

ಕೆಲವು ಶತಮಾನಗಳ ಹಿಂದೆ ನರ್ತನಗಳನ್ನು ಮುಖ್ಯವಾಗಿ ಕೇವಲ ದೇವಾಲಯಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು, ಏಕೆಂದರೆ ನರ್ತನ ಮಾಡುವವರು ನರ್ತನವನ್ನು ಕೇವಲ ದೈವಕ್ಕಾಗಿ ಮಾಡುತ್ತಿದ್ದರು, ಜನರೂ ಸ್ವಲ್ಪಮಟ್ಟಿಗೆ ವೀಕ್ಷಿಸುತ್ತಿದ್ದರು. ಅವರು ಸಂಗೀತವನ್ನು ಪ್ರಸ್ತುತ ಪಡಿಸುತ್ತಿದ್ದರು ಹಾಗೂ ವಾದ್ಯಗಳನ್ನೂ ದೈವಕ್ಕಾಗಿ ನುಡಿಸುತ್ತಿದ್ದರು, ಆದರೆ ಬೇರೆಯವರೂ ಪರೋಕ್ಷವಾಗಿ ಕೇಳಬಹುದಾಗಿತ್ತು. ಸಂಗೀತ ಮತ್ತು ನಾಟ್ಯದ ಕುರಿತು ಅದೊಂದು ಮೂಲ ಅಭಿಪ್ರಾಯವಾಗಿದ್ದಿತು. ಏಕೆಂದರೆ, ಅವರನ್ನು ಉತ್ಸಾಹ ತುಂಬಿದ ಅಭಿವ್ಯಕ್ತತೆಯ ಮಾನವರೆಂಬುದಾಗಿ ನೋಡಲಾಗುತ್ತಿತ್ತು ಹಾಗೂ ವಿಮೋಚನೆಯೆಡೆಗೆ ತಲುಪಲು ಒಂದು ಸಾಧನವಾಗಿದ್ದಿತು.
ನರ್ತಿಸುವ ದೇವರುಗಳು: ನಮ್ಮ ಸಂಸ್ಕೃತಿಯಲ್ಲಿ ಮಾತ್ರ ದೇವರುಗಳೂ ಸಹ ನರ್ತಿಸಬೇಕು. ನರ್ತಿಸದೆ ಗಂಭೀರವಾಗಿ ಎಲ್ಲಿಯೋ ಕುಳಿತಂಥ ದೇವರು ಇಲ್ಲಿ ಅಂಗೀಕೃತವಾಗುವುದಿಲ್ಲ- ಭಾರತದ ಜನರು ಅದನ್ನು ಒಪ್ಪುವುದಿಲ್ಲ. ತಾವು ದೇವರೆಂದು ನಿರೂಪಿಸಲು ಅವರು ನರ್ತಿಸಲೇ ಬೇಕು. ಶಿವನು ನಾಟ್ಯದ ಮೂಲವೆಂದೇ ಪ್ರಸಿದ್ಧನಾಗಿದ್ದಾನೆ. ನಾಟ್ಯವನ್ನು ಮನರಂಜನೆಯಂತೆ ಅಥವಾ ಒಂದು ಕಲೆಯ ರೂಪವಾಗಿ ನೋಡುತ್ತಿರಲಿಲ್ಲ, ಆದರೆ ಅದನ್ನು ಸೃಷ್ಟಿಯ ನೈಜತೆಯ ಪ್ರದರ್ಶನವೆಂಬಂತೆ ಕಾಣುತ್ತಿದ್ದರು. ಎರಡು ಮೀಟರ್ ಎತ್ತರದ ನಟರಾಜನ ಮೂರ್ತಿಯನ್ನು ಸ್ವಿಜರ್ಲೆಂಡಿನ ಪರಮಾಣು ಲ್ಯಾಬೊರೇಟರಿ (ಸಿಇಆರ್ಎನ್) ಎದುರು ಸ್ಥಾಪಿಸಲಾಗಿದೆ, ಏಕೆಂದರೆ, ಯಾವ ವಿಜ್ಞಾನಿಗಳು ಉಪಪರಿಮಾಣು ಕಣಗಳು ಹಾಗೂ ಬ್ರಹ್ಮಾಂಡ ಎಂಬ ಅಂಶಗಳ ಕುರಿತು ಸಂಶೋಧನೆ ನಡೆಸುತ್ತಿದ್ದರೋ ಅವರ ಮನಸ್ಸಿನಲ್ಲಿ ಈ ಅದ್ಭುತವಾದ ಸೃಷ್ಟಿಗೆ ನಾವು ನೀಡಬಹುದಾದ ಅತಿ ಸಮೀಪದ ವಿವರಣೆ ಅಥವಾ ವ್ಯಾಖ್ಯಾನವೆಂದರೆ ‘ನಾಟ್ಯ’ ಎಂಬುದಾಗಿತ್ತು. ಅವು ಒಂದು ವಿಶಿಷ್ಟ ರೀತಿಯಲ್ಲಿ ನರ್ತಿಸುತ್ತಿವೆ.
