ಸೋಲಿನಿಂದ ಪಾಠ ಕಲಿಯೋಣ: ಮನೋಲ್ಲಾಸ

Manollasa
Published on
| ನೇತ್ರಾ ಅಣ್ಣಿಗೇರಿ

ಮಹಾಭಾರತ ಯುದ್ಧದ ಕೊನೆಯ ಕೆಲವು ದಿನಗಳಲ್ಲಿ ಸಹಸ್ರಾರು ಶವಗಳ ರಾಶಿಯನ್ನು ನೋಡಿ ಹೌಹಾರಿದ ದ್ರೌಪದಿ ತನ್ನ ಐವರು ಪುತ್ರರ ಸಂಹಾರವನ್ನು ಕಂಡು ದುಃಖದಿಂದ ತತ್ತರಿಸಿ ಹೋದಳು. ಅಸಹನೀಯ ಸಂಕಟದಿಂದ ನರಳಾಡುತ್ತ, ರೋದಿಸುತ್ತ ಶ್ರೀಕೃಷ್ಣನನ್ನು ಪ್ರಶ್ನಿಸಿದಳು- ‘ಹೇ ಕೃಷ್ಣಾ! ಇದೇಕೆ ಹೀಗೆಲ್ಲ ಆಯಿತು? ಯಾಕಾಗಿ ಈ ಯುದ್ಧ ಆಯಿತು? ಇದಕ್ಕೆಲ್ಲ ನಾನೇ ಕಾರಣಳೇ? ಒಂದು ವೇಳೆ ನನಗೆ ತುಂಬಿದ ಸಭೆಯಲ್ಲಿ ಅವಮಾನ ಆಗದೆ ಇದ್ದಿದ್ದರೇ? ಪಾಂಡವರು ಜೂಜಾಡದೆ ಇದ್ದಿದ್ದರೇ? ದುರ್ಯೂೕಧನ ತನ್ನ ತೊಡೆ ತಟ್ಟಿರದಿದ್ದರೇ? ದುಶ್ಯಾಸನ ನನ್ನ ಸೀರೆ ಸೆಳೆಯದೆ ಇದ್ದಿದ್ದರೇ? ಸಭೆಯಲ್ಲಿದ್ದ ಹಿರಿಜೀವಗಳು ನನಗಾದ ಅವಮಾನ ಸಹಿಸದೆ ಇದ್ದಿದ್ದರೇ...? ಹೀಗೆ ‘....ರೆ’ ಎಂಬ ಅಸಂಖ್ಯ ಪ್ರಶ್ನೆಗಳನ್ನು ಹಾಕಿ ಕೃಷ್ಣನನ್ನು ಸಮಾಧಾನಕ್ಕಾಗಿ ಕೋರುತ್ತಾಳೆ.

ನಾವು ಸಹ ಇಂಥ ಪ್ರಸಂಗ, ಪ್ರಶ್ನೆಗಳಿಂದ ಪಾಠ ಕಲಿಯುವುದು ತುಂಬ ಇದೆ. ಮನುಷ್ಯ ಸಹಜವಾಗಿ ತನಗೆ ಎಲ್ಲವೂ ಒಳ್ಳೆಯದೇ ಆಗಬೇಕೆಂದು ಆಸೆ ಪಡುತ್ತಾನೆ. ದೊಡ್ಡ ಉದ್ದೇಶದಿಂದ ಯಾವುದೋ ಒಂದು ಕಾರ್ಯಕ್ಕೆ ಕೈ ಹಾಕಿ ವಿಫಲವಾದಾಗ, ‘ನಾನು ಈ ಸಾಹಸಕ್ಕೆ ಕೈ ಹಾಕಲೇಬಾರದಿತ್ತು’ ಎಂದು ನೊಂದುಕೊಳ್ಳುತ್ತಾನೆ. ಆದರೆ ಆ ವೈಫಲ್ಯದಿಂದ ಏನನ್ನು ಕಲಿತಿದ್ದೇನೆ ಎಂಬ ಅಂಶ ಪರಿಗಣಿಸದೆ ಹೋಗುತ್ತಾನೆ. ಅರ್ಥಾತ್, ಪ್ರತಿಯೊಂದು ಅಪಯಶ, ನಿರಾಸೆ ಇವು ಮುಂದಿನ ಮಹದೋದ್ದೇಶಕ್ಕೆ ಭದ್ರ ಬುನಾದಿಯಾಗುತ್ತವೆ ಮತ್ತು ಛಲ ಇನ್ನಷ್ಟು ತೀವ್ರವಾಗುತ್ತದೆ. ಪರಿಣಾಮ, ಹಿಂದಿನ ಪ್ರಯತ್ನದಲ್ಲಿ ಮಾಡಿದ ತಪು್ಪಗಳ ಸಂಖ್ಯೆ ಕಡಿಮೆಯಾಗಿ ಸಫಲತೆಯ ಮಾರ್ಗ ಸುಗಮವಾಗುತ್ತದೆ.

