ಮಾವಿನ ನೋವು!; ಇಳುವರಿಗೆ ಕೀಟಬಾಧೆ, ಬಿಸಿಲಿನ ಶಾಕ್!

Mango
Published on

ರಾಜ್ಯದಲ್ಲಿ ಈ ವರ್ಷ ಬೇಸಿಗೆ ಆರ್ಭಟ ಕೊಂಚ ತೀವ್ರ ಎನ್ನುವಂತಿದೆ. 4-5 ವರ್ಷಗಳಿಂದ ಮಾವು ಬೆಳೆಗಾರರು ಒಂದಿಲ್ಲೊಂಡು ಸಂಕಷ್ಟದಲ್ಲೇ ಕಾಲ ದೂಡುವಂತಾಗಿದೆ. ಕರೊನಾ 2 ವರ್ಷ ತಿಂದು ಹಾಕಿದರೆ ಕಳೆದ ವರ್ಷ ನಿರೀಕ್ಷಿತ ಫಸಲು ಸಿಗಲಿಲ್ಲ. ಈ ನಡುವೆ ಅಕಾಲಿಕ ಮಳೆ, ಆಲಿಕಲ್ಲು ಮಳೆ, ಬಿರುಗಾಳಿ ರೈತರನ್ನು ಸಂಕಷ್ಟಕ್ಕೆ ದೂಡಿದ್ದು, ಈ ವರ್ಷ ಕೀಟಬಾಧೆ, ಬೇಸಿಗೆ ಆರಂಭದಲ್ಲೇ ನೆತ್ತಿ ಸುಡುತ್ತಿರುವ ಬಿಸಿಲು ಮಾವು ಬೆಳೆಗಾರರಿಗೆ ಆತಂಕ ಸೃಷ್ಟಿಸಿದೆ.

| ಆರ್.ತುಳಸಿಕುಮಾರ್ ಬೆಂಗಳೂರು

ಚೈತ್ರ ಮಾಸ ಎಂದರೆ ಬೇಸಿಗೆ ಬಿಸಿಲು, ಮರ-ಗಿಡಗಳ ಚಿಗುರಿನ ಜತೆಗೆ ‘ಹಣ್ಣುಗಳ ರಾಜ’ ಮಾವಿನ ಸ್ವಾದವನ್ನು ಆಹ್ಲಾದಿಸುವ ಸಮಯ. ಮಾವಿನ ಸಿಹಿ ಎಂಥವರನ್ನು ಬೆರಗುಗೊಳಿಸುತ್ತದೆ. ಆದರೆ ರೈತರಿಗೆ ಮಾತ್ರ ಈ ಬಾರಿ ಮಾವು ಕೊಂಚ ಹುಳಿಯಾಗಿದೆ. ಭರ್ಜರಿ ಫಸಲು ಎದುರು ನೋಡುತ್ತಿದ್ದ ರೈತರಿಗೆ ಹೀಟ್ ವೇವ್ ಭಾರಿ ಶಾಕ್ ನೀಡಿದೆ. ನಿರಂತರ ಬಿಸಿಲಿನಿಂದಾಗಿ ಮಾವು ಬೆಳೆಯುವ ಪ್ರದೇಶಗಳಲ್ಲಿ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ. ಜತೆಗೆ ಮಾವಿನ ಕಾಯಿಗೆ ನುಸಿ ರೋಗ ಹಾಗೂ ಕೀಟ ಬಾಧೆ ಎದುರಾಗಿದೆ.

ಈ ಹಂಗಾಮಿನಲ್ಲಿ ಮಾವಿನ ಉತ್ತಮ ಫಸಲು ನಿರೀಕ್ಷಿಸಲಾಗಿತ್ತು. ಆದರೆ, ಕೀಟ ಬಾಧೆ ಬೆಳೆಗಾರರನ್ನು ಹೈರಾಣರನ್ನಾಗಿಸಿದೆ. ಹೀಗಾಗಿ ರೈತರು ಮಾವು ಇಳುವರಿ ಕೈಸೇರುವುದೇ ಎಂಬ ಆತಂಕದಲ್ಲಿದ್ದಾರೆ.

