

ಸ್ಥಳೀಯವಾಗಿ ಲಭ್ಯವಿರುವ ಕಚ್ಚಾವಸ್ತುವಾದ ಅಡಕೆ ಹಾಳೆಯನ್ನೇ ಬಳಸಿಕೊಂಡು ಅತ್ಯುತ್ತಮ ದರ್ಜೆಯ ಪರಿಸರಸ್ನೇಹಿ ತಟ್ಟೆಗಳನ್ನು ತಯಾರಿಸುವುದು ಈಗ ಒಂದು ಸಣ್ಣ ಕೈಗಾರಿಕೆಯಾಗಿ ಬೆಳೆಯುತ್ತಿದೆ. ಇಂತಹ ಸ್ವಉದ್ಯೋಗದಲ್ಲಿಯೇ ಜೀವನೋಪಾಯ ಕಂಡುಕೊಂಡ ವಿದ್ಯಾವಂತ ಮಹಿಳೆಯೊಬ್ಬರ ನೈಜಕಥಾನಕ ಇದು.
ಸಾಮಾನ್ಯವಾಗಿ ಈ ದಿನಮಾನದಲ್ಲಿ ಉನ್ನತ ಶಿಕ್ಷಣ ಕಲಿತವರಾಗಲಿ ಅಥವಾ ತುಸು ತಿಳಿವಳಿಕೆ ಉಳ್ಳವರಾಗಲಿ ಸುಖಾಸುಮ್ಮನೆ ಕುಳಿತು ಕಾಲಹರಣ ಮಾಡುವುದೇ ಇಲ್ಲ. ಯಾವುದಾದರೂ ನೌಕರಿಯಲ್ಲೋ, ಸ್ವಉದ್ಯೋಗದಲ್ಲಿಯೋ ತೊಡಗಿಕೊಂಡು ಸ್ವಾವಲಂಬಿ ಜೀವನ ನಡೆಸುವವರೇ ಹೆಚ್ಚು. ಇಲ್ಲೊಬ್ಬ ಗೃಹಿಣಿ ತಮ್ಮೂರಿನಲ್ಲಿಯೇ ಪರಿಸರ ಸ್ನೇಹಿ ಉದ್ಯಮ ಆರಂಭಿಸಿ, ನಾಲ್ಕಾರು ಜನರಿಗೆ ಕೆಲಸವನ್ನು ನೀಡಿರುವುದು ವಿಶೇಷ.
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬಾಳೇಗದ್ದೆಯ ಸೀಮಾ ವಿವೇಕ ಹೆಗಡೆ ಅವರೇ ಈ ಉದ್ಯಮದ ಮುಖ್ಯಸ್ಥೆ. ಎಂ.ಬಿ.ಎ. ಪದವೀಧರೆ ಆಗಿರುವ ಈಕೆ, ಬೆಂಗಳೂರಿನಲ್ಲಿ ನೌಕರಿಯಲ್ಲಿದ್ದರು. ವಿವಾಹದ ಬಳಿಕ ಶಿರಸಿಯಲ್ಲಿ ನೆಲೆಸುವುದು ಅನಿವಾರ್ಯವಾಯಿತು.
ಶಿರಸಿಯಂಥ ಶಹರದಲ್ಲಿ ಇವರು ಕಲಿತ ಶಿಕ್ಷಣಕ್ಕೆ ಅನುಗುಣವಾಗಿ ಉದ್ಯೋಗ ಸಿಗುವುದು ಕಷ್ಟವಾದರೂ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಕೆಲಕಾಲ ತೋಟಗಾರ್ಸ್ ಕೋಆಪರೇಟಿವ್ ಸೇಲ್ ಸೊಸೈಟಿಯಲ್ಲಿ (ಟಿಎಸ್ಎಸ್) ಕೆಲಸ ಮಾಡಿದರು. ಆದರೆ ಬೇರೆ ಏನಾದರೂ ಮಾಡಬೇಕೆಂಬ ಹಂಬಲ ಮನದಲ್ಲಿ ಟಿಸಿಲೊಡೆದಿತ್ತು. ಹಾಗಂತ ಏನು ಮಾಡಬೇಕೆಂಬುದೇ ಅರ್ಥವಾಗುತ್ತಿರಲಿಲ್ಲ.
