ಪ್ರಶಂಸನೆ ಗುಣಿಯ ಮೇರು ಗುಣ: ಮನೋಲ್ಲಾಸ

Krishna Radhe
Published on
| ಮೇಧಾ ಪ್ರಹ್ಲಾದಾಚಾರ್ಯ ಜೋಶಿ 
ಮಹಾಭಾರತದಲ್ಲಿ ಒಂದು ಪ್ರಸಂಗ. ಶ್ರೀಕೃಷ್ಣ ಸಂಧಾನಕ್ಕೆ ಬಂದ. ಆದರೆ ಸಂಧಾನ ವಿಫಲವಾಯಿತು. ಮರಳಿ ಹೋಗುವಾಗ ಕೃಷ್ಣ ತನ್ನ ಸೋದರತ್ತೆ ಕುಂತಿಯ ಬಳಿ ಹೋಗಿ ನಿನ್ನ ಮಕ್ಕಳಿಗೆ ಏನಾದರೂ ಸಂದೇಶ ಕೊಡವಿರಾ ಎಂದು ಕೇಳಿದ. ಆಗ ತಾಯಿ ಕುಂತಿ ಧಮೇತೇ ಧೀಯತಾಂ ಬುದ್ಧಿಃ ಮನಸ್ತು ಮಹದಸ್ತುತೇ ಎಂದಳು. ಬುದ್ಧಿ ಸದಾ ಧರ್ಮದಲ್ಲಿಯೇ ಇರಲಿ. ಮನಸ್ಸು ಸದಾ ಮಹತ್ತಾಗಿರಲಿ. ಸಂಕುಚಿತ ಬುದ್ಧಿ ಮನಸ್ಸುಗಳು ಪರಿವಾರದಲ್ಲಿ ಸಮಾಜದಲ್ಲಿ ವ್ಯಕ್ತಿಯನ್ನು ಅತೀ ಚಿಕ್ಕವನನ್ನಾಗಿ ಬಿಂಬಿಸುತ್ತವೆ. ಆದ್ದರಿಂದ ಔದಾರ್ಯ ಬೆಳೆಸಿಕೊಳ್ಳಿ ಎಂದು ತಿಳಿಸುತ್ತಾಳೆ.

ವ್ಯಕ್ತಿ ಕೇವಲ ವ್ಯಕ್ತಿಯಾಗದೇ ವ್ಯಕ್ತಿತ್ವವಾಗಿ ತೋರಬೇಕಾದರೆ ಅವನಲ್ಲಿ ವಿಶೇಷ ಗುಣಗಳ ಅಭಿವ್ಯಕ್ತಿಯಾಗಬೇಕು. ಸಾಮಾನ್ಯವಾಗಿ ಲೋಕಾರೂಢಿಯಲ್ಲಿ ಸದ್ಗುಣಗಳನ್ನಷ್ಟೇ ಗುಣ ಎಂದು ಗುರುತಿಸುತ್ತೇವೆ. ದುರ್ಗಣಗಳನ್ನು ದೋಷವೆಂದೇ ಪರಿಗಣಿಸುತ್ತೇವೆ. ಪ್ರಾಮಾಣಿಕತೆ, ಸತ್ಯನಿಷ್ಠುರತೆ, ಸರಳತೆ, ಶೌರ್ಯ ಮೊದಲಾದವು ಸದ್ಗುಣಗಳು. ಜೊತೆಗೆ ಒಂದು ವಿಶಿಷ್ಟ ಕ್ಷೇತ್ರದಲ್ಲಿ ಅದ್ಭುತ ಪರಿಣತಿ ಹೊಂದಿರುವುದೂ ಕೂಡ ಪ್ರತಿಭೆ ಎಂಬ ಗುಣ. ಅದು ಸಂಗೀತ, ಸಾಹಿತ್ಯ, ವಾಕ್​ಪಟುತ್ವ, ಬರಹ, ಅಡುಗೆ ಯಾವ ಕ್ಷೇತ್ರದಲ್ಲಿಯೂ ಆಗಿರಬಹುದು. ಆದರೆ ಒಬ್ಬ ಪ್ರತಿಭಾವಂತನಿಗೂ ಕಿರೀಟಪ್ರಾಯವಾದ ಗುಣವೆಂದರೆ, ಅದು ಮತ್ತೊಬ್ಬರ ಪ್ರತಿಭೆಯನ್ನು ಮೆಚ್ಚುವುದು, ಅದನ್ನು ಹತ್ತಾರು ಜನರ ಮುಂದೆ ವ್ಯಕ್ತಪಡಿಸುವುದು. ಈ ಶ್ಲಾಘನೆ ಎಂಬುದು ಅತೀ ಅಪರೂಪವಾದ, ಸರಳವಾಗಿ ಕೈಗೆಟುಕದ ಗುಣ. ಕೆಲವರಲ್ಲಿ ಇದು ಜನ್ಮಜಾತವಾಗಿ ಬಂದರೆ ಇನ್ನು ಕೆಲವರು ಇದನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಕೆಲವರು ಮಾತ್ರ ಯಾರ ಒಳ್ಳೆಯ ಗುಣ ಗಳನ್ನು, ಪ್ರತಿಭೆಯನ್ನು ಕಂಡರೂ ಕಾಣದಂತೆ ಗಾಂಧಾರಿ ಧೃತರಾಷ್ಟ್ರರಂತೆ ಅಂಧ ಮತ್ತು ಮೌನಿಯಾಗಿರುತ್ತಾರೆ.

