ಲವ್, ಸೆಕ್ಸ್, ಧೋಖಾ

Love Sex Dhokha
Published on

27 ವರ್ಷದ ಸುಮಿತ್ರಾ ಕೇರಳದ ಕೊಚ್ಚಿಯ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದು ಆಕೆಯ ತಂದೆ ಖಾಸಗಿ ನೌಕರಿಯಲ್ಲಿದ್ದರು. ತಮ್ಮ ಒಬ್ಬಳೇ ಮಗಳಾಗಿದ್ದ ಆಕೆಗೆ ಅವಳ ಮಾತಾಪಿತರು ಸಾಕಷ್ಟು ಸ್ವಾತಂತ್ರ್ಯನ್ನು ನೀಡಿದ್ದರು. ಆರ್ಕಿಟೆಕ್ಚರ್​ನಲ್ಲಿ ಪದವಿಯನ್ನು ಗಳಿಸಿದ ನಂತರ ಸುಮಿತ್ರಾ ಸೂಕ್ತ ನೌಕರಿಗಾಗಿ ಹುಡುಕಾಡುತ್ತ ಇದ್ದಳು. ಆ ಸಮಯದಲ್ಲಿ ಆಕೆ ಸಾಮಾಜಿಕ ಜಾಲತಾಣಗಳಾಗಿದ್ದ ಫೇಸ್​ಬುಕ್ ಮತ್ತು ಇನ್ಸಾ್ಟಗ್ರಾಂಗಳಲ್ಲಿ ಹೆಚ್ಚು ಸಕ್ರಿಯಳಾಗಿದ್ದು ದಿನಕ್ಕೆ ಎರಡು ಗಂಟೆಗಳ ಕಾಲ ಅವುಗಳನ್ನು ನೋಡುವುದರಲ್ಲಿಯೇ ಕಾಲವನ್ನು ಕಳೆಯುತ್ತಿದ್ದಳು.

aa kshana
ಒಂದು ದಿನ ಆಕೆ ಫೇಸ್​ಬುಕ್​ನಲ್ಲಿ ಡಾ. ವಿಕ್ರಮ್ ಎನ್ನುವ ಒಬ್ಬ ಯುವಕನ ಪೋಸ್ಟ್ ಒಂದನ್ನು ನೋಡಿದಳು. ವಿಕ್ರಮ್ ತಾನು 23 ವರ್ಷ ವಯಸ್ಸಿನವನಾಗಿದ್ದು ಉತ್ತರ ಪ್ರದೇಶ ಮೂಲದವನೆಂದು ಹೇಳಿಕೊಂಡಿದ್ದ. ತಾನು ಕಜಕ್​ಸ್ತಾನದಲ್ಲಿ ವೈದ್ಯ ಪದವಿ ಓದುತ್ತಿರುವುದಾಗಿ ತಿಳಿಸಿದ್ದ ಆತ ತನ್ನ ಕಾಲೇಜು, ಅಲ್ಲಿನ ಆಸ್ಪತ್ರೆ, ತನ್ನ ಸಹಪಾಠಿಗಳು, ಶಿಕ್ಷಕರು, ಮುಂತಾದವುಗಳ ಫೋಟೋಗಳನ್ನು ಫೇಸ್​ಬುಕ್​ನ ತನ್ನ ಪೋಸ್ಟ್​ಗಳಲ್ಲಿ ಹಾಕಿದ್ದ. ತನ್ನ ಆಸಕ್ತಿಗಳನ್ನೂ ಆತ ಹೇಳಿಕೊಂಡಿದ್ದ. ಅದೇ ಆಸಕ್ತಿಗಳಿದ್ದ ಸುಮಿತ್ರಾ ಅವನಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದಳು. ಎರಡೇ ದಿನಗಳ ಬಳಿಕ ಆತ ಒಪ್ಪಿಕೊಂಡು ಅವಳ ಸ್ನೇಹಿತನಾದ. ಕೆಲಕಾಲಾನಂತರ ಅವರಿಬ್ಬರೂ ಫೇಸ್​ಬುಕ್ ಮೆಸೆಂಜರ್​ನಲ್ಲಿ ಚಾಟ್ ಮಾಡತೊಡಗಿ ಒಬ್ಬರಿಗೊಬ್ಬರು ಸನಿಹಕ್ಕೆ ಬಂದರು.

