. ಉಳಿದ ಕೆಲಸಗಾರರು ‘ನೀನು ಇಲ್ಲಿ ಗುಣುಗುಡಬೇಡ. ನಿನ್ನ ಹಾಡನ್ನು ಯಾರೂ ಕೇಳುವವರಿಲ್ಲ. ಇಲ್ಲಿ ದೇಶ ವಿದೇಶದ ಗಾಯಕರು ಉಳಿದುಕೊಂಡಿದ್ದಾರೆ. ಅವರೆಲ್ಲ ಎಂತಹ ಸುಪ್ರಸಿದ್ಧ ಗಾಯಕರು ಗೊತ್ತೇ? ಅವರ ಕೋಣೆಯ ಹತ್ತಿರ ಹೀಗೆ ಹಾಡಿಕೊಂಡಿರಲು ನಿನಗೆಷ್ಟು ಧೈರ್ಯ?’ ಎಂದು ಬೈದರು.

ಆಗ ಯುವಕ ಸ್ವಲ್ಪ ಹೊತ್ತು ಮೌನತಾಳಿದರೂ, ತನಗರಿವಿರದಂತೆ ಮತ್ತೆ ಹಾಡಲಾರಂಭಿಸಿದ. ಇದನ್ನು ಕಂಡು ಸಿಟ್ಟಿಗೆದ್ದ ಉಳಿದ ಕೆಲಸಗಾರರು ಮಂತ್ರಿಯ ಬಳಿ ದೂರು ನೀಡಿದರು. ಮಂತ್ರಿ ಪ್ರಶ್ನಿಸಿದಾಗ ಆತ ವಿನಯದಿಂದ ‘ಮಂತ್ರಿಗಳೇ, ತಾನಿರುವ ಮರದಲ್ಲಿ ಕುಳಿತ ಕೋಗಿಲೆಯು ಸುಶ್ರಾವ್ಯವಾಗಿ ಹಾಡುತ್ತದೆ ಎಂದು ಜೀರುಂಡೆ ಕೂಗದೇ ಇರುವುದೇ.? ಗುಡ್ಡವೊಂದು ತನ್ನೆದುರಿಗಿರುವ ಎತ್ತರದ ಬೆಟ್ಟ ಸದಾ ಹಸುರಿನಿಂದ ಕಂಗೊಳಿಸುತ್ತಿದೆ ಎಂದು ಚಿಗುರಲು ಹೆದರುತ್ತದೆಯೇ..? ಮುಂದೆ ಮಹಾಸಾಗರವಿದೆ ಎಂದು ನದಿ ಹರಿಯದೇ ನಿಲ್ಲುತ್ತದೆಯೇ..? ನನಗೆ ಹಾಡದೇ ಕೆಲಸ ಮಾಡಲು ಬರದು. ನನ್ನಿಂದ ಇವರಿಗೆ ತೊಂದರೆ ಆಗಿದ್ದಕ್ಕೆ ದಯವಿಟ್ಟು ಕ್ಷಮಿಸಿ ಮತ್ತು ನನ್ನನ್ನು ಈ ಕೆಲಸದಿಂದ ಬಿಡುಗಡೆಗೊಳಿಸಿ..’ ಎಂದ. ಈ ಮಾತುಗಳನ್ನು ಕೇಳಿಸಿಕೊಂಡ ಗಾಯಕ ಶ್ರೇಷ್ಠರೊಬ್ಬರು ಯುವಕನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಸಂಗೀತ ಜ್ಞಾನವನ್ನು ಧಾರೆಯೆರೆದರು. ಮುಂದೆ ಆತ ಗುರು ಪರಂಪರೆಯನ್ನು ಮುಂದುವರಿಸಿ ಮಹಾನ್ ಗಾಯಕನಾದ.

ಆ ಸೃಷ್ಟಿಕರ್ತ ಜಗದ ಪ್ರತಿ ಚರಾಚರ ವಸ್ತುವಿಗೂ ಒಂದೊಂದು ವಿಶೇಷ ಅರ್ಹತೆಯನ್ನಿಟ್ಟಿದ್ದಾನೆ. ಅವುಗಳಲ್ಲಿ ಒಂದಕ್ಕಿಂತ ಒಂದು ಶ್ರೇಷ್ಠ ಎನಿಸುವ ಸಂಗತಿಗಳಿರಬಹುದು. ಆದರೆ ಎಲ್ಲದಕ್ಕೂ ಅದರದೇ ಆದ ಮಹತ್ವವಿದೆ. ಅಂತಹವರ ಮುಂದೆ ನಾನೇನೂ ಅಲ್ಲ ಎನ್ನುವ ಹಿಂಜರಿಕೆ ನಮ್ಮ ನೈಜ ಇರುವಿಕೆಯನ್ನು ಮರೆಮಾಚುತ್ತದೆ. ಅರಮನೆಯ ಹಾಗೆ ಗುಡಿಸಲನ್ನು ಕೂಡ ವಾಸಕ್ಕಾಗಿಯೇ ಬಳಸುತ್ತಾರೆ. ಅರಮನೆ ಸುಂದರ ಎಂದು ಎಲ್ಲೆಡೆ ಅರಮನೆಯನ್ನೇ ಕಟ್ಟಲಾಗದು. ಇದ್ದುದರಲ್ಲಿ ಹರುಷ ಕಂಡುಕೊಳ್ಳುವ ಮನೋಭಾವ ನಮ್ಮದಾಗಬೇಕು. ನಮ್ಮತನದ ಬಗ್ಗೆ ಹೆಮ್ಮೆ ಇರಬೇಕು. ‘ವಿಶ್ವಪರಿಧಿಯದೆಲ್ಲೊ ಸೂರ್ಯಚಂದ್ರರಿನಾಚೆ/ವಿಶ್ವಕೇಂದ್ರವು ನೀನೆ, ನೀನೆಣಿಸಿದೆಡೆಯೆ/ನಿಃಶ್ವಸಿತ ಸಂಬಂಧ ನಿನಗಂ ದಿಗಂತಕಂ/ಪುಷ್ಪವಾಗಿರು ನೀನು - ಮಂಕುತಿಮ್ಮ’ಎಂದು ಈ ಕಗ್ಗದಲ್ಲಿ ‘ನೀನು ನಿನ್ನ ಶಕ್ತಿಯ ಸುಗಂಧವನ್ನು ಎಲ್ಲೆಡೆ ಹರಡು’ ಎಂದು ಡಿ.ವಿ.ಜಿಯವರು ಹೇಳುವಂತೆ ಮನದ ಕೀಳರಿಮೆ ತೊರೆದು ನಾವು ನಾವಾಗಿದ್ದು ನಮ್ಮ ಸತ್ವದ ಕಂಪನ್ನು ಎರೆಯೋಣ.

ನಮ್ಮೊಳಗಿನ ಶಕ್ತಿ ಹಿರಿದಿರಲಿ ಕಿರಿದಿರಲಿ

ಮೀರಿ ಹೊಮ್ಮಲಿ ವರ್ತಮಾನದಲ್ಲಿ

ಒಂದಕ್ಕಿಂತ ಒಂದು ಮೇಲಿಹುದು ಇಲ್ಲಿ

ತಾನು ಕೀಳೆಂದು ತೋರದೆ ಬದುಕ ಗೆಲ್ಲಿ

(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net