ಮನೋಲ್ಲಾಸ | ಇಚ್ಛಾಶಕ್ತಿ ಎಂಬ ಮದ್ದು

Manollasa F
Published on

| ಡಾ.ಗಣಪತಿ ಆರ್. ಭಟ್

‘ಉದಯಿಸುವ ಸೂರ್ಯನನ್ನು ನಿತ್ಯವೂ ನೋಡುತ್ತಲಿ ದ್ದರೆ ತೇಜೋಮಯನಾಗುತ್ತಿಯಾ’ ಎಂಬ ಗುರುಗಳ ಮಾತಿನಿಂದ ಉತ್ತೇಜಿತನಾಗಿ ಯುವಕ ನೋರ್ವ ಪ್ರತಿದಿನ ಸೂರ್ಯೋದಯಕ್ಕಿಂತಲೂ ಮುಂಚೆಯೇ ಮನೆಯಿಂದ ಹೊರಟು ಊರ ಹೊರಭಾಗದ ಎತ್ತರದ ಬಂಡೆಯೇರಿ ಸೂರ್ಯನ ಕಡೆಗೆ ಮುಖಮಾಡಿ ಕುಳಿತುಕೊಳ್ಳಲಾರಂಭಿಸಿದ. ಆತನ ಆರಂಭಿಕ ಉತ್ಸಾಹ ಹೇಗಿತ್ತೆಂದರೆ ಮೊದ ಮೊದಲು ಸೂರ್ಯೋದಯಕ್ಕಿಂತ ಬಲು ಮುಂಚಿತವಾಗಿಯೇ ನಿಗದಿತ ಜಾಗ ತಲುಪಿ ಸೂರ್ಯೋದಯಕ್ಕಾಗಿ ಕಾಯುತ್ತಿದ್ದ. ತೇಜಸ್ವಿಯಾಗಲು ಎಷ್ಟು ಸರಳ ಕಾರ್ಯವಿದು ಎನಿಸಿತವನಿಗೆ. ಅದೊಂದು ದಿನ ಇದ್ದಕ್ಕಿದ್ದಂತೆ ಕಾಲುನೋವು ಬಂದು ಬಂಡೆಯೇರಲಾಗಲಿಲ್ಲ. ಅದಾದ ಬಳಿಕ ಇನ್ನೆರಡು ದಿನ ಅನ್ಯ ಕಾರ್ಯವು ಬಂದೊದಗಿ ಸೂರ್ಯೋದಯ ಕಾಣಲಾಗಲೇ ಇಲ್ಲ. ಕ್ರಮೇಣ ‘ಸೂರ್ಯೋದಯ ಮನೆಯ ಅಂಗಳದಲ್ಲಿ ನಿಂತರೂ ಕಾಣುತ್ತದೆಯಲ್ಲ, ಅದಕ್ಕೆ ತಾನೇಕೆ ಅಷ್ಟು ಪ್ರಯಾಸ ಪಡಬೇಕು’ ಎಂದವನಿಗನಿಸತೊಡಗಿತು. ಸ್ವಲ್ಪದಿನವಾದ ಮೇಲೆ ‘ತಡವಾಗಿ ಎದ್ದರೂ ತೊಂದರೆಯಿಲ್ಲ ಸೂರ್ಯನ ಶಾಖ ಹೇಗಿದ್ದರೂ ಮನೆಯ ಒಳಗೇ ಬರುವುದು’ ಎಂದೆನಿಸಿತು. ಆರಂಭದಲ್ಲಿ ಅವನಲ್ಲಿದ್ದ ಉತ್ಸಾಹ, ಆಲೋಚನೆ ಎಲ್ಲವೂ ಬದಲಾಗುತ್ತ ಕೊನೆಗೆ ಗುರುಗಳ ಉಪದೇಶವನ್ನು ಅವನಿಗೆ ಪಾಲಿಸಲಾಗಲೇ ಇಲ್ಲ. ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡು ಕಾರ್ಯಾರಂಭ ಮಾಡಿದರೂ ಇಚ್ಛಾಶಕ್ತಿಯ ಕೊರತೆ ಕಾರ್ಯವನ್ನು ಬಾಧಿಸುವುದು.