ಏತನ್ಮಧ್ಯೆ ಸುಮಿತ್ರಾಳಿಗೆ ಚೆನ್ನೈನ ಹೆಸರಾಂತ ಬಿಲ್ಡರ್-ಡೆವಲಪರ್ ಸಂಸ್ಥೆಯೊಂದರಲ್ಲಿ ಕೆಲಸ ಸಿಕ್ಕಿತು. ಬೆಳಗಿನ 10ರಿಂದ ಸಂಜೆ 5ರವರೆಗೆ ಮಾತ್ರ ಅವಳು ಕೆಲಸ ಮಾಡಬೇಕಾಗಿತ್ತು. ಸಂಬಳವೂ ಆಕೆಯ ನಿರೀಕ್ಷೆಗಿಂತ ಹೆಚ್ಚಾಗಿತ್ತು. ಆದರೆ ತಮ್ಮ ಒಬ್ಬಳೇ ಮಗಳು ದೂರದೂರಿಗೆ ಹೋಗಿ ಕೆಲಸ ಮಾಡುವುದು ಆಕೆಯ ಮಾತಾಪಿತರಿಗೆ ಇಷ್ಟವಿರಲಿಲ್ಲ. ಅವರು ಸುಮಿತ್ರಾಳಿಗೆ ಕೊಚ್ಚಿಯಲ್ಲೇ ಕೆಲಸ ಹುಡುಕಲು ಸೂಚಿಸಿದರು. ಆದರೆ ಇದಕ್ಕೊಪ್ಪದ ಸುಮಿತ್ರಾ ಮಾತಾಪಿತರ ವಿರೋಧದ ನಡುವೆಯೂ ಚೆನ್ನೈಗೆ ಹೋಗಿ ಕೆಲಸಕ್ಕೆ ಸೇರಿಕೊಂಡಳು. ತನ್ನ ಕಚೇರಿಗೆ ಹತ್ತಿರವಿದ್ದ ಪಿ.ಜಿ. ಒಂದರಲ್ಲಿ ವಸತಿ ಹೂಡಿದಳು. ತಿಂಗಳಿಗೊಮ್ಮೆ ಕೊಚ್ಚಿಗೆ ಹೋಗಿ ತನ್ನ ಮಾತಾಪಿತರ ಜತೆ ಒಂದೆರಡು ದಿನಗಳನ್ನು ಕಳೆದು ಬರುತ್ತಿದ್ದಳು.

ಕೆಲಕಾಲದ ನಂತರ ವಿಕ್ರಮ್ ತನ್ನ ವೈದ್ಯಕೀಯ ಪರೀಕ್ಷೆ ಮುಗಿದಿದೆಯೆಂದೂ ತಾನು ಮುಂದಿನ ವಾರವೇ ಭಾರತಕ್ಕೆ ಮರಳುವುದಾಗಿ ಸುಮಿತ್ರ್ರಾಳಿಗೆ ತಿಳಿಸಿದ. ಅವಳನ್ನು ಮುಖತಃ ಭೇಟಿ ಮಾಡಬೇಕೆಂದು ತಾನು ಇಚ್ಛಿಸಿರುವುದಾಗಿ ತಿಳಿಸಿ ಅವಳ ಮೊಬೈಲ್ ನಂಬರ್ ಕೇಳಿದ. ಆಕೆ ತನ್ನ ಮೊಬೈಲ್ ನಂಬರ್ ಕೊಟ್ಟ ಎರಡೇ ನಿಮಿಷಕ್ಕೆ ಕಾಲ್ ಮಾಡಿ ಅವಳೊಡನೆ ಅರ್ಧ ಗಂಟೆ ಮಾತನಾಡಿದ. ಮಾರನೆಯ ದಿನದಿಂದಲೇ ಅವರಿಬ್ಬರೂ ಪ್ರತಿರಾತ್ರಿಯೂ ಗಂಟೆಗಟ್ಟಲೇ ಸಂಭಾಷಣೆ ಮಾಡತೊಡಗಿದರು. ಆರು ತಿಂಗಳ ನಂತರ ತನಗೆ ಭಾರತದಲ್ಲಿ ಪ್ರಾಕ್ಟೀಸ್ ಮಾಡಲು ಪರವಾನಗಿ ದೊರೆತಿರುವುದಾಗಿ ತಿಳಿಸಿದ ವಿಕ್ರಮ್ ತಾನು ಸ್ನಾತಕೋತ್ತರ ಪದವಿ ಮಾಡಲು ಇಚ್ಛಿಸಿದ್ದು ಅದರ ತಯಾರಿ ಮಾಡಲು ಚೆನ್ನೈಗೆ ಬರುತ್ತಿರುವುದಾಗಿ ತಿಳಿಸಿದ.

