ಸುಖ ತಂದ ದುಃಖಿತಳ ಮಾತು: ಮನೋಲ್ಲಾಸ

Manollasa
Published on
| ದೀಪಶ್ರೀ ಎಸ್. ಕೂಡ್ಲಿಗಿ

ಚೀನಾ ದೇಶದ ಸಂತ ಕಂಪೂತ್ಸೆ ಅದೊಂದು ದಿನ ದಟ್ಟವಾದ ಅರಣ್ಯದಲ್ಲಿ ಪ್ರಯಾಣಿಸುತ್ತಿದ್ದ. ಹೀಗೆ ಪ್ರಯಾಣಿಸುತ್ತಿರುವಾಗ ಒಂಟಿ ಸ್ತ್ರೀಯು ದುಃಖಿಸುತ್ತಿರುವುದನ್ನು ಕಂಡ ಸಂತ, ಅವಳ ಬಳಿ ಹೋಗಿ ‘ಏಕೆ ದುಃಖಿಸುತ್ತಿರುವೆ?’ ಎಂದು ಕೇಳಿದ. ‘ನನ್ನ ಗಂಡ ಮತ್ತು ಮಗುವನ್ನು ಹುಲಿ ಕೊಂದು ಹಾಕಿದ್ದು, ಇದಕ್ಕಾಗಿ ವ್ಯಥೆಪಡುತ್ತಿರುವೆ’ ಎಂದು ಕಣ್ಣೀರು ಹಾಕಿದಳು. ‘ಕಾಡಿನಲ್ಲಿ ಒಂಟಿಯಾಗಿ ದುಃಖಿಸುವ ಬದಲು, ಕೊರಗುವ ಬದಲು ನಗರಕ್ಕೆ ಬಂದು ನೆಲೆಸು’ ಎಂದು ಸಂತ ಕರೆದಾಗ, ‘ನಗರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲ್ಲಿ ಒಂದು ಹುಲಿಯಿದ್ದರೆ ನಗರದಲ್ಲಿ ಕೋಟ್ಯಾನುಕೋಟಿ ಹುಲಿಯಂಥ ಮನುಷ್ಯರಿದ್ದಾರೆ. ಅವರಿಂದ ನನ್ನ ರಕ್ಷಣೆ ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದಳು. ಈ ಮಾತಿಗೆ ಸಂತನ ಬಳಿಯೂ ಉತ್ತರ ಇರಲಿಲ್ಲ. ಆದರೆ ಈ ಘಟನೆಯಿಂದ ಪರಿವರ್ತಿತನಾದ ಕಂಪೂತ್ಸೆ ಸಮಾಜದಲ್ಲಿ ಬದಲಾವಣೆ ತರುವ ದೃಢನಿರ್ಧಾರ ಕೈಗೊಂಡ.

