ಸಖತ್ ಕ್ರಿಯೇಟಿವ್: ಮರಗಳ ಜೀವ ಉಳಿಸುವ ವಿನೋದ್​

ವಿನೊದ
Published on

ಮಾಡೋದಕ್ಕೆ ನೂರಾರು ಕೆಲಸವಿರುತ್ತವೆ. ಆದರೆ ಅದನ್ನು ಆಸಕ್ತಿ ಇಟ್ಟು ಮಾಡುವ ಶಕ್ತಿ ಇರುವುದು ಕೆಲವರಲ್ಲಿ ಮಾತ್ರ. ಯಾಂತ್ರಿಕ ಬದುಕಿನ ಹೊರಗೆ ನಿಂತು ವಿಭಿನ್ನ ರೀತಿಯಲ್ಲಿ ಆಲೋಚಿಸಿ, ಕಾರ್ಯರೂಪಕ್ಕೆ ತರುವವರು ಅನೇಕರಿದ್ದಾರೆ. ನನ್ನ ಭಾಷೆ, ನನ್ನ ರಾಜ್ಯ, ನಮ್ಮ ಜನ, ನಮ್ಮ ಕಲೆ ಎಂಬ ಅಭಿಮಾನ ಇಟ್ಟುಕೊಂಡು ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಕೆಲ ಯುವ ಸಾಧಕರ ಕಿರು ಪರಿಚಯ ಇಲ್ಲಿದೆ. ಇದರಲ್ಲಿ ಕೆಲವರು ಅದನ್ನೇ ತಮ್ಮ ವೃತ್ತಿಯನ್ನಾಗಿಯೂ ಮಾಡಿಕೊಂಡು ಕೈತುಂಬ ಕಾಸನ್ನೂ ಗಳಿಸುತ್ತಿದ್ದಾರೆ.

‘ಕೆಲಸ ಖಾಲಿ ಇದೆ’, ‘ತಿಂಗಳಿಗೆ 20 ಸಾವಿರ ಗಳಿಸಿ’, ‘ಹತ್ತೇ ದಿನದಲ್ಲಿ ಇಂಗ್ಲಿಷ್ ಕಲೀರಿ’... ಇಂತಹ ಜಾಹೀರಾತುಗಳನ್ನು ಬಸ್‌ಸ್ಟಾಪ್ ಹತ್ತಿರದ ಮರಗಳ ಮೇಲೆ ನೀವು ಪ್ರತಿದಿನ ನೋಡುತ್ತಿರುತ್ತೀರಿ. ಅವುಗಳನ್ನು ಹಾಕಲು ಮೊಳೆ ಅಥವಾ ದೊಡ್ಡ ಸ್ಟಾಪ್ಲರ್ ಪಿನ್ ಹೊಡೆದಿರುತ್ತಾರೆ. ಹಾಗೆ ಮೊಳೆ ಹೊಡೆಯುವುದರಿಂದ ಮರಗಳ ಮೇಲೆ ಏನು ದುಷ್ಪರಿಣಾಮ ಆಗುತ್ತದೆ ಅಂತ ಯೋಚಿಸುವವರು ತೀರಾ ಕಡಿಮೆ. ಅಂತಹ ವಿರಳ ವ್ಯಕ್ತಿಗಳಲ್ಲೊಬ್ಬರು ‘ವಿನೋದ್ ಕರ್ತವ್ಯ’.

