ಮನೋಲ್ಲಾಸ | ಪರವಶತೆಗೆ ಒಳಗಾಗದಿರೋಣ...

Manollasa
Published on

| ಮಹಾದೇವ ಬಸರಕೋಡ

ಮನಸ್ಸಿನಲ್ಲಿ ಹಲವು ಭ್ರಮಾಭರಿತ ಕಲ್ಪನೆಗಳನ್ನು ಕಟ್ಟಿಕೊಳ್ಳುತ್ತೇವೆ. ನಾವು ಇಚ್ಛಿಸಿದಂತೆ ಜೀವನ ನಡೆಯ ಬೇಕೆಂಬ ಬಯಕೆಯಲ್ಲಿ ಮುಳುಗು ಹಾಕುತ್ತಿರುತ್ತೇವೆ. ವಾಸ್ತವ ಅರಿತುಕೊಳ್ಳದೆ ಅಹಂಭಾವದಲ್ಲಿ ಎಲ್ಲವನ್ನೂ ಪಡೆದುಕೊಳ್ಳುವ ಸಾಹಸಕ್ಕೆ ಮುಂದಾಗುತ್ತೇವೆ. ಮುಂದಾಲೋಚನೆಯಿಲ್ಲದೆ ಭಾವನೆಗಳ ಸುಳಿಯಲ್ಲಿ ಸಿಲುಕಿಕೊಂಡು ಪರವಶತೆಯಲ್ಲಿ ಮುಳುಗಿಬಿಡುತ್ತೇವೆ. ಹತ್ತುಹಲವು ಹುಚ್ಚು ಕಾರ್ಯಗಳಿಗೆ ಕೈ ಹಾಕುತ್ತೇವೆ. ಎಲ್ಲವನ್ನೂ ಪಡೆದುಕೊಂಡಂತೆ ಒಂದಷ್ಟು ಕಾಲ ಬೀಗುತ್ತೇವೆ. ಮುಂದೊಮ್ಮೆ ವಾಸ್ತವಕ್ಕೆ ಮರಳಿದಾಗ ಲೆಕ್ಕಾಚಾರವೆಲ್ಲ ಬುಡ ಮೇಲಾಗಿರುತ್ತದೆ. ಪರೋಕ್ಷವಾಗಿ ನಮ್ಮ ಅವನತಿಗೆ ನಾವೇ ಕಾರಣರಾಗಿರುತ್ತೇವೆ.

