

| ಬೇಲೂರು ರಾಮಮೂರ್ತಿ
ಅಂದು ಗುರುಕುಲದಲ್ಲಿ ಪಾಠ ಮುಗಿದ ಮೇಲೆ ಶಿಷ್ಯರೆಲ್ಲ ಹೊರಡುವ ತಯಾರಿಯಲ್ಲಿದ್ದಾಗ ಗುರುಗಳು ಎಲ್ಲರನ್ನೂ ಕುಳಿತುಕೊಳ್ಳುವಂತೆ ಸಂಜ್ಞೆ ಮಾಡಿದರು. ‘ನೀವು ಬೆಳೆಯುತ್ತಾ ಹೋದಂತೆ ಚೆನ್ನಾಗಿ ಮುಸುರೆ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದು ಹೇಗಿರಬೇಕು ಎಂದರೆ ‘ಹೊರಗೆ ತೊಳೆಯದಿದ್ದರೆ ಮಸಿ ಒಳಗೆ ತೊಳೆಯದಿದ್ದರೆ ಮುಸುರೆ ಎನ್ನುವಂತಾಗಬಾರದು’ ಎಂದರು. ಶಿಷ್ಯರಿಗೆ ಮುಸುರೆ ತೊಳೆಯುವ ಕೆಲಸ ಹೊಸದು. ಅವರೆಲ್ಲ ಮತ್ತೆ ಗುರುಗಳ ಮಾತಿಗೆ ಕಾದರು. ಗುರುಗಳು ‘ನಾನು ಹೇಳಿದ್ದು ಪಾತ್ರೆಯ ಮುಸುರೆಯಲ್ಲ, ನಿಮ್ಮ ನಿಮ್ಮ ದೇಹದ ಮುಸುರೆ’ ಎಂದರು. ಶಿಷ್ಯರಿಗೆ ದೇಹಕ್ಕೆ ಮುಸುರೆ ಎಂದರೆ ಏನು ಅಂತ ಗೊಂದಲ. ಅದನ್ನೂ ಗುರುಗಳ ಉಪದೇಶದಿಂದಲೇ ಅರಿಯಬೇಕು ಅಂತ ಕಾದರು. ಗುರುಗಳು ದೀರ್ಘ ಶ್ವಾಸ ಬಿಟ್ಟು ವಿವರಿಸಿದರು:
‘ಸಾಮಾನ್ಯವಾಗಿ ಎಲ್ಲರೂ ತಮ್ಮ ದೇಹವನ್ನು ಹೊರಗಿನಿಂದ ತೊಳೆದು ಸ್ವಚ್ಛ ಮಾಡಿ ಶುಭ್ರ ಬಟ್ಟೆಗಳನ್ನು ಹಾಕಿಕೊಂಡು ತಾವು ಶುದ್ಧರು ಎನ್ನುತ್ತಾರೆ. ಆದರೆ ಯಾರೂ ಒಳಗೆ ತೊಳೆಯುವುದು ಹೇಗೆ ಎಂದು ಯೋಚಿಸುವುದಿಲ್ಲ. ದೇಹವನ್ನು ಹೊರಗೆ ಬೆಳೆಸಿಕೊಂಡರೆ ಪ್ರಯೋಜನವಿಲ್ಲ ಒಳಗೂ ಬೆಳೆಸಬೇಕು. ನಿಮಗೆಲ್ಲ ಜೀವನದಲ್ಲಿ ಯಶಸ್ಸು ದೊರೆಯಬೇಕು ಎಂದರೆ ನಿಮ್ಮ ದೇಹವನ್ನು ಒಳಗಿನಿಂದ ತೊಳೆಯಬೇಕು. ದೇಹವನ್ನು ಹೊರಗಿನಿಂದ ಚೆನ್ನಾಗಿ ನೋಡಿಕೊಂಡರೆ ಆರೋಗ್ಯವಾಗಿರುತ್ತದೆ. ದೇಹವನ್ನು ಒಳಗಿನಿಂದ ಚೆನ್ನಾಗಿ ನೋಡಿಕೊಂಡರೆ ಶ್ರದ್ಧೆ ಮೂಡುತ್ತದೆ. ದೇಹವು ಒಳಗೆ ಬೆಳೆಯುವುದು