ರಾಜ್ಯ ತೋಟಗಾರಿಕೆ ಇಲಾಖೆ ಅಂದಾಜಿಸಿದಂತೆ 15 ಲಕ್ಷ ಟನ್ ಮಾವು ಇಳುವರಿ ಕೈಸೇರುವ ಲೆಕ್ಕಾಚಾರದಲ್ಲಿತ್ತು. ಆದರೀಗ ಅರ್ಧದಷ್ಟು ಇಳುವರಿ ಮಾತ್ರ ಸಿಗುವ ಸಾಧ್ಯತೆ ಇದ್ದು, ಬೆಲೆಯಲ್ಲಿ ಏರಿಳಿತವಾಗುವುದು ನಿಶ್ಚಿತ. ಇಳುವರಿ ಕಡಿಮೆಯಾದಲ್ಲಿ ರೈತರಿಗೆ ಲಾಭ ಸಿಗಬೇಕು. ಆದರೆ, ಮಧ್ಯವರ್ತಿಗಳ ತಂತ್ರದಿಂದಾಗಿ ಬೆವರು ಸುರಿಸಿ ಫಸಲು ತೆಗೆದಿರುವ ಬೆಳೆಗಾರರಿಗೆ ಉತ್ತಮ ದರ ಸಿಗುವ ಅನುಮಾನ ಮೂಡಿದೆ.

ನೊಣದ ಬಲೆ ಬಳಸಲು ತಜ್ಞರ ಸಲಹೆ: ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನೆಲ್ಲೆಡೆ ಉತ್ತಮ ಫಸಲು ಬಂದಿದೆಯಾದರೂ, ಬಿಸಿಲಿನಿಂದಾಗಿ ಕೀಟ ಭಾದೆ ಇಳುವರಿಗೆ ಹೊಡೆತ ನೀಡುವ ಸಾಧ್ಯತೆ ಇದೆ. ಈ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್​ಗೂ ಹೆಚ್ಚು ವಿಸ್ತೀರ್ಣದಲ್ಲಿರುವ ಬೆಳೆಗೆ ನುಸಿ ರೋಗದೊಂದಿಗೆ ಕೀಟ ಬಾಧೆಯೂ ಕಾಡುತ್ತಿದೆ. ಇದರಿಂದ ಮಾವಿನ ಕಾಯಿಗಳು ಕಪು್ಪಮಚ್ಚೆಗೆ ತಿರುಗಿ ನೆಲಕ್ಕುದುರುತ್ತಿವೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ರೈತರು ನೊಣದ ಬಲೆ (ಮೋಹಕ ಬಲೆ) ಯನ್ನು ಬಳಸುವುದು ಯುಕ್ತ. ಪ್ರತಿ ಎಕರೆಗೆ 5-6 ಮೋಹಕ ಬಲೆಗಳನ್ನು ಬಳಸುವುದರಿಂದ ಕೀಟಗಳನ್ನು ಹತೋಟಿಗೆ ತರಬಹುದಾಗಿದೆ. ತಜ್ಞರು ಶಿಫಾರಸು ಮಾಡುವ ಔಷಧವನ್ನು ಸಿಂಪಡಿಸಿದರೆ ಬೆಳೆಯನ್ನು ರಕ್ಷಿಸಿಕೊಳ್ಳಬಹುದು. ಕೀಟ ಬಾಧೆ ಹಾಗೂ ಆಲಿಕಲ್ಲು ಮಳೆ ಬೀಳದಿದ್ದಲ್ಲಿ ಪ್ರತಿ ಎಕರೆಗೆ 10 ಟನ್ ಇಳುವರಿ ನಿರೀಕ್ಷಿಸಬಹುದಾಗಿದೆ ಎಂದು ತೋಟಗಾರಿಕೆ ತಜ್ಞರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಬಿಸಿಲಿಗೆ ಹಳದಿ ಬಣ್ಣಕ್ಕೆ ತಿರುಗಿದ ಮಾವು: ಶ್ರೀನಿವಾಸಪುರದ ಬಳಿಕ ರಾಮನಗರದಲ್ಲಿ ಹೆಚ್ಚು ಮಾವನ್ನು ಬೆಳೆಯಲಾಗುತ್ತಿದೆ. ಇಲ್ಲೂ ಕೂಡ ಬಿಸಿಲಿನ ಝುಳಕ್ಕೆ ಮಾವಿನ ಕಾಯಿಗಳು ಬಾಡಿ ಹಳದಿ ಬಣ್ಣಕ್ಕೆ ತಿರುಗಿವೆ. ಕೆಲವೆಡೆ ಗಿಡಗಳಿಂದ ಕಾಯಿಗಳು ನೆಲಕ್ಕುದುರಿ ಫಸಲಿಗೆ ಕಂಟಕ ತಂದಿದೆ. ಜೋನಿ ಬಾಧೆ ವಿಪರೀತವಾಗಿ ಕಾಣಿಸಿಕೊಂಡು, ಬಿಟ್ಟ ಪೀಚುಗಳು ಔಷಧ ಸಿಂಪಡಿಸಿದರೂ ಕಾಯಿಗಳು ನೆಲಕ್ಕೆ ಉದುರಿವೆ. ರಾಮನಗರದ ವಿವಿಧೆಡೆ ಮಲಗೋವಾ, ರಸಪುರಿ, ಸೇಂಧೂರ ತಳಿ ಮಾವನ್ನು ಹೆಚ್ಚಾಗಿ ಬೆಳೆಸಿದ್ದರೂ, ಲಾಭದ ಸಿಹಿ ಬದಲು ನಷ್ಟದ ಹುಳಿ ಹಿಂಡಲಾಗಿದೆ.

