

ವಾತ ದೋಷ ನಿವಾರಕ: ಚೆನ್ನಾಗಿ ಬಲಿತ ಮತ್ತು ಸಿಹಿಯಾಗಿರುವ ಮಾವಿನ ಹಣ್ಣು ವಾತ ದೋಷವನ್ನು ನಿಯಂತ್ರಿಸುತ್ತದೆ. ಈ ಕಾರಣದಿಂದ ಇದನ್ನು ನರರೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳು ಅಂದರೆ ಅರ್ಧಾಂಗವಾಯು, ಪಾದಗಳಲ್ಲಿ ಉರಿ, ರ್ಪಾನ್ಸನ್ ರೋಗ ಮುಂತಾದ ಸಮಸ್ಯೆಗಳಲ್ಲಿ ಬಳಸಬಹುದು. ಬಹಳಷ್ಟು ಪ್ರಕೃತಿಯ ಜನರಿಗೆ ಇದು ಮಲಬದ್ಧತೆಯನ್ನು ನಿವಾರಿಸಲು ಸಹಕಾರಿ. ಇದು ದೇಹದ ಧಾತುಗಳಿಗೆ ಪುಷ್ಟಿ ನೀಡಿ ಶಕ್ತಿಯನ್ನು ಹೆಚ್ಚಿಸುತ್ತದೆ. ಧನ್ವಂತರಿ ನಿಘಂಟು ಎಂಬ ಗ್ರಂಥದಲ್ಲಿ ಇದರ ಗುಣ ಗಳನ್ನು ವಿವರಿಸುವಾಗ ಬಲ್ಯ, ತರ್ಪಣ ಮತ್ತು ಶುಕ್ರವಿವರ್ಧನ ಎಂಬ ವಿವರಗಳನ್ನು ನೀಡುತ್ತಾರೆ. ಅಂದರೆ ಇದು ದೇಹಕ್ಕೆ ಪೋಷಣೆ ನೀಡಿ ಬಲವನ್ನು ಹೆಚ್ಚಿಸಿ ವೀರ್ಯವೃದ್ಧಿ ಮಾಡುತ್ತದೆ ಎಂದರ್ಥ. ಹಾಗಾಗಿ ಮಾವು ಬೆಳೆಯುವ ಕಾಲದಲ್ಲಿ ಹೆಚ್ಚಾಗಿ ಮಾವಿನ ಹಣ್ಣನ್ನು ಸೇವಿಸುವುದರಿಂದ ಬೇಸಿಗೆಯಲ್ಲಿ ಆಗುವ ಸುಸ್ತು, ಬಾಯಾರಿಕೆಗಳನ್ನು ನೀಗಿಸಿಕೊಂಡು ದೇಹದ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಆದರೆ ಹುಳಿಯಿರುವ ಮಾವಿನಕಾಯಿಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ವಾತ, ಪಿತ್ತ ಮತ್ತು ರಕ್ತ ದುಷ್ಟಿ ಆಗುತ್ತದೆ. ತುಸು ಹುಳಿಯಾಗುವ ಮಾವಿನಹಣ್ಣುಗಳನ್ನು ಸ್ವಲ್ಪಮಟ್ಟಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ಅನುಕೂಲವೂ ಆಗುತ್ತದೆ.
ತೊಗಟೆಯೂ ಆರೋಗ್ಯದಾಯಕ: ಮಾವಿನ ಮರದ ತೊಗಟೆ ತುಂಬಾ ಒಗರು ರುಚಿಯಿದೆ. ಈ ಕಾರಣದಿಂದಾಗಿ ಇದು ಐಬಿಎಸ್, ಭೇದಿ ಮುಂತಾದ ಸಮಸ್ಯೆಗಳಲ್ಲಿ ತುಂಬಾ ಲಾಭದಾಯಕ. ಎಷ್ಟೋ ಹಳ್ಳಿಗಳಲ್ಲಿ ಇಂದಿಗೂ ಭೇದಿ, ಆಮಶಂಕೆ ಯಂತಹ ಸಮಸ್ಯೆಗಳಲ್ಲಿ ಮಾವಿನ ಮರದ ತೊಗಟೆಯನ್ನು ಮಜ್ಜಿಗೆಯಲ್ಲಿ ತೇಯ್ದು ತಿನ್ನಿಸುವುದು ಪ್ರಾಥಮಿಕ ಚಿಕಿತ್ಸೆಯಾಗಿದೆ ಮತ್ತು ಇದರಿಂದ ಔಷಧಗಳ ಸೇವನೆಯನ್ನು ಬಹಳಷ್ಟು ಬಾರಿ ತಪ್ಪಿಸಲು ಸಾಧ್ಯವಿದೆ. ಮಾವಿನ ಮರದ ಎಳೆ ಚಿಗುರುಗಳಿಗೂ ಕೂಡ ಇದೇ ರೀತಿಯ ಗುಣವಿರುವ ಕಾರಣ ಪದೇ ಪದೇ ಭೇದಿ ಆಗುವಂತಹ ಐಬಿಎಸ್ ಸಮಸ್ಯೆ ಅನುಭವಿಸುತ್ತಿರುವವರು ಪ್ರತಿನಿತ್ಯ ಐದಾರು ಚಿಗುರೆಲೆಗಳನ್ನು ಜಗಿದು ಸೇವಿಸಬಹುದು. ಇದರಿಂದ ಬಾಯಿ ರುಚಿ ಹೆಚ್ಚುವುದರ ಜೊತೆಗೆ ಸರಿಯಾಗಿ ಹಸಿವೆಯೂ ಆಗುತ್ತದೆ.
