

ಮಾಡೋದಕ್ಕೆ ನೂರಾರು ಕೆಲಸವಿರುತ್ತವೆ. ಆದರೆ ಅದನ್ನು ಆಸಕ್ತಿ ಇಟ್ಟು ಮಾಡುವ ಶಕ್ತಿ ಇರುವುದು ಕೆಲವರಲ್ಲಿ ಮಾತ್ರ. ಯಾಂತ್ರಿಕ ಬದುಕಿನ ಹೊರಗೆ ನಿಂತು ವಿಭಿನ್ನ ರೀತಿಯಲ್ಲಿ ಆಲೋಚಿಸಿ, ಕಾರ್ಯರೂಪಕ್ಕೆ ತರುವವರು ಅನೇಕರಿದ್ದಾರೆ. ನನ್ನ ಭಾಷೆ, ನನ್ನ ರಾಜ್ಯ, ನಮ್ಮ ಜನ, ನಮ್ಮ ಕಲೆ ಎಂಬ ಅಭಿಮಾನ ಇಟ್ಟುಕೊಂಡು ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಕೆಲ ಯುವ ಸಾಧಕರ ಕಿರು ಪರಿಚಯ ಇಲ್ಲಿದೆ. ಇದರಲ್ಲಿ ಕೆಲವರು ಅದನ್ನೇ ತಮ್ಮ ವೃತ್ತಿಯನ್ನಾಗಿಯೂ ಮಾಡಿಕೊಂಡು ಕೈತುಂಬ ಕಾಸನ್ನೂ ಗಳಿಸುತ್ತಿದ್ದಾರೆ.
ಮೇಣದ ಬತ್ತಿಯನ್ನು ಈಗ ಯಾರು ಬಳಕೆ ಮಾಡುತ್ತಾರೆ ಎನ್ನುವ ಅಸಡ್ಡೆಯನ್ನು ಹೋಗಲಾಡಿಸಿದವರು ಶ್ರೀವಿದ್ಯಾ ಕಾಮತ್. ಪೆಟ್ರೋಲಿಯಂನಿಂದ ತೆಗೆದ ಮೇಣವನ್ನು ಬಿಟ್ಟು ನೈಸರ್ಗಿಕ ಮೂಲಗಳಿಂದ ಸಿಗುವ ಮೇಣವನ್ನೇ ಬಳಸಿಕೊಂಡು ಎಕೋ ಫ್ರೆಂಡ್ಲಿ ಮೇಣದ ಬತ್ತಿಗಳನ್ನು ವಿಭಿನ್ನ ರೀತಿಯಲ್ಲಿ ತಯಾರಿಸಿ, ಪರಿಚಯಿಸಿದ್ದಾರೆ. ಇಂಗಾಲ ಬಿಡುಗಡೆ ಮಾಡದಂತಹ ತಮ್ಮದೇ ಆದ ಬ್ರ್ಯಾಂಡ್ ಒಂದನ್ನು ಜನಪ್ರಿಯಗೊಳಿಸಿದ್ದಾರೆ. ಕಾಫಿ ಕ್ಯಾಂಡಲ್, ಸ್ಪೈಸ್ ಕ್ಯಾಂಡಲ್ ಹೀಗೆ ನಾನಾ ರೀತಿಯ ಕ್ಯಾಂಡಲ್ಗಳನ್ನು ತಯಾರಿಸುತ್ತಿದ್ದಾರೆ. ವಿಶೇಷವೆಂದರೆ ಕೆಲವು ಆರೋಗ್ಯ ಸಂಬಂಧಿ ತೊಂದರೆಗಳಿಗೆ ಇವರ ಕ್ಯಾಂಡಲ್ ಉರಿಸಿ ಅದರ ವಾಸನೆ ಸೇವಿಸಿದರೆ ಉತ್ತಮ ಪರಿಣಾಮ ಬೀರುತ್ತದೆಯಂತೆ!
ಇವರ ಕ್ಯಾಂಡಲ್ಗಳ ಸ್ವರೂಪ, ಸೌಂದರ್ಯ ಇನ್ನೊಂದು ವಿಶೇಷ. ಐಸ್‌ಕ್ರೀಂ, ಕೃಷ್ಣ, ರಾಧೆ ಹೀಗೆ ಅನೇಕ ವಿಶೇಷ ಶೈಲಿಗಳಲ್ಲಿ ಕ್ಯಾಂಡಲ್ ತಯಾರಿಸಿ, ಜನರನ್ನು ಆಕರ್ಷಿಸುವಲ್ಲಿ ಶ್ರೀವಿದ್ಯಾ ಸಫಲರಾಗಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಜರ್ಮನಿ, ದುಬೈ ಮತ್ತು ಬ್ರಿಟನ್‌ಗೆ ಮೇಣದ ಬತ್ತಿಗಳನ್ನು ರಫ್ತು ಮಾಡುವುದಕ್ಕೂ ಸಿದ್ಧವಾಗಿದ್ದಾರೆ. ಓರಾ ಕ್ರಿಯೇಷನ್ಸ್ ಹೆಸರಿನಲ್ಲಿ ಕ್ಯಾಂಡಲ್ಗಳನ್ನು ತರಲಾಗುತ್ತಿದ್ದು, ಸದ್ಯದಲ್ಲಿಯೇ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲೂ ಲಭ್ಯವಾಗಲಿವೆ.
- ಮಂದಾರ ಸಾಗರ