

|ಡಾ. ಗುರುರಾಜಪೋಶೆಟ್ಟಿಹಳ್ಳಿ
ವಾಲ್ಮೀಕಿ ಮಹರ್ಷಿ ರಚಿಸಿರುವ ರಾಮಾಯಣದಲ್ಲಿ ಎಲ್ಲರ ಹೃದಯವನ್ನಪಹರಿಸುವ ಪಾತ್ರ ಹನುಮಂತನದು. ಸುಂದರಕಾಂಡದಲ್ಲಿ ಮೊಟ್ಟ ಮೊದಲಿಗೆ ಕಂಡು ಬರುವ ಹನುಮಂತ ಅನಂತರ ರಾಮಾಯಣದಲ್ಲಿ ವಹಿಸುವ ಪಾತ್ರ ಅದ್ಭುತ, ಅಪೂರ್ವ. ಹಂತ ಹಂತವಾಗಿ ಬೆಳೆಯುತ್ತಾ ಹೋಗಿ ಎಲ್ಲರ ಆರಾಧ್ಯ ದೈವವಾಗುತ್ತಾನೆ. ಎಲ್ಲರ ಪ್ರೀತಿಪಾತ್ರ ದೈವವಾಗುತ್ತಾನೆ. ಮೊದಲ ಸನ್ನಿವೇಶದಲ್ಲಿಯೇ ಹನುಮಂತನ ಬುದ್ಧಿಮತ್ತೆ ಹಾಗೂ ಮುತ್ಸದ್ದಿತನದ ಪರಿಚಯವಾಗುತ್ತದೆ. ಋಷ್ಯಮೂಕ ಪರ್ವತದ ದಿಕ್ಕಿನಲ್ಲಿ ರಾಮಲಕ್ಷ್ಮಣರು ಬರುತ್ತಿರುವ ಸುದ್ದಿ ಕೇಳಿ ಸುಗ್ರೀವ ಆತಂಕಕ್ಕೊಳಗಾಗುತ್ತಾನೆ. ಆಗ ಅವನಿಗೆ ಹನುಮಂತ ನುಡಿಯುವ ಧೈರ್ಯದ ಮಾತುಗಳಲ್ಲಿ ವಿವೇಚನೆ, ವಿಚಕ್ಷಣೆ ಹಾಗೂ ಬುದ್ಧಿಮತ್ತೆ ಎದ್ದು ಕಾಣುತ್ತದೆ. ನಂತರ ಹನುಮಂತನು ಒಬ್ಬ ತಪಸ್ವಿಯ ರೂಪದಲ್ಲಿ ರಾಮಲಕ್ಷ್ಮಣರನ್ನು ಸಮೀಪಿಸಿ ಮಾತನಾಡುವ ರೀತಿ ಆತನ ಧೀಮಂತಿಕೆಗೆ ಉತ್ತಮ ಉದಾಹರಣೆ.
ಸುಗ್ರೀವನ ದೂತನಾಗಿ ಬಂದ ಹನುಮಂತ ಒಂದೇ ಪೆಟ್ಟಿಗೆ ರಾಮ-ಸುಗ್ರೀವರನ್ನು ಬಳಿ ತರುವುದರಲ್ಲಿ ಯಶಸ್ವಿಯಾಗುತ್ತಾನೆ. ಶ್ರೀರಾಮನು ‘‘ಉಚ್ಛಾರಯಯಿ ಕಲ್ಯಾಣೀಂ ವಾಚಂ ಹೃದಯ ಹರ್ಷಿಣೀಮ್’ ಎಂದು ಹೇಳುವ ಅಭಿಪ್ರಾಯ ಹನುಮಂತನ ವಾಕ್ ಸಾಮರ್ಥ್ಯಕ್ಕೆ ನೀಡಲಾದ ಪ್ರಶಂಸಾ ಪತ್ರ ಎನ್ನಬಹುದು. ಸೀತೆಯ ಹುಡುಕಾಟದಲ್ಲಿ ಎಲ್ಲ ವಾನರರೂ ವಿಫಲರಾದಾಗ ಜಾಂಬವಂತನ ಪ್ರೇರಣೆಯಿಂದ ಸಮುದ್ರೋಲ್ಲಂಘನ ಮಾಡಿ ಸೀತೆಯನ್ನು ಪತ್ತೆ ಮಾಡಿದ್ದು ಹನುಮಂತನ ಬುದ್ಧಿಮತ್ತೆಗೆ ಸಾಕ್ಷಿಯಾಗಿದೆ. ‘ಬುದ್ಧಿ ಮತ್ತೆಯುಳ್ಳ ವರಲ್ಲಿ ಶ್ರೇಷ್ಠ ಎಂದು ಕರೆಸಿಕೊಳ್ಳುವ ಹನುಮಂತ ಒಬ್ಬ ದೂತನಿ ಗಿರಬೇಕಾದ ಎಲ್ಲ ಗುಣ, ಚಾಕಚಕ್ಯತೆ ಹಾಗೂ ವಿವೇಚನೆ ಹೊಂದಿದ್ದ’ ಎಂಬುದನ್ನು ವಾಲ್ಮೀಕಿ ಮಹರ್ಷಿ ಅದ್ಭುತವಾಗಿ ಚಿತ್ರಿಸಿದ್ದಾರೆ.
