

ವಿಜಯಪುರ: ಒಳಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ರಾಜ್ಯಾದ್ಯಂತ ‘ಮಾದಿಗ ಮುನ್ನಡೆ, ಮಾದಿಗರ ಆತ್ಮಗೌರವ ಸಮಾವೇಶ’ ಹಮ್ಮಿಕೊಳ್ಳಲಾಗಿದ್ದು, ಡಿ. 24ರಂದು ಬೆಳಗ್ಗೆ 10.30ಕ್ಕೆ ನಗರದ ಇಟಗಿ ಪೆಟ್ರೋಲ್ ಪಂಪ್ ಬಳಿಯ ಸಾಯಿ ಗಾರ್ಡನ್‌ನಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ಮಾದಿಗ ಸಮಾಜದ ಮುಖಂಡ ಹಣಮಂತ ರಾವುತಪ್ಪ ಬಿರಾದಾರ ತಿಳಿಸಿದರು.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ನೀಡುವ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈಗಾಗಲೇ ಶಿಫಾರಸ್ಸು ಪತ್ರ ಕೂಡ ಕಳುಹಿಸಲಾಗಿದೆ. ಪ್ರಧಾನಿ ಮೋದಿ ಅವರು ಪೂರಕ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ಹೀಗಾಗಿ ಪೂರ್ವಭಾವಿಯಾಗಿ ಸಮಾವೇಶ ನಡೆಸಲಾಗುತ್ತಿದೆ. ಸಿಕ್ಕರೆ ವಿಜಯೋತ್ಸವ ಸಿಗದಿದ್ದರೆ ಮತ್ತೆ ಹೋರಾಟ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಗುವುದೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸಮಾವೇಶದಲ್ಲಿ ಮಾದಿ, ಸಮಗಾರ, ಮೋಚಿ, ಡೋರ, ಭಂಗಿ ಇತ್ಯಾದಿ ಮಾದಿಗ ಸಂಬಂಧಿತ ಜಾತಿಗಳ ಯುವಕರು, ಬುದ್ದಿಜೀವಿಗಳು, ನೌಕರರು, ಹೋರಾಟಗಾರರು ಹಾಗೂ ವಿದ್ಯಾರ್ಥಿ ಸಮೂಹ ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೊಂದು ಅರ್ಥಪೂರ್ಣ ಹಾಗೂ ಬೃಹತ್ ಸಮಾವೇಶವಾಗಲಿದ್ದು, ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಗುರುಗಳ ಸಾನ್ನಿಧ್ಯದಲ್ಲಿ ನಡೆಯುವ ಈ ಸಮಾವೇಶದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಂಸದ ರಮೇಶ ಜಿಗಿಜಿಣಗಿ ಅಧ್ಯಕ್ಷತೆ ವಹಿಸುವರು. ಶಾಸಕರಾದ ದುರ್ಯೋಧನ ಐಹೊಳೆ, ಬಸವರಾಜ ಮತ್ತಿಮಡು, ಮಾಜಿ ಶಾಸಕ ಬಸವರಾಜ ದಡೆಸುಗುರು, ನಿವೃತ್ತ ಅಧಿಕಾರಿಗಳಾದ ಅನೀಲ ಕುಮಾರ, ಲಕ್ಷ್ಮಿ ನಾರಾಯಣ, ಗೋನಾಳ ಭೀಮಪ್ಪ, ಬಾಬುರಾವ ಮುಡವಿ, ಭೀಮಾಶಂಕರ ಅಣಚಿ, ಮಲ್ಲಮ್ಮ ಪೂಜಾರಿ, ವಿಜಯಕುಮಾರ ಅಡಕಿ, ಭೀಮಣ್ಣ ಬಿಲ್ಲವ, ರವೀಂದ್ರ ಜಲಧಾರೆ, ಈರಣ್ಣ ಮೌರ್ಯ ಮತ್ತಿತರರು ಪಾಲ್ಗೊಳ್ಳುವರೆಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಸಂಜೀವ ಐಹೊಳೆ, ಉಮೇಶ ಕಾರಜೋಳ, ಸಮಾಜದ ಧುರೀಣರಾದ ಶರಣು ಬ್ಯಾಳಿ, ಅಯ್ಯಪ್ಪ ದೊಡ್ಡಮನಿ, ಪರಶುರಾಮ ದೊಡ್ಡಮನಿ ಮತ್ತಿತರರಿದ್ದರು.