ಮಳೆ ಸಿಂಚನ ಅಗತ್ಯ: ಬಿಸಿಲಿನ ಝುಳದಿಂದ ಮಾವು ಗಿಡಗಳು ಅತಿ ಶಾಖ ತಾಳಲಾರದೆ ಹಾಗೂ ಕೀಟ ಬಾಧೆಯಿಂದ ಬಾಡುತ್ತಿವೆ. ಪ್ರಸ್ತುತ ರೇವತಿ ಮಳೆ ಸಾಧಾರಣ ಪ್ರಮಾಣದಲ್ಲಿ ಆಗದಿದ್ದಲ್ಲಿ ಬೆಳೆ ರಕ್ಷಿಸಿಕೊಳ್ಳಬಹುದೆಂಬ ಮಾತು ಕೇಳಿಬಂದಿದೆ. ಆದರೆ, ಆಲಿಕಲ್ಲು ಮಳೆ ಆಗದಿರಲು ಎಂದು ಬಹುತೇಕ ರೈತರು ವರುಣ ದೇವನತ್ತ ಕೈ ಮುಗಿದಿದ್ದಾರೆ.

ಈ ಬಾರಿ ಮಾವು ಫಸಲು ಕೇವಲ ಶೇ.10ರಿಂದ 15 ರಷ್ಟಿದೆ. ಅದೂ ಕೂಡ ಬಿಸಿಲಿನ ಝುಳ ಜೋನಿ ರೋಗಕ್ಕೆ ತುತ್ತಾಗಿದೆ. ಮಾವು ಬೆಳೆಗಾರರನ್ನು ಸಂಕಷ್ಟದಿಂದ ಸರ್ಕಾರ ಪಾರುಮಾಡಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಲಿಖಿತ ಪತ್ರ ಬರೆದು ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ. | ಆರ್.ಚಿಕ್ಕಬೈರೇಗೌಡ ರಾಮನಗರ ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಸಂಘದ ಅಧ್ಯಕ್ಷ ಈ ಹಂಗಾಮಿನಲ್ಲಿ ಉತ್ತಮ ಮಾವು ಫಸಲು ನಿರೀಕ್ಷಿಸಿದ್ದರೂ, ಕೀಟ ಬಾಧೆ ನಿವಾರಿಸಿಕೊಂಡಲ್ಲಿ ಮಾತ್ರ ಆದಾಯ ಕೈಸೇರುತ್ತದೆ. ಕೀಟಗಳ ಹಾವಳಿ ಹೆಚ್ಚಿರುವೆಡೆ ನೋಣದ ಬಲೆಗಳನ್ನು ಬಳಸಿದ್ದಲ್ಲಿ ಫಸಲನ್ನು ರಕ್ಷಿಸಿಕೊಳ್ಳಬಹುದು. ಇತರ ವಿಧಾನಗಳ ಜತೆಗೆ ಬೆಳೆಗಾರರು ಮೇ ಮಧ್ಯಭಾಗದ ವರೆಗೂ ಎಚ್ಚರಿಕೆ ವಹಿಸುವುದು ಅತ್ಯವಶ್ಯಕವಾಗಿದೆ. | ಶ್ರೀನಿವಾಸಪ್ಪ ಕೆ.ಎನ್. ಪ್ರಾಧ್ಯಾಪಕರು, ಬೆಂ. ಕೃಷಿ ವಿವಿ

