ಜಗತ್ತಿನಲ್ಲಿ ಎಲ್ಲರ ಹಾಗೂ ಒಂದೇ ವ್ಯಕ್ತಿಯಲ್ಲಿ ಎಲ್ಲ ಕಾಲದ ‘ಮನೋಸ್ಥಿತಿಗಳು’ ಒಂದೇ ತೆರನಾಗಿರೋದಿಲ್ಲ. ಅವು ಭಿನ್ನ ಭಿನ್ನವಾಗಿರುತ್ತವೆ ಮಾತ್ರವೇ ಅಲ್ಲ, ಬದಲಾಗುತ್ತಿರುತ್ತವೆ. ಕೆಲವರಲ್ಲಿ ಆಗಾಗ ಮೃಗತ್ವ ಪ್ರಕಟವಾದರೆ, ಕೆಲವರಲ್ಲಿ ಮಾನವೀಯತೆ ಮೆರೆಯುತ್ತಿರುತ್ತದೆ. ಇನ್ನೂ ಕೆಲವರು ದೈವೀಕತೆಯನ್ನೇ ಪ್ರದರ್ಶಿಸುತ್ತಿರುತ್ತಾರೆ. ತಾನೂ ಪ್ರಾಣಿ ಜಗತ್ತಿಗೆ ಸೇರಿರುವ ಕಾರಣ ಮನುಷ್ಯನಲ್ಲೂ ಪ್ರಾಣಿ ಸಹಜ ಗುಣಸ್ವಭಾವಗಳಾದ ಹಸಿವೆ, ನಿದ್ರೆ, ಭಯ, ಕ್ರೋಧ, ಮೈಥುನಗಳು ಮನೆ ಮಾಡಿರುತ್ತವೆ. ಆದರೆ ಜ್ಞಾನಬಲದಿಂದ ಈತ ಇವೆಲ್ಲವನ್ನೂ ನಿಯಂತ್ರಿಸಿ ಮನುಷ್ಯತ್ವವನ್ನು ತೋರಬಲ್ಲ. ಇನ್ನೂ ಸಂಸ್ಙ್ಕಾರವಂತನಾದರೆ, ಮನುಷ್ಯತ್ವಕ್ಕೆ ಮಿಗಿಲಾದ ದೈವತ್ವವನ್ನು ಏರಬಲ್ಲ. ಆದರೆ, Basic animal instincts ಹೊರತಾಗಿ, ಮನುಷ್ಯರಲ್ಲಿ ಮಾತ್ರ ಕಾಣಬಹುದಾದ ಅಸೂಯೆ, ಜಂಭ, ಪ್ರತೀಕಾರ, ಮತ್ಸರ, ಅತಿಯಾಸೆ, ದುರಾಸೆ ಮುಂತಾದ ದುರ್ಗಣಗಳನ್ನು ಪ್ರಾಣಿಗಳಲ್ಲಿ ಕಾಣಲಾರೆವು. ತನ್ನಲ್ಲಿ ಇರೋದು, ಇತರರಲ್ಲಿ ಇಲ್ಲವೆಂದರೆ, ಮನುಷ್ಯನಿಗೆ ಏನೋ ಕೆಟ್ಟ ಸಂತೋಷ. ತನ್ನಲ್ಲಿ ಇರೋದಕ್ಕಿಂತ ಹೆಚ್ಚಾಗಿ ಇನ್ನೊಬ್ಬರಲ್ಲಿ ಇದೆ ಎಂದಾದರೆ, ಇವನಿಗೆ ನೆಮ್ಮದಿ ಇಲ್ಲ. ತನಗೆ ನಷ್ಟವಾದರೂ ಪರವಾಗಿಲ್ಲ ಇತರರು ತನಗಿಂತಲೂ ಚೆನ್ನಾಗಿರಬಾರದೆಂಬ ಇವನ ಬಯಕೆ. ಈ ಪುಟ್ಟಕತೆ ಇದಕ್ಕೊಂದು ನಿದರ್ಶನ. ಒಬ್ಬಾತನಿಗೆ ತನ್ನ ಪಕ್ಕದ ಮನೆಯವರು ಎಂದೂ ತನಗಿಂತ ಹೆಚ್ಚು ಶ್ರೀಮಂತನಾಗಿರಬಾರದು, ಸಂತೋಷವಾಗಿರಬಾರದೆಂಬ ಕೆಟ್ಟ ಆಸೆ. ಆದುದರಿಂದ ಅವನ ಏಳಿಗೆ, ಉನ್ನತಿಯ ಮೇಲೆಯೇ ಇವನಿಗೆ ಕಣ್ಣು. ಹೇಗಾದರೂ ಮಾಡಿ ಅವನು ಚೆನ್ನಾಗಿರೋದನ್ನು ತಡೆಹಿಡಿಯಬೇಕೆಂಬ ದುರುದ್ದೇಶ ಇವನದಾಗಿತ್ತು. ಅದಕ್ಕಾಗಿ ಭಗವಂತನ ತಪಸ್ಸು ಮಾಡಿದ. ಭಗವಂತ ಪ್ರತ್ಯಕ್ಷನಾಗಿ ‘ನಿನಗೇನು ಬೇಕು ಕೇಳು’ ಎಂದಾಗ, ‘ನನಗೆ ಹೆಚ್ಚಿನ ಧನಕನಕಗಳನ್ನು ನೀಡು’ ಎಂದು ಬೇಡಿಕೊಂಡ. ಇವನಲ್ಲಿ ಮನೆ ಮಾಡಿದ ಅಸೂಯೆಯನ್ನು ಅರಿತಿದ್ದ ಭಗವಂತ ಹೇಳಿದ, ‘ಆಗಲಿ ನೀನು ಏನನ್ನು ಕೇಳಿದರೂ ಕೊಡುತ್ತೇನೆ. ಆದರೆ ನೀನು ಕೇಳಿದ್ದರ ಎರಡರಷ್ಟು ಪಕ್ಕದ ಮನೆಯವನಿಗೆ ದಕ್ಕುತ್ತದೆ’. ಇದನ್ನು ಕೇಳಿದ ದುಷ್ಟಬುದ್ಧಿಯ ಈ ವ್ಯಕ್ತಿ, ‘ಹಾಗಾದರೆ ನನ್ನ ಒಂದು ಕಣ್ಣು ಹೋಗಲಿ’ ಎಂದು ಪ್ರಾರ್ಥಿಸಿ ಪಕ್ಕದ ಮನೆಯವನು ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡಾಗ ಸಂತೋಷ ಪಟ್ಟನಂತೆ!