ಚೆನ್ನೈನಲ್ಲಿ ಅವರಿಬ್ಬರೂ ಮಾಲ್​ವೊಂದರಲ್ಲಿ ಭೇಟಿಯಾದರು. ಪ್ರಥಮ ಭೇಟಿಯಲ್ಲಿಯೇ ಇಬ್ಬರೂ ಪರಸ್ಪರ ಅನುರಕ್ತರಾದರು. ತಾನು ಶ್ರೀಮಂತ ಕುಟುಂಬವೊಂದಕ್ಕೆ ಸೇರಿದ್ದು ತನ್ನ ಮಾತಾಪಿತರ ಏಕೈಕ ಪುತ್ರನೆಂದು ವಿಕ್ರಮ್ ತಿಳಿಸಿದ. ನಾನು ನಿನ್ನ ಫೋಟೋ ನೋಡಿಯೇ ನಿನ್ನತ್ತ ಆಕರ್ಷಿತನಾದೆ ಎಂದಾತ ಸುಮಿತ್ರ್ರಾಳಿಗೆ ಹೇಳಿದಾಗ ಆಕೆ ನಾಚಿದಳು. ತಮ್ಮಿಬ್ಬರ ಆಸಕ್ತಿಗಳಲ್ಲಿ ಹಲವಾರು ಸಾಮ್ಯತೆಗಳು ಇರುವುದನ್ನು ಅವರಿಬ್ಬರೂ ಗಮನಿಸಿದರು. ಒಂದು ತಿಂಗಳ ನಂತರ ವಿಕ್ರಮ್​ಗೆ ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ರೆಸಿಡೆಂಟ್ ಕೆಲಸ ದೊರೆಯಿತು. ಆ ಸಂತಸವನ್ನು ಸುಮಿತ್ರ್ರಾಳೊಂದಿಗೆ ಹಂಚಿಕೊಂಡ ಆತ ಅದೇ ದಿನವೇ ಅವಳನ್ನು ಮದುವೆಯಾಗುವುದಾಗಿ ಪ್ರಪೋಸ್ ಮಾಡಿದ. ತನಗಿಂತ ವಯಸ್ಸಿನಲ್ಲಿ ಒಂದು ವರ್ಷ ವಿಕ್ರಮ್ ಸಣ್ಣವನಾಗಿದ್ದರೂ ಸುಮಿತ್ರಾ ಕೂಡಲೇ ಒಪ್ಪಿದಳು. ಇಬ್ಬರೂ ತಮ್ಮ ಮಾತಾಪಿತರಿಗೆ ಈ ವಿಷಯವನ್ನು ತಿಳಿಸಿದರು. ಎರಡೂ ಕುಟುಂಬಗಳು ಈ ಸಂಬಂಧವನ್ನು ವಿರೋಧಿಸಿದರು. ಆದರೆ ಯುವ ಜೋಡಿ ಈ ವಿರೋಧವನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.

