ಪ್ರವಾಸಕ್ಕೂ ಮನಸ್ಸಿಗೂ ಸವಾಲೆಸೆಯುವ ಮಾಂಗಿ ತುಂಗಿ

ವಿಜಯವಾಣಿ (2)
Published on

(ಲೇಖಕರು ಕತೆಗಾರರು)

ಪ್ರವಾಸ ಎಂದರೆ ಯೋಜಿತ, ಮುಂಗಡ ಬುಕ್ಕಿಂಗ್ ಮತ್ತು ನಿರ್ದಿಷ್ಟ ಸ್ಥಳಗಳ ದರ್ಶನ, ಹವಾನಿಯಂತ್ರಿತ ಕೋಣೆಗಳಲ್ಲಿ ವಾಸ್ತವ್ಯ ಹಾಗೂ ಸಾಮಾಜಿಕ ಜಾಲತಾಣಗಳಿಗಾಗಿ ಒಂದಷ್ಟು ಆಯ್ದ ಚಿತ್ರಗಳು, ರೀಲ್ಸ್​ಗಳು ಎಂಬಂತಿರುವ ಏಕತಾನತೆಯನ್ನು ಮುರಿಯುವ ಸಾಧ್ಯತೆ ಇರುವುದೇ ಆಫ್​ಬೀಟ್ ಪ್ರವಾಸಗಳಿಗೆ ಮತ್ತು ದಿನಪೂರ್ತಿ ಶ್ರಮವಹಿಸಿ ಕ್ರಮಿಸುವ ಕೆಲವು ಪ್ರದೇಶಗಳ ಭೇಟಿಗಳಲ್ಲಿ.

ವಿಶೇಷವಾಗಿ ಮಹಾರಾಷ್ಟ್ರದ ಸಹ್ಯಾದ್ರಿ ಶ್ರೇಣಿಗಳು ಇಂಥ ಚಾರಣ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿವೆ. ನಮ್ಮ ಮಲೆನಾಡಿನ ಪರ್ವತ ಪ್ರದೇಶದಂತೆ ಹರಡಿಕೊಂಡ ಅಪರೂಪದ ಗಿರಿಕಂದರಗಳಲ್ಲಿ, ಆಫ್​ಬೀಟ್ ಟ್ರಾವೆಲ್ ಎಂಬುವುದು ಈಗ ಭಾರಿ ಫೇಮಸ್ಸು, ಆದರೂ ಕೆಲವೊಮ್ಮೆ ಇಂಥವು ಗಮನಕ್ಕೆ ಬಾರದೇ ಹೋಗುತ್ತವೆ. ಕಾರಣ ಸ್ಥಳೀಯವಾಗಿ ಮಾಹಿತಿ ಲಭ್ಯ ಇಲ್ಲದಿರುವುದು ಅಥವಾ ನಮಗೆ ಕೈಗೆಟುಕದಿರುವುದು. ಜಾಗತಿಕ ಪ್ರಸಿದ್ಧಿಗೆ ಬರಬಹುದಾಗಿದ್ದರೂ, ನಮ್ಮ ಮಟ್ಟದಲ್ಲೂ ನಮ್ಮ ಯಾದಿಗೇ ಸೇರದ ನತದೃಷ್ಟ ಪ್ರದೇಶಗಳೂ ಉಳಿದು ಹೋಗಲು ಕಾರಣ ನಮ್ಮ ನಿರ್ಲಕ್ಷತೆ ಮಾತ್ರವೇ.