ನೇರ ರಾಜನ ಬಳಿ ಹೋಗಿ, ‘ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳಿಂದ ದೇಶಕ್ಕೆ ಅಪಾಯ ಹೆಚ್ಚು’ ಎಂದು ಮನವರಿಕೆ ಮಾಡಿ, ಪ್ರಜಾಕಲ್ಯಾಣ ರಾಷ್ಟ್ರ ನಿರ್ವಿುಸಬೇಕೆಂದು ಸಲಹೆಯಿತ್ತ. ರಾಜ ಸಂತನನ್ನು ಪರೀಕ್ಷಿಸಲು ಒಂದು ರಾಜ್ಯದ ಆಳ್ವಿಕೆ ನೀಡಿದ. ಈ ಪರೀಕ್ಷೆಯಲ್ಲಿ ಯಶಸ್ವಿಯಾದ ಸಂತನಿಗೆ ರಾಜ ತನ್ನ ಆಸ್ಥಾನದಲ್ಲಿ ಮಹತ್ವದ ಸ್ಥಾನ ನೀಡಿದ. ಈ ಬೆಳವಣಿಗೆಯಿಂದ ವಿಚಲಿತಗೊಂಡ ಮಂತ್ರಿಗಳು ಕಂಪೂತ್ಸೆ ವಿರುದ್ಧ ರಾಜನಿಗೆ ಇಲ್ಲಸಲ್ಲದ ದೂರುಗಳು ನೀಡಿ ತೊಂದರೆಕೊಟ್ಟರು. ಆದರೆ, ಸಂತ ನಿರಾಶನಾಗದೆ ರಾಜ್ಯವನ್ನು ಬಿಟ್ಟು ಹದಿಮೂರು ವರ್ಷಗಳ ಕಾಲ ಹಲವಾರು ಊರು ಸಂಚರಿಸಿ ಜನರಿಗೆ ತತ್ತ್ವಗಳನ್ನು ಬೋಧನೆ ಮಾಡಿದ. ಇದರಿಂದ ಸಹಸ್ರಾರು ಜನರು ಸಂತನ ಅನುಯಾಯಿಗಳಾದರು. ಬಳಿಕ ಸಂತ ಕಂಪೂತ್ಸೆ ತೀರಿ ಹೋದರೂ ಜನ ಆತನನ್ನು ದೇವರಂತೆ ಪೂಜಿಸಿದರು. ಚಿಕ್ಕ ವಯಸ್ಸಿನಲ್ಲಿ ತಂದೆ ಕಳೆದುಕೊಂಡು ಶಿಕ್ಷಣವಂಚಿತನಾಗಿದ್ದ ಕಂಪೂತ್ಸೆ ಚೀನಾ ಜನತೆಗೆ ಶಿಕ್ಷಣ ನೀಡಿ ಕಂಪೂಶಿಯಾಸ್ (ಬುದ್ಧಿವಂತ ಸಂತ) ಎಂಬ ಬಿರುದು ಪಡೆದ.

ಈ ಕತೆಯ ತಾತ್ಪರ್ಯವೇನೆಂದರೆ ಸತತ ಪ್ರಯತ್ನ, ಸಾಧಿಸುವ ಛಲ, ಜತೆಗೆ ಗೆದ್ದೇ ಗೆಲ್ಲುವೆ ಎಂಬ ಆತ್ಮವಿಶ್ವಾಸವಿದ್ದರೆ ಆಪತ್ತು ಸಹ ನಮ್ಮ ಸಾಧನೆಗೆ ಹೊಸಮಾರ್ಗ ಸೃಷ್ಟಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಸಂಭವಿಸುವ ಹಲವಾರು ಘಟನೆಗಳಲ್ಲಿ ಯಾವುದಾದರೂ ಒಂದು ಘಟನೆ ಮಹತ್ವದ ಧನಾತ್ಮಕ ಪ್ರಭಾವ ಬೀರುವುದು. ಇಂತಹ ಘಟನೆಗಳಿಂದ ನಾವು ಸಹ ಐತಿಹಾಸಿಕ ಬದಲಾವಣೆಯನ್ನು ಕೊಡುಗೆಯಾಗಿ ನೀಡಬಹುದು. ನಾವು ಮಾಡುವ ಬದಲಾವಣೆ ಅಥವಾ ಸಾಧನೆ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಯಾವುದೇ ಶಿಕ್ಷಣ ಪಡೆಯದ ಕಂಪೂತ್ಸೆ ಚೀನಾದಲ್ಲಿ ದೇವರಾಗಿ ಪೂಜಿತನಾದ. ಮುಂದಿನ ಸಾಧನೆಯ ಸರದಿ ನಮ್ಮದು. ಪ್ರಯತ್ನ ಮಾಡಬೇಕು. ಪ್ರಯತ್ನ ಪಟ್ಟರೇ ಫಲ ಸಿಕ್ಕೇಸಿಗುತ್ತದೆ ಎಂಬುದಕ್ಕೆ ಅನುಮಾನ ಬೇಡ.

(ಲೇಖಕಿ ಹವ್ಯಾಸಿ ಬರಹಗಾರ್ತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net