ತಿಂಗಳೆರಡರ ನಂತರ ವಿಕ್ರಮ್ ಮತ್ತು ಸುಮಿತ್ರ್ರಾ ಸಹಜೀವನ ಮಾಡಲು ನಿರ್ಧರಿಸಿದರು. ಒಂದು ಬೆಡ್​ರೂಂನ ಅಪಾರ್ಟ್​ವೆುಂಟ್ ಬಾಡಿಗೆಗೆ ಪಡೆದು ಅಲ್ಲಿ ಪತಿ ಪತ್ನಿಯರಂತೆಯೇ ವಾಸಿಸತೊಡಗಿದರು. ಸ್ವಾಭಾವಿಕವಾಗಿಯೇ ಅವರಿಬ್ಬರ ನಡುವೆ ದೈಹಿಕ ಸಂಪರ್ಕವೂ ಬೆಳೆಯಿತು.

ವಿಕ್ರಮ್ಲ್ಲಿ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳನ್ನು ನೋಡುವ ದೌರ್ಬಲ್ಯವಿತ್ತು. ಆತ ಹಲವಾರು ಪೊನೋಗ್ರಾಫಿಕ್ ಜಾಲತಾಣಗಳ ಸದಸ್ಯನಾಗಿದ್ದ. ಈ ವಿಷಯವನ್ನು ಆತ ಸುಮಿತ್ರಾ ಸೇರಿ ಎಲ್ಲರಿಂದಲೂ ಗುಟ್ಟಾಗಿಟ್ಟಿದ್ದ. ಆ ಜಾಲತಾಣಗಳಲ್ಲಿ ಜಾಲಿ ಜೋಸೆಫ್ ಎನ್ನುವ ಅನ್ವರ್ಥ ನಾಮಧೇಯದಿಂದ ಆತ ಚುರುಕಾಗಿದ್ದ. ಪ್ರತಿದಿನವೂ ಆತ ಒಂದು ಗಂಟೆಗೂ ಹೆಚ್ಚು ಕಾಲ ಈ ಜಾಲತಾಣಗಳಲ್ಲಿನ ವಿಡಿಯೋಗಳು ಮತ್ತು ಫೋಟೋಗಳನ್ನು ನೋಡುತ್ತಿದ್ದ.

ಒಮ್ಮೆ ಸುಮಿತ್ರಾ ಕೊಚ್ಚಿಗೆ ಹೋಗಿದ್ದಾಗ ವಿಕ್ರಮ್ ತಮ್ಮ ಬೆಡ್​ರೂಂ ಮತ್ತು ಬಾತ್​ರೂಂಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಿದ. ಸುಮಿತ್ರಾ ಚೆನ್ನೈಗೆ ಮರಳಿದ ನಂತರ ಆತ ತಮ್ಮಿಬ್ಬರ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿಕೊಂಡಿದ್ದ. ಸುಮಿತ್ರಾ ಸ್ನಾನ ಮಾಡುತ್ತಿರುವ ದೃಶ್ಯಗಳನ್ನೂ ಆತ ಚಿತ್ರೀಕರಣ ಮಾಡಿಕೊಂಡಿದ್ದ. ಇದು ಸುಮಿತ್ರ್ರಾಳ ಗಮನಕ್ಕೆ ಬರಲಿಲ್ಲ.

