ಅದೃಷ್ಟವೇ ಅಂತಿಮವಲ್ಲ...: ಮನೋಲ್ಲಾಸ

Manollasa
Published on
| ಮಹಾದೇವ ಬಸರಕೋಡ

ಶ್ರದ್ಧಾವಂತ ವ್ಯಕ್ತಿಯೊಬ್ಬ ಬಹುದಿನಗಳಿಂದ ತಮ್ಮ ಊರಿನಲ್ಲಿ ನೆಲೆಸಿದ್ದ ಸಂತರೊಬ್ಬರ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ಸಾತ್ವಿಕ ಬದುಕನ್ನು ರೂಢಿಸಿಕೊಂಡಿದ್ದ. ಸಂತರ ಪ್ರೀತಿಪಾತ್ರ ವ್ಯಕ್ತಿಗಳಲ್ಲಿ ಇವನೂ ಒಬ್ಬ. ಹಲವು ವರ್ಷಗಳ ನಂತರ ಸಂತರು ಪುಣ್ಯಕ್ಷೇತ್ರಗಳ ಸಂಚಾರಕ್ಕೆ ನಿರ್ಧರಿಸಿ, ಅಲ್ಲಿಂದ ಹೊರಡಲು ಸಿದ್ಧರಾದರು. ಸಂತರು ಮರಳಿ ಬರುವರೋ ಇಲ್ಲವೋ ಎಂಬ ಅನುಮಾನ ಕಾಡತೊಡಗಿತು. ಅಲ್ಲಿಯವರೆಗೂ ಸಂತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಗೆ ಚಿಂತೆಯಾಯಿತು. ಸಂತರು ಇನ್ನೇನು ಹೊರಡುವ ಗಳಿಗೆಯಲ್ಲಿ ತನ್ನ ಅಳಲನ್ನು ಅವರೆದುರು ತೋಡಿಕೊಂಡ. ‘ನಾನು ಖಂಡಿತ ಮರಳಿ ಬರುತ್ತೇನೆ’ ಎಂದರು. ‘ಅಲ್ಲಿಯವರೆಗೂ ಬದುಕನ್ನು ನಡೆಸುವುದು ಹೇಗೆ?’ ಎಂದು ಪ್ರಶ್ನಿಸಿದ. ಆಗ ಸಂತರು, ‘ನಿನಗೆ ಏನು ಬೇಕು ಕೇಳು’ ಎಂದರು.

ಆಗ ಯುವಕ, ‘ನನಗೆ ಒಂದಷ್ಟು ಲಾಟರಿ ಹೊಡೆಯುವಂತೆ ಮಾಡಿ. ಹಾಗೆ ಬಂದ ಹಣದಲ್ಲಿ ನನ್ನ ಬದುಕನ್ನು ರೂಪಿಸಿಕೊಳ್ಳುತ್ತೇನೆ’ ಎಂದು ಕೇಳಿದ. ‘ಸರಿ, ನಿನ್ನಿಷ್ಟದಂತೆ ಆಗಲಿ. ಪರಿಶುದ್ಧ ಮನಸ್ಸಿನಿಂದ ದೇವರನ್ನು ಪ್ರಾರ್ಥಿಸು. ಖಂಡಿತವಾಗಿಯೂ ಲಾಟರಿ ಹೊಡೆಯುತ್ತದೆ. ಬದುಕಿಗೆ ಅಗತ್ಯವಾದಷ್ಟು ಹಣ ನಿನಗೆ ಸಿಗುತ್ತದೆ’ ಎಂದು ಹೇಳಿ ಅಲ್ಲಿಂದ ಹೊರಟರು. ಆ ಯುವಕ ದಿನವೂ ದೇವರನ್ನು ಪ್ರಾರ್ಥಿಸಿದ. ದಿನ, ವಾರ, ತಿಂಗಳು ಸರಿದವು. ಯಾವುದೇ ಲಾಟರಿ ಹೊಡೆಯಲೇ ಇಲ್ಲ. ತುಂಬ ನಿರಾಶನಾದ. ಆ ಸಂತರನ್ನೇ ದೂಷಿಸುತ್ತ, ‘ನನಗೆ ಮೋಸ ಮಾಡಿದರು’ ಎಂದೆಲ್ಲ ಹೇಳತೊಡಗಿದ. ಕೆಲವು ದಿನಗಳ ನಂತರ ಸಂತರು ಅದೇ ಊರಿಗೆ ಮರಳಿದರು. ತುಂಬ ವ್ಯಗ್ರನಾಗಿದ್ದ ವ್ಯಕ್ತಿ ಅವರನ್ನು ಹಿಂದೆಮುಂದೆ ನೋಡದೇ ದೂಷಿಸಿದ. ಸಂತರು ಒಂದಷ್ಟು ಕಾಲ ಸುಮ್ಮನೇ ಇದ್ದರು. ಅವನು ಕೊಂಚ ಸಮಾಧಾನವಾದ ನಂತರ, ‘ನೀನು ಖರೀದಿಸಿದ ಲಾಟರಿ ಟಿಕೆಟ್ ತೋರಿಸಪ್ಪ’ ಎಂದರು. ವ್ಯಕ್ತಿಗೆ ತನ್ನ ತಪ್ಪಿನ ಅರಿವಾಗಿತ್ತು. ಅವನು ಲಾಟರಿ ಟಿಕೆಟ್ ಖರೀದಿಸುವುದನ್ನೇ ಮರೆತಿದ್ದ.

ಸೋಮಾರಿತನ ಹೊಂದಿದ ದುರ್ಬಲ ಮನಸ್ಸು ಸುಲಭದ ಮಾರ್ಗಗಳನ್ನೇ ಹುಡುಕಲು ಹಾತೊರೆಯುತ್ತದೆ. ನಾವು ಏನು ಮಾಡುತ್ತಿದ್ದೇವೆ ಎಂಬ ಪರಿವೆ ಇಲ್ಲದೇ ವರ್ತಿಸುತ್ತೇವೆ. ಇದು ವೈಫಲ್ಯ, ನೋವು, ನಿರಾಶೆಗಳಿಗೆ ಕಾರಣವಾಗುತ್ತದೆ. ನಮ್ಮ ಉದ್ದೇಶ, ಆದ್ಯತೆಗಳ ಅರಿವು ನಮಗೆ ಇರಬೇಕು. ಭಾವೋದ್ವೇಗಕ್ಕೆ ಒಳಗಾಗದೇ ವಿಷಯ, ವಾಸ್ತವಗಳ ಕುರಿತು ಆಲೋಚಿಸಬೇಕು. ನಮ್ಮ ಕಣ್ಣಗಳನ್ನೊಂದಿಷ್ಟು ಹಿಗ್ಗಿಸಿ ನೋಡಬೇಕು. ಕೇವಲ ಪರಿಣಾಮವನ್ನು ಬದಲಿಸಲು ಪ್ರಯತ್ನಿಸುವುದನ್ನು ಬಿಟ್ಟು ಅದಕ್ಕೆ ಅಗತ್ಯವಾದ ಕಾರಣದ ಕಡೆಗೂ ಗಮನಹರಿಸಬೇಕು. ಯಾವುದೇ ಕ್ರಿಯೆಯತ್ತ ಗಮನ ಹರಿಸದೆ ಕೇವಲ ಪವಾಡಕ್ಕಾಗಿ ಕಾಯುವುದು ವಿವೇಚನೆಯಿಲ್ಲದೆ ನಡೆ. ‘ಪ್ರತಿಯೊಬ್ಬರೂ ಗೆಲುವನ್ನು ಬಯಸುತ್ತಾರೆ, ಆದರೆ ಗೆಲುವಿಗೆ ಸಿದ್ಧತೆಯನ್ನು ಕೆಲವರು ಮಾತ್ರ ಮಾಡಿಕೊಳ್ಳುತ್ತಾರೆ’ ಎಂಬ ವಿನ್ಸ್ ಲೋಂಬಾರ್ಡಿ ಮಾತು ಮನನೀಯ. ನಮ್ಮ ಪ್ರಯತ್ನಕ್ಕೆ ನಮ್ಮ ನಂಬಿಕೆಗಳು ಪೂರಕವಾಗಿರಬೇಕು. ಆದರೆ ನಂಬಿಕೆಗಳೇ ಅಂತಿಮವಾಗಬಾರದು. ಇಂತಹ ಜಾಗೃತಿಯೇ ಬದುಕಿಗೆ ಸಮೃದ್ಧಿಯನ್ನು ತಂದುಕೊಡಬಲ್ಲವು.

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net