ಜೀವನಪ್ರೀತಿ ಇರಲಿ: ಮನೋಲ್ಲಾಸ

Manollasa
Published on
| ಭಾರತಿ ಎ. ಕೊಪ್ಪ

ಒಂದು ಊರಿನಲ್ಲಿ ಒಬ್ಬ ಮಹಾ ಧನಿಕನಿದ್ದ. ಅಲ್ಲಿ ಎಲ್ಲರಿಗಿಂತ ಆತನೇ ಬಹಳ ಶ್ರೀಮಂತನಾಗಿದ್ದ ರಿಂದ ಅವನಿಗೆ ಅದ್ದೂರಿ ಜೀವನದ ಬಯಕೆ ಹೆಚ್ಚುತ್ತಲೇ ಇತ್ತು. ಆತನಿಗೆ ತಾನು ವಾಸಿಸುತ್ತಿರುವ ಮನೆ ತನ್ನ ಘನತೆಗೆ ತಕ್ಕಂತಿಲ್ಲ, ಹೊಸ ಮನೆ ಕಟ್ಟಿಸಬೇಕು ಎಂಬ ಯೋಚನೆ ಬಂದಿತು. ವಾಸವಿರುವ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಿಸಲು ಪ್ರಾರಂಭಿಸಿದ. ಕೆಲವೇ ತಿಂಗಳುಗಳಲ್ಲಿ ಎಲ್ಲರ ಗಮನ ಸೆಳೆಯುವಂತಹ ಮನೆ ನಿರ್ವಣವಾಯಿತು. ಧನಿಕನು ತನ್ನ ಮನೆಯಷ್ಟು ಚಂದದ ಮನೆ ಈ ಊರಿನಲ್ಲಿ ಬೇರಾರದೂ ಇಲ್ಲವೆಂದು ಹೆಮ್ಮೆಯಿಂದ ಬೀಗುತ್ತಿದ್ದನು.