ಸುಮಾರು ಆರು ತಿಂಗಳ ಸಹಜೀವನದ ನಂತರ ವಿಕ್ರಮ್​ಗೆ ಸುಮಿತ್ರ್ರಾ ಬೇಡವಾದಳು. ಕ್ಷುಲ್ಲಕ ವಿಷಯಗಳಿಗೆ ಅವರಿಬ್ಬರ ನಡುವೆ ಮನಸ್ತಾಪಗಳಾಗತೊಡಗಿದವು. ಒಂದು ದಿನ ಅವರಿಬ್ಬರ ನಡುವೆ ತೀವ್ರ ಜಗಳವಾದಾಗ ಕೋಪಗೊಂಡ ವಿಕ್ರಮ್ ತನ್ನ ಹಾಗೂ ಸುಮಿತ್ರಾಳ ಖಾಸಗಿ ವಿಡಿಯೋವನ್ನು ಸೂಕ್ತವಾಗಿ ಎಡಿಟ್ ಮಾಡಿ ತಾನು ಸದಸ್ಯನಾಗಿದ್ದ ಖಾಸಗಿ ಜಾಲತಾಣದಲ್ಲಿ ಹರಿಬಿಟ್ಟ. ಸುಮಾರು 3 ತಿಂಗಳ ನಂತರ ಕೊಚ್ಚಿಯಲ್ಲಿದ್ದ ಸುಮಿತ್ರಳ ಸಹಪಾಠಿಯೊಬ್ಬಳು ಈ ವಿಡಿಯೋವನ್ನು ಗಮನಿಸಿ ಸುಮಿತ್ರಳಿಗೆ ಮಾಹಿತಿ ಕೊಟ್ಟಳು. ಸದರಿ ವೀಡಿಯೋದ ಕ್ಲಿಪ್ಪಿಂಗ್ ಒಂದನ್ನೂ ಅವಳಿಗೆ ವಾಟ್ಸ್ಯಾಪ್ ಮೂಲಕ ಕಳುಹಿಸಿದಳು. ಅದನ್ನು ನೋಡಿದ ಸುಮಿತ್ರಾ ಕುದ್ದು ಹೋದಳು. ಅದನ್ನು ಮಾಡಿದವನು ವಿಕ್ರಮ್ಲ್ಲದೇ ಬೇರಾರೂ ಅಲ್ಲ ಎನ್ನುವುದು ಅವಳಿಗೆ ಖಾತ್ರಿಯಾಗಿತ್ತು. ಆದರೆ ಬೇಕೆಂತಲೇ ಆ ವಿಷಯವನ್ನು ಆಕೆ ವಿಕ್ರಮ್ ಜತೆ ಪ್ರಸ್ತಾಪವನ್ನು ಮಾಡಲಿಲ್ಲ.

ಆದರೆ ಆಕೆ ಈ ಮಾಹಿತಿಯನ್ನು ಚೆನ್ನೈನಲ್ಲಿಯೇ ಇದ್ದ ತನ್ನ ಸಂಬಂಧಿ ಸುಭಾಷ್​ನಿಗೆ ತಿಳಿಸಿ ಮುಂದೇನು ಮಾಡುವುದೆಂದು ಕೇಳಿದಳು. ಆತ ಪೊಲೀಸರಿಗೆ ದೂರು ನೀಡಲು ಸೂಚಿಸಿದ. ಆದರೆ ಪೊಲೀಸ್ ಠಾಣೆಗೆ ಹೋದರೆ ತನ್ನ ಖಾಸಗಿ ವಿಷಯವು ಎಲ್ಲರಿಗೂ ತಿಳಿಯುತ್ತದೆ ಎನ್ನುವ ಭಯ ಸುಮಿತ್ರಳಿಗಿತ್ತು. ಆಕೆ ಬೇರೆ ರೀತಿಯಲ್ಲಿ ವಿಕ್ರಮ್​ಗೆ ಬುದ್ಧಿ ಕಲಿಸಬೇಕೆಂದು ಸುಭಾಷ್​ನನ್ನು ಕೋರಿದಳು. ಆತ ಇದಕ್ಕೊಪ್ಪಿದ.

ಮುಂದಿನ ವಾರ ತನ್ನ ಮನೆಗೆ ಪಾರ್ಟಿಯೊಂದಕ್ಕೆ ವಿಕ್ರಮ್ ಮತ್ತು ಸುಮಿತ್ರರನ್ನು ಸುಭಾಷ್ ಆಹ್ವಾನಿಸಿದ. ಆ ಪಾರ್ಟಿಗೆ ಆತ ತನ್ನಿಬ್ಬರು ಮಿತ್ರರಾದ ರಮೇಶ್ ಮತ್ತು ಮೋಹನ್​ರನ್ನೂ ಕರೆದ. ಎಲ್ಲರೂ ಮದ್ಯಪಾನವನ್ನು ಮಾಡಿದರು. ಒಂದು ರೌಂಡ್ ಮದ್ಯಪಾನವಾದ ಕೂಡಲೇ ಸುಮಿತ್ರ, ವಿಕ್ರಮ್ ಮೇಲೆ ಮುಗಿಬಿದ್ದು ತಮ್ಮ ಖಾಸಗಿ ಕ್ಷಣಗಳ ವಿಡಿಯೋವನ್ನು