ಹಾಗೇ, ದ್ರೌಪದಿ ಹೇಳಿದ ಯಾವ ಘಟನೆಗಳೂ ಘಟಿಸದೆ ಇದ್ದಿದ್ದರೆ ಧರ್ಮಕ್ಕೆ ಜಯವಾಗುತ್ತಿತ್ತೇ? ಅವಳು ತನಗಾದ ಅವಮಾನವನ್ನಷ್ಟೇ ನುಂಗದೆ, ತನ್ನ ಪುತ್ರರ ನಿರ್ದಯ ಸಂಹಾರವನ್ನು ಸಹ ಸಹಿಸಿದಳು. ಅಧರ್ಮದ ಇನ್ನೊಂದು ಹೆಸರಾದ ದುರ್ಯೂೕಧನ ಮರಣಿಸಬೇಕಾದರೆ ಇವೆಲ್ಲವೂ ನಡೆಯಲೇಬೇಕಾಗಿತ್ತು ಎಂಬುದು ಸತ್ಯವೇ ಅಲ್ಲವೇ? ಇಂದಿನ ಆಧುನಿಕ ಜೀವನಶೈಲಿಯ ವೇಗದಲ್ಲಿ ನಮಗೆ ಮುಂದೆ ಹೋಗದೆ ವಿಧಿಯಿಲ್ಲ. ಹಿಂದಿರುಗಿ ನೋಡುವ ಅವಶ್ಯಕತೆಯಿಲ್ಲವೇ ‘ಇಲ್ಲ’ ಎನ್ನುವುದುಂಟು ಹಲವರು. ಆದರೆ ಮನುಷ್ಯ ತನ್ನ ಅನುಭವಗಳಿಂದ ಮಾತ್ರ ಕಲಿಯುವುದಲ್ಲ, ತನ್ನ ಸುತ್ತಮುತ್ತಲಿನವರಿಂದ, ಬಂಧು-ಬಾಂಧವರಿಂದ, ಅಪರಿಚಿತರಿಂದ, ಅವರ ಅನುಭವಗಳಿಂದ ಸಹ ತನ್ನ ನಡೆಯನ್ನು ತಿದ್ದಬಹುದಾಗಿದೆ! ಪಾಲಕರು ನಮ್ಮನ್ನು ಸಲುಹಲು ಕಷ್ಟಪಡದೇ ಇದ್ದಿದ್ದರೆ? ಕಿವಿ ಹಿಂಡಿ, ಛಡಿ ಏಟು ಬೀಸಿ ಗುರುಗಳು ನಮ್ಮನ್ನು ಅಂದು ತಿದ್ದದೇ ಇದ್ದಿದ್ದರೆ? ಇವುಗಳ ಪರಿಣಾಮ ಊಹಿಸಲೂ ಅಸಾಧ್ಯ. ಮುತ್ತಿನಂಥ ಒಂದು ಮಾತಿದೆ- ‘ಕಠಿಣ ಹಾದಿಗಳು ಯಾವಾಗಲೂ ಸುಂದರ ತಾಣವನ್ನೇ ಸೇರುತ್ತವೆ’ ಅಂತ. ಎಷ್ಟು ನಿಜವಲ್ಲವೇ? ಈ ಕಠಿಣ ಪರಿಶ್ರಮ, ತಪಸ್ಸು ಮುಂತಾದವುಗಳು ನಮ್ಮ ಯಶಸ್ಸಿಗೆ ಮಾತ್ರ ಕಾರಣವಾಗದೆ, ಇತರರ ಉತ್ಕರ್ಷಕ್ಕೂ ನೆರವಾಗುತ್ತವೆ. ಆದ್ದರಿಂದ ಭೂತಕಾಲದ ಸಿಹಿ, ಕಹಿ ಎರಡೂ ಅನುಭವಗಳಿಂದ, ವರ್ತಮಾನವನ್ನು ಸ್ಪುಟಗೊಳಿಸಿ, ಸತ್ಕಾರ್ಯದಲ್ಲಿ ಸಂತೋಷ ಕಂಡು, ಭವಿಷ್ಯವನ್ನು ಸುಂದರವಾಗಿಸುವುದೇ ಮನುಷ್ಯ ಧರ್ಮ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net