

‘ಮನಿಕೆ ಮಗೆ ಹಿತೆ ಮುದುವೆ ನುರಾ ಹಂಗುಮ್ ಯಾವಿ ಅವಿಲೇವಿ.....’ ಯೂಟ್ಯೂಬ್ನಲ್ಲಿ ಸಿಂಹಳಿ ಭಾಷೆಯ ಈ ಹಾಡು ಮೂಡಿಸಿದ ಸಂಚಲನ ಅದ್ಭುತವಾದುದು. ಯೊಹಾನಿ ಎಂದೇ ಜನಪ್ರಿಯರಾಗಿರುವ 28 ವರ್ಷದ ಯುವತಿ ಈ ಹಾಡಿನ ಗಾಯಕಿ. ಯೊಹಾನಿ ದಿಲೋಕಾ ಡಿಸಿಲ್ವಾ ಎಂಬುದು ಪೂರ್ಣ ಹೆಸರು. ಶ್ರೀಲಂಕಾದ ಈ ಗಾಯಕಿಯು ಕವಯಿತ್ರಿ, ರ್ಯಾಪರ್, ಮ್ಯೂಸಿಕ್ ಪ್ರೊಡ್ಯೂಸರ್, ಯೂಟ್ಯೂಬರ್ ಕೂಡ ಹೌದು. ನಶೆ ಏರಿಸುವ ಕಂಠದಲ್ಲಿ ಹಾಡಿದ ಈ ಹಾಡನ್ನು ಕೆಲವು ತಿಂಗಳ ಹಿಂದೆಯೇ ಯೂಟ್ಯೂಬ್ಗೆ ಅಪ್ಲೋಡ್ ಮಾಡಲಾಗಿದೆ. ಇದು ಇತ್ತೀಚೆಗಷ್ಟೇ ಭಾರತದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಗಮನಸೆಳೆದಿತ್ತು. ಅವರು ಅದನ್ನು ಶೇರ್ ಮಾಡಿದ ನಂತರದಲ್ಲಿ ಯೂಟ್ಯೂಬ್ನಲ್ಲಿ ‘ಮನಿಕೆ ಮಗೆ ಹಿತೆ...’ ಮೂಡಿಸಿದ ಸಂಚಲನ ಸ್ವತಃ ಯೊಹಾನಿ ಮತ್ತು ಅವರ ತಂಡವನ್ನು ದಿಗ್ಭ್ರಮೆಗೆ ಕೆಡವಿದೆ.
ಈ ಸಂಚಲನ ಎಷ್ಟರಮಟ್ಟಿಗೆ ಎಂದರೆ ಹಾಡು ಯಾವ ಭಾಷೆಯದು ಎಂಬುದು ಬಹುತೇಕರಿಗೆ ಗೊತ್ತಿಲ್ಲ; ಆದರೆ ಅದೇ ಧಾಟಿಯಲ್ಲಿ ಹಲವು ಭಾಷೆಗಳಲ್ಲಿ ಈ ಹಾಡು ಪ್ರತಿಧ್ವನಿಸಿದೆ. ಸಾಹಿತ್ಯ ರಚನೆಯ ಸೃಜನಶೀಲತೆಗೂ ಇದು ಅವಕಾಶ ಮಾಡಿಕೊಟ್ಟಿತು. ಅದೇ ಅರ್ಥಬರುವಂತೆ, ಅದೇ ಧಾಟಿಯಲ್ಲಿ ಹಾಡುವುದಕ್ಕೆ ಸಾಹಿತ್ಯ ರಚಿಸುವ ಸವಾಲು ಯುವಜನರ ಎದುರು ಸೃಷ್ಟಿಯಾಗಿದೆ. ಕನ್ನಡದಲ್ಲೂ ಇದು ವ್ಯಕ್ತವಾಗಿದೆ. ಸಾಹಿತ್ಯ ಸಂಬಂಧವಿಲ್ಲದೇ ಇದ್ದರೂ ತೋಚಿದ್ದನ್ನು ಗೀಚಿ ಹಾಡಿದವರೆಷ್ಟೋ ಮಂದಿ. ಹಾಗೆಯೇ ‘ಮನಿಕೆ ಮಗೆ ಹಿತೆ’ ಹ್ಯಾಷ್ ಟ್ಯಾಗ್ನಲ್ಲಿ ಅವಲೋಕಿಸುತ್ತ ಹೋದರೆ, ಒಂದಷ್ಟು ಟ್ರೋಲ್ಗಳು ಕಾಣಸಿಗುತ್ತವೆ. ಇನ್ನೊಂದಷ್ಟು ಇದುವರೆಗೂ ಕಂಡು ಕೇಳರಿಯದ ಭಾಷೆಗಳಲ್ಲಿ ಇದೇ ಧಾಟಿಯ ಹಾಡನ್ನು ಹಾಡಲು ಪ್ರಯತ್ನಿಸಿದ್ದು ಕಂಡು ಬಂದಿದೆ. ಒಟ್ಟಾರೆ ಇಂಪಾದ ಸಂಗೀತ ಯಾವ ಎಲ್ಲೆಯಿಲ್ಲದೇ ಇಲ್ಲಿ ಗೆದ್ದಿದೆ.