ಜಾಲತಾಣದಲ್ಲಿ ಹರಿಬಿಟ್ಟದ್ದೇಕೆ ಎಂದು ತರಾಟೆಗೆ ತೆಗೆದುಕೊಂಡಳು. ಆತ ತನಗೂ ಅದಕ್ಕೂ ಏನೇನೂ ಸಂಬಂಧವಿಲ್ಲ ಎಂದ. ಆಗ ಕೋಪಗೊಂಡ ಸುಮಿತ್ರಾ ತನ್ನ ಕೈಯಲ್ಲಿದ್ದ ವಿಸ್ಕಿ ಗ್ಲಾಸಿನಿಂದ ಅವನ ತಲೆಗೆ ಬಲವಾಗಿ ಹೊಡೆದಳು. ಅದನ್ನು ಕಂಡ ಸುಭಾಷ್ ಮತ್ತಿತರರು ಅವಳೊಡನೆ ಕೈಜೋಡಿಸಿ ವಿಕ್ರಮ್ನ್ನು ಮನಬಂದಂತೆ ಥಳಿಸಿದರು. ಇದರ ಫಲವಾಗಿ ತೀವ್ರವಾಗಿ ಗಾಯಗೊಂಡ ವಿಕ್ರಮ್ ಪ್ರಜ್ಞಾಹೀನನಾದ.

ಕೂಡಲೇ ಹೆದರಿದ ನಾಲ್ಕೂ ಜನರು ವಿಕ್ರಮ್ನ್ನು ಹತ್ತಿರದಲ್ಲಿದ್ದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅತಿಯಾದ ಮಧ್ಯಪಾನ ಮಾಡಿದ ವಿಕ್ರಮ್ ಮೆಟ್ಟಿಲುಗಳನ್ನು ಇಳಿಯುವಾಗ ಜಾರಿ ಬಿದ್ದು ಪೆಟ್ಟು ಮಾಡಿಕೊಂಡ ಎಂದು ಅವರು ಆಸ್ಪತ್ರೆಯಲ್ಲಿದ್ದ ವೈದ್ಯರಿಗೆ ತಿಳಿಸಿದರು. ಎರಡು ದಿನಗಳ ನಂತರ ವಿಕ್ರಮ್ ಪ್ರಜ್ಞಾವಸ್ಥೆಗೆ ಬಂದು ವೈದ್ಯರಿಗೆ ತನಗೆ ಗಾಯವಾದ ನಿಜವಾದ ಕಾರಣವನ್ನು ತಿಳಿಸಿದ. ವೈದ್ಯರು ಪೊಲೀಸರನ್ನು ಕರೆಸಿದರು. ಅವರು ವಿಕ್ರಮ್ ಹೇಳಿಕೆಯನ್ನು ದಾಖಲು ಮಾಡಿಕೊಂಡು ತೀವ್ರ ಗಾಯವನ್ನು ಮಾಡಿದ ಆರೋಪದ ಮೇರೆಗೆ ಸುಮಿತ್ರ್ರಾ ಮತ್ತು ಇತರ ಮೂರು ಜನರ ಮೇಲೆ ಹಲ್ಲೆ ಪ್ರಕರಣವೊಂದನ್ನು ದಾಖಲು ಮಾಡಿದರು. ನಂತರ ಪೊಲೀಸರು ಅವರೆಲ್ಲರನ್ನೂ ತಮ್ಮ ವಶಕ್ಕೆ ಪಡೆದು ವಿಚಾರಿಸಿದಾಗ ಅವರು ತಾವು ಮಾಡಿದ ಕೃತ್ಯವನ್ನು ಒಪ್ಪಿಕೊಂಡರು. ಅವರೆಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.

