ಪ್ರೀತಿಯ ಟಾಮಿ; ಮಕ್ಕಳ ಕಥೆ

Story
Published on

ಒಂದು ಊರಿನಲ್ಲಿ ರಾಮು- ಗೋಪು ಎಂಬ ಅಣ್ಣ ತಮ್ಮಂದಿರು ಇದ್ದರು. ಅವರ ಜೊತೆಯಲ್ಲಿ ಟಾಮಿ ಎಂಬ ನಾಯಿ ಇತ್ತು. ಅವರಿಬ್ಬರು ಎಲ್ಲಿ ಹೋದರೂ ಆ ನಾಯಿ ಜೊತೆಯಲ್ಲಿಯೇ ಹೋಗುತ್ತಿತ್ತು. ಒಂದು ದಿನ ನಾಯಿಗೆ ಗಾಯವಾಗಿ ಕೆಟ್ಟ ವಾಸನೆ ಬರುತ್ತಿತ್ತು. ಹೀಗಿದ್ದರೂ ರಾಮು ಟಾಮಿಯನ್ನು ಆರೈಕೆ ಮಾಡಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದನು. ಆದರೆ ತಮ್ಮ ಗೋಪುವಿಗೆ ಮಾತ್ರ ಆ ವಾಸನೆಯನ್ನು ತಡೆದುಕೊಳ್ಳಲಾಗದೆ ಟಾಮಿಯನ್ನು ಬಿಟ್ಟು ಬರಬೇಕೆಂದು ಯೋಚಿಸಿದನು. ರಾಮುವಿಗೆ ಇದು ಇಷ್ಟವಾಗಲಿಲ್ಲ.

ಒಂದು ದಿನ ರಾಮು ಅಂಗಡಿಗೆ ಹೋಗಿದ್ದಾಗ ಗೋಪು ನಾಯಿಯನ್ನು ದೂರ ಬಿಟ್ಟು ಬಂದನು. ಸ್ವಲ್ಪ ಸಮಯದ ನಂತರ ಮನೆಗೆ ಬಂದ ಅಣ್ಣ ನಾಯಿ ಎಲ್ಲಿ ಎಂದು ಕೇಳಿದಾಗ, ಗೋಪಿಯು ತಾನು ನಾಯಿಯನ್ನು ಬೇರೆಡೆ ಬಿಟ್ಟು ಬಂದಿರುವುದಾಗಿ ತಿಳಿಸಿದನು. ಇದರಿಂದ ತುಂಬಾ ದುಃಖಗೊಂಡ ಅಣ್ಣನು ನಾಯಿಯನ್ನು ಹುಡುಕಿಕೊಂಡು ಹೊರಟನು. ಹೀಗೆ ಅಳುತ್ತಾ ಹೋಗುತ್ತಿದ್ದಾಗ ದೂರದಲ್ಲಿ ಟಾಮಿ ಕುಳಿತುಕೊಂಡಿದ್ದು ಕಾಣಿಸಿತು. ಖುಷಿಗೊಂಡ ರಾಮುವು ನನ್ನ ಟಾಮಿಯು ಸಿಕ್ಕಿತಲ್ಲ, ಇನ್ನಾದರೂ ಇದನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಂಡು ‘ಟಾಮಿ’ ಎಂದು ಕರೆದನು.

ರಾಮುವಿನ ಸ್ವರವನ್ನು ಅನುಸರಿಸಿ ಕೇಳಿದ ಟಾಮಿ ಅವನೆಡೆಗೆ ಓಡಿ ಬರಲು ಆಕಸ್ಮಿಕವಾಗಿ ಬಂದ ಲಾರಿಯೊಂದು ಟಾಮಿಯ ಮೈಮೇಲೆಯೇ ಹರಿಯಿತು. ಇಷ್ಟೊತ್ತಾದರೂ ಅಣ್ಣ ಯಾಕೆ ಬರಲಿಲ್ಲ ಎಂದು ಹುಡುಕಿಕೊಂಡು ಬಂದ ಗೋಪಿಯು, ರಕ್ತದ ಮಡುವಿನಲ್ಲಿ ಮಲಗಿದ್ದ ಟಾಮಿಯನ್ನು ನೋಡಿ ತುಂಬಾ ದುಃಖಗೊಂಡನು. ಮತ್ತೊಂದೆಡೆ ರಾಮುವೂ ಅಳುತ್ತ ನಿಂತಿದ್ದ. ತಾನು ನಾಯಿಯನ್ನು ಚೆನ್ನಾಗಿ ನೋಡಿಕೊಂಡಿದ್ದರೆ ಅದಕ್ಕೆ ಈ ಗತಿ ಬರುತ್ತಿರಲಿಲ್ಲ ಎಂದು ಗೋಪು ತನ್ನ ತಪ್ಪಿಗಾಗಿ ಪಶ್ಚಾತ್ತಾಪಪಟ್ಟನು.

ನೀತಿ: ಎಲ್ಲ ಪ್ರಾಣಿಗಳ ಮೇಲೂ ದಯೆ-ಅನುಕಂಪ ಇರಬೇಕು.

| ದ್ರಶಾಂತ್ 4 ನೇ ತರಗತಿ, ಸ. ಮಾ. ಹಿ. ಪ್ರಾ. ಶಾಲೆ, ಬ್ರಹ್ಮಾವರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net