ಯೋಗವು ಸೃಷ್ಟಿ ಮತ್ತು ಲಯವನ್ನು ಯಾವಾಗಲೂ ‘ತಾಂಡವ’ ಎಂದು ವ್ಯಾಖ್ಯಾನಿಸಿತ್ತು- ಅದರರ್ಥವೆಂದರೆ ಒಂದು ಉನ್ಮಾದದ ನರ್ತನ, ಆದರೆ ಅದ್ಭುತವಾಗಿ ಸಮನ್ವಿತವಾಗಿರುವುದು! ಆದ್ದರಿಂದ ಶಿವ ಅಥವಾ ಆದಿಯೋಗಿ ಅದರ ಪ್ರತಿನಿಧಿಯಾಗಿದ್ದಾನೆ, ಈ ಸಂಪೂರ್ಣ ಸಂಸ್ಕೃತಿಯು ಆ ಆಯಾಮದ ಜ್ಞಾನದಿಂದ ವೃದ್ಧಿಯಾಗಿದೆ.
ನರ್ತನವು ಜೀವಂತವಾಗಿರುವವರಿಗಷ್ಟೇ...: ಯಾರು ನರ್ತಿಸುವರೋ ಅವರು ನಿಮ್ಮ ತರ್ಕಕ್ಕೆ ಸರಿಹೊಂದಲಾರರು. ಅದಕ್ಕೆ ಮನ್ನಣೆ ನೀಡಲು ಕಾಲಾವಕಾಶ ಬೇಕಾಗುತ್ತದೆ. ಅದರ ಕುರಿತಾದ ಮೌಲ್ಯವನ್ನು ಕಂಡುಕೊಳ್ಳುವ ಭಾವನೆ ಅದರ ಪ್ರಾಚೀನತೆಯಿಂದ ಬರುತ್ತದೆ. ಉದಾಹರಣೆಗೆ ಕೃಷ್ಣನೆಂದರೆ ನರ್ತನ. ಸುಮಾರು 6000 ವರ್ಷಗಳ ನಂತರ ಈಗ ಪ್ರತಿಯೊಬ್ಬರೂ ಕೃಷ್ಣನನ್ನು ಹೊಗಳುತ್ತಾರೆ ಏಕೆಂದರೆ, ಅವನು ಬಹುಕಾಲದ ಹಿಂದೆಯೇ ಕಣ್ಮರೆಯಾಗಿದ್ದಾನೆ. ಅವನು ಜೀವಂತವಿದ್ದಾಗ ಅವನನ್ನು ಪ್ರೀತಿಸುವವರು ಮಾತ್ರ ಅವನೊಡನೆ ನಾಟ್ಯವಾಡುತ್ತಿದ್ದರು, ಬೇರೆಯವರಿಂದ ಎಲ್ಲ ರೀತಿಯ ಆಪಾದನೆಗಳು ಬರುತ್ತಿದ್ದವು.