ಒಮ್ಮೆ ಮರಕ್ಕೆ ಒರಗಿ ನಿಲ್ಲಲು ಹೋದಾಗ ಅವರಿಗೆ ಮೊಳೆ ಚುಚ್ಚಿ ನೋವಾಯಿತಂತೆ. ಆಗಲೇ ಅವರಿಗೆ ಈ ಮೊಳೆಗಳಿಂದ ಮರಗಳ ಮೇಲೆ ಏನು ದುಷ್ಪರಿಣಾಮ ಆಗಬಹುದು ಎಂಬ ಯೋಚನೆ ಶುರುವಾಯಿತು. ಅಧ್ಯಯನ ಮಾಡುತ್ತ ಹೋದಾಗ ಈ ರೀತಿಯ ಮರಗಳ ಆಯಸ್ಸು ಶೇಕಡ 25-30ರಷ್ಟು ಕಡಿಮೆಯಾಗಿರುವುದು ಗೊತ್ತಾಯಿತು. ಅಂದಿನಿಂದ ಮರಗಳ ಜೀವ ಉಳಿಸಲು ಮುಂದಾದರು ಬೆಂಗಳೂರಿನ ವಿನೋದ್. ತಮ್ಮ ಏರಿಯಾದ ಮರಗಳಲ್ಲಿದ್ದ ಮೊಳೆಗಳು, ಸ್ಟಾಪ್ಲರ್ ಪಿನ್‌ಗಳನ್ನು ತೆಗೆಯಲು ಆರಂಭಿಸಿದರು. ಇವರ ಈ ಕೆಲಸ ನೋಡಿ ಜನ ಮೊದಮೊದಲು ನಗುತ್ತಿದ್ದರು. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ವಿನೋದ್ ತಮ್ಮ ಸದುದ್ದೇಶದ ಕಾರ‌್ಯಕ್ಕೆ ಸಾಮಾಜಿಕ ಜಾಲತಾಣಗಳನ್ನೂ ಬಳಸಿಕೊಳ್ಳತೊಡಗಿದರು. ಆಗ ಅದು ಹೆಚ್ಚು ಸುದ್ದಿಯಾಗತೊಡಗಿತು. ‘ಮೊಳೆ ಮುಕ್ತ ಮರ’ ಚಾಲೆಂಜ್ ಆರಂಭಿಸಿ, ಸೆಲೆಬ್ರಿಟಿಗಳು ಮತ್ತು ಯುವ ಸಮುದಾಯವನ್ನು ಮರ ಉಳಿಸುವ ಕೆಲಸದಲ್ಲಿ ತೊಡಗುವಂತೆ ಮಾಡಿದರು.

ವಿನೋದ್ ಜತೆ ಸ್ನೇಹಿತರು, ಸಮಾನಮನಸ್ಕರೂ ಸೇರಿಕೊಂಡರು. ಹಾಗೆ ಬೆಂಗಳೂರು ಹುಡುಗರು ತಂಡ ರೂಪುಗೊಂಡಿತು. ಒಟ್ಟು 1280 ಮರಗಳಲ್ಲಿದ್ದ 14 ಸಾವಿರ ಮೊಳೆಗಳು ಮತ್ತು ಆರು ಕೆಜಿ ಸ್ಟಾಪ್ಲರ್ ಪಿನ್‌ಗಳನ್ನು ಇವರು ತೆಗೆದಿದ್ದಾರೆ! ಮರಕ್ಕೆ ಮೊಳೆ ಹೊಡೆಯುವವರ ಮೇಲೆ ಕಾನೂನಾತ್ಮಕ ಹೋರಾಟಕ್ಕೂ ಮುಂದಾದಾಗ ಬೆಂಗಳೂರು ಪೊಲೀಸರು ಸಹಕಾರ ನೀಡಿದರು. ಪರಿಣಾಮವಾಗಿ, ಹಾಗೆ ಜಾಹೀರಾತಿಗೋಸ್ಕರ ಮರಗಳಿಗೆ ಹಾನಿ ಮಾಡುವವರ ವಿರುದ್ಧ 12 ವಾರ್ಡ್‌ಗಳಲ್ಲಿ ಕೇಸ್‌ಗಳು ದಾಖಲಾಗಿವೆ. ಈಗ ಮರಗಳಿಗೆ ಹಾನಿ ಮಾಡಬಾರದು ಎಂಬ ಅರಿವು ನಿಧಾನವಾಗಿ ಎಲ್ಲರಲ್ಲಿ ಮೂಡತೊಡಗಿದೆ.

- ಮಂದಾರ ಸಾಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net