

ಅಥಣೀಶ ಕವಿ ಎಂದೇ ಪ್ರಸಿದ್ಧರಾದ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮಿಗಳು ಐತಿಹಾಸಿಕ ಕಾರ್ಯವೊಂದನ್ನು ಮಾಡಿದ್ದಾರೆ. ಇನ್ನೂರಕ್ಕೂ ಅಧಿಕ ಸಂತರ ಜೀವನಗಾಥೆಗಳನ್ನು ಬರೆದು ಬೃಹತ್ ಗ್ರಂಥ ರೂಪಿಸಿದ್ದಾರೆ. ಸಾಹಿತ್ಯ ಲೋಕದಲ್ಲಿಯೇ ಇದೊಂದು ಹೊಸ ಮತ್ತು ವಿಭಿನ್ನ ಪ್ರಯತ್ನ.
| ಪ್ರಶಾಂತ್ ರಿಪ್ಪನ್ಪೇಟೆ
ಸಾಹಿತ್ಯ ರಚನೆ ಎಂದ ತಕ್ಷಣ ಅಲ್ಲೊಂದು ಸೂಕ್ಷ್ಮ ಸಂವೇದನೆ ಇರುತ್ತದೆ, ಬರಹಗಾರನ ವಿದ್ವತ್ತಿಗೆ ಅನುಗುಣವಾಗಿ ತತ್ವ-ಸಿದ್ಧಾಂತದ ನೆರಳಿರುತ್ತದೆ. ಭಾಷೆ, ಪ್ರದೇಶ, ಕಾಲ ಹೀಗೆ ಕೆಲವು ನಿರ್ದಿಷ್ಟ ಚೌಕಟ್ಟುಗಳಲ್ಲಿ ಸಾಹಿತ್ಯ ಮೂಡುವುದು ಸಹಜ. ಆದರೆ ಈ ಎಲ್ಲ ಎಲ್ಲೆಗಳನ್ನೂ ಮೀರಿ ಮೂಡಿ ಬಂದಿರುವ ಮಹಾತ್ಮರ ಚರಿತಾಮೃತ ಸಾಹಿತ್ಯ ಲೋಕದಲ್ಲೇ ಒಂದು ಹೊಸ ಪ್ರಯತ್ನವಾಗಿದೆ. ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಹಲವು ಮಹಾತ್ಮರು ಮನುಕುಲದ ಕಲ್ಯಾಣಕ್ಕಾಗಿ ಅವತರಿಸಿದ್ದಾರೆ. ಸಾಹಿತ್ಯ, ಸುಧಾರಣೆ, ಕ್ರಾಂತಿ, ಆಧ್ಯಾತ್ಮ, ಯೋಗ, ಧರ್ಮ, ಸಮಾಜ, ಕಾನೂನು ಹೀಗೆ ವಿವಿಧ ಮಾರ್ಗಗಳ ಮೂಲಕ ವಿಶ್ವದ ವಿಭೂತಿ ಪುರುಷರಾಗಿ ಹೋಗಿದ್ದಾರೆ. ತತ್ವ-ಸಿದ್ಧಾಂತಗಳ ಆಧಾರದಲ್ಲಿ; ಆಚಾರ್ಯರು, ಪ್ರವಾದಿಗಳು, ಶಿವಯೋಗಿಗಳು, ನಾಥರು, ಆರೂಢರು, ಅವಧೂತರು, ತತ್ವಜ್ಞಾನಿಗಳು, ಸಂತರು, ಶರಣರು, ದಾಸರು ಹೀಗೆ ವಿವಿಧ ರೀತಿಯಲ್ಲಿ ಅವರನ್ನು ವಿಭಾಗೀಕರಿಸಿ ಪೂಜಿಸಲಾಗುತ್ತದೆ. ಇಂತಹ ಎಲ್ಲ ಪರಂಪರೆಯ ಮಹಾತ್ಮರನ್ನು ಒಂದೇ ಕೃತಿಯ ಮೂಲಕ ಪರಿಚಯಿಸುವ ಮಹತ್ಕಾರ್ಯವನ್ನು