ದೂರದ ಚಂದ್ರನಿಂದಲೂ ಕಂಡು ಬರುವ ಐತಿಹಾಸಿಕ ಇಮಾರತು ಎಂದರೆ ಚೀನಾ ದೇಶದ ಮಹಾಗೋಡೆ. ಅದರ ತದ್ರೂಪಿಯಂತಿರುವ ಆದರೆ ಅದರಂತೆ ಪ್ರಸಿದ್ಧಿಗೆ ಬರದಿರುವ, ಜೈನ ಕ್ಷೇತ್ರವಾಗಿಯೂ ಇರುವ ಸ್ಥಳವೊಂದು ನಮ್ಮ ಪಕ್ಕದ ಮಹಾರಾಷ್ಟ್ರದಲ್ಲಿದೆ. ಚೀನಾ ಗೋಡೆಯಂತೆಯೇ ಪರ್ವತದ ಮಧ್ಯದಲ್ಲಿ ಅಗಾಧವಾಗಿ ಮೆಟ್ಟಿಲು ಮೆಟ್ಟಿಲಾಗಿ ಹರಡಿಕೊಂಡಿರುವ ಈ ಪ್ರದೇಶ ಆಗೀಗ ಕಣ್ಣಿಗೆ ಬಿದ್ದಿದ್ದೇ ಅದರೆ ಅದು ಚಾರಣಿಗರಿಂದಾಗಿಯೇ. ಹೆಸರಿನಿಂದಾಗಿಯೂ ಮುದ ಕೊಡುವ ‘ಮಾಂಗಿ ತುಂಗಿ’ ನಮ್ಮ ಮಟ್ಟಿಗೆ ಭಾರತದ ಮತ್ತೊಂದು ಕುಂಭಲಗಢ ಎಂದರೂ ತಪ್ಪಿಲ. ಜೈನ ಸಮುದಾಯ ಉಚ್ಛಾಯಕಾಲದಲ್ಲಿ ಸಮೂಹ ದೈವಿಸ್ಥಳವಾಗಿ ಪ್ರಚಲಿತಕ್ಕೆ ಬಂದ ‘ಮಾಂಗಿ’ ಮತ್ತು ‘ತುಂಗಿ’ ಹೆಸರಿನ ಎರಡೂ ಗಿರಿಶಿಖರಗಳು ಒಂದೇ ಪರ್ವತದ ಎರಡು ವಿಭಿನ್ನ ಧ್ರುವಗಳು.

ಮೊದಲನೆಯದಾಗಿ ಸಿಕ್ಕುವ ‘ಮಾಂಗಿ’ ಪರ್ವತ ಪ್ರದೇಶದ ತುದಿ 4343 ಅಡಿ ಎತ್ತರದ ಶಿಖರವಾಗಿದ್ದರೆ, ಪರ್ವತದ ಇನ್ನೊಂದು ತುದಿಗಿರುವ ‘ತುಂಗಿ’ 4366 ಅಡಿ ಎತ್ತರದಲ್ಲಿದ್ದು ಚಾರಣಿಗರಿಗೆ ಆಕರ್ಷಣೀಯ ಸ್ಥಳ. ಪ್ರತಿವರ್ಷ ಕಾರ್ತಿಕ ದೀಪಾರಾಧನೆಯಂದು ದೀಪೋತ್ಸವ ಜರುಗಿಸುವ ಈ ಸ್ಥಳಕ್ಕೆ ತಲುಪಲು ಏರಬೇಕಾದ ತಯಾರಿಯನ್ನು ಬೇಸ್​ಕ್ಯಾಂಪಿನಲ್ಲೇ ಮಾಡಿಕೊಳ್ಳಬೇಕಾಗುತ್ತದೆ. ಮಹಾರಾಷ್ಟ್ರದ ನಾಸಿಕ್​ನಿಂದ 125 ಕಿ.ಮೀ. ದೂರದ ‘ಮಾಂಗಿ ತುಂಗಿ’ ಪರ್ವತಗಳು ಎತ್ತರದಿಂದಷ್ಟೆ ಅಲ್ಲ ತಮ್ಮ ಸಹಜ ಸೃಷ್ಟಿ ಸೌಂದರ್ಯದಿಂದಲೂ ಮನಸೆಳೆಯುತ್ತವೆ. ನಾಸಿಕ್​ನಿಂದ ಸಾತ್ನಾ ತಾಲೂಕು ಕೇಂದ್ರ ತಲುಪಿ ಅಲ್ಲಿಂದ ಬೇಸ್​ಕ್ಯಾಂಪ್ ಎಂದೆನ್ನಿಸಿಕೊಳ್ಳುವ ಭಿಲ್ವಾಡಿ ಗ್ರಾಮವನ್ನು ಸೇರಿಕೊಂಡರೆ ಅಲ್ಲಿಂದ ಮುಂದೆ ಸರಿಸುಮಾರು 4500 ಮೆಟ್ಟಿಲುಗಳ ಪರ್ವತದ ಬೆನ್ನಿನ ಮೇಲೆ ಕೊರೆದಿರುವ ಮಹಾಗೋಡೆಯಂತೆ ನಿರ್ವಿುಸಿಲಾಗಿರುವ ಶಿಲಾಬಂಡೆಯನ್ನು ಏರಲು ಸಜ್ಜಾಗಬೇಕಾಗುತ್ತದೆ.

