ಮಾವು-ನೋವು: ವಾತಾವರಣದಲ್ಲಿ ಏರುಪೇರು, ಅಕಾಲಿಕ ಮಳೆಗೆ ಬೆಳೆ ಹಾಳು

Mango
Published on
ಪ್ರಕೃತಿಯ ಮುನಿಸು ಮಾವು ಬೆಳೆಗಾರರಿಗೆ ಬಿಸಿ ತಟ್ಟಿಸಿದೆ. ನವೆಂಬರ್​ನಲ್ಲಾದ ಮಳೆಯಿಂದ ಹೂವು ಬಿಡುವುದು ವಿಳಂಬವಾಗಿದೆ. ಅಲ್ಲದೆ, ಇಬ್ಬನಿಯಿಂದ ಹೂವು ಉದುರಿವೆ. ಫಸಲು ಎರಡು ತಿಂಗಳು ವಿಳಂಬವಾಗಿದ್ದು, ಈಗ ಸುರಿಯುತ್ತಿರುವ ಅಡ್ಡಮಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡುತ್ತಿದೆ. ಈ ಬಾರಿ ಶೇ.25 ಇಳುವರಿ ಬಂದರೆ ಸಾಕು ಎನ್ನುವಂತಾಗಿದೆ. ಕಳೆದ ನಾಲ್ಕು ವರ್ಷದಿಂದ ಮಾವು ಹಣ್ಣಿನ ಬೆಲೆಯೂ ಹೆಚ್ಚಾಗಿಲ್ಲ. ಹಾಗಾಗಿ ಪರ್ಯಾಯ ಬೆಳೆಯ ಕಡೆಯೂ ರೈತ ಚಿಂತಿಸುವಂತಾಗಿದೆ.

ವಿಜಯವಾಣಿ ವಿಶೇಷ ಧಾರವಾಡ/ವಿಜಯಪುರ: ಮಾವು ಹಣ್ಣುಗಳ ರಾಜ. ಮಾವು ಬೆಳೆ ಪ್ರಧಾನವಾಗಿರುವ ಧಾರವಾಡ ಜಿಲ್ಲೆಯನ್ನು ಮಾವಿನ ಹಣ್ಣಿನ ಕಣಜ ಎನ್ನಲಾಗುತ್ತದೆ. ಈ ಮಾವಿನ ಹಣ್ಣಿನ ಪರಿಮಳ ರಾಜ್ಯವಷ್ಟೇ ಅಲ್ಲ, ಮುಂಬೈ ಮೂಲಕ ಅರಬ್ ರಾಷ್ಟ್ರಗಳಲ್ಲೂ ಖ್ಯಾತಿ ಪಡೆದಿದೆ. ಅದರಲ್ಲೂ ಅಲ್ಪಾನೊ್ಸೕ ಮಾವಿಗೆ ವಿದೇಶಗಳಲ್ಲಿ ಎಲ್ಲಿಲ್ಲದ ಬೇಡಿಕೆ. ಇಂಥ ಮಾವಿನ ಹಣ್ಣಿನ ರುಚಿ ಸವಿಯಲು ಮಾವುಪ್ರಿಯರು ಕಾದು ಕುಳಿತಿದ್ದರೆ, ಈ ಬಾರಿ ಪ್ರಕೃತಿಯ ಮುನಿಸು ಬೆಳೆಗಾರರನ್ನು ಕಂಗೆಡಿಸಿದೆ. ಜಿಲ್ಲೆಯ ಮಾವು ಬೆಳೆಗಾರರು ಸತತ 2 ವರ್ಷಗಳಿಂದ ಹವಾಮಾನ ವೈಪರೀತ್ಯದಿಂದ ಕೈ ಸುಟ್ಟುಕೊಂಡಿದ್ದಾರೆ. ಈ ಬಾರಿಯೂ ನವೆಂಬರ್​ನಲ್ಲಾದ ಅಕಾಲಿಕ ಮಳೆಯಿಂದಾಗಿ ಮಾವು ಫಸಲು ಕೈಗೆಟುವುದು ವಿಳಂಬವಾಗಿದೆ. ಪ್ರತಿವರ್ಷ ನವೆಂಬರ್​ನಲ್ಲಿ ಮಾವಿನ ಗಿಡಗಳು ಹೂ ಬಿಟ್ಟು ಡಿಸೆಂಬರ್ 2 ಅಥವಾ 3ನೇ ವಾರದಲ್ಲಿ ಹೀಚುಗಳು ಕಾಣಿಸುತ್ತಿದ್ದವು. ಮಾರ್ಚ್ ಕೊನೆಯಲ್ಲಿ ಅಥವಾ ಏಪ್ರಿಲ್ 2ನೇ ವಾರದವರೆಗೆ ಫಸಲು ಬರುತ್ತಿತ್ತು. ಪ್ರಸಕ್ತ ಹಂಗಾಮಿನಲ್ಲಿ ಮಾವು ಅಕಾಲಿಕ ಮಳೆಯ ಹೊಡೆತಕ್ಕೆ ಸಿಲುಕಿದೆ. ಹೂವು ಬಿಡುವ ಪ್ರಕ್ರಿಯೆ 45 ದಿನ ವಿಳಂಬವಾಗಿದೆ. ಹಾಗಾಗಿ ಏಪ್ರಿಲ್ ಅಂತ್ಯಕ್ಕೆ ಫಸಲು ಕೈಗೆ ಬರುವ ನಿರೀಕ್ಷೆ ಇದೆ. ಈ ನಡುವೆ ಮಾರ್ಚ್ ಕೊನೆಯಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ಮತ್ತೊಂದು ಸಂಕಷ್ಟ ತಂದೊಡ್ಡಿದೆ.