ಮಾಡಿದ್ದಾರೆ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮಿಗಳು. ‘ಮಹಾತ್ಮರ ಚರಿತಾಮೃತ’ ಎಂಬ ಶೀರ್ಷಿಕೆಯಲ್ಲಿ ಮೂಡಿಬಂದಿರುವ ಈ ಹೆಬ್ಬೊತ್ತಿಗೆ, ಕನ್ನಡ ಸಾಹಿತ್ಯ ಪ್ರಕಾರದಲ್ಲೇ ಪ್ರಥಮ ಮತ್ತು ವಿಭಿನ್ನ ಪ್ರಯತ್ನ ಎಂಬ ಪ್ರಶಂಸೆಗೆ ಪಾತ್ರವಾಗಿದೆ. ವಿವಿಧ ಮಹಾತ್ಮರ ಚರಿತೆಯನ್ನು ಒಂದೇ ಪುಸ್ತಕದಲ್ಲಿ ಚಿತ್ರಿಸಿರುವ ಪರಿಕಲ್ಪನೆಯೇ ಪ್ರಥಮ ಎನ್ನುತ್ತಾರೆ ನಾಡಿನ ಹಿರಿಯ ವಿದ್ವಾಂಸ ಪೊ›. ಮಲ್ಲೇಪುರಂ ವೆಂಕಟೇಶ.
ವಿಭೂತಿ ಪುರುಷರ ಜೀವನ ದರ್ಶನ
ಅನುಭವ ಮತ್ತು ಅನುಭಾವದ ಸಮ್ಮಿಲಿತ ಮಹಾತ್ಮರ ಅಸ್ತಿತ್ವ. ಭೂತಿಯಿಂದ ಅನುಭೂತಿಗೆ, ಅನುಭೂತಿಯಿಂದ ಮಹಾಭೂತಿಗೆ, ಮಹಾಭೂತಿಯಿಂದ ವಿಭೂತಿಯೆಡೆಗೆ ಸಾಗಿದವರೇ ವಿಶ್ವ ವಿಭೂತಿಪುರುಷರು ಎಂಬ ಸಾಹಿತಿ ಹಂಪನಾ ಅವರ ನುಡಿತೋರಣ ಅರ್ಥಪೂರ್ಣ. ಸಾಮಾನ್ಯವಾಗಿ ಮಹಾತ್ಮರ, ಐತಿಹಾಸಿಕ ಪುರುಷರ ಚರಿತ್ರೆ ಬರೆಯುವ ಸಂದರ್ಭದಲ್ಲಿ ಒಬ್ಬರ ಅಥವಾ ಒಂದು ಪರಂಪರೆಯ ಅಥವಾ ಒಂದು ಪ್ರದೇಶ ಅಥವಾ ಒಂದು ಸಮುದಾಯಕ್ಕೆ ಸಂಬಂಧಪಟ್ಟವರ ವಿಷಯವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆದರೆ ಆ ಎಲ್ಲವನ್ನೂ ಒಳಗೊಂಡವರ ಚರಿತ್ರೆ ಈ ಗ್ರಂಥದ ವಿಶೇಷ. ಮಹಾತ್ಮರ ಚರಿತಾಮೃತದ ಒಳಹೊಕ್ಕರೆ ಅಂಕಲಗಿಯ ಅಡಿವೆಪ್ಪನವರಿಂದ ಆರಂಭವಾಗಿ ರಮಣ ಮಹರ್ಷಿಗಳು, ಆದಿಚುಂಚನಗಿರಿಯ ಗೋರಕ್ಷನಾಥರು, ಎಡೆಯೂರು ಸಿದ್ಧಲಿಂಗೇಶ್ವರರು, ಗದಗಿನ ಗವಾಯಿಗಳು, ಧರ್ಮಸ್ಥಳದ ಹೆಗ್ಗಡೆಯವರು, ಶಂಕರಾಚಾರ್ಯರು, ಶಿವರಾತ್ರೀಶ್ವರರು, ಅರವಿಂದರು, ಪ್ರಜಾಪಿತ ಬ್ರಹ್ಮಬಾಬಾರವರು, ಮಲೆಮಹದೇಶ್ವರರು, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು, ಮಹಾವೀರ, ಬುದ್ಧ, ಪೈಗಂಬರ್, ನಾನಕ, ಏಸುಕ್ರಿಸ್ತ, ವಾಲ್ಮೀಕಿ, ಭಕ್ತಿಭಂಡಾರಿ ಬಸವಣ್ಣ, ಅಕ್ಕಮಹಾದೇವಿ, ಸೇವಾಲಾಲ, ನಾರಾಯಣಗುರು, ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಚೈತನ್ಯ ಪ್ರಭುಗಳು, ತಿರುವಳ್ಳುವರ್, ಸಿದ್ಧಾರೂಢರು, ಡಾ. ಶಿವಕುಮಾರ ಸ್ವಾಮಿಗಳು ಹೀಗೆ 216 ಮಹಾತ್ಮರ ಚರಿತ್ರೆ ಈ ಗ್ರಂಥದಲ್ಲಿದೆ.
ಅಥಣೀಶ ಸ್ವಾಮೀಜಿಯ ಅಖಂಡ ಸಾಧನೆ
ಸಾಹಿತ್ಯ ಕಲಬೆರಕೆಯಾಗಲು ಕಾರಣ ಸಾಹಿತಿಯ ಪೂರ್ವಗ್ರಹ ಮನಸ್ಥಿತಿ. ಆದರೆ ಪ್ರಭುಚನ್ನಬಸವ ಸ್ವಾಮೀಜಿಯವರ ಈ ಉದ್ಗ›ಂಥದಲ್ಲಿ ಪೂರ್ವಗ್ರಹದ ಪರದೆ ಎಲ್ಲಿಯೂ ಕಾಣಸಿಗುವುದಿಲ್ಲ. ಆ ಕಾರಣದಿಂದ ಮಹಾತ್ಮರ ಚರಿತಾಮೃತ ವಾಸ್ತವದ ಒಗ್ಗೋರಣವಾಗಿ ಸಾಹಿತ್ಯ ಲೋಕದಲ್ಲಿ ಒಡ್ಡೋಲಗ ಬಾರಿಸುತ್ತಿದೆ. ಕರೊನಾ ಲಾಕ್ಡೌನ್ ಹೆಸರಿನಲ್ಲಿ ಇಡೀ ಜಗತ್ತು ಬಾಗಿಲು ಮುಚ್ಚಿಕೊಂಡಿದ್ದಾಗ ಅಥಣೀಶ ಸ್ವಾಮೀಜಿಯ ಅಂತರಂಗದಲ್ಲಿ ಅರಿವಿನ ಬಾಗಿಲು ತೆರೆಯುತ್ತದೆ. ಸಮಯದ ಸದುಪಯೋಗ ಮಾಡಿಕೊಳ್ಳಬೇಕೆಂಬ ಸತ್ಸಂಕಲ್ಪದೊಂದಿಗೆ ಶ್ರೀಗಳು ಆರಂಭಿಸಿದ್ದು ಮಹಾತ್ಮರ ಚರಿತಾಮೃತ. ಚಿಕ್ಕದಾಗಿ ಬರೆಯಲು ಆರಂಭಿಸಿದ ಶ್ರೀಗಳ ಅಧ್ಯಯನಾಸಕ್ತಿ ವಿಶಾಲವಾದುದರ ಪ್ರತಿಫಲವಾಗಿ ಮಹಾತ್ಮರ ಚರಿತಾಮೃತದಲ್ಲಿ ವಿಶ್ವದ 216 ವಿಭೂತಿ ಪುರುಷರ ಚರಿತ್ರೆ ದಾಖಲಾಯಿತು. ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪನವರು ಹೇಳುವಂತೆ ಸ್ವತಃ ಕವಿ, ಆಧುನಿಕ ವಚನಕಾರ, ಖ್ಯಾತ ಪ್ರವಚನಕಾರರಾದ ಪ್ರಭುಚನ್ನಬಸವ ಸ್ವಾಮೀಜಿಯವರು ಗಡಿಯ ಗುಡಿಯೊಳಗೆ ಬಾರಿಸಿದ ‘ನುಡಿನಗಾರೆ’ ಮಹಾತ್ಮರ ಚರಿತಾಮೃತದ ಮೂಲಕ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಗಡಿನಾಡ ಸಾಹಿತ್ಯದ ಸೇತು