ಕಪ್ಪು ಶಿಲಾಪರ್ವತದ ಬೆನ್ನ ಮೇಲೆ 1500 ವರ್ಷಗಳ ಹಿಂದೆ ನಿರ್ವಿುಸಿಲಾಗಿರುವ ಮಾನವ ಸಹಜ ಅದ್ಭುತಗಳಲ್ಲಿ ಒಂದಾದ ಮಾಂಗಿ ತುಂಗಿ ಇವತ್ತು ರಾಜಸ್ಥಾನದ ಕುಂಭಲಗಢದ ಮಿನಿಯೇಚರ್​ನಂತೆ ಕಂಡುಬರುತ್ತದೆ. 1650 ವರ್ಷಗಳಷ್ಟು ಹಳೆಯ ಕಾಲಾವಧಿಯಲ್ಲಿ ಮಹಾವೀರ, ಆದಿನಾಥ, ಶಾಂತಿನಾಥ ಮತ್ತು ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆಗಳನ್ನು ಇಲ್ಲಿ ಸ್ಥಾಪಿಸಲಾಗಿದ್ದು, ಜೈನರಿಗೆ ಸಂಬಂಧಿಸಿದ ಹಲವು ಶಿಲಾಲೇಖಗಳು ಲಭ್ಯವಿವೆ. ಪರ್ವತದ ಮೊದಲಿನ ತುದಿಗೆ ಲಭ್ಯವಾಗುವ, ಐದು ಚಿಕ್ಕ ದೇವಸ್ಥಾನಗಳನ್ನು ಹೊಂದಿರುವ ಮಾಂಗಿ ತುದಿಯಲ್ಲಿ ಅಗಾಧವಾದ ನಿಸರ್ಗ ಚೆಲುವಿನ ಹಿನ್ನೋಟ ಹಾಗೂ ಚೀನಾ ಗೋಡೆಯಂತೆ ಕಾಣುವ, ಹತ್ತಿ ಬಂದಿರುವ ನಾಲ್ಕೂ ಸಾವಿರ ಚಿಲ್ಲರೆ ಮೆಟ್ಟಿಲ ದಾರಿ, ನೋಡುಗರಿಗೆ ಅಪೂರ್ವ ದೃಶ್ಯಾವಳಿಗಳನ್ನು ನೀಡುತ್ತದೆ.

