

ಅಂದು ಗುರುಕುಲದಲ್ಲಿ ಪಾಠ ನಡೆಯುತ್ತಿದ್ದಾಗ ಒಬ್ಬಳು ಹೆಂಗಸು ತನ್ನ ಐದು ವರ್ಷದ ಮಗನನ್ನು ಕರೆದುಕೊಂಡು ಬಂದು ‘ಗುರುಗಳೇ ದಯವಿಟ್ಟು ಇವತ್ತಿನಿಂದ ಇವನನ್ನೂ ನಿಮ್ಮ ಗುರುಕುಲದಲ್ಲಿ ಪಾಠಕ್ಕೆ ಸೇರಿಸಿಕೊಳ್ಳಿ’ ಎಂದಳು. ಗುರುಗಳು ಮಗುವನ್ನು ಅಲ್ಲಿ ಕೂರಿಸು ಎಂದು ಸಂಜ್ಞೆ ಮಾಡಿದರು. ಆ ಹೆಂಗಸು ಗುರುಗಳಿಗೆ ನಮಸ್ಕರಿಸಿ, ಪಾಠ ಮುಗಿಯುವ ಹೊತ್ತಿಗೆ ತಾನು ಬಂದು ಮಗುವನ್ನು ಕರೆದೊಯ್ಯುತ್ತೇನೆ ಎಂದು ಹೊರಟಳು. ಎಲ್ಲಾ ಶಿಷ್ಯರೂ ಗುರುಗಳ ಕಡೆ ವಿಸ್ಮಯದಿಂದ ನೋಡಿದರು. ಶಿಷ್ಯರ ಇಂಗಿತ ಗುರುಗಳಿಗೆ ಅರ್ಥವಾಯಿತು.
‘ನೀವೆಲ್ಲಾ ಇಷ್ಟು ಚಿಕ್ಕ ವಯಸ್ಸಿನ ಮಗವಿಗೆ ಏನು ಪಾಠ ಹೇಳಿಕೊಡುತ್ತೀರ ಮತ್ತು ಅದಕ್ಕೆ ಏನು ಅರ್ಥವಾಗುತ್ತದೆ ಎಂದು ಯೋಚಿಸುತ್ತಿದ್ದೀರ ಅಲ್ಲವೇ. ನಾನು ಮಗುವಿಗೆ ಏನೂ ಹೇಳಿಕೊಡದೇ ಹೋದರೂ ಅದು ಇಲ್ಲಿನ ವಾತಾವರಣಕ್ಕೆ ಒಗ್ಗಿದರೆ ಅದರ ಮನೋಭಾವವೇ ಬದಲಾಗುತ್ತದೆ. ಇವತ್ತು ನಾಳೆ ಅದು ಸ್ವಲ್ಪ ಒದ್ದಾಡಬಹುದು. ಆದರೆ ಎರಡು ದಿನ ಬಿಟ್ಟರೆ ಅದು ಇಲ್ಲಿಗೆ ಬರಲು ಹಾತೊರೆಯುತ್ತದೆ. ನಮ್ಮ ಜೀವಿತದಲ್ಲಿ ಎಲ್ಲ ಬದಲಾದ ನೆಲೆಗಳ ಸ್ಥಿತಿಯೂ ಹಾಗೆಯೇ. ಇಲ್ಲಿ ನಡೆಯುವ ಪಾಠ ಮಗುವಿನ ಕಿವಿಗೆ ಬಿದ್ದರೆ ಸಾಕು. ಮಗುವಿನಲ್ಲಿ ನಾವು ಬದಲಾವಣೆಗಳನ್ನು ಗಮನಿಸಬಹುದು. ಇದು ನಿಮಗೆ ಅರ್ಥವಾಗಬೇಕಾದರೆ ಒಂದು ಉದಾಹರಣೆ ಕೊಡುತ್ತೀನಿ ಕೇಳಿ. ನೀವು ಮನೆ ಕಟ್ಟಲು ಉಪಯೋಗಿಸುವ ಇಟ್ಟಿಗೆಗಳನ್ನು ನೋಡಿದ್ದೀರ. ಸೂರಿಗೆ ಹಾಕುವ ಹೆಂಚುಗಳನ್ನು ನೋಡಿದ್ದೀರ. ಇಟ್ಟಿಗೆಗಳ ಮೇಲೂ ಹೆಂಚುಗಳ ಮೇಲೂ ಅದನ್ನು ತಯಾರಿಸಿದ ಕಾರ್ಖಾನೆಯ ಮಾರ್ಕ ಇರುತ್ತದೆ. ಅದನ್ನು ಹೇಗೆ ಹಾಕಿರುತ್ತಾರೆ ಗೊತ್ತೇ? ಇಟ್ಟಿಗೆ ಮತ್ತು ಹೆಂಚು ಇನ್ನೂ ಹಸಿಯಾಗಿರುವಾಗಲೇ ಅದರ ಮೇಲೆ ಸಂಸ್ಥೆಯ ಹೆಸರಿನ ಅಕ್ಷರಗಳ ಮಾರ್ಕ ಹಾಕಿಬಿಡುತ್ತಾರೆ. ಅದು ಇಟ್ಟಿಗೆ ಮತ್ತು ಹೆಂಚು ಒಣಗಿದ ನಂತರವೂ ಹಾಗೇ ಉಳಿಯುತ್ತದೆ ಮತ್ತು ಅದನ್ನು ಅಳಿಸಲು ಸಾಧ್ಯವಿಲ್ಲ. ಇಟ್ಟಿಗೆ ಮತ್ತು ಹೆಂಚು ಒಣಗಿದ ಮೇಲೆ ಎಷ್ಟು ಕಷ್ಟಪಟ್ಟರೂ ಹಾಗೆ ಮಾರ್ಕ ಹಾಕುವುದು ಸಾಧ್ಯವಿಲ್ಲ. ಇದನ್ನು ಅರಿತಿರುವ ಮಾಲೀಕ ಅವು ಇನ್ನೂ ಹಸಿಯಾಗಿರುವಾಗಲೇ ಮಾರ್ಕ ಹಾಕಿಬಿಡುತ್ತಾನೆ.
ಹಾಗೆಯೇ ಮಕ್ಕಳು ಇನ್ನೂ ಚಿಕ್ಕ ವಯಸ್ಸಿನವರಾಗಿರುವಾಗಲೇ ಅವರಿಗೆ ಅಧ್ಯಾತ್ಮದ ಮಾರ್ಕ ಹಾಕಿಬಿಟ್ಟರೆ ಅವರು ಬೆಳೆದು ಎಷ್ಟು ದೊಡ್ಡವರಾದ ಮೇಲೂ ಅದು ಅವರ ಮನದಲ್ಲಿ ಅಚ್ಚಳಿಯದೇ ಉಳಿದಿರುತ್ತದೆ. ಹೀಗಾಗಿ ಅಧ್ಯಾತ್ಮ ನಮ್ಮ ಜೀವನದ ಸಂಗಾತಿಯಾಗಿರಬೇಕು ಎಂದರೆ ನಮಗೆ ಚಿಕ್ಕ ವಯಸ್ಸಿನಿಂದಲೇ ಅಧ್ಯಾತ್ಮದ ಮಾರ್ಕ ಬಿದ್ದಿರಬೇಕು’ ಎಂದು ವಿವರಿಸಿದರು. ಇದನ್ನು ಕೇಳಿದ ಗುರುಕುಲದ ಮಕ್ಕಳಿಗೆ ಗುರುಗಳ ಮನದಾಳ ಅರ್ಥವಾಯಿತು ಹಾಗೂ ಅವರಲ್ಲಿ ಹೊಸ ಹೊಳ ಹೊಂದು ಮನದಲ್ಲಿ ಮೂಡಿತು. ಯಾವುದೇ ವಿಷಯ ಚಿಕ್ಕವರಿರುವಾಗ ಮನದಲ್ಲಿ ಸುಲಭವಾಗಿ ಅಚ್ಚೊತ್ತುತ್ತದೆ ಮತ್ತು ಅದನ್ನು ಜೀವನಪರ್ಯಂತ ಮರೆಯುವುದಿಲ್ಲ.
(ಲೇಖಕರು ಸಾಹಿತಿ)