ಗಡಿನಾಡು ಬೆಳಗಾವಿಯಲ್ಲಿ ಭಾಷೆ ಮತ್ತು ಪ್ರದೇಶದ ತಿಕ್ಕಾಟದ ನಡುವೆ ಕನ್ನಡದ ಬಾವುಟ ಸದಾ ರಾರಾಜಿಸುವಂತೆ ಮಾಡುವಲ್ಲಿ ಹುಕ್ಕೇರಿ ಹಿರೇಮಠ, ಅಥಣಿಯ ಗಚ್ಚಿನ ಮಠ, ಮೋಟಗಿ ಮಠಗಳ ಪಾತ್ರ ಪ್ರಮುಖವಾದದ್ದು. 17ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮೋಟಗಿ ಮಠದ ಶೂನ್ಯ ಪರಂಪರೆಯಲ್ಲಿ ಇಲ್ಲಿಯವರೆಗೆ 7 ಜನ ಶಿವಯೋಗಿಗಳು ಆಗಿ ಹೋಗಿದ್ದು, ಸದ್ಯ ಇರುವ ಶ್ರೀ ಪ್ರಭುಚನ್ನಬಸವ ಸ್ವಾಮಿಗಳು 8ನೆಯವರು. ಮೋಟಗಿ ಮಠವು ಧಾರ್ವಿುಕವಾಗಿಯಷ್ಟೇ ಅಲ್ಲದೇ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿ ಹಲವು ಕಾರ್ಯಗಳನ್ನು ಮಾಡಿದೆ. 1940ರಲ್ಲಿ ಸ್ಥಾಪನೆಯಾದ ಶ್ರೀ ಗುರುಚನ್ನಬಸವೇಶ್ವರ ಗ್ರಂಥಮಾಲೆಯ ಮೂಲಕ ನೂರಾರು ಕೃತಿಗಳನ್ನು ಪ್ರಕಟಿಸಿದ್ದು ಮಹಾತ್ಮರ ಚರಿತಾಮೃತ ಕೃತಿಯ ಮೂಲಕ ಮೈಲುಗಲ್ಲನ್ನು ಸ್ಥಾಪಿಸಿದೆ.
25ರಂದು ಲೋಕಾರ್ಪಣೆ
ಈ ಬೃಹತ್ ಗ್ರಂಥವು ಸೆ. 25ರಂದು ಬೆಂಗಳೂರಿನ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಬಿಡುಗಡೆಗೊಳ್ಳಲಿದೆ. ಸುತ್ತೂರು, ಸಿದ್ಧಗಂಗೆ, ಚಿತ್ರದುರ್ಗ, ಆದಿಚುಂಚನಗಿರಿ, ತೋಂಟದಾರ್ಯಮಠ, ಭಾಲ್ಕಿ ಮತ್ತು ಬೇಲಿಮಠದ ಶ್ರೀಗಳ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಸಾವಿರ ಪುಟ ಮೀರಿದ ಈ ಗ್ರಂಥವನ್ನು ರಿಯಾಯಿತಿ ದರದಲ್ಲಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿಗಳಿಗಾಗಿ 9901150946 ಸಂರ್ಪಸಬಹುದು.