ಇಲ್ಲಿ ಹಲವು ಪುರಾತನ ಜೈನ ಮುನಿಗಳ ಪಾದುಕೆಗಳನ್ನು ಸ್ಥಾಪಿಸಲಾಗಿದ್ದು, ಕೃಷ್ಣ ಕುಂಡ ಎನ್ನುವ ತಿಳಿನೀರ ಸರೋವರ ಅಷ್ಟು ಎತ್ತರದಲ್ಲಿದ್ದೂ ಯಾವಾಗಲೂ ನೀರಿನ ಒರತೆಯನ್ನು ಸೂಸುತ್ತಿರುತ್ತದೆ. ಕೃಷ್ಣ ಮತ್ತು ಬಲರಾಮರು ಇಲ್ಲಿಂದಲೇ ಮುಕ್ತಿಯನ್ನು ಹೊಂದಿದರು ಎನ್ನುವ ಪ್ರತೀಕವಾಗಿ ಈ ಕುಂಡವೂ, ಬಲರಾಮ ಹೆಸರಿನ ಒಂದು ತಪಸ್ಸಿನ ಗುಹೆಯೂ ಇಲ್ಲಿದೆ. ಇಲ್ಲಿಂದ ಇನ್ನೊಂದು ಪಾರ್ಶ್ವದಲ್ಲಿಂದ ಕೊರೆಯಲಾಗಿರುವ ಮೆಟ್ಟಿಲುಗಳ ಮುಖಾಂತರ ಇಳಿದಲ್ಲಿ ಲಭ್ಯವಾಗುವುದೇ ‘ತುಂಗಿ’. 8ನೇ ತೀರ್ಥಂಕರ ಚಂದ್ರ ಪ್ರಭುವಿನ ಹೆಸರಿನ ಗುಹೆಯನ್ನು ಹೊಂದಿರುವ ತುಂಗಿ ಕಡಿದಾದ ತುದಿಯಲ್ಲಿ ಅಪೂರ್ವ ಶಿಲಾ ಶಿಖರವನ್ನು ಹೊಂದಿದ್ದು, ಅದು ಮತ್ತೆ 100 ಅಡಿಗೂ ಮಿಗಿಲಾಗಿದೆ. ಅದರ ಪಾದದವರೆಗೂ ಚೀನಾ ಗೋಡೆಯಂಥ ಮೆಟ್ಟಿಲ ಸಾಲು ಸಾಗಿ ಹೋದರೆ ಅದರ ಸುತ್ತಲೂ ಪ್ರದಕ್ಷಿಣೆ ಬರಲೂ ಅನುಕೂಲವಾಗುವಂತೆ ಪರ್ವತವನ್ನು ಕೊರೆದು ಸ್ಥಳಾವಕಾಶ ಕಲ್ಪಿಸಲಾಗಿದೆ. ಹನುಮ, ರಾಮ ಮತ್ತು ನೀಲ ಹೆಸರಿನ ಪ್ರತಿಮೆಗಳನ್ನು ಇದರ ಮೇಲೆ ಕಾಣಬಹುದು.

‘ಶುದ್ಧ’ ಮತ್ತು ‘ಬುದ್ಧ’ ಹೆಸರಿನ ಎರಡು ಗುಹೆಗಳು ದಾರಿಮಧ್ಯದಲ್ಲಿದ್ದು ಇದನ್ನು ಹಾಯ್ದು ಹೋಗುವಂತೆ ವೃತ್ತಾಕಾರದ ಮಾಲೆಯ ಆಕಾರದಲ್ಲಿ ‘ಮಾಂಗಿ’ ಮತ್ತು ‘ತುಂಗಿ’ಯನ್ನು ಸಂಪರ್ಕಿಸುವ ಮೆಟ್ಟಿಲುಗಳನ್ನು ಕೊರೆಯಲಾಗಿದೆ. ದಾರಿಯುದ್ದಕ್ಕೂ ಯಕ್ಷ ಮತ್ತು ಯಕ್ಷಿಣಿಯರ ಮೂರ್ತಿಗಳನ್ನು ಕೊರೆಯಲಾಗಿದ್ದು, ಸಾಕಷ್ಟು ಅಗಲವಾಗಿರುವ ಮೆಟ್ಟಿಲಿನ ಎರಡೂ ಕಡೆಯಲ್ಲೂ ತಡೆಗೋಡೆಗಳಿದ್ದು, ಆ ಎತ್ತರದಿಂದ ಬೀಳುವ ಅಥವಾ ಅಪಾಯಕ್ಕೀಡಾಗುವ ಸಂಭಾವ್ಯವನ್ನು ಆಗಲೇ ಊಹಿಸಿ ನಿರ್ವಿುಸಿದ ನಾಲ್ಕೂವರೆ ಸಾವಿರ ಅಡಿ ಎತ್ತರದ ಮೆಟ್ಟಿಲ ಗೋಡೆ ಪರ್ವತದ ಒಂದೊಂದು ಮಗ್ಗುಲಿಂದ ನೋಡಿದಾಗಲೂ ಮಹಾಗೋಡೆಯಂತೆ ಕಾಣಿಸುತ್ತದೆ. ಸುಮಾರು ನಾಲ್ಕೂ ನೂರ ವರ್ಷಗಳಿಗೂ ಹೆಚ್ಚು ಕಾಲ ಈ ಪ್ರದೇಶವನ್ನು ಆಳಿದ ಮುಲ್ಹೇರ ರಾಜ ವಂಶಸ್ಥರಲ್ಲಿ ವಿರಾಮದೇವ ಈ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ. ಪಾವಿತ್ರ್ಯ ಕಾಯ್ದುಕೊಳ್ಳುವ ದೃಷ್ಟಿಯಿಂದ ಅವನ ಕಾಲಾವಧಿಯಲ್ಲಿ ಈ ಪರ್ವತದ ಮೇಲಿರುವ ಅಸಂಖ್ಯಾತ ದೇವತಾ ವಿಗ್ರಹಗಳನ್ನು ಸ್ಥಾಪಿಸಿದನಲ್ಲದೆ, ಸ್ವತಃ ಚಕ್ರೇಶ್ವರಿಯ ಆರಾಧಕನೂ ಆಗಿದ್ದ. ಅದಕ್ಕಾಗಿ ಇಲ್ಲಿಯೂ ಚಕ್ರೇಶ್ವರಿಯನ್ನು ಪ್ರತಿಷ್ಠಾಪಿಸಿದ್ದನಲ್ಲದೆ ಯಾವುದೇ ಯುದ್ಧಕ್ಕೆ ಹೊರಡುವ ಮುನ್ನ ಇಲ್ಲಿಂದಲೇ ತನ್ನ ಪಯಣ ಆರಂಭಿಸುತ್ತಿದ್ದನೆನ್ನಲಾಗಿದೆ.