ಸಾಮಾನ್ಯವಾಗಿ ಒಬ್ಬ ಸಂಗೀತಗಾರ ಇನ್ನೊಬ್ಬ ಸಂಗೀತಗಾರರನ್ನು ಮೆಚ್ಚುವುದಿಲ್ಲ. ಒಬ್ಬ ಕಲಾಕಾರ ಇನ್ನೊಬ್ಬನ ಕಲೆಯನ್ನು ಪರಿಗಣಿಸುವುದಿಲ್ಲ ಎಂಬ ಅನೇಕ ಲೋಕಾರೂಢಿಗಳುಂಟು. ಇಂತಹ ವ್ಯಕ್ತಿ ಉತ್ತಮ ಪ್ರತಿಭೆ ಇದ್ದರೂ ಗುಣಗಳಲ್ಲಿ ಹಿಂದುಳಿದವನಾಗುತ್ತಾನೆ. ಇನ್ನೊಬ್ಬರ ಗುಣಗಳನ್ನು ಮೆಚ್ಚಿ, ಅದನ್ನು ಹತ್ತಾರು ಜನಗಳ ಮುಂದೆ ಪ್ರಶಂಸೆ ಮಾಡಲೂ ಹೃದಯ ವೈಶಾಲ್ಯತೆ ಬೇಕು. ಅದೇ ಕುಂತಿ ಹೇಳಿದ ಔದಾರ್ಯವೆನಿಸುವುದು. ನಮ್ಮ ನಿತ್ಯದ ಜೀವನದಲ್ಲಿ ಅನೇಕ ಪ್ರಸಂಗಗಳಲ್ಲಿ ಅನ್ವಯವಾಗುತ್ತದೆ. ವ್ಯಕ್ತಿ ತಾನು ಉತ್ತುಂಗಕ್ಕೇರುವಾಗ ಎಷ್ಟು ಜನರಿಂದ ಉಪಕೃತನಾಗುತ್ತಾನೆ. ಆ ಉಪಕಾರವನ್ನು ನಿರಂತರ ಸ್ಮರಿಸುವುದೂ ಗುಣ. ಮಾಡಿದ ಅಡುಗೆಯಲ್ಲಿ ತಪ್ಪುಗಳನ್ನು ಹುಡುಕುವ ಬದಲು, ತಕ್ಷಣದಲ್ಲಿಯೇ ಮೆಚ್ಚುಗೆ ವ್ಯಕ್ತಪಡಿಸಿದರೆ ಪಾಚಕನ ಹೊಟ್ಟೆ ತುಂಬಿದಂತೆ. ಅವರ ಕಣ್ಣಲ್ಲಿ ಕಾಣುವ ಸಂತೋಷ ಮನಸ್ಸಿಗೆ ತೃಪ್ತಿ ನೀಡುತ್ತದೆ. ಪ್ರತಿಭೆಯನ್ನು ಪೋ›ತ್ಸಾಹಿಸುವ ಸ್ವಭಾವ ಎಲ್ಲಕ್ಕಿಂತ ಉತ್ತಮ ಗುಣ.

ಅದಕ್ಕೆ ಪಂಚರಾತ್ರದಲ್ಲಿ ಒಂದು ಮಾತು ಬರುತ್ತದೆ. ತಾಡಿತಸ್ಯ ಹಿ ಯೋಧಸ್ಯ ಶ್ಲಾಘನೀಯೇನ ಕರ್ಮಣಾ- ಮೃತ್ಯುವಿಗೂ ಹೆದರದೆ ಯುದ್ಧದಲ್ಲಿ ಗಾಯಗೊಂಡು ಹೋರಾಡಿ ಮರಳಿದ ಯೋಧನಿಗೆ, ಗಾಯಕ್ಕೆ ಔಷಧಿಗಿಂತಲೂ ಮೆಚ್ಚುಗೆಯ ಒಂದು ಮಾತು ಅವನ ಮುಖದಲ್ಲಿ ಸಂತಸ ತರುತ್ತದೆ..ಅಲ್ಲವೇ. ಒಬ್ಬ ಗುಣಿಯೇ ಇನ್ನೊಬ್ಬನ ಗುಣಗಳನ್ನು ಕಾಣಬಲ್ಲ. ವ್ಯಕ್ತಿ ತಾನು ಯಾವುದೇ ಕ್ಷೇತ್ರದಲ್ಲಿ ಅದ್ಭುತ ಪ್ರತಿಭೆ ಹೊಂದಿದ್ದರೂ ಸಹ ಇನ್ನೊಬ್ಬರ ಪ್ರತಿಭೆಯನ್ನು ಮೆಚ್ಚುವ ಗುಣ ಅವನನ್ನು ಪರಿಪೂರ್ಣಗೊಳಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net