ಬೆಳೆ ನಷ್ಟಕ್ಕೆ ಪರಿಹಾರ

ಮಾವು ಬೆಳೆಗಾರರು ಫಸಲು ಕೈಸೇರುವ ಮುನ್ನವೇ ಸಂಕಷ್ಟಕ್ಕೆ ಈಡಾಗಿದ್ದು, ಬೆಳೆ ರಕ್ಷಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ವಣವಾಗಿದೆ. ಪ್ರತಿ ಬಾರಿ ಬೆಳೆಗಾರರು ಒಂದಿಲ್ಲೊಂದು ಕಾರಣಕ್ಕೆ ಕೈ ಸುಟ್ಟುಕೊಳ್ಳುತ್ತಿರುವ ಕಾರಣ ಸರ್ಕಾರ ತುರ್ತಾಗಿ ಮಾವು ಬೆಳೆಗಾರರಿಗೆ ಎಕರೆಗೆ 45 ಸಾವಿರ ರೂ. ಮೊತ್ತದ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಹು-ಧಾ ಭಾಗದಲ್ಲೂ ಇಳುವರಿ ಕೊರತೆ

ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಈ ಬಾರಿ ಮಾವು ಇಳುವರಿ ಕಡಿಮೆಯಾಗುವ ಸೂಚನೆ ಇದೆ. ಧಾರವಾಡ ಜಿಲ್ಲೆಯಲ್ಲಿ ಅಂದಾಜು 8 ಸಾವಿರ ಹೆಕ್ಟೇರ್​ನಲ್ಲಿ ಮಾವು ಬೆಳೆಯಲಾಗಿದ್ದು, ಹವಾಮಾನ ವೈಪರೀತ್ಯದಿಂದ ಶೇ.30 ಇಳುವರಿ ಕೈಸೇರುವ ನಿರೀಕ್ಷೆ ಇದೆ. ಕಲಬುರಗಿ ಜಿಲ್ಲೆಯಲ್ಲಿ 200 ಹೆಕ್ಟೇರ್ ಮಾವು ಬೆಳೆ ಇದ್ದು, ಪ್ರತಿ ಹೆಕ್ಟೇರ್​ಗೆ 10-12 ಟನ್ ಇಳುವರಿ ನಿರೀಕ್ಷಿಸಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 120 ಹೆಕ್ಟೇರ್ ಮಾವು ಬೆಳೆಯಲಾಗುತ್ತಿದ್ದು, ಪ್ರತಿ ಹೆಕ್ಟೇರ್​ಗೆ 8-10 ಟನ್ ಇಳುವರಿ ನಿರೀಕ್ಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧ ‘ಅಂಕೋಲಾ ಈಶಾಡ’ ಮಾವು ಸೇರಿದಂತೆ ಯಾವ ವಿಭಾಗದಲ್ಲೂ ಶೇ.40ಕ್ಕಿಂತ ಹೆಚ್ಚು ಫಸಲು ಇಲ್ಲ. ರುಚಿಕರ ಉಪ್ಪಿನಕಾಯಿಗೆ ಬಳಸುವ ಅಪ್ಪಿಮಿಡಿ, ಮುಂಡಗೋಡದ ಸಿಹಿ ಮಾವು ಕೂಡ ಅಭಾವ ಸೃಷ್ಟಿಸಿದಂತಿದೆ. ಹಾವೇರಿ ಜಿಲ್ಲೆಯ ಹಾನಗಲ್ಲ ಸೇರಿದಂತೆ ಮಲೆನಾಡು, ಅರೆಮಲೆನಾಡು ಭಾಗದಲ್ಲಿ ಮಾವು ಬೆಳೆ ಕಡಿಮೆಯಾಗುವ ಸಾಧ್ಯತೆ ಇದೆ.

ಕೊಪ್ಪಳ ಮಾವು ಬ್ರ್ಯಾಂಡ್: ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ಮಾವಿನ ಇಳುವರಿ ಹೆಚ್ಚಾಗುವ ನಿರೀಕ್ಷೆ ಇದೆ. 3,000 ಹೆಕ್ಟೇರ್ ಪ್ರದೇಶದಲ್ಲಿ ಕೇಸರ್, ತೋತಾಪುರಿ ಇನ್ನಿತರ ತಳಿಯ ಬೆಳೆ ಬೆಳೆಯಲಾಗುತ್ತಿದ್ದು, ಅಂದಾಜು 30 ಸಾವಿರ ಟನ್ ಇಳುವರಿ ನಿರೀಕ್ಷಿಸಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಈ ವರ್ಷವೂ ಮೇ ತಿಂಗಳಲ್ಲಿ ಮಾವು ಮೇಳ ಆಯೋಜಿಸಲಾಗುತ್ತದೆ. ‘ಕೊಪ್ಪಳ ಮಾವು’ ಬ್ರ್ಯಾಂಡ್ ರೂಪಿಸಿದ್ದು, ಇಲಾಖೆ ಮಾರ್ಗದರ್ಶನದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ಚಿಂತನೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net