ಮಾಂಗಿ ತುಂಗಿಯನ್ನು ಸಂದರ್ಶಿಸಲು ಮತ್ತು ಪ್ರಕೃತಿಯನ್ನು ಆನಂದಿಸಲು ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಆರಂಭವಾಗಿ ಜನವರಿ ಕೊನೆಯವರೆಗೆ ಸೂಕ್ತ ಕಾಲಾವಧಿ. ಕಾರಣ ಆಗಷ್ಟೇ ಮಳೆ ಬಿದ್ದು ಚಿಗುರೊಡೆದ ಹಸಿರು ಕಣ್ಣಿಗೆ, ಮನಸ್ಸಿಗೆ ಮುದವನ್ನುಂಟು ಮಾಡಬಲ್ಲದು. ಮಹಾರಾಷ್ಟ್ರದ ಯಾವುದೇ ಭಾಗದಿಂದಲೂ ನಾಸಿಕ್ ಅಥವಾ ಸಾತ್ನಾ ಪಟ್ಟಣಕ್ಕೆ ಸಾಕಷ್ಟು ವಾಹನ ಸೌಕರ್ಯಗಳಿದ್ದು, ತಲುಪುವುದು ಸುಲಭ. ಇಲ್ಲವಾದರೆ ತೆಹ್ರಾಬಾದ್​ನಿಂದಲೂ 35 ಕಿ.ಮೀ. ಕ್ರಮಿಸಿದರೆ ಭಿಲ್ವಾಡಿ ಬೇಸ್​ಕ್ಯಾಂಪ್ ತಲುಪಬಹುದಾಗಿದ್ದು ಅಲ್ಲಿ ಜೈನ ಸಮುದಾಯದವರು ನಿರ್ವಿುಸಿದ ಕೆಲವು ವ್ಯವಸ್ಥೆಗಳು ಚಾರಣವನ್ನು ಹಿತವಾಗಿಸುತ್ತದೆ. ಭಿಲ್ವಾಡಿ ಗ್ರಾಮದ ಆಸುಪಾಸಿನಲ್ಲಿ ಜೈನ ಸಮುದಾಯದ ವಿಶ್ರಾಂತಿಧಾಮಗಳಿದ್ದು, ಹಿಂದಿನ ದಿನವೇ ಅಲ್ಲಿ ವಸತಿ ಹೂಡಿಕೊಂಡರೆ ಮರುದಿನ ಬೆಳಗ್ಗೆ ಎದ್ದು ಹೊರಡಲು ಅನುಕೂಲ.

