

ಸಿನಿಮಾ, ಟಿವಿ ಧಾರಾವಾಹಿಗಳ ಅಬ್ಬರದ ನಡುವೆ ನಾಟಕಗಳನ್ನು ನೋಡುವವರೇ ಕಡಿಮೆ. ಅದರಲ್ಲೂ ರಾತ್ರಿ ಆರಂಭವಾಗಿ ಬೆಳಗಿನ ಜಾವದ ತನಕ ನಡೆಯುತ್ತಿದ್ದ ಸುದೀರ್ಘ ಪೌರಾಣಿಕ ನಾಟಕಗಳು ಮರೆಯಾಗಿ ಎಷ್ಟೋ ಸಮಯವಾಯಿತು. ಇಂಥ ಕಾಲಘಟ್ಟದಲ್ಲಿಯೂ ಅಹೋರಾತ್ರಿ ನಾಟಕವೊಂದು ಹೌಸ್ಫುಲ್ ನಡೆಯುತ್ತಿದೆಯೆಂದರೆ ಅಚ್ಚರಿಯಲ್ಲವೆ?
ಕುವೆಂಪು ಅವರ ಕಾದಂಬರಿಯ ಸೃಜನಶೀಲತೆಯು ಇಲ್ಲಿ ರಂಗಜಗತ್ತಿನ ಮೂಲಕ ಮರುಹುಟ್ಟು ಪಡೆದಿದೆ. ಏಳುನೂರು ಪುಟಗಳ ಬೃಹತ್ ಕಾದಂಬರಿಯಲ್ಲಿರುವ ಅರಣ್ಯಜೀವನದ ಚಿತ್ರಣವನ್ನು ನೂರಾರು ಕಲಾವಿದರು 9 ಗಂಟೆಗಳಲ್ಲಿ ಕಣ್ಣಮುಂದೆ ಕಟ್ಟಿ ನಿಲ್ಲಿಸುತ್ತಾರೆ. ರಾತ್ರಿ 8 ಗಂಟೆಗೆ ಆರಂಭವಾದರೆ ಮುಗಿಯುವುದು ಬೆಳಗ್ಗೆ 6 ಗಂಟೆಗೆ! ಪ್ರತಿ 2-3 ಗಂಟೆಗೊಮ್ಮೆ10-15 ನಿಮಿಷಗಳ ವಿರಾಮ ಇರುತ್ತದೆ. ಇಡೀ ನಾಟಕ ಒಂದೇ ವೇದಿಕೆ ಮೇಲೆ ನಡೆಯುವುದಿಲ್ಲ. ನಾಲ್ಕು ವಿಶೇಷ ರಂಗಸಜ್ಜಿಕೆಗಳಲ್ಲಿ ಅನಾವರಣವಾಗುತ್ತ ಹೋಗುತ್ತದೆ. ಈ ರಂಗಸಜ್ಜಿಕೆಗಳಂತೂ ಮಲೆನಾಡಿನ ತದ್ರೂಪ. ಪ್ರತಿ ರಂಗಸಜ್ಜಿಕೆಯ ಪ್ರದರ್ಶನದ ಬಳಿಕ ಇನ್ನೊಂದು ರಂಗಸಜ್ಜಿಕೆಗೆ ಸಾವಿರಾರು ಪ್ರೇಕ್ಷಕರು ರಾತ್ರಿಯ ಚಳಿಯಲ್ಲಿ ಬೆಚ್ಚಗೆ ಹೊದ್ದುಕೊಂಡು ನಡೆದು ಹೋಗುವುದನ್ನು ನೋಡುವುದೂ ಒಂದು ಸುಂದರ ಅನುಭವ.