ಆಮೇಲೆ ಪತಿ ವಿವೇಕ ಹೆಗಡೆ ಅವರಲ್ಲಿ ಮನದ ಇಚ್ಛೆಯನ್ನು ತೆರೆದಿಟ್ಟಿದ್ದರು. ‘‘ನೀನೆ ಒಂದು ಉದ್ಯೋಗ ಆರಂಭಿಸು, ಒಂದಿಷ್ಟು ಜನರಿಗೆ ಕೆಲಸ ನೀಡಿದಂತೆಯೂ ಆಗುತ್ತೆ...’’ ಎಂಬ ಸಲಹೆ ಬಂತು. ‘‘ಆ ಮಾತೇ ನನ್ನ ಈ ಪರಿಸರ ಸ್ನೇಹಿ ಉದ್ಯಮ ಆರಂಭಿಸಲು ಪ್ರೇರಣೆ’’ ಎನ್ನುತ್ತಾರೆ ಸೀಮಾ.
ಹೀಗುಂಟು ಉದ್ಯಮ: ಉದ್ಯಮ ಆರಂಭಿಸುವುದು ಸುಲಭವೇನು ಆಗಿರಲಿಲ್ಲ. ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಉಪಯೋಗಿಸಿಕೊಂಡು, ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಇರುವ ಪರಿಕರಗಳನ್ನು ಸಿದ್ಧಪಡಿಸುವ ಉದ್ಯಮ ಆರಂಭಿಸಬೇಕೆಂಬುದು ಅವರ ಇಚ್ಛೆಯಾಗಿತ್ತು.
ಗ್ರಾಮೀಣ ಪ್ರದೇಶದಲ್ಲಿ ಉದ್ಯಮ ಆರಂಭಿಸುವುದು ಹರಸಾಹಸದ ಕೆಲಸ. ವಿದ್ಯುತ್ ಸಮಸ್ಯೆ, ಸಕಾಲದಲ್ಲಿ ಗ್ಯಾಸ್ ಪೂರೈಕೆಯಾಗದೇ ಇರುವುದು, ಸಾಗಾಟದ ದುಬಾರಿ ವೆಚ್ಚ... ಹೀಗೆ ಹಲವು ಕುಂದುಕೊರತೆಗಳು ಇರುವುದರಿಂದ ಉದ್ಯಮ ನಡೆಸುವುದು ತುಸು ಕಷ್ಟ. ತಾಳ್ಮೆ, ಛಲ, ಸಾಹಸ ಪ್ರವೃತ್ತಿ ಇದ್ದರೆ ಮಾತ್ರ ಕೈಗೊಂಡ ಸ್ವ-ಉದ್ಯೋಗವನ್ನು ಚೆನ್ನಾಗಿ ನಡೆಸಲು ಸಾಧ್ಯ.
ಕೊನೆಗೆ, ಅಡಿಕೆ ಹಾಳೆಯಿಂದ ಪ್ಲೇಟ್ ತಯಾರಿಸುವ ಉದ್ಯಮ ಆರಂಭಿಸಲು ನಿರ್ಧರಿಸಿದರು. ಅದಕ್ಕಾಗಿ ಮುಖ್ಯಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಡಿ ಸುಮಾರು ಹತ್ತು ಲಕ್ಷ ರೂ. ಬಂಡವಾಳ ತೊಡಗಿಸಿ 2019ರ ಎಪ್ರಿಲ್ 6ರಂದು ಶಿರಸಿ- ಹುಲೇಕಲ್ ಮಾರ್ಗದ ಬಾಳೇಗದ್ದೆಯಲ್ಲಿ ಉದ್ಯಮ ಶುರುವಾಯಿತು.
