

ಮನುಷ್ಯನ ಜೀವನದ ಪ್ರತಿ ಹಂತದಲ್ಲೂ ತಾಳ್ಮೆ ಅಥವಾ ಸಂಯಮವು ಮಹತ್ವದ ಪಾತ್ರ ವಹಿಸುತ್ತದೆ. ಕೋಪವೆಂಬುದು ಅನರ್ಥ ಸಾಧನವಾದರೆ ತಾಳ್ಮೆಯೆಂಬುದು ಸಮರ್ಥ ಸಾಧನ. ತಾಳ್ಮೆ ಗುಣ ಹೊಂದಿದ ಮನುಷ್ಯ ಬದುಕಿನಲ್ಲಿ ಎಂದಿಗೂ ಆತುರದ ನಿರ್ಧಾರ ತೆಗೆದುಕೊಳ್ಳದೆ ವಿಚಾರ ಮಾಡಿ ಜೀವನ ಹಸನಾಗುವಂತೆ ಮಾಡಿಕೊಳ್ಳುವನು. ಅದರೆ, ತಾಳ್ಮೆ ಇರದ ವ್ಯಕ್ತಿ ಅವಸರದಲ್ಲಿ ನಿರ್ಣಯ ತೆಗೆದುಕೊಂಡು ಬದುಕನ್ನು ನರಕ ಮಾಡಿಕೊಳ್ಳುವನು. ತಾಳ್ಮೆ ಅಥವಾ ಸಹನೆಯು ದೌರ್ಬಲ್ಯವಲ್ಲ. ಅಜ್ಞಾತವಾಸದಲ್ಲಿದ್ದ ಪಾಂಡವರೈವರು ಅರಣಿಯನ್ನು ಹೊತ್ತೊಯ್ದ ಜಿಂಕೆಯ ಬೆನ್ನತ್ತಿ ಕಾಡಿನಲ್ಲಿ ಅಲೆದಾಡುತ್ತಾರೆ. ಒಂದೆಡೆ ವಿಶ್ರಾಂತಿ ತೆಗೆದುಕೊಳ್ಳಲು ಕೂತಾಗ ಧರ್ಮರಾಯನಿಗೆ ಬಾಯಾರಿಕೆಯಾಗಿ, ನೀರು ತರಲು ಕಿರಿಯ ಸಹೋದರ ಸಹದೇವನನ್ನು ಕಳಿಸುವನು. ಸಹದೇವನು ಒಂದು ಕೊಳ ಕಂಡು ಅವಸರದಲ್ಲಿ ನೀರು ಕುಡಿಯಲು ಮುಂದಾದಾಗ ಅಶರೀರವಾಣಿಯೊಂದು, ‘ಈ ಕೊಳ ನನ್ನದು. ನೀರು ಕುಡಿಯುವ ಮುನ್ನ ನಾನು ಕೇಳುವ ಪ್ರಶ್ನೆಗೆ ಉತ್ತರಿಸು. ಇಲ್ಲವಾದರೆ ಸಾಯುತ್ತಿಯಾ’ ಎಂದಾಗ, ಪಶ್ನೆಗೆ ಉತ್ತರಿಸುವ ತಾಳ್ಮೆ ಇರದ ಸಹದೇವ ನೀರು ಕುಡಿದು ಕೊಳದ ದಂಡೆಯ ಮೇಲೆ ಸತ್ತು ಬೀಳುತ್ತಾನೆ. ಬಹಳ ಹೊತ್ತಾದರೂ ಸಹದೇವ ಬಾರದಿರುವುದರಿಂದ ಧರ್ಮರಾಯನು ನಕುಲನನ್ನು ಕಳುಹಿಸುತ್ತಾನೆ. ಅವನು ಕೂಡ ಕೊಳಕ್ಕೆ ಬಂದಾಗ ಅಶರೀರವಾಣಿಯ ಪ್ರಶ್ನೆ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದೆ ನೀರು ಕುಡಿದು ಸತ್ತು ಬೀಳುತ್ತಾನೆ.
ಇಬ್ಬರೂ ತಮ್ಮಂದಿರು ಮರಳಿ ಬಾರದಿದ್ದಾಗ ಧರ್ಮರಾಯನು ಅರ್ಜುನನನ್ನು ಹುಡುಕಲು ಕಳುಹಿಸುತ್ತಾನೆ. ಆಗ ಮರಳಿ ಅದೇ ಘಟನೆ ಜರಗುತ್ತದೆ. ನಂತರ ಭೀಮ ಬಂದಾಗಲೂ ಘಟನೆ ಪುನರಾವರ್ತಿಸುತ್ತದೆ. ಕೊನೆಗೆ ನಾಲ್ವರೂ ಸಹೋದರರು ಬಾರದಿರುವುದರಿಂದ ಗಾಬರಿಗೊಂಡ ಧರ್ಮರಾಯನು ಕೊಳದತ್ತ ಬಂದಾಗ, ನಾಲ್ವರೂ ಸೋದರರು ಸತ್ತು ಬಿದ್ದಿರುತ್ತಾರೆ. ಅವರನ್ನು ಯಾರು ಕೊಂದಿರಬಹುದೆಂದು ಆಲೋಚಿಸುತ್ತಾ, ಬಾಯಾರಿಕೆ ನೀಗಿಸಿಕೊಂಡು ವಿಚಾರಿಸಿದರಾಯಿತು ಎಂದು ನೀರು ಕುಡಿಯಲು ಮುಂದಾಗುತ್ತಾನೆ. ಆಗ ಮೊದಲಿನಂತೆ ಅಶರೀರವಾಣಿಯು ‘ಈ ಕೊಳ ನನ್ನದು. ನೀರು ಕುಡಿಯುವ ಮೊದಲು ನನ್ನ ಪ್ರಶ್ನೆಗೆ ತಾಳ್ಮೆಯಿಂದ ಉತ್ತರಿಸು. ಇಲ್ಲವಾದರೆ ನೀನು ಕೂಡ ನಿನ್ನ ಸಹೋದರರಂತೆ ಸತ್ತು ಹೋಗುತ್ತಿಯಾ’ ಎಂದಾಗ ಧರ್ಮರಾಯನು, ‘ಯಾರು ನೀನು? ನನ್ನ ಸಹೋದರರನ್ನು ಏಕೆ ಕೊಂದೆ?’ ಎಂದು ಕೇಳುತ್ತಾನೆ. ‘ನಿನ್ನ ತಮ್ಮಂದಿರು ತಾಳ್ಮೆಯಿಂದ ನನ್ನ ಮಾತನ್ನು ಕೇಳದೆ ಅವಸರದಲ್ಲಿ ನೀರು ಕುಡಿದು ಸತ್ತಿದ್ದಾರೆ. ನೀನಾದರೂ ನನ್ನ ಪ್ರಶ್ನೆಗಳಿಗೆ ಉತ್ತರಿಸು’ ಎಂದಾಗ ಧರ್ಮರಾಯ ಆತ ಕೇಳಿದ ಎಲ್ಲ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಾನೆ. ಅಶರೀರವಾಣಿಯಲ್ಲಿದ್ದ ಯಮಧರ್ಮ ಪ್ರತ್ಯಕ್ಷನಾಗಿ ಎಲ್ಲ ಸಹೋದರರನ್ನು ಬದುಕಿಸುತ್ತಾನೆ. ಯಾವ ವ್ಯಕ್ತಿ ತಾಳ್ಮೆಯ ಸಾಕಾರವಾಗಿರುವನೋ ಆತನ ಜೀವನ ಯಾವತ್ತಿಗೂ ಶಾಂತಿ ಹಾಗೂ ಸಮಾಧಾನದಿಂದ ಕೂಡಿರುತ್ತದೆ. ಯಾಕೆಂದರೆ ತಾಳ್ಮೆಯ ಗುಣಕ್ಕೆ ಯಾವುದೇ ಪರ್ಯಾಯ ಇಲ್ಲ.
(ಲೇಖಕರು ಕೆಎಎಸ್ ಅಧಿಕಾರಿ)