ರಾಜ್ಯದ ಧಾರವಾಡ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮಾವು ಬೆಳೆಯುವ ಪ್ರಮುಖ ಜಿಲ್ಲೆಗಳು. ಅದರಲ್ಲೂ ಧಾರವಾಡದ ಆಪೂಸ್ ಮಾವು ಪ್ರಿಯರ ಅಚ್ಚುಮೆಚ್ಚಿನ ಹಣ್ಣು. ಕಳೆದ ವರ್ಷ ಮಾವು ಫಸಲು ಕೈಗೆಟುಕುವ ಸಂದರ್ಭದಲ್ಲಿ ಕೋವಿಡ್ 2ನೇ ಲಾಕ್​ಡೌನ್ ಜಾರಿಯಾಗಿತ್ತು. ಕೈಗೆ ಬಂದಷ್ಟು ಬೆಳೆಯನ್ನು ಮಾರಾಟ ಮಾಡುವಲ್ಲಿ ಬೆಳೆಗಾರರು ಹೈರಾಣಾಗಿದ್ದರು. ವಿಶೇಷವೆಂದರೆ, ಕರೊನಾ 2ನೇ ಅಲೆ ಲಾಕ್​ಡೌನ್ ಮಧ್ಯೆಯೂ ಧಾರವಾಡದ ಆಪೂಸ್ ಮಾವು ಮುಂಬೈ ಮೂಲಕ ಅರಬ್ ರಾಷ್ಟ್ರವಲ್ಲದೆ ಅಮೆರಿಕ, ಆಸ್ಟ್ರೇಲಿಯಾಕ್ಕೆ ರಫ್ತಾಗಿತ್ತು.

ಮರೆಯಾದ ತಳಿಗಳು: ಜಿಲ್ಲೆಯಲ್ಲಿ ಈ ಮೊದಲು ಹತ್ತಾರು ಮಾವು ತಳಿಗಳಿದ್ದವು. ಗುಟ್ಲಿ, ಸಕ್ಕರೆ ಗುಟ್ಲಿ, ಕಲ್ಮಿ, ಬಾಳಮಾವು, ಗುಂಗ ಮಾವು, ಜೀರಿಗೆ ಮಾವು, ಈಬತ್ತಿ ಮಾವು, ಗಿಳಿಮಾವು, ಹೋಳಿಗೆಮಾವು, ಸಬ್ಬಸಗಿ ಮಾವು, ರತ್ನಾಗಿರಿ, ಮಲ್ಲಿಕಾ ತಳಿಗಳು ಅಸ್ತಿತ್ವದಲ್ಲಿದ್ದವು. ಈಗ ಹಲವು ತಳಿಗಳು ಮರೆಯಾಗಿ ಆಪೂಸ್ ಆವರಿಸಿಕೊಂಡಿದೆ.

