ನಿಜಜೀವನದಲ್ಲಿ ಒಂದಾಯ್ತು ಲವ್ ಮಾಕ್ಟೇಲ್ ಜೋಡಿ

Love Maktail 11 Feb 20
Published on

ಬೆಂಗಳೂರು: ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ‘ಲವ್ ಮಾಕ್ಟೇಲ್’ ಸಿನಿಮಾದ ನಾಯಕ ಕೃಷ್ಣ, ನಾಯಕಿ ಮಿಲನಾ ನಾಗರಾಜ್ ಮದುವೆ ಆಗುವುದಾಗಿ ಹೇಳಿದ್ದಾರೆ. ಪ್ರೇಮಿಗಳ ದಿನ ಹತ್ತಿರ ಇರುವಂತೆ ಇಬ್ಬರೂ ಈ ವಿಷಯ ತಿಳಿಸಿದ್ದಾರೆ. ಪ್ರೀತಂ ಗುಬ್ಬಿ ನಿರ್ದೇಶನದ ‘ನಮ್ ದುನಿಯಾ, ನಮ್ ಸ್ಟೈಲ್’ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿತ್ತು. ಆ ಸಮಯದಲ್ಲಿಯೇ ಇಬ್ಬರ ನಡುವೆ ಪ್ರೀತಿ ಚಿಗುರೊಡಿದಿತ್ತು. ಇದೀಗ ಅಧಿಕೃತವಾಗಿ ‘ನಾವಿಬ್ಬರು ಪ್ರೇಮಿಗಳು’ ಎಂದು ಹೇಳಿಕೊಂಡಿದ್ದಾರೆ.

ಪ್ರೀತಿಯ ಬಗ್ಗೆ ಇಬ್ಬರ ಮನೆಯಲ್ಲೂ ವಿಷಯ ಗೊತ್ತಿದ್ದು, ಸದ್ಯದಲ್ಲೇ ಮದುವೆ ದಿನಾಂಕವೂ ಫಿಕ್ಸ್ ಆಗಲಿದೆ. ‘ಇಬ್ಬರ ನಡುವಿನ ಆತ್ಮೀಯತೆಯೇ ‘ಲವ್ ಮಾಕ್ಟೇಲ್’ ಸಿನಿಮಾ ಆಗುವಂತೆ ಮಾಡಿತು. ಸಿನಿಮಾಗೆ ಜನ ಉತ್ತಮ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಹೇಳಿಕೊಳ್ಳಬೇಕು ಎನ್ನಿಸಿತು ಹೇಳಿದ್ದೇನೆ’ಎಂದು ಕೃಷ್ಣ ಹೇಳಿದರು. ಕೆಲ ದಿನಗಳ ಹಿಂದೆಯಷ್ಟೇ ಇವರಿಬ್ಬರೂ ಲವ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು, ಆದರೆ ಆಗ ಅವರಿಬ್ಬರೂ ಆ ಸುದ್ದಿಯ ಬಗ್ಗೆ ಚಕಾರ ಎತ್ತಿರಲಿಲ್ಲ. ಒಟ್ಟಿನಲ್ಲಿ ಸ್ಯಾಂಡಲ್​ವುಡ್​ನ ಮತ್ತೊಂದು ಜೋಡಿ ಮದುವೆಗೆ ಸಜ್ಜಾಗಿದೆ. ಕೃಷ್ಣ ‘ಮದರಂಗಿ’, ‘ಡಾರ್ಲಿಂಗ್’, ‘ಮುಂಬೈ’ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತ ಮಿಲನಾ, ದರ್ಶನ್ ನಟನೆಯ ‘ಬೃಂದಾವನ’ದಲ್ಲಿ ನಟಿಸಿದ್ದರು. ಇತ್ತೀಚೆಗೆ ಅವರ ನಟನೆಯ ‘ಮತ್ತೆ ಉದ್ಭವ’ಕೂಡಾ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net