ಬೇರೆ ಹೊರಗೆ ಬೆಳೆಯುವುದು ಬೇರೆ. ನೀವು ಶರೀರಕ್ಕೆ ಸ್ನಾನ, ಶುದ್ಧಿ ಮಾಡಿಸದಿದ್ದರೆ ದುರ್ನಾತ ಹೊಡೆಯುತ್ತದೆ. ಒಳಗಿನಿಂದ ಸ್ನಾನ, ಶುಚಿ ಮಾಡಿಸದಿದ್ದರೆ ಆಗಲೂ ದುರ್ವಾಸನೆ ಬರುತ್ತದೆ. ಚಿಂತನೆಯ ದುರ್ವಾಸನೆ, ತೀರ್ವನಗಳ ದುರ್ವಾಸನೆ, ಕೋಪದ ದುರ್ವಾಸನೆ, ಕೆಟ್ಟ ನಡವಳಿಕೆಗಳ ದುರ್ವಾಸನೆ ಹೀಗೆ. ದೇಹವನ್ನು ಒಳಗಿನಿಂದ ಶುಚಿ ಮಾಡಿಕೊಂಡರೆ ಮಾಡುವ ಎಲ್ಲ ಕೆಲಸಗಳಲ್ಲೂ ತಾದಾತ್ಮ್ಯ ಬೆಳೆಯುತ್ತದೆ. ಈ ದೇಹವೆಂದರೆ ನಾನು ಎನ್ನುವುದು ಹೋಗಿ ಈ ಮನಸ್ಸು ಎಂದರೆ ನಾನು ಎನ್ನುವುದು ಬರುತ್ತದೆ. ಈ ದೇಹ ಒಳಗಿನಿಂದ ಶುದ್ಧಿಯಾಗದ ಹೊರತು ಶ್ರೇಯೋಮಾರ್ಗವೇ ಕಾಣುವುದಿಲ್ಲ. ಶ್ರದ್ಧೆ ಎಂದರೆ ದಪ್ಪ ದಪ್ಪ ಬಂಡೆಗಳ ನಡುವಿನಲ್ಲಿ ಬೆಳೆಯುವ ಹುಲ್ಲು. ನಮ್ಮ ಅಂತರಂಗದಲ್ಲಿ ಹುಟ್ಟುವ ಶ್ರದ್ಧೆಯೂ ಇದೇ. ಬಂಡೆಗಳ ನಡುವೆ ಬೆಳೆಯುವ ಹುಲ್ಲು ಕಷ್ಟಪಟ್ಟು ಆಚೆ ಬಂದು ಸೂರ್ಯನನ್ನು ಕಾಣುವಂತೆ ಅಂತರಂಗದಲ್ಲಿ ಹುಟ್ಟಿದ ಶ್ರದ್ಧೆ ಎಲ್ಲ ಅಡೆತಡೆಗಳನ್ನೂ ದಾಟಿ ಯಶಸ್ಸು ಎನ್ನುವ ಸೂರ್ಯನನ್ನು ಕಾಣುತ್ತದೆ. ಅದರಿಂದಾಗಿಯೇ ನೀವು ದೇಹವನ್ನು ಹೊರಗಿನಿಂದಲೂ ಶುಚಿ ಮಾಡಿಕೊಂಡು ಒಳಗಿನಿಂದಲೂ ಶುಚಿ ಮಾಡಿಕೊಂಡು ಅಧ್ಯಾತ್ಮದ ದಾರಿಯತ್ತ ಹೆಜ್ಜೆ ಇಡಬೇಕು’.
ನಾವೂ ನಮ್ಮ ಜೀವನದಲ್ಲಿ ಬಹಿರಂಗ ಶುದ್ಧಿಯಷ್ಟೇ ಅಂತರಂಗ ಶುದ್ಧಿಗೂ ಮಹತ್ವ ಕೊಟ್ಟು ನಮ್ಮ ಚಿಂತನೆ, ನಡೆ, ನುಡಿಯಲ್ಲಿ ಇತ್ತ ಹೊರಗೆ ಮಸಿಯೂ ಇಲ್ಲದಂತೆ ಒಳಗೆ ಮುಸುರೆಯೂ ಇಲ್ಲದಂತೆ ದೇಹಾತ್ಮಗಳನ್ನು ಶುಚಿಯಾಗಿಟ್ಟುಕೊಳ್ಳುವುದರತ್ತ ಸದಾ ಗಮನ ವಹಿಸಿದರೆ ಬದುಕು ಸಾರ್ಥಕ.
(ಲೇಖಕರು ಸಾಹಿತಿ)