ಏಕಲವ್ಯನು ಬೇಡರ ಪಾಳಯದಲ್ಲಿ ಬೆಳೆದ ಹುಡುಗ. ಬಿಲ್ವಿದ್ಯೆಯನ್ನು ಶಾಸ್ತ್ರೋಕ್ತವಾಗಿ ಕಲಿಯಬೇಕೆಂಬ ಇಚ್ಛೆ ಅವನಲ್ಲಿ ಉತ್ಕಟವಾಗಿತ್ತು. ಆಸೆಪಟ್ಟು ಆಚಾರ್ಯ ದ್ರೋಣರ ಬಳಿ ಹೋದ. ಆದರೆ ತಿರಸ್ಕೃತನಾದ. ನಿರಾಶನಾಗಲಿಲ್ಲ. ಕೇವಲ ದ್ರೋಣರ ಮೂರ್ತಿಯನ್ನೇ ತನ್ನ ಮುಂದಿರಿಸಿಕೊಂಡು ಅನುಪಮವಾದ ಕಲೆಯನ್ನು ಕರಗತ ಮಾಡಿಕೊಂಡ. ಅಮೂರ್ತ ರೂಪದಲ್ಲಿರುವ ನಮ್ಮ ಸಂಕಲ್ಪಗಳು ಸಾಧನೆಯಾಗಿ ಪರಿವರ್ತಿತಗೊಳ್ಳಲು ಇಚ್ಛಾಶಕ್ತಿಯೇ ಬೇಕು. ಕಪಿಲಮುನಿಯ ಕೋಪಾಗ್ನಿಗೆ ತುತ್ತಾಗಿ ಭಸ್ಮವಾಗಿದ್ದ ಸಗರಪುತ್ರರಿಗೆ ಸದ್ಗತಿ ದೊರಕಿಸುವ ಸಲುವಾಗಿ ಸ್ವರ್ಗ ಲೋಕದಿಂದ ಗಂಗೆಯನ್ನು ತರಬೇಕೆಂಬ ಸಂಕಲ್ಪ ಎರಡು ತಲೆಮಾರುಗಳಿಂದ ಸೂರ್ಯವಂಶದಲ್ಲಿ ಹಾಗೆಯೇ ಉಳಿದಿತ್ತು. ಕೊನೆಗೆ ಭಗೀರಥನು ತಾಳ್ಮೆ, ಮುತುವರ್ಜಿಗಳನ್ನು ವಹಿಸಿ ತಪವ ಗೈದು, ಅಡೆತಡೆಗಳನ್ನು ನಿವಾರಿಸುತ್ತ ಗಂಗೆಯನ್ನು ಕರೆತಂದು ತನ್ನ ಪಿತೃಗಳ ಆತ್ಮವನ್ನು ಉದ್ಧರಿಸಿದ. ತನ್ನ ಪಿತಾಮಹನಾದ ಅಂಶುಮಂತನ ಸಂಕಲ್ಪವನ್ನು ಪೂರ್ಣಗೊಳಿಸಿದ. ಸಂಕಲ್ಪ ಸಿದ್ಧಿಸಲು ನಮ್ಮ ಇಚ್ಛಾಶಕ್ತಿ ಬಲವಾಗಿರಬೇಕು. ಯಾಕೆಂದರೆ ಅನೇಕ ಬಾರಿ ನಮ್ಮ ತಾಳ್ಮೆಯ ಪರೀಕ್ಷೆಯೂ ಆಗುವುದು. ಅಂದುಕೊಂಡ ಹಾಗೇ ಕಾರ್ಯವನ್ನು ಮಾಡಲೇ ಬೇಕೆಂಬ ಹಠ ಮನಸ್ಸಿನಲ್ಲಿ ಇದ್ದರೆ ಯಾವುದು ತಾನೇ ಅಸಾಧ್ಯ? ಕವಿ ಭಾಸನ ಉಕ್ತಿಯೊಂದು ಇಲ್ಲಿ ಗಮನಾರ್ಹ:

ಕಾಷ್ಟಾದಗ್ನಿರ್ಜಾಯತೇ ಮಥ್ಯಮಾನಾದ್ ಭೂಮಿಸ್ತೋಯಂ ಖನ್ಯಮಾನಾ ದದಾತಿ| ಸೋತ್ಸಾಹಾನಾಂ ನಾಸ್ತ್ಯಸಾಧ್ಯಂ ನರಾಣಾಂ ಮಾರ್ಗಾರಬ್ಧಾಃ ಸರ್ವಯತ್ನಾಃ ಫಲಂತಿ|| ಜೋರಾಗಿ ಉಜ್ಜಿ ಒಣ ಕಟ್ಟಿಗೆಯಿಂದಲೂ ಬೆಂಕಿಯನ್ನು ಹೊತ್ತಿಸಬಹುದು. ಆಳದವರೆಗೆ ಅಗೆದರೆ ಭೂಮಿಯು ನೀರನ್ನು ಕೊಡುವುದು. ಉತ್ಸಾಹವೊಂದಿದ್ದರೆ ಮನುಷ್ಯನಿಗೆ ಅಸಾಧ್ಯವೆಂಬುದೇ ಇಲ್ಲ. ಮಾಡ ಹೊರಟ ಕಾರ್ಯಗಳೆಲ್ಲವೂ ಸಫಲವಾಗುತ್ತವೆ. ಸಂಕಲ್ಪ ತೊಡುವಾಗ ಇಚ್ಛಾಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೂ ಅವಶ್ಯಕವೆಂಬುದನ್ನು ಮರೆಯದಿರೋಣ.

(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net