8 ದಿನಗಳ ನಂತರ ಆಸ್ಪತ್ರೆಯಲ್ಲಿ ಇದ್ದಕ್ಕಿದ್ದಂತೆ ವಿಕ್ರಮ್ ಪರಿಸ್ಥಿತಿ ಬಿಗಡಾಯಿಸಿತು. ಆತ ಅದೇ ರಾತ್ರಿ ಮರಣಹೊಂದಿದ. ಹಲ್ಲೆ ಪ್ರಕರಣದ ನಾಲ್ಕೂ ಆರೋಪಿಗಳ ಮೇಲೆ ಕೊಲೆ ಆರೋಪವನ್ನು ಹೊರೆಸಲಾಯಿತು. ನ್ಯಾಯಾಲಯದ ವಿಚಾರಣೆಯಲ್ಲಿ ಆರೋಪಿತರ ವಕೀಲರು ಆರೋಪಿಗಳಿಗೆ ವಿಕ್ರಮ್ನ್ನು ಕೊಲೆ ಮಾಡುವ ಯಾವುದೇ ಉದ್ದೇಶವಿರದೇ ಇದ್ದು ಇದ್ದಕ್ಕಿದ್ದಂತೆ ಉಂಟಾದ ರೋಷದಿಂದಲೂ ಹಾಗೂ ಮದ್ಯಪಾನದ ಪ್ರಭಾವದಿಂದಲೂ ನಡೆದ ಕೃತ್ಯವೆಂದು ವಾದಿಸಿ ಆರೋಪಿಗಳನ್ನು ಬಿಡುಗಡೆಗೊಳಿಸಲು ಕೋರಿದರು. ನ್ಯಾಯಾಲಯವು ಈ ವಾದವನ್ನು ಪುಷ್ಟೀಕರಿಸದೆ ವಿಕ್ರಮ್ ಮರಣವನ್ನು ಕೊಲೆಯಲ್ಲದ ಮಾನವ ಹತ್ಯೆ ಎಂದು ಪರಿಗಣಿಸಿ ಎಲ್ಲರಿಗೂ ತಲಾ ಏಳು ವರ್ಷಗಳ ಕಠಿಣ ಸಜೆಯನ್ನು ವಿಧಿಸಿತು.

ಇಂದಿನ ಕಾಲಘಟ್ಟದಲ್ಲಿ ಸಹಜೀವನ ನಡೆಸುವುದು ಒಂದು ಸಹಜ ಜೀವನಶೈಲಿಯಾಗುತ್ತ ಬರುತ್ತಿ್ತದೆ. ಇಬ್ಬರು ವ್ಯಕ್ತಿಗಳು ಒಂದೇ ಸೂರಿನಡಿ ಜೀವಿಸುತ್ತಿರುವಾಗ ಇಬ್ಬರ ಖಾಸಗಿತನಕ್ಕೂ ಧಕ್ಕೆಯುಂಟಾಗುವುದು ಸತ್ಯ. ಇದನ್ನು ಅರಿತ ನಂತರವೇ ಸಹಜೀವನ ನಡೆಸಲು ಮುಂದಾಗುವುದು ಸೂಕ್ತ. ‘ಯನ್ನ ನಿಯಂತ್ರಣಸುಖಂ ಯನ್ನ ವಿಶ್ವಾಸಭಾಜನಂ, ಯನ್ನ ನಿರ್ವ್ಯಾಜಸಸ್ನೇಹಂ ರಿಪುತ್ವಂ ತನ್ನ ಸೌಹೃದಮ್ ಎನ್ನುವ ಸುಭಾಷಿತವಿದೆ. ಇದರರ್ಥ ಯಾವುದು ಅನಿಯಂತ್ರಿತವಾದ ಸುಖವುಳ್ಳದ್ದೋ, ಯಾವುದು ವಿಶ್ವಾಸಕ್ಕೆ ಪಾತ್ರವಲ್ಲವೋ, ಯಾವುದು ನಿರ್ವ್ಯಾಜ ಸ್ನೇಹವಲ್ಲವೋ, ಅದು ವೈರತ್ವವೇ ಹೊರತು ಸ್ನೇಹವಲ್ಲ ಎಂದು. ಸಹಜೀವನಕ್ಕೆ ಮುಂದಾಗುವ ಜೋಡಿಗಳು ಈ ಸುಭಾಷಿತದ ಅರ್ಥವನ್ನರಿತು ಮುಂದುವರೆದರೆ ವಿಕ್ರಮ್​ಸುಮಿತ್ರರಿಗಾದ ಗತಿ ಅವರಿಗೆ ಬರುವುದಿಲ್ಲ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net