

ಮಧ್ಯಪ್ರದೇಶದಲ್ಲಿರುವ ಸಾಗರ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಡಾ. ಹರಿಸಿಂಗ್ ಗೌರ್ ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ವಕೀಲರಾಗಿದ್ದರು. ಇಂಗ್ಲೆಂಡಿನ ಪ್ರೖೆವಿ ಕೌನ್ಸಿಲ್ನಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಯೊಂದರ ಮೊಕದ್ದಮೆ ನಡೆಯುತ್ತಿತ್ತು. ಕೇಸ್ ನಡೆಯುವ ಹಿಂದಿನ ದಿನ ರಾತ್ರಿ ಹರಿಸಿಂಗರು ಕ್ಲಬ್ನಲ್ಲಿ ಮಿತ್ರರೊಡನೆ ಸ್ವಲ್ಪ ಜಾಸ್ತಿಯೇ ಕುಡಿದಿದ್ದರಿಂದಲೋ ಏನೋ ಮರುದಿನ ಬೆಳಿಗ್ಗೆ ಕೋರ್ಟಿಗೆ ಹೋದಾಗ ತಾವು ಯಾರ ಪರವಾಗಿ ವಾದ ಮಾಡಬೇಕಿತ್ತೋ ಅದನ್ನೇ ಮರೆತು ವಿರುದ್ಧ ಕಕ್ಷಿಗಾರರ ಪರವಾಗಿ ವಾದ ಮಂಡಿಸತೊಡಗಿದರು. ಇದನ್ನು ಕೇಳಿ ಸಹಯೋಗಿ ವಕೀಲರು ಅವರ ಕೋಟನ್ನು ಹಿಡಿದು ಜಗ್ಗಿ ಈ ತಪ್ಪನ್ನು ತಿಳಿಸಲು ಪ್ರಯತ್ನಿಸಿದರೂ ಅವರು ಕೇಳಿಸಿಕೊಳ್ಳಲಿಲ್ಲ.
ಅಷ್ಟೇ ಅಲ್ಲ ಇದರಿಂದ ವಾದ ಸರಣಿಗೆ ಭಂಗ ಉಂಟು ಮಾಡಿದನೆಂದು ಕೋಪವು ಹೆಚ್ಚಾಗಿ ಅವರ ತರ್ಕವು ಇನ್ನೂ ಹೆಚ್ಚು ಪ್ರಖರವಾಗಿ ನಡೆಯಹತ್ತಿತು. ಎದುರಾಳಿ ವಕೀಲ ಇವರ ತರ್ಕ ಕೇಳಿ ತಾನು ಮಂಡಿಸಲು ವಿಷಯ ಇನ್ನೇನೂ ಉಳಿಯಲಿಲ್ಲವೆಂದು ಪರಿತಪಿಸತೊಡಗಿದ. ನ್ಯಾಯಾಧೀಶರುಗಳಿಗೆ ಇವರ ಈ ವಿಚಿತ್ರ ವರ್ತನೆಯಿಂದ ಆಶ್ಚರ್ಯವಾದರೂ ಅವರ ವಾದ ಸರಣಿಯನ್ನು ಕುತೂಹಲದಿಂದ ಕೇಳುತ್ತ ಕುಳಿತಿದ್ದರು. ಇನ್ನೇನು ಇವರು ಎದುರಿಗಿನವರನ್ನು ಗೆಲ್ಲಿಸಿಯೇ ಬಿಡುತ್ತಾರೆ ಎಂದು ಹರಿಸಿಂಗರ ಕಕ್ಷಿದಾರರಿಗೆ ಸಿಟ್ಟು ನೆತ್ತಿಗೇರಿತು. ‘ವಕೀಲರೇ ನಮ್ಮ ಪರವಾಗಿ ವಾದ ಮಾಡುವದು ಬಿಟ್ಟು ನಮ್ಮ ಕೇಸನ್ನೇ ಕೊಲ್ಲುವ ಕೆಲಸ ಮಾಡುತ್ತಿದ್ದೀರಲ್ಲ’ ಎಂದು ಅವರನ್ನು ತಡೆಯಲು ಹೋದರು. ಹರಿಸಿಂಗರಿಗೆ ತಪ್ಪಿನ ಅರಿವಾಯಿತು. ಈ ಹಿಂದೆ ಮಂಡಿಸಿದ್ದನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವದಾಗಿ ಪ್ರಮಾದದ ಬಗ್ಗೆ ನ್ಯಾಯಾಧೀಶರ ಕ್ಷಮೆ ಕೇಳಿ ಪುನಃ ಮೊಕದ್ದಮೆಯನ್ನು ಕುಶಲತೆಯಿಂದ ಶಿಸ್ತುಬದ್ಧವಾಗಿ ಮಂಡಿಸಿ ವಾದ ಸಾಮರ್ಥ್ಯದಿಂದ ಕೇಸನ್ನು ಗೆದ್ದರು. ಮಾನವನು ಸಾಧಿಸಿರುವ ಬಹುಮಟ್ಟಿನ ಪ್ರಗತಿಗೆ ತರ್ಕವೇ ಕಾರಣವಾದರೂ ತರ್ಕಕ್ಕೆ ಯಾವದೇ ನಿಷ್ಠೆ ಎಂಬುದಿರುವದಿಲ್ಲ. ಅದನ್ನು ಯಾರು ಹೇಗೆ ಮಂಡಿಸುತ್ತಾರೋ ಅವರ ಜೊತೆಗೆ ಹೋಗುತ್ತದೆ.