ಕಾರಣ ಯಾತ್ರಿಗಳು ಮರುದಿನ ಬೆಳಗ್ಗೆ ಪರ್ವತದ ಪಾದವನ್ನು ಸೇರಲು ಅನುಕೂಲ ಮಾಡಿಕೊಳ್ಳಲೇ ಬೇಕು ಬಿಸಿಲ ಬೇಗೆ ತಡೆಯಲು. ಇದರಿಂದಾಗಿ ಮಾಂಗಿ ತುಂಗಿ ಮತ್ತು ಹತ್ತಿರದ ಕಂಚನಪುರ ಕೋಟೆಯನ್ನು ಸಂದರ್ಶಿಸಲು ಅನುಕೂಲವಾಗುವಂತೆ ಸಾತ್ನಾದಿಂದ ವಾಹನಸೌಕರ್ಯ ಮಾಡಿಕೊಂಡರೆ ಅನುಕೂಲ. ಭಿಲ್ವಾಡಿಯಿಂದ ಒಂದೂವರೆ ಕಿ.ಮೀ. ಏರುದಾರಿ ಪರ್ವತ ಪ್ರದೇಶದ ಪಾದಕ್ಕೆ ತಂದು ನಿಲ್ಲಿಸುತ್ತದೆ. ಬೆಳಗಿನ ಜಾವಕ್ಕೆ ಏರಲು ಆರಂಭಿಸುವುದು ಎಲ್ಲರೂ ಅನುಸರಿಸುವ ಪದ್ಧತಿ. ಕಾರಣ ಬಿಸಿಲೇರುತ್ತಿದ್ದಂತೆ ಎತ್ತರದ ಪ್ರದೇಶದಲ್ಲಿ ಒಣಹವೆಯ ಸಂಚಾರ ಮತ್ತು ಕಾಯ್ದು ನಿಲ್ಲುವ ಕಪ್ಪುಕಲ್ಲಿನ ಏರುದಾರಿ ಚಾರಣವನ್ನು ಅಸಹನೀಯವಾಗುತ್ತದೆ. ಅದಕ್ಕಾಗಿ ಬೆಳಗ್ಗೆ ಐದು ಗಂಟೆಯ ಹೊತ್ತಿಗಾಗಲೇ ಪರ್ವತದ ಪಾದವನ್ನು ಸೇರಿಕೊಳ್ಳುವ ಚಾರಣಿಗರು ಸೂರ್ಯ ನೆತ್ತಿಗೇರುವ ಹೊತ್ತಿಗಾಗಲೇ ಮಾಂಗಿ ತುಂಗಿಯನ್ನು ಮುಗಿಸಿ ಕೆಳಕ್ಕಿಳಿಯುವ ಸನ್ನಾಹದಲ್ಲಿರುತ್ತಾರೆ. ಹೆಚ್ಚಿನ ತಂಡಗಳ ಯಾತ್ರಿಗಳ ಆಯ್ಕೆ ಇದೇ ಆಗಿದ್ದು, ಸ್ಥಳೀಯರೂ, ಗೈಡುಗಳು ಅದನ್ನೇ ಸೂಚಿಸುತ್ತಾರೆ.

