ನಾನು ಎಂಬ ಅಹಂಕಾರ: ಮನೋಲ್ಲಾಸ

Manollasa
Published on
| ಪ್ರೊ. ವಿದ್ವಾನ್ ನವೀನಶಾಸ್ತ್ರಿ ರಾ. ಪುರಾಣಿಕ

ಯುದ್ಧದಲ್ಲಿ ಅರ್ಜುನನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿತ್ತು. ಆದರೆ, ಕರ್ಣನ ಬಾಣ ತಾಗಿದಾಗ ಅರ್ಜುನನ ರಥವು ಏಳು ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿತ್ತು. ಪ್ರತಿಬಾರಿ ಕರ್ಣನ ಬಾಣ ತಾಗಿ ಅರ್ಜುನನ ರಥವು ಏಳು ಅಡಿ ಹಿಂದಕ್ಕೆ ಹೋಗುವಾಗಲೂ ಸಾರಥಿಯಾದ ಶ್ರೀ ಕೃಷ್ಣನು ಹೇಳುತ್ತಿದ್ದ - ಎಷ್ಟು ವೀರಶಾಲಿಯಾಗಿದ್ದಾನೆ ಕರ್ಣ.!

ಅರ್ಜುನನ ಬಾಣ ತಾಗಿ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿದ್ದರೂ ಶ್ರೀಕೃಷ್ಣನು ಏನೂ ಹೇಳದೆ ಸುಮ್ಮನೆ ಇರುತ್ತಿದ್ದ. ಇದು ಪುನರಾವರ್ತನೆಯಾದಾಗ ಅರ್ಜುನ ಅಸಮಾಧಾನದಿಂದ ಕೃಷ್ಣನಿಗೆ ಹೇಳುತ್ತಾನೆ - ‘ತಾವು ಎಂತಹಾ ಪಕ್ಷಭೇದ ಮಾಡುತ್ತಿದ್ದೀರಿ? ನಮ್ಮ ರಥವು ಏಳು ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿರುವುದು. ಆದರೆ, ನನ್ನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿದೆ. ಅದನ್ನು ನೋಡಿಯೂ ತಾವು ಮಹಾವೀರ ಕರ್ಣ ಅಂತ ಹೊಗಳುತ್ತಿರುವುದೇಕೆ’?

ಮಂದಹಾಸವನ್ನು ಬೀರುತ್ತಾ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ - ‘ಕರ್ಣನು ಮಹಾವೀರನಾಗಿದ್ದಾನೆ. ನೀನು ಮೇಲಕ್ಕೆ ನೋಡು. ನಿನ್ನ ರಥದ ತುದಿಯಲ್ಲಿ ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ವೀರ ಹನುಮ ಮತ್ತು ಮುಂದೆ ನಿನಗೆ ಸಾರಥಿಯಾಗಿ ನಾನು ಇದ್ದರೂ ಕರ್ಣನ ಬಾಣ ತಾಗಿ ರಥವು ಏಳು ಅಡಿ ಹಿಂದಕ್ಕೆ ಹೋಗುತ್ತಿದೆ. ಅದರೆ, ನಾವು ಇರದಿದ್ದರೆ ನಿನ್ನ ರಥವು ನಿರ್ನಾಮವಾಗುತ್ತಿತ್ತು’.

ಸತ್ಯವನ್ನು ಅರಿತಾಗ ಅರ್ಜುನ ಮೌನವಾದ. ಆದರೆ, ತನ್ನ ಪ್ರತಿಭೆಯಲ್ಲಿ ತುಂಬಾ ವಿಶ್ವಾಸ ಇಟ್ಟಿದ್ದ ಅರ್ಜುನನಿಗೆ ಯುದ್ಧದ ಕೊನೆಯ ದಿನ ಆ ಸತ್ಯದ ಅರಿವಾಯಿತು. ಎಲ್ಲಾ ದಿನವೂ ಯುದ್ಧ ಮುಗಿದಾಗ ಸಾರಥಿಯಾಗಿದ್ದ ಕೃಷ್ಣನು ರಥದಿಂದ ಇಳಿದು ನಂತರ ಅರ್ಜುನನಿಗಾಗಿ ಬಾಗಿಲನ್ನು ತೆರೆಯುತ್ತಿದ್ದ. ಆದರೆ, ಯುದ್ಧದ ಕೊನೆಯ ದಿನ ಕೃಷ್ಣನು ರಥದಲ್ಲಿಯೇ ಕುಳಿತು ಅರ್ಜುನನಿಗೆ ಇಳಿದು ದೂರ ನಡೆಯಲು ಹೇಳುತ್ತಾನೆ. ಅರ್ಜುನ ಇಳಿದು ಸ್ವಲ್ಪ ದೂರ ಸಾಗಿದ ನಂತರ ಕೃಷ್ಣನು ರಥದಿಂದ ಇಳಿಯುತ್ತಾನೆ. ತಕ್ಷಣ ರಥವು ಉರಿದು ಭಸ್ಮವಾಗುತ್ತದೆ. ಇದನ್ನು ನೋಡಿದ ಅರ್ಜುನ ಆಶ್ಚರ್ಯದಿಂದ ಕೃಷ್ಣನನ್ನು ನೋಡಿದ.

ಕೃಷ್ಣ ಹೇಳುತ್ತಾನೆ - ‘ಅರ್ಜುನಾ, ನಿನ್ನ ರಥವು ಭೀಷ್ಮ, ಕೃಪಾಚಾರ್ಯ, ದ್ರೋಣ, ಕರ್ಣ ಇವರೆಲ್ಲರ ದಿವ್ಯಾಸ್ತ್ರಗಳಿಂದ ಬಹಳ ಮುಂಚೆಯೇ ಭಸ್ಮವಾಗಿ ಹೋಗಿತ್ತು. ಆದರೆ, ನಾನು ನನ್ನ ಯೋಗಶಕ್ತಿಯಿಂದ ಒಂದು ಸಂಕಲ್ಪ ರಥವನ್ನು ಸೃಷ್ಟಿಸಿದೆ’. ಅರ್ಜುನನಿಗೆ ಭೂಮಿ ಒಡೆದು ಪಾತಾಳಕ್ಕೆ ಹೋಗುವ ಹಾಗೇ ಅನಿಸಿತು. ನಾನು ಎಂಬ ಅಹಂ ಕೆಲವೊಮ್ಮೆ ಅರ್ಜುನನ ಹಾಗೇ ವರ್ತಿಸುತ್ತದೆ. ಇಲ್ಲಿ ರಥ ನಮ್ಮ ಶರೀರ ಮತ್ತು ಯುದ್ಧವು ನಮ್ಮ ಮಾನಸಿಕ ಸಂಘರ್ಷಗಳಾಗಿವೆ. ಒಮ್ಮೆ ಜೀವನ ಯುದ್ಧ ಮುಗಿಸಿ ಜೀವಾತ್ಮ ಶರೀರ ರಥದಿಂದ ಇಳಿಯುವುದು. ನಂತರ ಪರಮಾತ್ಮ ಕೂಡಾ ಇಳಿಯುತ್ತಾ ಅಲ್ಲಿಗೆ ರಥವು ನಾಶವಾಗುವುದು.

(ಲೇಖಕರು ಸಂಸ್ಕೃತ ಉಪನ್ಯಾಸಕರು, ಸಂಸ್ಕೃತಿ ಚಿಂತಕರು ಹಾಗೂ ಜ್ಯೋತಿಷಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net