ಮಾವಿನ ಬೀಜ: ಮಾವಿನ ಹಣ್ಣನ್ನು ತಿಂದ ನಂತರ ಸಿಗುವ ಒರಟೆಯನ್ನು ಒಡೆದರೆ ಸಿಗುವ ಮೆತ್ತನೆಯ ಬೀಜ ಕೂಡ ತುಂಬಾ ಒಳ್ಳೆಯ ಔಷಧವಾಗಿದೆ. ಇದರ ಒಗರು ರುಚಿಯ ಕಾರಣದಿಂದ ಇದನ್ನು ಅತಿಯಾದ ರಕ್ತಸ್ರಾವ, ಭೇದಿ, ಆಮಶಂಕೆ, ಬಿಳಿ ಮುಟ್ಟಿನ ತೊಂದರೆಗಳಲ್ಲಿ ಉಪಯೋಗಿಸಬಹುದು. ಬೀಜದ ಒಳಗಿನ ತಿರುಳುಗಳನ್ನು ಒಣಗಿಸಿ ಇಟ್ಟುಕೊಂಡರೆ ಅವಶ್ಯಕತೆ ಇರುವಾಗ ಬಳಸಬಹುದು. ಬಿಳಿಮುಟ್ಟಿನ ಸಮಸ್ಯೆ ಇರುವಾಗ ಕಾಲು ಚಮಚದಷ್ಟು ಈ ಪುಡಿಯನ್ನು ಅಕ್ಕಿ ನೆನೆಸಿದ ನೀರಿನಲ್ಲಿ ಹಾಕಿ ಸೇವಿಸಿದರೆ ಬಹಳ ಬೇಗ ನಿಯಂತ್ರಣಕ್ಕೆ ಬರುತ್ತದೆ.
ಹಲ್ಲಿನ ಆರೋಗ್ಯಕ್ಕೆ..: ಮಾವಿನ ಎಲೆಗಳಿಂದ ಹಲ್ಲುಜ್ಜುವುದರಿಂದ ಹಲ್ಲಿನ ಆರೋಗ್ಯ ತುಂಬಾ ಚೆನ್ನಾಗಿ ಹೆಚ್ಚುತ್ತದೆ ಎಂಬುದು ಸಾಬೀತಾಗಿದೆ. ಬೇರಿನಿಂದ ಹಿಡಿದು ಬೀಜದವರೆಗೆ ಇದರಿಂದ ಆಗುವ ಪ್ರಯೋಜನಗಳನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ. ಅತ್ಯಂತ ಪುಷ್ಟಿದಾಯಕವಾದ ಮತ್ತು ತಂಪು ಗುಣವನ್ನು ಹೊಂದಿ ರುವ ಸಿಹಿ ಮಾವಿನಹಣ್ಣುಗಳನ್ನು ಈ ಬೇಸಿಗೆಯಲ್ಲಿ ಖುಷಿಯಿಂದ ಸವಿಯಬಹುದು. ಆದರೆ ಇತ್ತೀಚೆಗೆ ರಾಸಾಯನಿಕಗಳ ಬಳಕೆ ಅತಿಯಾಗಿರುವುದರಿಂದ ಕಾಯಿಗಳನ್ನು ಖರೀದಿಸಿ ಮನೆಯಲ್ಲಿಯೇ ಹಣ್ಣು ಮಾಡಿಕೊಂಡು ಸೇವಿಸುವುದು ಉತ್ತಮ.