ಈ ಘನ ಕಾರ್ಯಕ್ಕೆ ಬೆಂಗಳೂರಿನಿಂದ ಹೈಡ್ರಾಲಿಕ್ ಮಷಿನ್ ತರಿಸಿಕೊಂಡರು. ಪ್ರಸ್ತುತ ಐದು ಬಗೆಯ ಪ್ಲೇಟ್ಗಳನ್ನು ತಯಾರಿಸುತ್ತಿದ್ದಾರೆ. ಐವರು ಕಾರ್ವಿುಕರಿಗೆ ನಿರಂತರ ಕೆಲಸ ನೀಡಿದ್ದಾರೆ. ತಮ್ಮ ಉದ್ಯಮಕ್ಕೆ ಬೇಕಾಗುವ ಕಚ್ಚಾ ವಸ್ತುವಾದ ಅಡಿಕೆ ಹಾಳೆಗಳನ್ನು ತಲಾ ಒಂದೂವರೆ ರೂ. ದರದಲ್ಲಿ ಖರೀದಿಸುತ್ತಾರೆ. ಇದು ಬಾಳೇಗದ್ದೆ, ಕೊಳಗಿಬೀಸ್, ಹಾರೇ ಹುಲೇಕಲ್ ಅಲ್ಲದೇ ಚನ್ನಗಿರಿ, ತುಮಕೂರು ಮುಂತಾದೆಡೆಯೂ ಸಿಗುತ್ತದೆ. ಅಲ್ಲಿಂದಲೂ ತರಿಸಿಕೊಳ್ಳುತ್ತಾರೆ.
ಸಾಕಷ್ಟು ಬೇಡಿಕೆ: ಅಡಿಕೆ ಬೆಳೆಯುವ ಬಹುತೇಕ ಕೃಷಿಕರು ಅಡಿಕೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಅದೇ ತಮ್ಮ ತೋಟದಲ್ಲಿ ಸುಲಭವಾಗಿ ಸಿಗುವ ಹಾಳೆಯನ್ನು ತೋಟದ ಮುಚ್ಚಿಗೆಗೋ, ಬಚ್ಚಲು ಮನೆಯಲ್ಲಿ ಬೆಂಕಿ ಹೊತ್ತಿಸುವ ಸಲುವಾಗಿಯೋ ಬಳಸುವುದೇ ಹೆಚ್ಚು! ಆದರೆ ಇತ್ತೀಚಿನ ದಿನಗಳಲ್ಲಿ ಅದಕ್ಕೂ ಬೆಲೆ ಇದೆ ಎಂಬುದು ರೈತರಿಗೆ ಗೊತ್ತಾಗಿದೆ.
‘‘ಅಡಿಕೆ ಹಾಳೆಯಿಂದ ಸಿದ್ಧಪಡಿಸಿದ ಪ್ಲೇಟ್ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಅಡಿಕೆ ಕೃಷಿಕರ ಉತ್ಪನ್ನಗಳ ಮೌಲ್ಯವರ್ಧನೆಯೇ ಒಂದು ಖಾಯಂ ಉದ್ಯಮ ಎಂದು ಅನ್ನಿಸಿದ್ದರಿಂದ ಹಾಗೂ ಸುಮ್ಮನೆ ವ್ಯರ್ಥವಾಗಿ ಹೋಗುವ ಅಡಿಕೆ ಹಾಳೆಯನ್ನು ಸದ್ಬಳಕೆ ಮಾಡಿ, ಅಡಿಕೆ ಬೆಳೆಗಾರರು ಸಂತೃಪ್ತಿ ಪಡಬೇಕು ಎನ್ನುವ ಉದ್ದೇಶದಿಂದ ಈ ಉದ್ಯಮವನ್ನು ಗ್ರಾಮೀಣ ಪ್ರದೇಶದಲ್ಲಿಯೇ ಆರಂಭಿಸಿದ್ದೇನೆ.