ಯಾವುದು ಹಳೆಯದು ಎನ್ನುವುದರ ಮೌಲ್ಯ ನಿರ್ಣಯಿಸಲು ಯಾವುದೇ ಹೆಚ್ಚಿನ ಅರಿವು ಬೇಕಿಲ್ಲ. ಯಾವುದಾದರೂ ಚೆನ್ನಾಗಿರಬೇಕಾದರೆ, ಅದು ಕನಿಷ್ಠ 1000 ವರ್ಷ ಹಳೆಯದಾಗಿರಬೇಕು. ತುಂಬ ಹಿಂದೆ ನಡೆದುದಕ್ಕೆ ಬೆಲೆ ಕಟ್ಟುವುದು ಬಹು ಸುಲಭ, ಏಕೆಂದರೆ, ಹಿಂದಿನ ಪೀಳಿಗೆಗಳ ಸಾವಿರಾರು ಜನರು ಅದನ್ನು ಅನುಮೋದಿಸುತ್ತಾರೆ. ಯಾವುದು ಬೆಲೆ ಬಾಳುತ್ತದೆ ಯಾವುದು ಬೆಲೆ ಬಾಳುವುದಿಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳುವಷ್ಟು ನಿಮಗೆ ವಿವೇಚನೆ ಇಲ್ಲ. ಯಾವುದರಲ್ಲಾದರೂ ಮೌಲ್ಯವನ್ನು ಕಂಡುಕೊಳ್ಳಬೇಕಾದರೆ, ಅದು ಈಗ ಸಂಭವಿಸುತ್ತದೆ, ಆಗ ನೀವಾಗಿಯೇ ನಿಮ್ಮನ್ನು ಅದಕ್ಕೆ ಅನ್ವಯಿಸಿಕೊಳ್ಳಬೇಕು. ನಿಮ್ಮದೇ ಬದುಕಿನ ಜತೆಗೆ ಪ್ರಯೋಗ ಮಾಡಿಕೊಳ್ಳಬೇಕು; ಇಲ್ಲದಿದ್ದಲ್ಲಿ ತಿಳಿಯುವುದಿಲ್ಲ.
ಕೃಷ್ಣ ಅಥವಾ ಶಿವ ಆ ವ್ಯಕ್ತಿಯ ಕುರಿತಾಗಲ್ಲ, ಅದು ಬದುಕಿನ ಆ ದೃಷ್ಟಿಯಿಂದ. ಇದು ನಿಮ್ಮೊಳಗೆ ಈಗ ಜೀವಂತವಾಗಿ ಬರದೇ ಹೋದರೆ, ಯಾರು ಮರಣಹೊಂದಿರುವರೋ ಅವರನ್ನು ನೀವು ಪೂಜಿಸುವುದರಿಂದ ಯಾವುದೇ ಹೆಚ್ಚು ಪ್ರಯೋಜನವಿಲ್ಲ. ಅವರನ್ನು ಒಂದು ಸ್ಪೂರ್ತಿಯನ್ನಾಗಿ ಬಳಸಿಕೊಂಡರೆ ಅದು ಸರಿ. ನಾಟ್ಯಕ್ಕೆ ನೀವೊಂದು ಪ್ರಸ್ತುತದ ಜೀವವಾಗಿರಬೇಕೇ ಹೊರತು ಪ್ರಾಚೀನ ಕಾಲದ ಬದುಕಲ್ಲ. ಇಂದು ಯಾರು ಜೀವಂತವಾಗಿರುವರೋ ಅವರು ಮಾತ್ರ ನರ್ತಿಸಬಲ್ಲರು.