ರಾಜ್ಯದಲ್ಲಿ ಶೇ. 40 ಇಳುವರಿ ಕುಸಿತ: ರಾಜ್ಯದಲ್ಲಿ ಈ ಬಾರಿ ಶೇ.40 ಮಾವಿನ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. 1.6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಪ್ರತಿ ವರ್ಷ 12ರಿಂದ 14 ಲಕ್ಷ ಮೆಟ್ರಿಕ್ ಟನ್ ಇಳುವರಿ ಬರುತ್ತದೆ. ಆದರೆ ಈ ಬಾರಿ 8 ಲಕ್ಷ ಮೆಟ್ರಿಕ್ ಟನ್ ಇಳುವರಿ ಮಾತ್ರ ನಿರೀಕ್ಷಿಸಲಾಗುತ್ತಿದೆ. ಒಟ್ಟು ಇಳುವರಿಯಲ್ಲಿ ಶೇ.40 ಹೊರ ರಾಜ್ಯ, ರಾಷ್ಟ್ರಗಳಿಗೆ ರಫ್ತಾಗುತ್ತದೆ. ಮಾವು ಬೆಳೆಯಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ಮೂರನೇ ಸ್ಥಾನವಿದೆ. ಉತ್ತರ ಪ್ರದೇಶ ಅತಿ ಹೆಚ್ಚು ಬೆಳೆದರೆ, ಆಂಧ್ರಕ್ಕೆ ಎರಡನೇ ಸ್ಥಾನ. ಮಹಾರಾಷ್ಟ್ರ ನಾಲ್ಕನೇ ಸ್ಥಾನದಲ್ಲಿದೆ. ಪ್ರತಿ ವರ್ಷ ರಾಜ್ಯದಲ್ಲಿ ಬೆಳೆಯುವ ಶೇ.5ರಷ್ಟು ಹಣ್ಣಿನಿಂದ ಪಲ್ಪ್ ಕೂಡ ತಯಾರಿಸಲಾಗುತ್ತದೆ. ಎರಡು ವರ್ಷಗಳವರೆಗೆ ತಾಳಿಕೆ ಬರುವ ಇದಕ್ಕೆ ಗಲ್ಪ್ ಸೇರಿ ಅಂದಾಜು 15 ರಾಷ್ಟ್ರಗಳಲ್ಲಿ ಬೇಡಿಕೆಯಿದೆ. ಈ ಬಾರಿ ಪಲ್ಪ್ ತಯಾರಿಕೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಧಾರವಾಡ:1 ಲಕ್ಷ ಮೆ. ಟನ್ ಉತ್ಪಾದನೆ ನಿರೀಕ್ಷೆ

ಧಾರವಾಡ, ಕಲಘಟಗಿ, ಹುಬ್ಬಳ್ಳಿ, ಅಳ್ನಾವರ ಭಾಗದಲ್ಲಿ ಮಾವು ಬೆಳೆಗೆ ಪೂರಕ ವಾತಾವರಣವಿದೆ. ಮುಮ್ಮಿಗಟ್ಟಿ, ಗರಗ, ತೇಗೂರ, ನೀರಲಕಟ್ಟಿ, ಹಂಗರಕಿ, ನರೇಂದ್ರ, ಕೆಲಗೇರಿ, ನಿಗದಿ, ಮುಗದ, ಕ್ಯಾರಕೊಪ್ಪ, ದೇವರಹುಬ್ಬಳ್ಳಿ ಗ್ರಾಮಗಳ ರೈತರು ಬಹುಪಾಲು ಮಾವು ಬೆಳೆಯನ್ನು ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ ಅಂದಾಜು 12,500 ಹೆಕ್ಟೇರ್ ಮಾವು ಬೆಳೆ ಇದ್ದು, ಅದರಲ್ಲಿ 10,000 ಹೆಕ್ಟೇರ್ ಅಲ್ಪಾನ್ಸೋ ಬೆಳೆದಿದ್ದಾರೆ. ಪ್ರತಿವರ್ಷ 1 ಲಕ್ಷ ಮೆ. ಟನ್ ಮಾವು ಉತ್ಪಾದನೆಯಾಗುವ ನಿರೀಕ್ಷೆ ಇರುತ್ತದೆ. ಆದರೆ ಹೀಚು ಬಿಡುವ ಸಂದರ್ಭದಲ್ಲಿ ಅಕಾಲಿಕ ಮಳೆಯಾಗಿರುವುದು ಶೇ.25 ಫಸಲು ಕೈಸೇರುವ ನಿರೀಕ್ಷೆ ಇದೆ. ತೋಟದ ನಿರ್ವಹಣೆ, ಕೀಟನಾಶಕ, ಗೊಬ್ಬರ ಹಾಕಿದರೂ ಅರ್ಧದಷ್ಟು ಇಳುವರಿ ಬರುವುದೂ ಕಷ್ಟ ಎನ್ನುತ್ತಾರೆ ಮಾವು ಬೆಳೆಗಾರ ಶಾಂತಯ್ಯ ಹಿರೇಮಠ.