ಹನುಮಂತನ ಜನ್ಮಸ್ಥಾನ ಅಂಜನಾದ್ರಿ: ದಾಸನಾದವ ಈಶನಾಗುತ್ತಾನೆ ಎಂಬುದಕ್ಕೆ ರಾಮದೂತ ಹನುಮಂತನೇ ಸಾಕ್ಷಿ. ಹನುಮನಿಲ್ಲದ ಗ್ರಾಮವಿಲ್ಲ. ಪೂಜಿಸದ ಜನರಿಲ್ಲ. ಇದು ಆತನ ದಾಸಭಕ್ತಿಯ ದ್ಯೋತಕ. ಹನುಮಂತ ಒಲಿದರೆ ಹರಿ ತಾನಾಗೇ ಒಲಿವ ಎಂಬುದು ಪುರಂದರ ದಾಸರ ನಂಬುಗೆ. ಹಾಗೆಂದೇ ಅವರು ಹನುಮನ ಒಲಿದರೆ ಹರಿ ತಾನೊಲಿವ ಎಂದು ಹಾಡಿದ್ದು. ಶ್ರೀರಾಮನ ಅಣತಿಯಂತೆ ಹನುಮಂತ ಚಿರಂಜೀವಿಯಾಗಿ, ರಾಮಸ್ಮರಣೆ ಮಾಡುತ್ತಾ ಭೂಲೋಕದಲ್ಲಿ ನೆಲೆಸಿದ್ದಾನೆ. ಹನುಮಂತನ ಜನನ ಗಂಗಾವತಿ ತಾಲೂಕಿನ ಆನೆಗುಂದಿ ಸಮೀಪ ಇರುವ ಪಂಪಾ ಸರೋವರ ತೀರದ ಅಂಜನಾದ್ರಿ ಬೆಟ್ಟದಲ್ಲಿ ಆಯಿತು ಎನ್ನುವ ನಂಬುಗೆಯಿದೆ.
ಹನುಮಪ್ಪ ಊರ ಹೊರಗೆ ಯಾಕೆ?: ಭಾರತದ ಉದ್ದಗಲಕ್ಕೂ ಹಳ್ಳಿ-ಪಟ್ಟಣಗಳಲ್ಲಿ ಹನುಮನದೊಂದು ಗುಡಿ ಇಲ್ಲದೆ ಇರುವುದಿಲ್ಲ. ಆದರೆ ಇಲ್ಲೊಂದು ಸ್ವಾರಸ್ಯವಿದೆ. ಬಹುತೇಕ ಎಲ್ಲ ಊರುಗಳಲ್ಲೂ ಹನುಮನ ಗುಡಿ ಇರುವುದು ಊರ ಹೊರಗೇ. ಮೊದಲು ಹೊರಗಿದ್ದು, ಊರು ವಿಸ್ತರಣೆಗೊಂಡ ಕಾರಣದಿಂದ ಒಳಗೆ ಸೇರಿಕೊಂಡ ಸಂದರ್ಭಗಳಿವೆಯೇ ಹೊರತು, ಕಟ್ಟುವಾಗಲೇ ಊರೊಳಗೆ ಹನುಮನ ಗುಡಿ ಕಟ್ಟಿದ ಉದಾಹರಣೆಗಳು ತೀರಾ ಅಪರೂಪ. ಕೆಲವು ಕಡೆಗಳಲ್ಲಂತೂ ಹನುಮ ಗೋಡೆ- ಮಾಡುಗಳಿಲ್ಲದೆ ಊರ ಹೊರಗಿನ ಬಟಾಬಯಲಲ್ಲಿ ಪೂಜೆಗೊಳ್ಳುತ್ತಾನೆ. ಅದಕ್ಕೂ ಕಾರಣವಿದೆ. ವಾಯು ದೇವನ ಆಶೀರ್ವಾದದಿಂದ ಜನಿಸಿದ ಹನುಮ ಮಹಾ ತುಂಟ. ಗಾಳಿಯಷ್ಟೇ ಚುರುಕಿನ ಚಲನೆಯುಳ್ಳವನು. ಎಲ್ಲರನ್ನೂ ಬೇಸ್ತು ಬೀಳಿಸುತ್ತ, ಧಾಂಧಲೆ ಮಾಡುತ್ತ ಇದ್ದ ಮಾರುತಿಯ ವಿರುದ್ಧ ಊರ ಜನರು ದೂರುತ್ತಾರೆ.