ಇದು ಮಲೆನಾಡಿನ ಕಥೆಯುಳ್ಳ ನಾಟಕ. ಶಿವಮೊಗ್ಗದ ತೀರ್ಥಹಳ್ಳಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಯುವ ಕಥೆ. ಕುವೆಂಪು ಅವರು ಈ ಕಾದಂಬರಿ ಬರೆದು ಐದು ದಶಕ ಮೀರಿತು. ಆ ಕಾಲದ, ಆ ಭಾಗದ ಜನಜೀವನ, ಜೀತ, ಜಾತಿ, ಧರ್ಮ, ಮೌಢ್ಯ ಮುಂತಾದವೆಲ್ಲವೂ ಇದರಲ್ಲಿ ಮಿಳಿತವಾಗಿವೆ. ಅನೇಕ ಪಾತ್ರಗಳು ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತುಬಿಡುತ್ತವೆ. ತಿಮ್ಮಿ, ಗುತ್ತಿ, ಹುಲಿಯ, ಹೆಗಡೆ, ಐತ, ಪಿಂಚುಲು, ಅಂತಕ್ಕ, ಚಿನ್ನಕ್ಕ, ಚಿನ್ನಕ್ಕನ ಅಜ್ಜಿ, ತಿಮ್ಮಿಯ ತಾಯಿ, ಹುಚ್ಚು ಹೆಗ್ಗಡಿತಿ, ಬುಚ್ಚಿ, ಮಂಜಮ್ಮ, ದೇವಮ್ಮ, ನಾಗತ್ತೆ-ನಾಗಕ್ಕ, ಸಾಬರು, ಪಾದ್ರಿ ಮುಂತಾದ ಪಾತ್ರಗಳು ನಗಿಸುವುದು, ಅಳಿಸುವುದು, ವಿಡಂಬಿಸುವುದರ ಜತೆಗೆ ಪ್ರೇಕ್ಷಕರನ್ನು ಯೋಚನೆಗೆ ಹಚ್ಚುತ್ತವೆ.
ಹಂಸಲೇಖ ಅವರ ಸಂಗೀತವಂತೂ ಇಡೀ ನಾಟಕದ ದೊಡ್ಡ ಶಕ್ತಿ. ನಲವತ್ತಕ್ಕೂ ಹೆಚ್ಚು ಹಾಡುಗಳು ಇದರಲ್ಲಿವೆ. ರಾತ್ರಿಯ ಚಳಿಯಲ್ಲಿ ಪ್ರೇಕ್ಷಕನ ಕಣ್ಣುಗಳು ಇನ್ನೇನು ನಿದ್ದೆಯತ್ತ ವಾಲುತ್ತವೆ ಎನ್ನುವಷ್ಟರಲ್ಲಿ ಹಂಸಲೇಖರ ಹಾಡು ಪ್ರವೇಶಿಸಿ ಮತ್ತೆ ನೋಡುವ ಉತ್ಸಾಹವನ್ನು ಇಮ್ಮಡಿಸುತ್ತವೆ. ದೃಶ್ಯದೃಶ್ಯಕ್ಕೂ ‘ಹೋ’ ಎಂದು ಕೂಗಲು ಧ್ವನಿ ನೀಡುತ್ತವೆ. ಈ ನಾಟಕಕ್ಕೆ ಏಕಾಂಗಿಯಾಗಿ ಬರುವವರು ಕಡಿಮೆ. ಸ್ನೇಹಿತರು-ಕುಟುಂಬವನ್ನು ಕಟ್ಟಿಕೊಂಡು ಬರುವವರೇ ಜಾಸ್ತಿ. ಅದೂ ಒಮ್ಮೆ ಮಾತ್ರವಲ್ಲ, ನಾಲ್ಕಾರು ಬಾರಿ ತಮ್ಮ ‘ಪಡೆ’ಗಳ ಜತೆ ಬಂದು ನೋಡಿ ಖುಷಿ ಪಡುವ ಯುವಕ-ಯುವತಿಯರೇ ಹೆಚ್ಚು. ಬರುವಾಗ ಜರ್ಕಿನ್ನು, ಜಾಕೆಟ್ಟು, ರಗ್ಗು ಮತ್ತಿತರ ಸರಂಜಾಮುಗಳ ಜತೆಗೇ ಬರುತ್ತಾರೆ. ಈಗಿನ ಕಾಲದಲ್ಲಿ ನಾಟಕವೊಂದನ್ನು ಇಡೀ ರಾತ್ರಿ ನೋಡುವಂತೆ ಮಾಡುವುದು ಖಂಡಿತಾ ತಮಾಷೆಯಲ್ಲ. ನಿದ್ದೆ, ಚಳಿ ಎಲ್ಲವನ್ನೂ ಬಿಟ್ಟು ಜನ ನಾಟಕ ನೋಡುತ್ತಾರೆಂದರೆ ಅದು ಎಂಥ ನಾಟಕವಿರಬಹುದು ಊಹಿಸಿ!
