ಪರಮಲಕ್ಷ್ಯದ ಕಡೆಗೆ ಹೆಜ್ಜೆ; ಮನೋಲ್ಲಾಸ

Manollasa
Published on
| ರಾಘವೇಂದ್ರ ಉರಳ್ ಕೆ.ಆರ್.

ಆ ಸಣ್ಣ ಕುಟುಂಬ, ಸಾಗರ ತೀರದ ಗ್ರಾಮದಲ್ಲಿ ವಾಸವಾಗಿತ್ತು. ಆ ಕುಟುಂಬದವರು ಬೆಳಗ್ಗೆ ಬೇಗ ಎದ್ದು ಸಮುದ್ರದಲ್ಲಿ ಮೀನು ಹಿಡಿಯಲು ಹೋಗುತ್ತಿದ್ದರು. ಮಧ್ಯಾಹ್ನದವರೆಗೆ ಮೀನು ಹಿಡಿದು, ಅದನ್ನು ಹತ್ತಿರದ ಮಾರುಕಟ್ಟೆಯಲ್ಲಿ ಮಾರಾಟಮಾಡಿ, ಊಟಕ್ಕೆ ಮನೆಗೆ ಬರುತ್ತಿದ್ದರು. ಊಟ ಆದ ನಂತರ, ಸಂಜೆಯವರೆಗೆ ಸಮುದ್ರತೀರದಲ್ಲಿ ತಮ್ಮ ಸಂಸಾರದೊಂದಿಗೆ ಆನಂದ ಹಾಗೂ ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದರು.

ಒಮ್ಮೆ ದೂರದ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಸಂಬಂಧಿಕ ಇವರ ಮನೆಗೆ ಬಂದ. ಅವನು ಈ ಕುಟುಂಬದವರ ದಿನಚರಿಯನ್ನು ಗಮನಿಸತೊಡಗಿದ. ಪಟ್ಟಣದಲ್ಲಿ ನಾನಾ ಕಾರಣದಿಂದ ಹಗಲೂ ರಾತ್ರಿ ದುಡಿಯುತ್ತಿದ್ದ ಅವನಿಗೆ ಈ ಕುಟುಂಬದವರ ಮೇಲೆ ಕನಿಕರ. ಅವರಿಗೆ ಸಲಹೆ ಕೊಟ್ಟ- ‘ನೀವೆಲ್ಲ ನಿಮ್ಮ ಜೀವನವನ್ನು ವ್ಯರ್ಥ ಮಾಡುತ್ತಿದ್ದೀರಿ. ಕೇವಲ ಮಧ್ಯಾಹ್ನದವರೆಗೆ ಕೆಲಸ ಮಾಡುವುದರಿಂದ ಸ್ವಲ್ಪ ಮಾತ್ರ ಮೀನು ಸಿಗುತ್ತದೆ; ಆದ್ದರಿಂದ ಕಡಿಮೆ ಹಣ ಸಿಗುತ್ತದೆ. ಒಂದು ವೇಳೆ ಸಂಜೆಯವರೆಗೆ ಮೀನು ಹಿಡಿದು ದೊಡ್ಡ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಹೆಚ್ಚು ಹಣ ಮಾಡಬಹುದು, ಹೀಗೆ ಹೆಚ್ಚು ಹಣ ಬರುವುದರಿಂದ ಮುಂದೆ ದೊಡ್ಡ ಹಡಗನ್ನು ಖರೀದಿಸಬಹುದು. ಅದರಿಂದ ಇನ್ನೂ ಆಳದ ಸಮುದ್ರಕ್ಕೆ ಹೋಗಿ ಹೆಚ್ಚು ಮೀನು ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೀನು ಮಾರಿ ಕೋಟಿಗಟ್ಟಲೆ ಹಣ ಮಾಡಬಹುದು. ಅದರಿಂದ ನಿಮ್ಮದೇ ಆದ ದೊಡ್ಡ ಬಂಗಲೆ ಖರೀದಿಸಿ ನಿಮ್ಮ ಸಂಸಾರದೊಂದಿಗೆ ಆನಂದ ಹಾಗೂ ನೆಮ್ಮದಿಯಿಂದ ಬದುಕಬಹುದು’ ಎಂದು ಹೇಳಿದ. ಇಷ್ಟೆಲ್ಲ ಮಾಡುವುದು ನೆಮ್ಮದಿ ಹಾಗೂ ಆನಂದಕ್ಕಾಗಿ ಎಂದಾದರೆ ನಾವು ಈಗಾಗಲೇ ಆ ನೆಮ್ಮದಿ, ಆನಂದವನ್ನು ಅನುಭವಿಸುತ್ತಿದ್ದೇವಲ್ಲ ಎಂದು ಆ ಮನೆಯವರು ಆಶ್ಚರ್ಯದಿಂದ ಕೇಳಿದರು.

ಹೀಗೆ ನಮ್ಮೊಳಗೇ ಐವರು ಸಂಬಂಧಿಕರಿದ್ದಾರೆ. ಇವೇ ನಮ್ಮ ಪಂಚೇಂದ್ರಿಯಗಳು. ಎಷ್ಟೋ ಬಾರಿ ಅವರು ತೋರಿಸುವ ಆಮಿಷಗಳು ನಮ್ಮನ್ನು ನಮ್ಮ ಜೀವನದ ಪರಮ ಗುರಿಯಿಂದ ದೂರ ಮಾಡಿಬಿಡುತ್ತವೆ. ಜೀವನದ ತುತ್ತತುದಿಯಲ್ಲಿ ಬೆಳಗುತ್ತಿರುವ ಜ್ಯೋತಿಯೊಡನೆ ಒಂದಾಗುವುದೇ ಜೀವನದ ಪರಮ ಲಕ್ಷ್ಯ ಎಂದು ಸನಾತನಾರ್ಯ ಭಾರತದ ಮಹರ್ಷಿಗಳು ಸಾರಿ ಹೇಳಿದ್ದಾರೆ. ಹೇಗೆ 18 ವರ್ಷವಾದ ತಕ್ಷಣ ನಮಗೆ ಮತ ಹಾಕಲು ಹಕ್ಕು ಬರುತ್ತದೆಯೋ, ಅದೇ ರೀತಿ ಮಾನವ ಜನ್ಮ ಬಂದ ಕೂಡಲೇ ಆ ಬ್ರಹ್ಮಾನಂದದ ಸ್ಥಿತಿಯನ್ನು ಹೊಂದಲು ಹಕ್ಕು ಬಂದಂತೆ ಎಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು.

ಭಗವಂತನ ಅನುಗ್ರಹದಿಂದ ಮಾನವ ಜನ್ಮ ಬಂದಾಗಿದೆ. ಇನ್ನು ಪರಮಲಕ್ಷ್ಯದ ಕಡೆಗೆ ಹೆಜ್ಜೆ ಇಡುವುದಷ್ಟೇ ಬಾಕಿ ಇದೆ. ಆದ್ದರಿಂದ ಇಂದ್ರಿಯಗಳ ಗುಲಾಮರಾಗಿ ಅವುಗಳು ತೋರುವ ಆಮಿಷಗಳಿಂದ ದಾರಿ ತಪ್ಪದೆ, ಅವನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡು ಪರಮಗುರಿಯನ್ನು ಇದೇ ಜನ್ಮದಲ್ಲಿ ಪಡೆಯಲು ಆಶಿಸೋಣ.

(ಲೇಖಕರು ಸಾಫ್ಟ್​​ವೇರ್ ಇಂಜಿನಿಯರ್​, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net