ಆಕಸ್ಮಿಕವಾಗಿ ಆ ಊರಿಗೆ ಹೊಸ ವ್ಯಕ್ತಿಯೊಬ್ಬ ಆಗಮಿಸಿದ. ಈ ಧನಿಕನ ಮನೆಯ ಪಕ್ಕದ ಜಾಗವನ್ನೇ ಖರೀದಿಸಿದ. ಆ ವ್ಯಕ್ತಿಗೂ ಹಣದ ಕೊರತೆ ಇರಲಿಲ್ಲ. ಅವನು ಒಂದು ಬೃಹತ್ ಬಂಗಲೆಯನ್ನೇ ನಿರ್ವಿುಸಿದ. ಅಷ್ಟರಲ್ಲಿ ಈ ಧನಿಕನಿಗೂ ಮನದಲ್ಲಿ ಬಂಗಲೆಯ ಆಸೆ ಗರಿಗೆದರಿತು. ತನ್ನ ಈ ಮನೆಯನ್ನೂ ಬೀಳಿಸಿ ಹೊಸದಾದ ಬೃಹತ್ ಬಂಗಲೆ ಕಟ್ಟಿಸಲು ತೀರ್ವನಿಸಿದ. ತನ್ನ ಮನೆಯನ್ನು ಕೆಡುಹಲು ಹೋದ. ತಾನು ಪ್ರೀತಿಯಿಂದ ಕಟ್ಟಿಸಿದ ಮನೆ ಆತನಿಗೆ ಹೇಳಿತು, ‘ಹೊಸದಾಗಿ ಕಟ್ಟಿಸಿದಾಗ ನೀನು ನನ್ನನ್ನು ಎಷ್ಟೊಂದು ಇಷ್ಟಪಡುತ್ತಿದ್ದೆ. ನನಗಾಗಿ ಮೊದಲು ಗಟ್ಟಿಮುಟ್ಟಾಗಿಯೇ ಇದ್ದ ಮನೆಯನ್ನು ಕೆಡವಿದೆ. ಅಂದು ಆ ಮನೆ ಹಳೆಯದೆನಿಸಿದಂತೆ, ಇಂದು ಕೆಲವೇ ವರ್ಷಗಳಲ್ಲಿ ನಾನು ನಿನಗೆ ಹಳೆಯದಾಗಿ ಕಾಣುತ್ತಿದ್ದೇನೆ. ನೀನು ಮತ್ತೊಂದು ಮನೆ ಕಟ್ಟಿದರೂ ಅದೂ ಮುಂದೊಂದು ದಿನ ಹಳೆಯದೆನಿಸುತ್ತದೆ. ವಿಚಾರ ಮಾಡು. ಗಟ್ಟಿಮುಟ್ಟಾಗಿರುವ ನನ್ನನ್ನು ಕೆಡುಹಬೇಡ’ ಎಂದಿತು. ಆದರೆ, ಧನಿಕನಿಗೆ ಮನೆಯ ಕಿವಿಮಾತು ರುಚಿಸಲಿಲ್ಲ. ಮನೆಯನ್ನು ಕೆಡವಿಯೇ ಬಿಟ್ಟ. ಇದ್ದಕ್ಕಿದ್ದಂತೆ ಧನಿಕನ ವ್ಯವಹಾರಗಳು ಹಿನ್ನಡೆ ಕಾಣತೊಡಗಿದವು. ಹೊಸ ಮನೆ ಕಟ್ಟಿಸುವ ಸಲುವಾಗಿ ವಾಸವಿದ್ದ ಬಾಡಿಗೆ ಮನೆಯಲ್ಲೇ ಬಹಳ ದಿನ ಕಾಲ ತಳ್ಳುವಂತಾಯಿತು. ವರ್ಷಗಳೇ ಉರುಳಿದರೂ ವ್ಯವಹಾರ ಚೇತರಿಕೆ ಕಾಣಲಿಲ್ಲ. ಬಂಗಲೆಯ ಕನಸು ನನಸಾಗಲಿಲ್ಲ. ಮನೆ ಕೆಡಹುವಾಗ ತನ್ನ ಹಳೇ ಮನೆ ಹೇಳಿದ ವಿವೇಕದ ಮಾತುಗಳು ಕಿವಿಯಲ್ಲಿ ರಿಂಗಣಿಸುತ್ತಿದ್ದವು. ಮನಸ್ಸು ದುಃಖಿತವಾಗಿತ್ತು. ಮನುಷ್ಯನ ಜೀವನವೇ ಈ ಧನಿಕನಂತೆ ಒಂದು ಅತೃಪ್ತಿಯ ಮೂಟೆ ಇದ್ದಂತೆ. ಎಷ್ಟೇ ಸಂತಸ, ಸಂಪತ್ತನ್ನು ನಮ್ಮದಾಗಿಸಿಕೊಂಡರೂ, ಇನ್ನೊಬ್ಬರ ಸಂಪತ್ತನ್ನು ನೋಡಿ ಮತ್ತಷ್ಟನ್ನು ತನ್ನದಾಗಿಸಿಗೊಳ್ಳುವ ಅತಿ ಆಸೆಯತ್ತ ಚಿತ್ತ ಹೊರಳುತ್ತದೆ. ಇರುವ ಸುಖ-ಸಂತೋಷ ನಿರ್ಲಕ್ಷಿಸಿ, ಬೇರೆಯವರೊಂದಿಗೆ ತುಲನೆ ಮಾಡಿಕೊಳ್ಳುತ್ತ ಜೀವನ ಸಾಗಿಸಿದರೆ ದುಃಖ ಕಟ್ಟಿಟ್ಟ ಬುತ್ತಿ.

ಬಂದುದನೆ ತಾ ಹಾಸಿ| ಬಂದುದನೆ ತಾ ಹೊದೆದು/ ಬಂದುದನೆ ಮೆಟ್ಟಿ ನಿಂತರೆ- ವಿಧಿ ಬಂದು/ ಮುಂದೇನ ಮಾಳ್ಕು ಸರ್ವಜ್ಞ||

ಎಂಬ ಸರ್ವಜ್ಞನ ವಚನದ ಸಾಲುಗಳಂತೆ, ನಮ್ಮ ಜೀವನದಲ್ಲಿ ಒದಗಿಬಂದ ಸುಖ-ಸಂಪತ್ತು, ಒಳಿತು-ಕೆಡುಕು ಎಲ್ಲವನ್ನು ನಮ್ಮದೆಂದು ಸ್ವೀಕರಿಸಿ, ಬಂದ ಸಮಸ್ಯೆಗಳನ್ನೂ ಮೆಟ್ಟಿ ನಿಂತರೆ, ಯಾವ ವಿಧಿಯೂ ಮುಂದೆ ನಮ್ಮನ್ನು ಏನು ಮಾಡಲೂ ಸಾಧ್ಯವಿಲ್ಲ.

(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net