ಭಸ್ಮಾಸುರ ಶಿವನ ಪರಮಭಕ್ತ. ಇವನು ಶಕ್ತಿಶಾಲಿ ಅಸುರನಾಗಿದ್ದರೂ ಅವಿವೇಕಿ. ಶಿವನನ್ನು ಒಲಿಸಿಕೊಳ್ಳಲು ಉಗ್ರವಾದ ತಪಸ್ಸು ಮಾಡಿದ. ತಪಸ್ಸಿಗೆ ಒಲಿದ ಶಿವ ಪ್ರತ್ಯಕ್ಷನಾಗಿ, ‘ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ಬೇಕಾದ ವರವನ್ನು ಕೇಳು’ ಎಂದಾಗ ತನಗೆ ಅಮರತ್ವ ದಯಪಾಲಿಸಬೇಕೆಂದ. ‘ಅಂಥ ವರ ಕೊಡಲು ಸಾಧ್ಯವಿಲ್ಲ’ ಎಂಬ ಶಿವನ ಮಾತಿಗೆ ತನ್ನ ಬೇಡಿಕೆಯ ಸ್ವರೂಪವನ್ನು ಬದಲಾಯಿಸಿದ ಭಸ್ಮಾಸುರ, ‘ನಾನು ಯಾರ ತಲೆ ಮೇಲೆ ಕೈಯಿಟ್ಟರೂ ಅವರು ಕ್ಷಣಾರ್ಧದಲ್ಲಿ ಸುಟ್ಟು ಭಸ್ಮವಾಗಬೇಕು’ ಎಂದಾಗ ಶಿವ ‘ತಥಾಸ್ತು’ ಎಂದ. ವರ ಪಡೆದು ಬೀಗಿದ ಭಸ್ಮಾಸುರ ದೇವಾನುದೇವತೆಗಳಿಗೆ ಕಂಟಕಪ್ರಾಯನಾದ. ಅವನ ಉಪಟಳಕ್ಕೆ ಬೇಸತ್ತ ಅವರು ನರಕಾಸುರನ ಸಂಹಾರಕ್ಕೆ ಉಪಾಯ ಹುಡುಕಿದರು. ವಿಷ್ಣು ಮೋಹಿನಿಯ ರೂಪ ತಳೆದು ಭಸ್ಮಾಸುರ ಎದುರು ಬಂದ. ಮೋಹಿನಿಯ ಮೋಹಕತೆಗೆ ಸಿಲುಕಿದ ಭಸ್ಮಾಸುರ ತನ್ನನ್ನು ಮದುವೆಯಾಗುವಂತೆ ದುಂಬಾಲು ಬಿದ್ದ. ‘ನಾನು ಮಾಡುವ ನಾಟ್ಯಭಂಗಿಗಳನ್ನು ಮಾಡಿ ತೋರಿಸಿದರೆ ಮಾತ್ರ ಮದುವೆಯಾಗುವೆ’ ಎಂದು ಮೋಹಿನಿ ಹೇಳಿದಾಗ ಭಸ್ಮಾಸುರ ಒಪ್ಪಿದ. ನಾಟ್ಯದಲ್ಲಿ ಮೈಮರೆಯುವಂತೆ ಮಾಡಿದ ಮೋಹಿನಿ ರೂಪದ ವಿಷ್ಣು ತನ್ನ ತಲೆ ಮೇಲೆ ಕೈಯಿಟ್ಟುಕೊಳ್ಳುವ ನಾಟ್ಯದ ಭಂಗಿ ಪ್ರದರ್ಶಿಸಿದಾಗ ಭಸ್ಮಾಸುರ ಕೂಡ ತನ್ನ ತಲೆ ಮೇಲೆ ಕೈಯಿಟ್ಟುಕೊಂಡ. ಪರಿಣಾಮ, ಕ್ಷಣಾರ್ಧದಲ್ಲೇ ಸುಟ್ಟು ಭಸ್ಮನಾದ.

ಪರವಶತೆ ಇಂಥ ನೂರೆಂಟು ಅವಘಡಗಳಿಗೆ ಕಾರಣವಾಗುತ್ತದೆ. ನೋವು, ಬವಣೆಗಳನ್ನು ತಂದೊಡ್ಡುತ್ತದೆ. ಪರವಶತೆ ಮೇಲೆ ಮೊದಮೊದಲು ಹಿಡಿತ ಸಾಧಿಸುವುದು ಸಾಧ್ಯವಾಗದಿದ್ದರೂ ಕೊಂಚ ತಾಳ್ಮೆ, ವಿವೇಚನೆಯಿಂದ ನಡೆದುಕೊಂಡರೆ ಪರವಶತೆ ಮೇಲಿನ ಹಿಡಿತ ತಾನಾಗಿಯೇ ಬಿಗಿಗೊಳ್ಳುತ್ತದೆ. ಆಗ ಅದು ಪ್ರಜ್ಞಾಪೂರಿತ ಆಲೋಚನೆಯಾಗಬಲ್ಲದು. ಇದರಿಂದ ನಮ್ಮ ಆಂತರ್ಯದಲ್ಲಿ ಕೋಲಾಹಲ ಸೃಷ್ಟಿಸುವ ಹುಚ್ಚು ತುಡಿತಗಳಿಗೆ ಕಡಿವಾಣ ಹಾಕಬಹುದು. ನಮ್ಮ ಅಭೀಪ್ಸೆಗಳನ್ನು ಪೂರೈಸಲು ಭೌತಿಕ ಮಾಧ್ಯಮಗಳಿಂದ ಸಾಧ್ಯವಿಲ್ಲ ಎಂಬ ಅರಿವು ಜಾಗೃತವಾಗುತ್ತದೆ. ವಾಸ್ತವವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗಿ, ದುಃಖ, ದುಗುಡ, ದುಮ್ಮಾನಗಳನ್ನು ದೂರಗೊಳಿಸುತ್ತದೆ. ಬದುಕು ಆನಂದದ ಹಾದಿಯನ್ನು ಹಿಡಿಯುತ್ತದೆ.

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net