ಇನ್ನು ಅಡಿಕೆ ಕೃಷಿಕರಿಗೆ ವರುಷವಿಡೀ ಕೆಲಸವೇನು ಇರುವುದಿಲ್ಲ. ಅದರಲ್ಲಿಯೂ ಮಳೆಗಾಲದಲ್ಲಿ ಹೆಂಗಳೆಯರಿಗೆ ಇದೊಂದು ಸುಸ್ಥಿರವಾದ ಉದ್ಯೋಗ ಕೂಡ ಹೌದು. ಇದು ಹಳ್ಳಿಯ ಹೆಂಗಳೆಯರಿಗೆ ಜೀವನೋಪಾಯಕ್ಕೆ ಸಹಕಾರಿ. ಮಾತ್ರವಲ್ಲ, ಯಾವುದೇ ದುಷ್ಪರಿಣಾಮ ಇಲ್ಲದ, ಮಣ್ಣಿನಲ್ಲಿ ಕರಗುವ ಪದಾರ್ಥವೂ ಆಗಿರುವುದರಿಂದ ಮಾರುಕಟ್ಟೆಯಲ್ಲಿಯೂ ಉತ್ತಮ ಬೇಡಿಕೆ ಇದೆ’’ ಎನ್ನುತ್ತಾರೆ ಸೀಮಾ.
‘‘ಒಂದು ಹಾಳೆಯಿಂದ ಬೇರೆ ಬೇರೆ ಸೈಜಿನ ಮೂರು ಬಗೆಯ ಪ್ಲೇಟ್ಗಳನ್ನು ಸಿದ್ಧ ಮಾಡಬಹುದು. ನಮ್ಮಲ್ಲಿ ಐದು ತರಹದ ಹಾಳೆ ಪ್ಲೇಟ್ಗಳನ್ನು ತಯಾರು ಮಾಡುತ್ತಿದ್ದೇವೆ. ಸುತ್ತಮುತ್ತಲಿನ ವಿವಿಧ ಕಾರ್ಯಕ್ರಮಗಳಿಗೆ ಸ್ಥಳೀಯರು ಈ ಹಾಳೆ ಪ್ಲೇಟ್ಗಳನ್ನು ಒಯ್ಯುತ್ತಾರೆ.
ಶಿರಸಿಯ ಟಿಎಸ್ಎಸ್ನ ಸೂಪರ್ ಮಾರುಕಟ್ಟೆಯಲ್ಲಿಯೂ ಲಭ್ಯವಿದೆ. ಅಲ್ಲದೆ ಹುಬ್ಬಳ್ಳಿ, ಬೆಂಗಳೂರು ಮುಂತಾದ ನಗರಗಳಿಗೆ ಅವರ ಬೇಡಿಕೆಗೆ ಅನುಗುಣವಾಗಿ ಅಡಿಕೆ ಪ್ಲೇಟ್ಗಳನ್ನು ಕಳಿಸುತ್ತಿದ್ದೇವೆ. ಅವರಿಂದ ಉತ್ತಮವಾದ ಪ್ರತಿಕ್ರಿಯೆ ಬಂದಿರುವುದರಿಂದ, ಈ ಉದ್ಯಮದಲ್ಲಿ ಇನ್ನಷ್ಟು ಭದ್ರ ಬುನಾದಿಯನ್ನು ಹಾಕಿಕೊಂಡು ಮುನ್ನಡೆಸಿಕೊಂಡು ಹೋಗಬಹುದು ಎಂಬ ಆತ್ಮವಿಶ್ವಾಸ ಮೂಡಿದೆ’’ ಎನ್ನುತ್ತಾರೆ. ಸಂಪರ್ಕಕ್ಕೆ 7019210691.
| ಗಣಪತಿ ಹಾಸ್ಪುರ