ನಿಮ್ಮ ಹೊರೆಯನ್ನು ಇಳಿಸಿಕೊಂಡು ನಾಟ್ಯವಾಡಿ: ಬಹುತೇಕ ಜನರು ನರ್ತಿಸಲಾರರು. ಏಕೆಂದರೆ, ಅವರು ಅವರ ತಲೆಯ ಮೇಲೆ ಒಂದು ಪರ್ವತವನ್ನೇ ಹೊತ್ತಿದ್ದಾರೆ. ಅವರ ನಂಬಿಕೆಯ ಸಂಪ್ರದಾಯಗಳು, ತತ್ತ ್ವ ಚಿಂತನೆ, ಸಿದ್ಧಾಂತಗಳು, ಪವಿತ್ರಗ್ರಂಥಗಳು- ಎಲ್ಲವೂ ಕೊನೆಯಿಲ್ಲದ ಹೊರೆಯಾಗಿವೆ, ಇಂತಹ ಒಂದು ವಿನ್ಯಾಸಗಳೊಂದಿಗೆ ಅವರು ಅವರ ಬದುಕನ್ನು ನಡೆಸಲು ಪ್ರಯತ್ನಿಸುತ್ತಾರೆ. ಅವರು ಸದಾ ರಕ್ಷಣಾರಹಿತರಾಗಿರುವರೆಂದು ಭಾವಿಸುತ್ತಾರೆ- ಅವರ ನಂಬಿಕೆಯ ಸಂಪ್ರದಾಯಗಳು, ತತ್ತ ್ವಂತನೆ ಅಥವಾ ಸಿದ್ಧಾಂತಗಳು ಅಪಾಯದಲ್ಲಿವೆ ಎಂದೆಣಿಸುತ್ತಾರೆ.
ಮಾನವ ಕುಲದ ಇತಿಹಾಸವನ್ನು ಅವಲೋಕಿಸಿ. ಯಾರು ಯಾವುದನ್ನಾದರೂ ಬಲವಾಗಿ ನಂಬಿದ್ದರೋ ಅವರೇ ಈ ಪ್ರಪಂಚದಲ್ಲಿ ಎಲ್ಲವನ್ನೂ ನಾಶಪಡಿಸುವುದರಲ್ಲಿ ತೊಡಗಿದ್ದವರು. ನಾಟ್ಯವಾಡುವ ಜನರು ಯಾವುದನ್ನೂ ಅಥವಾ ಯಾರನ್ನೂ ನಾಶಪಡಿಸಲು ಮುಂದಾಗಲಿಲ್ಲ. ಏಕೆಂದರೆ, ಇದು ಅವರಿಗೆ ಹೊಳೆಯಲಿಲ್ಲ. ಹೃದಯವು ಆನಂದಭರಿತವಾಗಿದ್ದಾಗ ನೀವು ಅಸುರಕ್ಷಿತರೆಂದು ಹಾಗೂ ಯಾವುದರಿಂದಲೋ ಅಪಾವಿದೆಯೆಂದು ಅನಿಸುವುದಿಲ್ಲ. ಏಕೆಂದರೆ, ಮೊಟ್ಟಮೊದಲಿಗೆ ನಿಮ್ಮಲ್ಲಿ ರಕ್ಷಿಸಿಕೊಳ್ಳುವುದಕ್ಕೆ ಏನೂ ಇರುವುದಿಲ್ಲ.
ಬದುಕು ಸೃಷ್ಟಿಯ ಉದಾತ್ತತೆಯಾಗಿದೆ. ಇದರಿಂದ ಗರಿಷ್ಠ ಪ್ರಯೋಜನ ಪಡೆಯಬೇಕು. ಇದರರ್ಥ, ಹೊರಗೆ ಹೋಗಿ ಮೋಜು ಮಾಡುವುದೋ ಅಥವಾ ಮಾದಕ ದ್ರವ್ಯವನ್ನು ಸೇವಿಸುವುದೋ ಎಂದಲ್ಲ. ನಾಟ್ಯವಾಡಲು ನಿಮ್ಮನ್ನು ನೀವು ಬರಿದುಮಾಡಿಕೊಳ್ಳಬೇಕು. ಪರಿತ್ಯಕ್ತತೆಯ ಕುರಿತು ಮಾತನಾಡುತ್ತಿದ್ದೇನೆ- ನಿಮ್ಮೊಳಗೆ ಮದ್ಯವನ್ನು ತುಂಬಿಸಿಕೊಳ್ಳಿ ಎಂದಲ್ಲ. ಪಾನಮತ್ತರಾದಾಗ ಅಥವಾ ಮಾದಕ ವಸ್ತುವನ್ನು ಸೇವಿಸಿದಾಗ, ಎಲ್ಲವನ್ನೂ ಪರಿತ್ಯಜಿಸಿದವರಂತೆ ನಟಿಸಬಹುದು, ಆದರೆ ಕೇವಲ ನಿಮ್ಮ ಅರಿವನ್ನು ಕಳೆದುಕೊಂಡಿರುವಿರಿ. ಪರಿತ್ಯಕ್ತದ ಸ್ಥಿತಿ ಮತ್ತು ನಿಮ್ಮ ಅರಿವನ್ನು ಕಳೆದುಕೊಳ್ಳುವುದು ಎರಡೂ ಬೇರೆ ಬೇರೆ ವಿಷಯಗಳಾಗಿವೆ. ಇವೆರಡನ್ನೂ ಎಂದಿಗೂ ತಪ್ಪಾಗಿ ತಿಳಿಯಬೇಡಿ. ನಾಟ್ಯವೇ ಒಂದು ಮಾದಕ ವಸ್ತುವಾದರೆ, ಅದು ಒಳ್ಳೆಯದು, ಆದರೆ ಮಾದಕವಸ್ತುವನ್ನು ಸೇವಿಸಿ ನಾಟ್ಯವಾಡಿದರೆ ಅದಕ್ಕೆ ಬೆಲೆ ಇಲ್ಲ. ನಾಟ್ಯವೆಂದರೆ, ಸಂಗೀತದೊಂದಿಗೆ ನರ್ತಿಸಬೇಕೆಂಬ ಅರ್ಥವಲ್ಲ. ನೀವು ಎಲ್ಲವನ್ನೂ- ಕೆಲಸ, ಚಲನೆ, ಪ್ರತಿಯೊಂದು ಸರಳವಾದ ಕ್ರಿಯೆಯನ್ನು ನಾಟ್ಯವೆಂಬಂತೆ ಮಾಡಬಹುದು. ಜೀವನವನ್ನು ಅನುಗ್ರಹದ ನರ್ತನವೆಂಬಂತೆ ರೂಪಿಸಿಕೊಳ್ಳಿ.
ನಾಟ್ಯವಾಡಲು ಸ್ವಲ್ಪಮಟ್ಟಿಗೆ ನಾಚಿಗೆ ಬಿಡಬೇಕು. ಇಲ್ಲದಿದ್ದಲ್ಲಿ ಯಾವಾಗಲೂ ಚಿಂತಿಸುವಿರಿ, ‘ನಾನು ಹೇಗೆ ಕಾಣಿಸುತ್ತೇನೆ?’ ನೀವೊಬ್ಬ ಮೂರ್ಖರಂತೆ ಕಾಣಿಸುತ್ತೀರಿ, ಅದರಿಂದ ಏನಾಗಬೇಕಾಗಿದೆ? ಸ್ವಲ್ಪ ಸಮಯದವರೆಗೆ ಮೂರ್ಖರಂತಿದ್ದರೆ ಸಮಸ್ಯೆ ಏನಿದೆ? ನಿಜವಾಗಲೂ ಚಾಲಾಕಿನವರಾಗಿದ್ದರೆ ಸ್ವಲ್ಪ ಸಮಯದವರೆಗೆ ಮೂರ್ಖನಂತೆ ನಟಿಸಲು ಇಚ್ಛಿಸುವಿರಿ. ಆದರೆ ನೀವು ದಡ್ಡರಾಗಿದ್ದರೆ, ನೀವು ಗುರುತಿಸಲ್ಪಡುವಿರೆಂದು ಭಯಪಡುವಿರಿ. ಬಹುತೇಕ ಇತರ ಸಂಸ್ಕೃತಿಗಳಲ್ಲಿ ನಾಟ್ಯವೆಂದರೆ, ಬೇರೆಯವರ ಜತೆ ನರ್ತನ ಮಾಡುವುದೆಂದು ಅರ್ಥೈಸಿಕೊಳ್ಳುತ್ತಾರೆ. ಆದರೆ ನಮ್ಮ ಸಂಸ್ಕೃತಿಯಲ್ಲಿ ನಾಟ್ಯವೆಂದರೆ ನಾವು ಕಣ್ಣು ಮುಚ್ಚಿಕೊಂಡು ಉನ್ಮತ್ತರಾಗುತ್ತೇವೆ! ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಇಚ್ಛಿಸಿದರೆ ಹಾಗೆ ಮಾಡುವುದು ಅತ್ಯುತ್ತಮ! ಅದು ನೀವು ಮಾಡಬಹುದಾದ ಒಳ್ಳೆಯ ಕೆಲಸ- ನೀವಾಗಿ ನೀವೇ ನಾಟ್ಯಮಾಡುವುದು.