ಇದರಿಂದ ಬೇಸರಗೊಳ್ಳುವ ಅಂಜನಾ ದೇವಿ, ತನ್ನ ಪುಟ್ಟ ತುಂಟ ಮಗನನ್ನು ಕರೆದುಕೊಂಡು, ಊರ ಹೊರಗೆ ನೆಲೆಸುತ್ತಾಳೆ. ಆದ್ದರಿಂದ ಹನುಮನಿಗೆ ಅಂದಿನಿಂದ ಇಂದಿನವರೆಗೂ ಊರ ಹೊರಗಷ್ಟೆ ಜಾಗ. ಮತ್ತೊಂದು ಪ್ರಕ್ಷೇಪದ ಪ್ರಕಾರ ಕಿಷ್ಕಿಂದೆಯಲ್ಲಿ ಆಡಿಕೊಂಡು ಬೆಳೆಯುತ್ತಿದ್ದ ಹನುಮ ಋಷಿಯೊಬ್ಬರಿಗೆ ಕೀಟಲೆ ಮಾಡಿ, ಊರೊಳಗೆ ಪ್ರವೇಶಿಸದಂತೆ ಶಿಕ್ಷೆ ಪಡೆಯುತ್ತಾನೆ. ರಾಮಾಯಣದ ಪ್ರಕಾರ, ಶ್ರೀರಾಮ ಪಟ್ಟಾಭಿಷೇಕದ ನಂತರ ಹನುಮ, ರಾಮನ ಸೇವಾಕಾಂಕ್ಷಿಯಾಗಿ ಅಯೋಧ್ಯೆಯಲ್ಲೇ ನೆಲೆಸುತ್ತಾನೆ. ಆದರೆ ಅಲ್ಲಿನ ಜನರ ಕೀಟಲೆಗೆ ಒಳಗಾಗಿ, ಪಟ್ಟಣದ ಹೊರಗೆ ವಾಸಿಸುತ್ತಾನೆ. ಈ ಎಲ್ಲ ಕತೆಗಳಲ್ಲೂ ಹನುಮಂತನು ತುಂಟ ಸ್ವಭಾವವೇ ಆತನನ್ನು ಊರ ಹೊರಗಿಡಲು ಕಾರಣ ಎಂಬ ಧ್ವನಿಯಿದೆ. ಜನಪದ ನಂಬುಗೆಗಳ ಪ್ರಕಾರ ಮಾರುತಿಯು ಊರ ಕಾವಲುಗಾರ. ಪೈಲ್ವಾನರ ಗರಡಿ ಮನೆಗಳು ಸಾಮಾನ್ಯವಾಗಿ ಊರ ಹೊರಗೇ ಇರುತ್ತಿದ್ದುದು. ವೀರಮಾರುತಿ ಈ ಪೈಲ್ವಾನರ ಅಧಿದೈವ. ಈ ಕಾರಣದಿಂದಲೂ ಆತನಿಗೆ ಊರಾಚೆಗೆ ಪೂಜೆ ಸಲ್ಲಿಸುವ ಪರಿಪಾಠ ಆರಂಭವಾಯ್ತು ಎನ್ನಲಾಗುತ್ತದೆ.
ಹಟ್ಟಿ, ಹಾಡಿ, ತಾಂಡ, ಹಳ್ಳಿ, ಪುರ, ಪಟ್ಟಣ, ನಗರ,- ಕರುನಾಡ ಯಾವುದೇ ಊರಿನ ಕೋಟೆಹೆಬ್ಬಾಗಿಲು, ಊರ ಬಾಗಿಲ ಬಳಿ ಹನುಮಗುಡಿ ಇರುತ್ತದೆ. ಮಾರುತಿ, ಹನುಮಂತ, ಸಂಜೀವಿನಿರಾಯ, ಹುಚ್ಚೂರಾಯ ಮುಂತಾದ ಹಲವು ಹೆಸರುಗಳಲ್ಲಿ ಬಹುರೂಪಿಯಾಗಿ ಪ್ರೀತಿಯ ದೈವವಾಗಿ ಜನಪ್ರಿಯನಾಗಿದ್ದಾನೆ. ಹಳ್ಳಿಗಳ ಕೂಟ ಬೆಂಗಳೂರು ವಿಸ್ತಾರಗೊಂಡಂತೆ, ಹಿಂದಿನ ಗುಡಿಗಳ ಜೊತೆಗೆ ಎಂಟು ದಿಕ್ಕುಗಳಲ್ಲೂ ಚಿಕ್ಕ ಪುಟ್ಟ ಗುಡಿಗಳೂ, ದೊಡ್ಡ ದೇವಸ್ಥಾನಗಳೂ ನಿರ್ವಿುತವಾಗಿವೆ. ಹುಚ್ಚೂರಾಯಪ್ಪ ಮುಂತಾದ ಹೆಸರಿಗೆ ಗೌಡ, ಶೆಟ್ಟಿ, ನಾಯ್ಕ, ರೆಡ್ಡಿ ಮುಂತಾದ ಕುಲದ ಹೆಸರನ್ನು ಸೇರಿಸಿಯೂ ಇಡುತ್ತಿದ್ದರು. ಈಗ ಪವನಸುತ, ಅನಿಲಕುಮಾರ ಮುಂತಾಗಿ ಕಾಲಕ್ಕೆ ತಕ್ಕ ಹೆಸರಿಡುವಿಕೆ ಮುಂದುವರಿದಿದೆ.