ಕೋಲಾರ: ಕಾಯಿ ಕಚ್ಚದೆ ನಷ್ಟದ ಭೀತಿ!

ಕರ್ನಾಟಕದಲ್ಲಿ ಮಾವು ಉತ್ಪಾದನೆ ಮಾಡುವ ಜಿಲ್ಲೆಗಳಲ್ಲಿ ಕೋಲಾರ ಅಗ್ರ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಗಳ ಮಾವು ಬೆಳೆಯಲಾಗುತ್ತಿದೆ. ಕಳೆದ ವರ್ಷ ಕರೊನಾ ಹಾಗೂ ಇನ್ನಿತರ ಕಾರಣಗಳ ನಡುವೆಯೂ ಶೇ.40 ಮಾವು ಉತ್ಪಾದನೆ ಆಗಿತ್ತು. ರೈತರಿಗೆ ಅಷ್ಟೇನು ಹೊರೆ ಆಗಿರಲಿಲ್ಲ. ಈ ಬಾರಿ ಬಹುತೇಕ ಕಡೆ ಹವಾಮಾನ ವೈಪರೀತ್ಯದಿಂದ ತೇವಾಂಶ ಹೆಚ್ಚಾಗಿರುವುದರಿಂದ ಹೂವು ಅಧಿಕವಾಗಿದ್ದು, ಕಾಯಿ ಕಚ್ಚದಿರುವುದರಿಂದ ಉತ್ಪಾದನೆ ಕಡಿಮೆಯಾಗುವ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಮಲ್ಲಿಕಾ, ರಾಜಗಿರಿ, ಬದಾಮಿ, ರಸಪುರಿ ಅತ್ಯಂತ ಕಡಿಮೆ ಉತ್ಪಾದನೆ ಆಗುವ ಪರಿಸ್ಥಿತಿ ನಿರ್ವಣವಾಗಿದೆ ಎಂದು ಶ್ರೀನಿವಾಸಪುರ ಮಾವು ಬೆಳೆಗಾರ ನೀಲಟೂರು ಚಿನ್ನಪ್ಪ ರೆಡ್ಡಿ ತಿಳಿಸಿದ್ದಾರೆ. ಶೇ.10 ಇಳುವರಿ ಸಿಗುವುದೂ ಅನುಮಾನ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸಪುರ ತಾಲೂಕು ಒಂದರಲ್ಲೇ 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ.

ತುಮಕೂರು: ಅಕಾಲಿಕ ಮಳೆ ಕಂಟಕ

ತುಮಕೂರು ಜಿಲ್ಲೆಯ 16,330 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ವಾತಾವರಣದಲ್ಲಿನ ಬದಲಾವಣೆ, ಅಕಾಲಿಕ ಮಳೆ ಮತ್ತಿತರ ಕಾರಣಗಳಿಂದ ಇಳುವರಿ ಕುಂಠಿತವಾಗುವ ಅಪಾಯ ಎದುರಾಗಿದೆ. ಪ್ರಾರಂಭದಲ್ಲೇ ಹೂವು ಉದುರಿದ್ದು ವಾರ್ಷಿಕ ಇಳುವರಿ 1.20 ಲಕ್ಷ ಮೆಟ್ರಿಕ್ ಟನ್​ಗಳಿಗೆ ಇಳಿಕೆಯಾಗುವ ನಿರೀಕ್ಷೆಯಿದೆ. ಮಾವು ಬೆಳೆಗಾರರು ಲಾಭ ಮಾಡಿಕೊಂಡಿದ್ದು ಕಡಿಮೆ. ಮಧ್ಯವರ್ತಿಗಳ ಹಾವಳಿ ರೈತರಿಗೆ ಉತ್ತಮ ಬೆಲೆ ಸಿಗದಂತೆ ಮಾಡಿದೆ. ಇದರಿಂದ ಬೇಸತ್ತ ರೈತರು ಇತ್ತೀಚಿನ ದಿನದಲ್ಲಿ ಮಾವು ತೆಗೆದು ಅಡಕೆ ಸಸಿ ನೆಡುವ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ಸಿಗುವ, ಬೇಡಿಕೆ ಹೆಚ್ಚು ಇರುವ ಬಾದಾಮಿ, ರಸಪೂರಿ, ಸೇಂದೂರ, ಮಲಗೋವಾ, ಬಗನ್​ಪಲ್ಲಿ (ಬೀನಿಸ್), ತೋತಾಪುರಿ, ರಸಪೂರಿ, ಸಕ್ಕರೆಗುತ್ತಿ, ಮಲ್ಲಿಕಾ ತಳಿಯ ಮಾವು ಇಳುವರಿ ಕಡಿಮೆಯಾಗಿದೆ. ಗುಬ್ಬಿ ಭಾಗದಲ್ಲಿ ಮಾವು ಹೆಚ್ಚು ಬೆಳೆಯಲಾಗುತ್ತಿದ್ದು, ಶಾಶ್ವತ ಬರಪೀಡಿತವಾದ ಶಿರಾ, ಪಾವಗಡ ಭಾಗದಲ್ಲೂ ಬೆಳೆಯಿದೆ.