ಮೊದಲು 2010ರಲ್ಲಿ ಮೈಸೂರು ರಂಗಾಯಣ ಈ ನಾಟಕದ ಪ್ರದರ್ಶನ ಆರಂಭಿಸಿತು. ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆ ಮುಂದುವರಿಸಿತು. ಟಿಕೆಟ್ ದರ 249 ರೂ. ಇದ್ದು, ವಿದ್ಯಾರ್ಥಿಗಳಿಗೆ 150 ರೂ. ನಿಗದಿಪಡಿಸಲಾಗಿದೆ. ನಾಟಕದ ಯಶಸ್ಸಿನ ಮೂಲ ಸೆಲೆ ಕುವೆಂಪು ಅವರ ಬರವಣಿಗೆಯೇ ಎಂಬುದರಲ್ಲಿ ಎರಡು ಮಾತಿಲ್ಲ. ಜತೆಗೆ ಇದನ್ನು ರಂಗರೂಪಕ್ಕೆ ಅಳವಡಿಸಿದ ನಿರ್ದೇಶಕ ಸಿ. ಬಸವಲಿಂಗಯ್ಯ ಮತ್ತವರ ತಂಡದ ಶ್ರಮವೇನು ಕಡಿಮೆಯಲ್ಲ.
ಅಪಾರ ಖರ್ಚು: ಕಲಾವಿದರಿಗೆ ಊಟ, ವಸತಿ, ರಂಗತಾಲೀಮು, ಸೆಟ್ಗಳ ಜೋಡಣೆ, ಧ್ವನಿ-ಬೆಳಕು ವ್ಯವಸ್ಥೆ ಹೀಗೆ ಎಲ್ಲಾತಯಾರಿಗೆ ಸುಮಾರು 40-50 ಲಕ್ಷದಷ್ಟು ಹಣ ಖರ್ಚು ಬರಲಿದೆ. ಸರಕಾರ 30 ಲಕ್ಷ ರೂ. ಅನುದಾನ ನೀಡಲಿದ್ದು, ಉಳಿದ ಹಣವನ್ನು ಟಿಕೆಟ್ ಶುಲ್ಕ ಸಂಗ್ರಹದಿಂದ ಬರುವ ಹಣದಲ್ಲಿ ಭರಿಸಲಾಗುತ್ತಿದೆ.
ರೂವಾರಿಗಳು... ನಿರ್ದೇಶನ: ಸಿ. ಬಸವಲಿಂಗಯ್ಯ ರಂಗರೂಪ: ಡಾ. ಕೆ.ವೈ. ನಾರಾಯಣಸ್ವಾಮಿ ರಂಗಸಜ್ಚಿಕೆ: ಶಶಿಧರ್ ಅಡಪ ವಸ್ತ್ರವಿನ್ಯಾಸ: ಪ್ರಮೋದ್ ಶಿಗ್ಗಾಂವ್ ಬೆಳಕು: ನಂದಕಿಶೋರ್ ಸಂಗೀತ: ಹಂಸಲೇಖ ನಿರ್ವಹಣೆ: ಗಜಾನನ ನಾಯಕ್