ಮಾಂಗಿ ತುಂಗಿಯ ಪರ್ವತ ಶಿಖರಗಳ ಮಧ್ಯದಲ್ಲೊಂದು ಪುರಾತನ ಕೃಷ್ಣನ ದೇವಾಲಯವಿದ್ದು, ಅದೊಂದು ಅದ್ಭುತ ಲ್ಯಾಂಡ್​ಸ್ಕೇಪ್. ಅಲ್ಲಿಂದ ಹಿಂದಿರುಗಿ ಒಂದು ಸುತ್ತು ತುಂಗಿಯನ್ನು ಪ್ರದಕ್ಷಿಣೆ ಮಾಡಿ ಕೆಳಕ್ಕಿಳಿಯುವಾಗಲೇ ಅರ್ಧ ನೆತ್ತಿ ಸುಡತೊಡಗಿರುತ್ತದೆ. ಪರ್ವತ ಪಾದದಿಂದ ತುಂಗಿಯನ್ನು ವೃತ್ತಾಕಾರವಾಗಿ ಸುತ್ತಿ ಕೆಳಕ್ಕಿಳಿಯುವ ದೂರ ಸುಮಾರು ಹದಿನೈದು ಕಿ.ಮೀ.ನಷ್ಟಾಗುತ್ತದೆ. ಸಾಲು ಸಾಲಾಗಿ ಮೆಟ್ಟಿಲುಗಳನ್ನು ನಿರ್ವಿುಸಲಾಗಿದೆಯಾದರೂ ಒಂದೊಂದು ಮೆಟ್ಟಿಲೇ ನಾಲ್ಕೈದು ಹೆಜ್ಜೆಗಳಾಗುತ್ತವೆ. ಆರು ಅಡಿಗೊಂದರಂತೆಯೂ ಮೆಟ್ಟಿಲುಗಳಿದ್ದು ನಾಲ್ಕೂವರೆ ಸಾವಿರ ಮೆಟ್ಟಿಲು ಕ್ರಮಿಸುವುದು ಲೆಕ್ಕಾಚಾರಕ್ಕಾದರೂ ದೂರ ಮಾತ್ರ ಲೆಕ್ಕಕ್ಕೆ ಸಿಗುವುದಿಲ್ಲ.

ಒಮ್ಮೆ ನೋಡಿಯೇ ಅನುಭವಿಸಬೇಕಾದ ಈ ಗೋಡೆ ಎತ್ತರ, ಆಳ ಅಗಲ ವಿನ್ಯಾಸದಲ್ಲಿ ಅನುಭವಕ್ಕೆ ಮುದ ನೀಡುವ ಮಾಂಗಿ ತುಂಗಿ ಜೋಡಿ ಪರ್ವತ ಶಿಖರಗಳನ್ನು ಏರಿ ಚಾರಣ ಮಾಡಲು ಬರುವವರ ಸಂಖ್ಯೆ ಈಗೀಗ ಗಣನೀಯವಾಗಿ ಏರುತ್ತಿದ್ದರೂ ಈಗಲೂ ಇದು ಜೈನಮುನಿಗಳ ಆರಾಧ್ಯ ಸ್ಥಳವಾಗಿ, ಜೈನರ ತೀರ್ಥಕ್ಷೇತ್ರವಾಗಿಯೇ ಗುರುತಿಸಲ್ಪಡುತ್ತಿದೆ. ಆ ಒಂದು ಕಾರಣದಿಂದಲೇ ಬೇಸ್​ಕ್ಯಾಂಪಿನಲ್ಲೂ ಸಾಕಷ್ಟು ಸೌಲಭ್ಯಗಳು ಲಭ್ಯವಾಗುತ್ತಿವೆ. ಆದರೆ ಇತರ ಸಹಜ ಆಫ್ ಬೀಟ್ ಟ್ರೆಕ್ ಅಥವಾ ಪ್ರಯಾಣಕ್ಕೆ ಹೋಲಿಸಿದರೆ ಇದು ಸಹಜ ಪ್ರವಾಸ ಲೆಕ್ಕದಲ್ಲಿಲ್ಲ. ಒಂದು ಕನಿಷ್ಠ ಫಿಟ್​ನೆಸ್ ದೇಹಕ್ಕೆ ಬೇಕೆಬೇಕು. ಜೊತೆಗೆ ಪ್ರಯಾಸದ ಪ್ರವಾಸ ಎಂದು ಗೊಣಗದೆ ಇದಕ್ಕೆಲ್ಲ ಪಕ್ಕಾಗುವವರಿಗೆ ಮಾತ್ರ ಮಾಂಗಿ ತುಂಗಿ ಕೈಗೆಟುಕುತ್ತಾಳೆ. ಮತ್ತೆ ಅಲೆಮಾರಿತನ ಎಂದರೆ ಸುಮ್ಮನೇನಾ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net