ಬೆಂಗಳೂರು ಗ್ರಾಮಾಂತರ: ವರ್ಷದಿಂದ ವರ್ಷಕ್ಕೆ ಇಳುವರಿ ಕುಸಿತ ಸಹಜ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಾವಿನ ಇಳುವರಿ ಶೇ.30 ಕುಸಿತ ಕಾಣಲಿದೆ. 7586 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆದಿದ್ದು, 1 ಹೆಕ್ಟೇರ್​ಗೆ 20ರಿಂದ 25 ಸಾವಿರ ಮೆಟ್ರಿಕ್ ಟನ್ ಇಳುವರಿ ನಿರೀಕ್ಷೆ ಇದೆ. ಸಾಮಾನ್ಯವಾಗಿ ಹೂವು ಕಚ್ಚುವ ವೇಳೆ ತಾಪಮಾನ ಇರಬೇಕು. ಹವಾಮಾನ ವೈಪರಿತ್ಯದಿಂದಾಗಿ ಫಸಲು ನೆಲಕಚ್ಚಿದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ ತಿಳಿಸಿದ್ದಾರೆ. ಸಾಮಾನ್ಯವಾಗಿ ಮಾವಿನ ಫಸಲು ಪ್ರತಿ ವರ್ಷ ಒಂದೇ ತೆರನಾಗಿರುವುದಿಲ್ಲ, ಒಮ್ಮೆ ಉತ್ತಮ ಫಸಲು ಬಂದರೆ ಮುಂದಿನ ವರ್ಷ ಸಹಜವಾಗಿ ಇಳುವರಿ ಕಡಿಮೆಯಾಗುತ್ತದೆ ಎನ್ನಲಾಗಿದೆ.

ರಾಮನಗರ: ಜಿಗಿ ಹುಳ ಕಾಟ

ರಾಜ್ಯದಲ್ಲೇ ಮೊದಲು ಮಾವು ಮಾರುಕಟ್ಟೆಗೆ ಬರುವುದು ರಾಮನಗರ ಜಿಲ್ಲೆಯಿಂದ. 30 ಸಾವಿರ ಹೆಕ್ಟೇರ್​ನಲ್ಲಿ ಮಾವು ಬೆಳೆಯಲಾಗಿದೆ. ಈ ವರ್ಷ ಶೇ.8590 ಮರಗಳಲ್ಲಿ ಹೂವು ಕಾಣಿಸಿಕೊಂಡಿದ್ದು, ಉತ್ತಮ ಫಸಲಿನ ನಿರೀಕ್ಷೆ ಹುಟ್ಟಿಸಿತ್ತು. ಚಿಗುರು ಎರಡು ಬಾರಿ ಬಂದ ಕಾರಣದಿಂದ ಜಿಗಿ ಹುಳದ ಕಾಟ ವ್ಯಾಪಿಸಿತು. ಬಿಸಿಲ ಝುಳವೂ ಹೆಚ್ಚಾಗಿ, ಹೂವೆಲ್ಲ ಉದುರಿದೆ. ಬಾದಾಮಿ ಹೊರತುಪಡಿಸಿ ಉಳಿದ ತಳಿಯ ಮಾವಿಗೆ ಹೆಚ್ಚು ಹಾನಿಯಾಗಿದೆ. ವಾರ್ಷಿಕವಾಗಿ ಜಿಲ್ಲೆಯಿಂದ ಸರಾಸರಿ 2 ಲಕ್ಷ ಟನ್ ಮಾವು ಇಳುವರಿ ದೊರೆಯುತ್ತಿತ್ತು, ಈ ಬಾರಿ ಇದರ ಪ್ರಮಾಣ ಸಂಪೂರ್ಣ ಕುಸಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net