ಶ್ರದ್ಧೆಯಿಂದ ಯಶಸ್ಸು: ಮನೋಲ್ಲಾಸ

Manollasa
Published on
| ಅನಿತಾ ನಾಗರಾಜ ಹೆಗಡೆ

ದೊಡ್ಡ ಜೀವನವನ್ನು ಕಂಡ ಒಬ್ಬ ವ್ಯಕ್ತಿಯ ಚಿಕ್ಕ ಕಥೆಯಿದು. ಮನೆ ಕಟ್ಟುವ ಕೆಲಸ ಮಾಡುವ ಒಬ್ಬ ಬಡಗಿಯಿದ್ದ. ತನ್ನ ಕೌಶಲದಿಂದಾಗಿ ಮಾಲೀಕನ ವಿಶ್ವಾಸ ಗಳಿಸಿದ್ದ. ವಯಸ್ಸಾದ ಆತ ಇನ್ನೇನು ಕೆಲಸಕ್ಕೆ ನಿವೃತ್ತಿ ಘೊಷಿಸುವ ಯೋಚನೆಯನ್ನು ಹೊಂದಿದ್ದ. ಸ್ವಲ್ಪ ಹಣಕಾಸಿನ ತೊಂದರೆಯಿದ್ದರೂ ಉಳಿದ ಜೀವನವನ್ನು ಹೆಂಡತಿ ಮಕ್ಕಳ ಜೊತೆ ಆರಾಮದಾಯಕವಾಗಿ ಕಳೆಯುವ ಬಗ್ಗೆ ಯಜಮಾನನ ಬಳಿ ಹೇಳಿಕೊಂಡ. ಒಬ್ಬ ಒಳ್ಳೆಯ ಕೆಲಸಗಾರನನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಯಜಮಾನನಿಗೆ ಬೇಸರವಾಯಿತು. ಆದರೂ ಆ ಭಾವನೆಯನ್ನು ತೋರ್ಪಡಿಸಿಕೊಳ್ಳದೆ, ಕೊನೆಯದಾಗಿ ಒಂದು ಮನೆಯನ್ನು ನಿರ್ವಿುಸಿಕೊಡುವಂತೆ ಕೇಳಿದ. ಅದಕ್ಕೆ ಬಡಗಿ ಒಪ್ಪಿ ಕೆಲಸ ಪ್ರಾರಂಭಿಸಿದ. ತನ್ನ ಜೀವಮಾನದ ಕೊನೆಯ ಯೋಜನೆಯೆಂಬ ಕಾರಣಕ್ಕೆ ಬಡಗಿ ಮುಂಚಿನ ಹಾಗೆ ಪೂರ್ಣ ಮನಸ್ಸಿನಿಂದ ಮಾಡಲಿಲ್ಲ. ಉತ್ತಮ ವಸ್ತುಗಳನ್ನು ಅಷ್ಟು ಬಳಸದೆ ಸಿಕ್ಕ ವಸ್ತುಗಳಿಂದ ಸಾಧಾರಣ ಮನೆಯನ್ನು ನಿರ್ವಿುಸಿದ. ಕಲ್ಲಿನಿಂದ ಹಿಡಿದು ಕಟ್ಟಿಗೆಗಳವರೆಗೆ ಯಾವ ವಸ್ತುವೂ ಗುಣಮಟ್ಟದ್ದಾಗಿರಲಿಲ್ಲ. ಯಜಮಾನ ಆ ಮನೆಯ ಕೀಲಿಯನ್ನು ಬಡಗಿಗೇ ಹಸ್ತಾಂತರಿಸಿ, ‘ನಿನ್ನ ಹಲವು ವರ್ಷಗಳ ಸತತ ಪರಿಶ್ರಮದ ಕೆಲಸಕ್ಕೆ ಈ ಮನೆ ನನ್ನ ಕಡೆಯಿಂದ ನಿನಗೆ ಉಡುಗೊರೆ’ ಎಂದು ಹೇಳಿದ. ಈ ಮಾತಿನಿಂದ ಬಡಗಿಗೆ ಬಲವಾದ ಉಳಿಪೆಟ್ಟು ಕೊಟ್ಟಂತಾಯಿತು. ತನ್ನ ಕೆಲಸದ ಬಗ್ಗೆ ಅವನಿಗೆ ನಾಚಿಕೆಯಾಯಿತು. ಕೆಲಸ ಪ್ರಾರಂಭಿಸುವ ಮುನ್ನವೇ ಅವನಿಗೆ ಈ ವಿಷಯ ತಿಳಿದಿದ್ದರೆ ಬಹುಶಃ ಆ ಮನೆ ಬೇರೆ ರೀತಿಯೇ ಬಹಳ ಸುಂದರವಾಗಿ ಅಚ್ಚುಕಟ್ಟಾಗಿ ನಿರ್ವಣವಾಗುತ್ತಿತ್ತು.