ಒಂದು ವಿಷಯವು ಯಾವ ತರ್ಕದಿಂದ ಸಿದ್ಧವಾಗುವದೋ ಮತ್ತೊಂದು ತರ್ಕದಿಂದ ಅದು ಅಸಿದ್ಧವೂ ಆಗಬಹುದು. ವಿಭಿನ್ನ ಮತ, ಪಂಥದವರಿಗೆ ತಮ್ಮದೇ ಮತ ಶ್ರೇಷ್ಠವೆನಿಸುತ್ತದೆ. ಅಥವಾ ಬೇರೆ ಬೇರೆ ಕಾಲಘಟ್ಟದಲ್ಲಿ ಒಂದೊಂದು ವಿಚಾರಧಾರೆಯು ಪ್ರಾಧಾನ್ಯ ಪಡೆಯಬಹುದು. ಇಲ್ಲಿ ವಿಷಯಕ್ಕಿಂತ ನಮ್ಮದೇ ಸರಿ ಎನ್ನುವ ಅಹಂಕಾರವೇ ದೊಡ್ಡದಾಗಿರುತ್ತದೆ. ತರ್ಕ ವಿತರ್ಕ ಮಾಡಿ ನಾವು ಮಂಡಿಸಿದ ಪರಿಯ ಬಗ್ಗೆ ಲೌಕಿಕದಲ್ಲಿ ಗರ್ವಪಡಬಹುದು ಅಥವಾ ಕೆಲವು ಜನರನ್ನು ಒಪ್ಪಿಸಬಹುದೇ ಹೊರತು ಅದೇ ಪರಮಸತ್ಯವಾಗಿರುವದಿಲ್ಲ. ‘ಅಹಂಕಾರ ಸಮಾಪ್ತಿಯಾದಾಗ ಸತ್ಯದೊಡನೆಯ ಸಂವಾದ ಆರಂಭವಾಗುತ್ತದೆ’ ಎನ್ನುತ್ತಾರೆ ಆಚಾರ್ಯ ರಜನೀಶ್. ಕಠೋಪನಿಷತ್ತು ಸಹ ‘ನೈಷಾ ತರ್ಕೆಣ ಮತಿರಾಪನೇಯಾ’- ಆ ದಿವ್ಯತೆಯು ಸತ್ಯ, ಪರಿಶುದ್ಧತೆ ಅಸಂಗತ್ವ, ಭಕ್ತಿ, ಜ್ಞಾನ ಇಂಥವುಗಳಿಂದ ದೊರೆಯುವದೇ ಹೊರತು ಬುದ್ಧಿಯ ಸೂಕ್ಷ್ಮತೆ ಅಥವಾ ಕೇವಲ ಜಾಣತನದಿಂದ ದೊರೆಯುವದಿಲ್ಲ ಎಂದಿದೆ. ಅಂಥ ಅವರ್ಣನೀಯ ಚೈತನ್ಯದ ಅನುಭೂತಿಯೆಡೆಗೆ ಸಾಗೋಣ.
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)