ಕಾಳಿಂಗ ಸರ್ಪಗಳು ನಾಟ್ಯವಾಡುವುದನ್ನು ನೋಡಬೇಕು, ಅದೊಂದು ಬದುಕಿನ ಪರಿಪೂರ್ಣವಾದ ಅದ್ಭುತ ಘಟನೆಯಾಗುತ್ತದೆ! ನವಿಲುಗಳ ನಾಟ್ಯವನ್ನು ನೋಡಿರಬಹದು- ಅವುಗಳಿಗೆ ಉದ್ದವಾದ ಗರಿಗಳಿರುತ್ತವೆ. ನಿಮಗೆ ಅದರಂತೆ ನರ್ತಿಸಲು ಸಾಧ್ಯವಿಲ್ಲ ಅಥವಾ ಕಾಳಿಂಗ ಸರ್ಪಗಳಂತೆಯೂ ಇಲ್ಲ. ನಿಮಗೊಂದು ಮೂಳೆಭರಿತ ಲಾಲಿತ್ಯರಹಿತವಾದ ಶರೀರವಿದೆ. ಆದರೆ ಇಂತಹ ಲಾಲಿತ್ಯವಿಲ್ಲದ ಶರೀರದ ಜತೆಯಲ್ಲಿಯೂ, ಹೃದಯವು ಆನಂದಭರಿತವಾದಾಗ, ನಾಟ್ಯವಾಡಲು ಇಚ್ಛಿಸುವಿರಿ. ‘ನರ್ತನ’ದ ಕುರಿತ ಒಂದು ಸಣ್ಣ ಕವಿತೆ ಇದೆ. ಅದರ ಭಾವಾರ್ಥವೆಂದರೆ-
‘ಆನಂದವು ನಿಮ್ಮ ಹೃದಯವನ್ನು ತುಂಬಿದಾಗ, ಮೂಳೆಗಳಿಂದ ತುಂಬಿದ ಲಾವಣ್ಯರಹಿತ ನಿಮ್ಮ ಅಂಗಾಂಗಳೂ ಆಕರ್ಷಕವಾಗಿರುತ್ತವೆ. ಎಲ್ಲ ಜೀವಿಗಳೂ ಭಾವಪರವಶತೆ ಹೊಂದಿದಾಗ ನರ್ತಿಸಲು ಮುಂದಾಗುತ್ತವೆ’.
ಕೇವಲ ಕಾಳಿಂಗ ಸರ್ಪವೇ ಅಲ್ಲ ಅಥವಾ ಸುಂದರವಾದ ನವಿಲೇ ಅಲ್ಲ. ಒಂದು ಕುರೂಪದ ಚಿಮ್ಮಂಡೆ ಅಥವಾ ವಿಕಾರವಾದ ನೀರ್ಗದುರೆಯೂ ಅವುಗಳದ್ದೇ ಆದ ಸಂಗೀತವನ್ನು ಹಾಡುತ್ತವೆ. ಈ ನಮ್ಮ ನೆಲದಲ್ಲಿ ದೇವತೆಗಳು, ಋಷಿ, ಮುನಿಗಳೂ ತಮ್ಮ ಘನತೆ, ಗೌರವಗಳ ಹುಸಿತನವನ್ನು ತೊರೆದು ಹೃದಯ ತುಂಬಿ ನಾಟ್ಯವಾಡಿದರು. ನೀವು ಜೀವನವನ್ನು ಒಂದು ಅನುಗ್ರಹದ ನಾಟ್ಯವನ್ನಾಗಿಸಿಕೊಳ್ಳಿ.
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)