ಇದೇ ರೀತಿ ನಾವು ಸಹ ನಮ್ಮ ಅಲಕ್ಷ್ಯದಿಂದಾಗಿ ಜೀವನದಲ್ಲಿ ಏನಾದರೊಂದು ಅಮೂಲ್ಯವಾದುದನ್ನು ಕಳೆದುಕೊಂಡಿರುತ್ತೇವೆ. ಯಾವ ಕೆಲಸ ಮಾಡಿದರೂ ಅದಕ್ಕೆ ನಮ್ಮ ಪೂರ್ಣಪ್ರಮಾಣದ ಪ್ರಯತ್ನ ಹಾಕಿರಬೇಕು. ಪ್ರತಿಫಲವನ್ನು ಅಪೇಕ್ಷಿಸದೇ ಕೆಲಸವನ್ನು ಪೂರ್ಣಗೊಳಿಸಬೇಕು. ಆಗಿ ಹೋಗಿದ್ದನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಜೀವನವೆಂಬುದು ಸಹ ಒಂದು ಯೋಜನೆ. ಇಲ್ಲಿ ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು. ನಾವು ಇಂದು ವರ್ತಿಸುವ ರೀತಿ, ತೆಗೆದುಕೊಳ್ಳುವ ನಿರ್ಣಯ ಅಥವಾ ಆಯ್ಕೆಗಳು ಭವಿಷ್ಯವನ್ನು ರೂಪಿಸುತ್ತವೆ. ಆದ್ದರಿಂದ ಜೀವನವನ್ನು ವಿವೇಕದಿಂದ, ಬುದ್ಧಿವಂತಿಕೆಯಿಂದ ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ನಾವು ನಮ್ಮ ಜೀವನದಲ್ಲಿ ತೆಗೆದುಕೊಳ್ಳುವ ಸಣ್ಣ ನಿರ್ಧಾರವೂ ದೊಡ್ಡ ವ್ಯತ್ಯಾಸವನ್ನುಂಟು ಮಾಡಬಹುದು. ಕೆಲಸವನ್ನು ಪ್ರೀತಿಸುತ್ತಾ ಪ್ರತಿಫಲದ ಅಪೇಕ್ಷೆಯಿಲ್ಲದೇ ಕೇವಲ ಆತ್ಮತೃಪ್ತಿಗಾಗಿ ಮಾಡಿದರೆ ಒಂದಿಲ್ಲೊಂದು ಕಡೆಯಿಂದಾದರೂ ಯಶಸ್ಸು ನಮ್ಮನ್ನರಸಿ ಬರುತ್ತದೆ.

ಕೆಲಸ ಚಿಕ್ಕದಾಗಲಿ, ದೊಡ್ಡದಾಗಲಿ ಆರಂಭದಿಂದಲೂ ಶ್ರದ್ಧೆಯಿಂದ, ಸಂಪೂರ್ಣ ಶ್ರಮವಹಿಸಿ ಮಾಡಬೇಕು ಎಂಬ ಚಾಣಕ್ಯನ ಹಿತವಚನ ಸದಾ ಮನನೀಯ. ನಮ್ಮದು, ಬೇರೆಯವರದೆಂದು ಭೇದ ಮಾಡದೇ ಯಾವ ಕೆಲಸವನ್ನಾದರೂ ಸಮದೃಷ್ಟಿಯಿಂದ ಮಾಡಿ ನ್ಯಾಯ ಒದಗಿಸಬೇಕು. ಆಗ ಬೇಡವೆಂದರೂ ಯಾವುದಾದರೊಂದು ಬಗೆಯಲ್ಲಿ ಫಲ ದಕ್ಕುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net